ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ : ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ : ರಸಋಷಿಕುವೆಂಪು

ಇಂದು ರಸಋಷಿ ಎಂದೇ ಖ್ಯಾತರಾಗಿರುವ ದಾರ್ಶನಿಕ ಕವಿ ಕುವೆಂಪು ಅವರ ಜನ್ಮ ದಿನ. ಈ ಸಂದರ್ಭದಲ್ಲಿ ಶ್ರೀ ಕುವೆಂಪು ಅವರ ಸುಪ್ರಸಿದ್ದವೂ, ವಿಚಾರಪೂರ್ಣವೂ, ಸಾರ್ವಕಾಲಿಕ ಮಾರ್ಗದರ್ಶಕವೂ ಆದ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಭಾಷಣವನ್ನು ಇಲ್ಲಿ ನೀಡಲಾಗಿದೆ.

ಅಮೃತಪುತ್ರರಲ್ಲಿ ವಿಜ್ಞಾಪನೆ,

ಮಿತ್ರರೇ, ನಿಮ್ಮ ಮುಂದೆ ನಿಂತು, ನನ್ನ ಕೆಲವು ಅಭಿಪ್ರಾಯಗಳನ್ನು ಪ್ರಕಾಶಪಡಿಸಲು ಅವಕಾಶ ಕಲ್ಪಿಸಿಕೊಟ್ಟುದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಮನಮುಟ್ಟಿ ವಂದಿಸುತ್ತೇನೆ.

ನನ್ನ ಅಭಿಪ್ರಾಯಗಳು ಕೆಲವರಿಗೆ ರುಚಿಸದಿರಬಹುದು, ಮತ್ತೆ ಕೆಲವರಿಗೆ ಕ್ರಾಂತಿಕಾರಿಗಳಾಗಿ ತೋರಬಹುದು ಆದರೂ ನನ್ನ ಮನಸ್ಸಿನಲ್ಲಿ ಯಾರನ್ನಾದರೂ ನೋಯಿಸಬೇಕೆಂಬ ಇಚ್ಚೆ ಲವಲೇಶವೂ ಇಲ್ಲ. ಅಲ್ಲದೆ ನಾನು ಹೇಳಲಿರುವ ಅಭಿಪ್ರಾಯಗಳು ಅಲ್ಪಾಲೋಚನೆಯಿಂದಾಗಲಿ, ಉದ್ರೇಕದ ಬುದ್ದಿಯಿಂದಲಾಗಲಿ, ಅನುದಾರತೆಯಿಂದಾಗಲಿ, ಪ್ರತಿಹಿಂಸಾಭಾವದಿಂದಾಗಲಿ ಬಂದುದಲ್ಲ; ಬಹುಕಾಲದ ದೀರ್ಘಮಂಥನದಿಂದ, ಪ್ರಶಾಂತ ಧ್ಯಾನದಿಂದ, ಅನ್ಯಾಯಗಳನ್ನೂ ಅವಿವೇಕಗಳನ್ನೂ ಅಜ್ಞಾನಜನ್ಯವಾದ ಕ್ರೂರ ವರ್ತನೆಗಳನ್ನೂ ಕಂಡಾಗ ಮೂಡಿದ ಸಾತ್ವಿಕ ಕ್ರೋಧದಿಂದ, ನಮ್ಮ ದೇಶ ನಮ್ಮ ನಾಡು ನಮ್ಮ ಭಾಷೆ ನಮ್ಮ ಸಂಸ್ಕೃತಿ ನಮ್ಮ ಸ್ಥಿತಿಗತಿಗಳು ಉಚ್ಛ್ರಾಯವಾಗಬೇಕೆಂಬ ಹಂಬಲದಿಂದ ಮೂಡಿದುವಾಗಿವೆ. ಆದಕಾರಣ, ತಾಳ್ಮೆಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶಕಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆಯಾದುದನ್ನು ಸ್ವೀಕರಿಸಿ, ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ವಿನಯದಿಂದ ಕೇಳಿಕೊಳ್ಳುತ್ತೇನೆ.

ನಾನಿಲ್ಲಿ ಗುರುಸ್ಥಾನದಲ್ಲಿ ನಿಂತಿಲ್ಲ; ನೀವೂ ಶಿಷ್ಯಸ್ಥಾನದಲ್ಲಿ ಕುಳಿತಿಲ್ಲ. ನಾನು ಉಪದೇಶ ಮಾಡುತ್ತಿಲ್ಲ; ವಿಜ್ಞಾಪಿಸುತ್ತಿದ್ದೇನೆ. ನನ್ನಂತೆಯೇ ನಿಮ್ಮಲ್ಲಿ ಅನೇಕರು ಜಿಜ್ಞಾಸೆ ಮೂಡಿರಬಹುದು. ಹಾಗಿದ್ದರೆ ನಮ್ಮ ಅಭಿಪ್ರಾಯಗಳು ಘರ್ಷಿಸದೆ ಮೃದುವಾಗಿ ಹೊಂದಿಕೊಳ್ಳುತ್ತವೆ. ಜಿಜ್ಞಾಸೆ ಮಾಡದೆ ಇದ್ದವರಿಗೆ ಜಿಜ್ಞಾಸೆ ಮಾಡಲು ಭಾವಾವಕಾಶಗಳು ದೊರೆಯುತ್ತವೆ. ಆದ್ದರಿಂದ ಯಾರೊಬ್ಬರೂ ನನ್ನ ಮಾತುಗಳನ್ನು ಪಚನಮಾಡದೆ ನುಂಗದಿರಲಿ; ಮತಿಯ ಒರೆಗಲ್ಲಿಗೆ ಹಚ್ಚದೆ ಸ್ಚೀಕರಿಸದಿರಲಿ; ಧೀರವಾಗಿ ವಿಮರ್ಶಿಸದೆ ಒಪ್ಪದಿರಲಿ; ಆದರೆ ಪಕ್ಷಪಾತವಿಲ್ಲದೆ ಕಿವಿಗೊಟ್ಟು ಮಾತ್ರ ಕೇಳಿ.

ಯುವಕರು ‘ನಿರಂಕುಶಮತಿ’ಗಳಾಗಬೇಕು. ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೆ ‘ನಿರಂಕುಶ ಮತಿ.’

ಮತಿ ಮಾನವನ ಸರ್ವೋತ್ಕಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ. ಮತಿ ಮನುಷ್ಯತ್ವದ ಹಕ್ಕು. ಆದ್ದರಿಂದ, ಸಹೋದರರೇ, ಮತಿ ನಿಮ್ಮ ನಚ್ಚಿನ ರನ್ನ ದೀವೆಗೆಯಾಗಲಿ.

ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ ಈಗೇನಾಗಿದೆ ಅದರ ಗತಿ? ಮೌಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ ನರಕ ದೇವಾನುದೇವತೆಗಳ ಮೋಹ ಮಾಯೆಗಳಿಂದಲೂ ಅದು ಸತ್ವರಹಿತವಾಗಿದೆ. ಕಾಂತಿಹೀನವಾಗಿದೆ. ಚಕ್ರವರ್ತಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ. ಯುವಕ ಮಿತ್ರರೇ, ಅಧೋಗತಿಗಿಳಿದಿರುವ ನಮ್ಮ ಮತಿಯನ್ನು ಮತ್ತೆ ಆಕಾಶಕ್ಕೆತ್ತಬೇಕು.

ಮತಿಯನ್ನು ನಿಸ್ತೇಜಗೈದಿರುವ ಕೆಲವು ಅಂಶಗಳನ್ನು ವಿವರಿಸುತ್ತೇನೆ. ಸಾವಧಾನದಿಂದ ಕೇಳಿ.

ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಡವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದ, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತ ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; ― ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಉಪನಿಷತ್ತು, ಭಗವದ್ಗೀತೆ ಮತ್ತು ಮಹಾವಿಭೂತಿಗಳು ಸಾರಿದ ಮತ್ತು ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನವಾಗಿದೆ.

ಆದರೆ ಇನ್ನು ಹೆಚ್ಚು ಕಾಲ ಆ ಅಮೃತಸಂದೇಶಕ್ಕೆ ಕಿವುಡಾಗಿರಲಾರೆವು. ಹಾಗಿದ್ದರೆ ನಮಗೂ ನಮ್ಮ ಸಂಸ್ಕೃತಿಗೂ ಮರಣವೇ ಗತಿಯಾಗುತ್ತದೆ. ಯುವಕರಾದವರು ಎಚ್ಚತ್ತುಕೊಂಡು ದೀರ್ಘದೃಷ್ಟಿಯಿಂದಲೂ ವಿಶಾಲ ಹೃದಯದಿಂದಲೂ ಸನಾತನವಾದರೂ ಚಿರನವೀನವಾದ ಆತ್ಮನ ಚರಂತನ ‘ದರ್ಶನ’ವನ್ನು ಪಡೆದು ತಮ್ಮನ್ನೂ ದೇಶವನ್ನೂ ಉದ್ಧಾರಮಾಡಿಕೊಳ್ಳಬೇಕಾಗಿದೆ.

ಸರ್ವಮತಗಳಿಗಿಂತಲೂ ಶುದ್ಧಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ. ಮತಿಯನ್ನು ತಿರಸ್ಕರಿಸಿದರೆ ಈಶ್ವರನ ಜ್ಯೋತಿಯನ್ನು ತಿರಸ್ಕರಿಸಿದಿದಂತಾಗುತ್ತದೆ. ಹಾಗೆ ಮಾಡುವವನೇ ನಿಜವಾಗಿಯೂ ನಾಸ್ತಿಕನು. ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೆ ಆಗಲಿ, ಯಾವ ವೇಷದಲ್ಲಿಯೆ ಆಗಲಿ, ತಿಳಿದೂ ತಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ.

ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ. ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ. ಆಗಿನ ಮನು ಪವಿತ್ರನಾದರೆ ಈಗಿನ ಮಹಾತ್ಮಾಗಾಂಧಿ ಪವಿತ್ರನಲ್ಲವೆ? ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ. ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡು ಹಿಡಿದ ಸತ್ಯಗಳು ಹಳೆಯ ಅರ್ಧಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ ಧರ್ಮ ಪ್ರಪಂಚದಲ್ಲೇಕೆ ಹಾಗಾಗಬಾರದು? ವೇದ ಅನಾದಿಯಾದರೆ ಅನಂತವೂ ಆಗಿರುವುದಿಲ್ಲವೆ? ವೇದ ಪೂರೈಸಿದ ಗ್ರಂಥವಲ್ಲ; ವೇದದ ಕಟ್ಟಕಡೆಯ ಅಧ್ಯಾಯ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತವೆ. ಹಾಗೆಯೇ ಋಷಿಗಳೂ ಆಚಾರ್ಯರೂ ಅಂದಿಗೇ ಪೂರೈಸಿಲ್ಲ, ಕೊನೆಗಂಡಿಲ್ಲ; ಇಂದಿಗೂ ನಾಳೆಗೂ ಬರುತ್ತಲೇ ಇರುತ್ತಾರೆ. ಆದ್ದರಿಂದ ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ. ಸಂಕುಚಿತ ಬುದ್ಧಿಯನ್ನು ದೂರಮಾಡಿ. ಹೃದಯಜೀವನ ಹಳೆಯನೀರಿನ ಕೊಳಕು ಕೊಳವಾಗದಿರಲಿ; ಯಾವಾಗಲೂ ಹೊಸ ನೀರು ಬಂದು ಹರಿಯುತ್ತಿರುವ ಸ್ವಚ್ಛ ಸಲಿಲ ಸ್ರೋತವಾಗಿರಲಿ.

ಮಹನೀಯರೇ, ಕೆಲವು ಉದಾಹರಣೆಗಳನ್ನು ತೆಗೆದುಕೊಂಡರೆ ನನ್ನ ಆಶಯ ನಿಮಗೆ ಇನ್ನೂ ಸ್ಪಷ್ಟವಾಗುತ್ತದೆ. ಅಸ್ಫುಟವಾಗಿ ಅನಿರ್ದಿಷ್ಟವಾಗಿ ನಿರಾಕಾರವಾಗಿ ತತ್ತ್ವಪ್ರಿತಿಪಾದನೆ ಮಾಡುವುದಕ್ಕಿಂತ ದೃಷ್ಟಾಂತಗಳನ್ನೂ ನಿದರ್ಶನಗಳನ್ನೂ ತೆಗೆದುಕೊಂಡು ಭಾವವನ್ನು ವಿವರಿಸುವುದು ಮೇಲು.

ಮತಭ್ರಾಂತಿಯೂ ಮೌಢ್ಯವೂ ವೈಜ್ಞಾನಿಕ ಪ್ರಗತಿಗೆ ಹೇಗೆ ಮಹಾಕಂಟಕಗಳಾದುವು ಎಂಬುದಕ್ಕೆ ಪಾಶ್ಚಾತ್ಯ ದೇಶಗಳ ಕ್ರೈಸ್ತಧರ್ಮ ಚರಿತ್ರೆಯಲ್ಲಿ ಬೇಕಾದಷ್ಟು ನಿದರ್ಶನಗಳಿವೆ. ಅವುಗಳಲ್ಲಿ ಒಂದು, ಸುಪ್ರಸಿದ್ದ ವಿಜ್ಞಾನಿಯಾಗಿದ್ದ ಗೆಲಿಲಿಯೋ ಎಂಬಾತನನ್ನು ಕುರಿತದ್ದು. ಕ್ರೈಸ್ತರಿಗೆ ಬೈಬಲ್ ಪರಮ ಪ್ರಮಾಣವಾದ ಪವಿತ್ರ ಗ್ರಂಥ, ಹಿಂದೂಗಳಿಗೆ ವೇದಗಳಿರುವಂತೆ. ಆದ್ದರಿಂದ ಕ್ರೈಸ್ತ ಪುರೋಹಿತರೂ ಗುರುಗಳೂ ಭಕ್ತ ಜನರೂ ಬೈಬಲ್ಲಿಗೆ ವ್ಯತಿರಿಕ್ತವಾದುವೆಲ್ಲ. ಪಾಷಂಡ ಮತವೆಂದು ಸಾರಿ, ಅಂತಹ ದುರ್ಮತಕ್ಕೆ ಕಾರಣರಾದವರನ್ನು ಜೀವಸಹಿತವಾಗಿ ಸುಡುವುದೇ ಮೊದಲಾದ ಶಿಕ್ಷೆಗಳಿಗೆ ಗುರಿಮಾಡುತ್ತಿದ್ದರು. ಎಷ್ಟೋ ಜನ ಸಾತ್ತ್ವಿಕ ಜೀವಿಗಳೂ ಮೇಧಾವಿಗಳೂ ಆದ ಸತ್ಯಾರಾಧಕರು ಬೈಬಲಿಗೂ ಮತ್ತು ಕ್ರೈಸ್ತಗುರು ಸಂಪ್ರದಾಯಕ್ಕೂ ವ್ಯತಿರಿಕ್ತವಾದ ಖಗೋಲಶಾಸ್ತ್ರ, ಜೀವಶಾಸ್ತ್ರ, ಮತ್ತು ಭೌತಶಾಸ್ತ್ರಗಳ ಅಮೂಲ್ಯ ಸತ್ಯಗಳನ್ನು ಕಂಡುಹಿಡಿದು ಹೇಳಿದದುದರ ಫಲವಾಗಿ ಆ ಪುರೋಹಿತರ ಕ್ರೋಧಾಗ್ನಿಗೆ ಸಿಕ್ಕಿ ಭಸ್ಮೀಭೂತರಾಗಬೇಕಾಯಿತು.

ಗೆಲಿಲಿಯೊ ಎಂಬಾತನು ದೂರದರ್ಶಕ ಯಂತ್ರವನ್ನು ಕಂಡುಹಿಡಿದು, ಗ್ರಹ ಚಂದ್ರ ತಾರೆಗಳನ್ನು ನೋಡಿ ಪರೀಕ್ಷಿಸಿದುದರ ಫಲರೂಪವಾಗಿ ಭೂಮಿ ಇತರ ಗ್ರಹಗಳಂತೆ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಪ್ರಯೋಗಪೂರ್ವಕವಾಗಿ ಸಿದ್ಧಾಂತ ಮಾಡಿದನು. ಆದರೆ ಕ್ರೈಸ್ತಸಂಪ್ರದಾಯಕ್ಕನುಸಾರವಾಗಿ ಭೂಮಿ ಜಗತ್ತಿನ ಕೇಂದ್ರಸ್ಥಾನ; ಸೂರ್ಯ ನಕ್ಷತ್ರಗಳೆಲ್ಲ ಭೂಮಿಯ ಸುತ್ತ ಸುತ್ತುತ್ತವೆ. ಆ ಕಾರಣದಿಂದಲೆ ಕ್ರೈಸ್ತಗುರುಗಳು ಗೆಲಿಲೆಯೊವನ್ನು ಪಾಷಂಡಿಯೆಂದು ಸಾರಿ ವಿಚಾರಣೆಗೆ ಒಳಪಡಿಸಿದರು. ಮುಟ್ಠಾಳರೆಲ್ಲ ಸೇರಿ ಮೇಧಾವಿಯನ್ನು ಕುರಿತು ಹೀಗೆ ಹೇಳಿದರು: “ನಮ್ಮ ಪವಿತ್ರ ಧರ್ಮಶಾಸ್ತ್ರ ಭೂಮಿಯೆ ವಿಶ್ವದ ಕೇಂದ್ರವೆಂದು ಹೇಳುತ್ತದೆ. ಸೂರ್ಯ ಚಂದ್ರ ನಕತ್ರಗಳೆಲ್ಲ ದೇವರು ತನ್ನ ಮಕ್ಕಳಾದ ಮನುಷ್ಯರ ಪ್ರಯೋಜನಕ್ಕಾಗಿ ಆಕಾಶದಲ್ಲಿಟ್ಟಿರುವ ಅಲಂಕಾರ ದೀಪಗಳು. ಅವು ಭೂಮಿಯ ಸುತ್ತ ಸುತ್ತುತ್ತವೆ. ಭೂಮಿ ತನಗಿಂತಲೂ ಬಹುಪಾಲು ದೊಡ್ಡದಾಗಿರುವ ಸೂರ್ಯನ ಸುತ್ತಲೂ ಸುತ್ತುವ ಅನೇಕ ಗ್ರಹಗಳಲ್ಲಿ ಒಂದು ಸಣ್ಣ ಯಃಕಶ್ಚಿತ ಗ್ರಹ ಮಾತ್ರವೆಂದು ಸಿದ್ಧಾಂತ ಮಾಡಿ ನಮ್ಮನ್ನು ಸೃಷ್ಟಿಸಿದ ಕರುಣಾಮಯನಾದ ಸೃಷ್ಟಿಕರ್ತನಿಗೂ ಆತನ ವಾಣಿಗೂ ಆತನ ಭಕ್ತರಿಗೂ ಅವಮಾನ ಮಾಡಿದ್ದೀಯೆ. ಅಲ್ಲದೆ ನೀನು ಹೇಳುವುದು ಬೈಬಲ್ಲಿಗೆ ವ್ಯತಿರಿಕ್ತವಾದುದರಿಂದ ಅದು ಸುಳ್ಳು. ನಿನ್ನ ಸಿದ್ಧಾಂತವನ್ನು ವಾಪಸು ತೆಗೆದುಕೊಂಡು ನಮ್ಮ ಪವಿತ್ರಮತ ಹೇಳುವ ಸಿದ್ಧಾಂತವನ್ನು ಒಪ್ಪಿಕೊಳ್ಳದಿದ್ದರೆ, ಪವಿತ್ರಮತದ ಉದ್ಧಾರಕ್ಕಾಗಿಯೂ ಬೈಬಲ್ಲಿನ ಗೌರವಾರ್ಥವಾಗಿಯೂ ಪಾಷಂಡಿಗಳಿಗೆ ಭೀತಿ ಹುಟ್ಟಿಸುವ ಸಲುವಾಗಿಯೂ ಸೃಷ್ಟಿಕರ್ತನ ಮಹಿಮೆ ಪೂಜೆಗಳಿಗಾಗಿಯೂ ನಿನ್ನ ಆತ್ಮದ ಪ್ರಾಯಶ್ಚಿತ್ತ ಮತ್ತು ಮೋಕ್ಷಾರ್ಥವಾಗಿಯೂ ನಿನ್ನನ್ನು ಜೀವಸಹಿತವಾಗಿ ಸುಡುತ್ತೇವೆ! ಹೇಳು! ಸುಳ್ಳು ಸಿದ್ಧಾಂತವನ್ನು ವಾಪಸು ತೆಗೆದುಕೊಳ್ಳುತ್ತಿಯೊ? ಜೀವಸಹಿತವಾಗಿ ಸುಡಿಸಿಕೊಳ್ಳುತ್ತಿಯೊ?”

ಗೆಲಿಲಿಯೊಗೆ ಚೆನ್ನಾಗಿ ಗೊತ್ತು, ತನ್ನ ಸಿದ್ಧಾಂತವೇ ಸರಿ ಎಂದು. ಆದರೆ ವಾಪಸು ತೆಗೆದುಕೊಳ್ಳದಿದ್ದರೆ, ಹಿಂದೆ ಕೆಲವರನ್ನು ಸುಟ್ಟ ಹಾಗೆ ತನ್ನನ್ನೂ ಸುಡುತ್ತಾರೆ ಎಂದೂ ಆತನಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಆ ಮುಟ್ಠಾಳರ ತೃಪ್ತಿಗಾಗಿ ತನ್ನ ಸಿದ್ಧಾಂತವನ್ನು ವಾಪಸು ತೆಗೆದುಕೊಂಡು, ಅವರ ಸಿದ್ಧಾಂತವೇ ಸರಿಯೆಂದು ಒಪ್ಪಿ ಬಿಡುಗಡೆ ಪಡೆದನು. ಆದರೆ ಕೋರ್ಟಿನಿಂದ ಹೊರಗೆ ಬರುವಾಗ ತನ್ನಷ್ಟಕ್ಕೆ ತಾನೇ “ನಾನು ನೋವಿಗೆ ಹೆದರಿ ವಾಪಸು ತೆಗೆದುಕೊಂಡರೇನಾಯಿತು? ಭೂಮಿ ಸೂರ್ಯನ ಸುತ್ತ ಸುತ್ತಿಯೇ ಸುತ್ತುತ್ತದೆ” ಎಂದುಕೊಂಡನಂತೆ. ಹೀಗೆ ಮತಿಹೀನವಾದ ಮತ ಜ್ಞಾನದ ಪ್ರಗತಿಗೆ ಅಡಚಣೆಯಾಗಿರುವುದಕ್ಕೆ ಸಾವಿರಾರು ನಿದರ್ಶನಗಳು ಹಿಂದೆಯೂ ಸಿಕ್ಕುತ್ತವೆ; ಇಂದೂ ದೊರೆಯುತ್ತವೆ.

ಕೆಲವು ತಿಂಗಳ ಪತ್ತಿಕೆಯೊಂದರಲ್ಲಿ ಯಾರೋ ಒಬ್ಬರಿಗೆ ಯಾವುದೋ ದೇವತೆ ಯಾವುದೋ ತೋಟದಲ್ಲಿ ಕಾಣಿಸಿಕೊಂಡಂತೆಯೂ, ಆ ದೇವತೆ “ಎಲ್ಲರೂ ಇಂತಿಷ್ಟು ದಿನಗಳ ಒಳಗಾಗಿ ಉಗಾದಿ ಹಬ್ಬವನ್ನು ಮಾಡದಿದ್ದರೆ ಮನೆಮನೆಗೂ ಒಂದೊಂದು ಜೀವವನ್ನು ಅಪಹರಿಸುತ್ತೇನೆ” ಎಂದು ಹೇಳಿದಹಾಗೂ ಪ್ರಕಟವಾಗಿದ್ದಿತು. ಮಾಡಬೇಕಾದ ನೈವೇದ್ಯಗಳ ವಿವರವೂ ಪ್ರಮಾಣವೂ ಕೂಡ ಅಚ್ಚಾಗಿತ್ತು. ಅನೇಕರು ಹೆದರಿಯೇ ಹಬ್ಬ ಮಾಡಿಕೊಂಡು ತಿಂದರು. ಹಬ್ಬಮಾಡಿಕೊಂಡು ತಿಂದುದರಿಂದ ಅಪಾಯವೇನಿಲ್ಲ. ಆದರೆ ಅಂತಹ ಮೂಢ ಭಾವಗಳ ಪ್ರಚಾರ ದುಷ್ಪರಿಣಾಮಕಾರಿಯಾದುದಲ್ಲವೇ? ಅದರಲ್ಲಿಯೂ ಹಳ್ಳಿಗಳಲ್ಲಿ ಪತ್ರಿಕೆಗಳೆಂದರೆ ವೇದಸಮವಾಗಿವೆ. ಪತ್ರಿಕೆಗಳಲ್ಲಿ ಬಂದಿದೆ ಎಂದರೆ ಏನನ್ನು ಬೇಕಾದರೂ ನಂಬುತ್ತಾರೆ, ವೇದ ಧರ್ಮಶಾಸ್ತ್ರಗಳಲ್ಲಿ ಹೇಳಿದೆ ಎಂದರೆ ಎಂತಹ ಕ್ರೂರಕರ್ಮವನ್ನಾದರೂ ಸರಿ ಎಂದು ನಂಬುವಂತೆ! ಅಚ್ಚಿನಲ್ಲಿ ಅವರಿಗಷ್ಟು ಗೌರವ; ನಮಗೆ ಸಂಸ್ಕೃತ ಶ್ಲೋಕಗಳಲ್ಲಿರುವಂತೆ. ದುಡ್ಡು ಇದ್ದರೆ ಸರಿ. ‘ಮೊಲಕ್ಕೆ ಮೂರು ಕೊಂಬುಗಳ ತುದಿಯಲ್ಲಿ ಕಣ್ಣುಗಳಿವೆ’ ಎಂದು ಬೇಕಾದರೂ ಅಚ್ಚು ಮಾಡಬಹುದು ಎಂಬ ಸಂಗತಿ, ಪಾಪ ಆ ಹಳ್ಳಿಗರಿಗೇನು ಗೊತ್ತು?

ಹಾಗೆಯೇ ಪರ್ಜನ್ಯಜಪ ಮಾಡಿ ಮಳೆ ಬರಿಸಿದರು ಎನ್ನುವ ವಿಷಯ. ಅದನ್ನು ಕುರಿತು ಎಷ್ಟು ಮಂದಿ ನಿಷ್ಪಕ್ಷಪಾತವಾಗಿ ಧೀರಮತಿಯಿಂದ ಅಲೋಚಿಸಿದ್ದಾರೆ? ಸಹರಾ ಮರುಭೂಮಿಗೆ ಪುರೋಹಿತರನ್ನು ಕಳುಹಿಸಿ ಪರ್ಜನ್ಯಜಪ ಮಾಡಿಸಿದರೆ ಮಳೆ ಬಂದು ಅದು ಫಲವತ್ತಾಗುತ್ತದೆಯೆ? ಆಗುತ್ತದೆ ಎಂದು ನಿರ್ಣಯವಾಗುವವರೆಗೆ ನಂಬುಗೆ ಕುರುಡಲ್ಲವೆ? ಹುತ್ಪೂರ್ವಕವಾದ ಪ್ರಾರ್ಥನೆಯಿಂದ ಪ್ರಕೃತಿ ನಿಯಮಗಳು ಮನಕರಗುತ್ತವೆಯೆ? ಒಂದು ವೇಳೆ ಕರಗುವುದಾದರೂ ರೈತಾದಿ ಜನಗಳು ಮನೆಮನೆಯಲ್ಲಿಯೂ ಮೂರುಹೊತ್ತೂ ‘ಭಗವಂತ, ಮಳೆಯನ್ನು ದಯಪಾಲಿಸು’ ಎಂದು ಬೇಡುವ ಆರ್ತಧ್ವನಿಗಿಂತಲೂ ದುಡ್ಡುಕೊಟ್ಟು ಮಾಡಿಸುವ ಜಪಕ್ಕೆ ಜಗಚ್ಛಕ್ತಿ ಹೆಚ್ಚಾಗಿ ಕೃಪೆದೋರುತ್ತದೆಯೆ? ಯುವಕರೆಲ್ಲರೂ ಇಂತಹ ಪ್ರಶ್ನೆಗಳನ್ನು ಧೀರವಾಗಿ ಕೇಳಿಕೊಳ್ಳಬೇಕು. ಧೀರವಾದ ಉತ್ತರಗಳನ್ನು ಕಂಡುಹಿಡಿದುಕೊಳ್ಳಬೇಕು.

ಏಕೆಂದರೆ ಇಂದು ಪರ್ಜನ್ಯಜಪ ಮಾಡಿ ಮಳೆಬರಿಸಿದವರು ನಾಳೆ ರಾಮ ಧ್ಯಾನಮಾಡಿ ಪ್ಲೇಗು ಓಡಿಸಲಾರರೆ ಎಂದು ಮೂಢರು ಆ ರೋಗಕ್ಕೆ ಬೇಕಾಗುವ ವೈದ್ಯಕಾರ್ಯಗಳನ್ನು ಮಾಡದೆ ನಾಶವಾಗಬಹುದು! ಇಂತಹ ಮೌಢ್ಯದಿಂದ ನಾಶವಾಗುತ್ತಿರುವುದನ್ನು ನಾವು ಕಣ್ಣಾರೆ ಕಾಣಬಹುದು. ಉದ್ದೇಶ ಎಷ್ಟೇ ಶ್ಲಾಘ್ಯವಾಗಲಿ, ಅದು ತಿಳಿವಳಿಕೆಯಿಂದ ಕೂಡಿರದಿದ್ದರೆ ಅಪಾಯವಾಗುತ್ತದೆ. ಒಂದು ಪಟ್ಟಣದಲ್ಲಿ ಸಿಡುಬು ರೋಗ ತಲೆದೋರಿ ಎಲ್ಲಲ್ಲಿಯೂ ಜನರು ಸಾಯುತ್ತಿದ್ದರಂತೆ. ಆ ನಗರದ ದೊಡ್ಡ ಪಾದ್ರಿ ಸಿಡುಬಿನ ರೋಗವನ್ನು ಓಡಿಸುವುದಕ್ಕೆಂದು ಜನರೆನ್ನೆಲ್ಲ ಚರ್ಚಿನಲ್ಲಿ ಒಟ್ಟುಗೂಡಿಸಿ ದೇವರ ಪ್ರಾರ್ಥನೆ ಮಾಡಿಸಿದನಂತೆ. ಆದರೆ ಆ ಗುಂಪಿನಲ್ಲಿ ಸಿಡುಬಿನ ಸೋಂಕು ತಗುಲಿದವರು ಇದ್ದುದರಿಂದ, ಜನರು ‘ಸಿಡುಬಿನಿಂದ ಪಾರುಮಾಡು’ ಎಂದು ದೇವರನ್ನು ಬೇಡುತ್ತಿದ್ದಾಗಲೆ ಆ ಭಯಂಕರ ರೋಗ ನೆರೆದವರಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತಿತ್ತು. ಇಲ್ಲಿ ಪಾದ್ರಿಯ ಮತ್ತು ಜನರ ಉದ್ದೇಶ ಸದ್ವಾವದಿಂದ ಕೂಡಿದ್ದರೂ ಸಿಡುಬಿನ ರೋಗದ ವಿಚಾರವಾಗಿದ್ದ ಅವರ ಅಜ್ಞಾನ ಆ ಸದುದ್ದೇಶವನ್ನೆ ಅದು ಭಯಂಕರ ವ್ಯಾಪಾರಕ್ಕೆ ಕಾರಣವಾಗುವಂತೆ ಮಾಡಿತು. ಅಂತಹ ಅನಾಹುತಗಳಿಂದ ಜನರನ್ನು ಪಾರು ಮಾಡಬೇಕಾದರೆ ಅವರ ಕೈಗೆ ಮತಿಯ ದೀವಿಗೆಯನ್ನು ಕೊಡಬೇಕು. ಅವರಲ್ಲಿ ಪರೀಕ್ಷಿಸುವ ಬುದ್ಧಿಯೂ ವಿಮರ್ಶಿಸುವ ಧೈರ್ಯವೂ ಉದ್ಭವಿಸುವಂತೆ ಮಾಡಬೇಕು. “ಅವಿದ್ಯಾಯಾಮಂತರೇ ವರ್ತಮಾನಾಃ ಸ್ವಯಂ ಧೀರಾಃ ಪಮಡಿತಂ ಮಂನ್ಯಮಾನಾಃ| ದಂದ್ರಮ್ಯಮಾಣಾಃ ಪರಿಯಂತಿ ಮೂಢಾ ಅಂಧೇ ನೈವ ನೀಯಮಾನಾ ಯಂಥಾಂಧಾಃ|| ಅವಿದ್ಯೆಯ ಮಧ್ಯೆ ಬಿದ್ದುಕೊಂಡಿದ್ದರೂ ತಾವು ಬುದ್ಧಿವಂತರೆಂದೂ ಪಂಡಿತರೆಂದೂ ಭ್ರಮಿಸಿ, ಕುರಡರಿಂದ ನಡೆಯಿಸಲ್ಪಡುವ ಕುರುಡರಂತೆ, ಅಜ್ಞಾನಿಗಳು ಕಷ್ಟಕ್ಕೀಡಾಗಿ ತೊಳಲುತ್ತಾರೆ” ಎಂದು ಹೇಳುವ ಉಪನಿಷತ್ತಿನ ಎಚ್ಚರಿಕೆಗೆ ಕಿವಿಗೊಡಬೇಕು.

ಹಾಗೆಯೇ ‘ದೇವಾಲಯ ಪ್ರವೇಶ’ದ ಪ್ರಶ್ನೆ ― ಮುಂತಾದುವುಗಳನ್ನು ಕೆಚ್ಚಿನಿಂದ ಮತಿಯ ಒರೆಗಲ್ಲಿಗೆ ಹಚ್ಚಿನೋಡಬೇಕು. ಮೊನ್ನೆ ಪತ್ರಿಕೆಗಳಲ್ಲಿ ನಾನು ಓದಿದೆ. ಒಬ್ಬರು ಕೃತವಿದ್ಯಾರಾದ ಗೌರವಸ್ಥರು ದೇವಾಲಯಕ್ಕೆ ಹೋಗಿ ಬಂದುದಕ್ಕೆ ಪ್ರತಿಯಾಗಿ ಸಂಪ್ರೋಕ್ಷಣೆಗೆ ಜುಲುಮಾನೆ ಕೊಡಬೇಕಾಗಿ ಬಂದಿತಂತೆ. ಕಾರಣ, ಅವರು ಅಸ್ಪೃಶ್ಯರ ಜಾತಿಗೆ ಸೇರಿದವರಂತೆ. ಅವರಿಗಿಂತಲೂ ಮೂಢರೂ ಕೊಳಕರೂ ದುಷ್ಟರೂ ರೋಗಿಗಳೂ ದುರಾಚಾರಿಗಳೂ ಆದ ‘ಸ್ಪೃಶ್ಯ’ರೆಂದೆನಿಸಿಕೊಂಡವರು ಗುಡಿಯೊಳಗೆ ಹೋದರೆ ಮೈಲಿಗೆಯಾಗುವುದಿಲ್ಲವಂತೆ! ‘ಸ್ಪೃಶ್ಯ’ ಯುವಕರು ತಮ್ಮ ಸಹೋದರನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೆ ಬಿಟ್ಟು, ಹೊರಗೆ, ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು. ಅಸ್ಪೃಶ್ಯ ಯುವಕರಾದವರಿಗೆ ನನ್ನದೊಂದು ಬಿನ್ನಹ. ನೀವು ಅವಮಾನಿಸಿಕೊಂಡು ದೇವಾಲಯಕ್ಕೆ ಹೋಗದಿದ್ದರೆ ಏನಾಗುತ್ತದೆ? ಗುಡಿಯ ಕಲ್ಲಿನಲ್ಲಿ ದೇವರಿದ್ದಾನೆ ಎಂಬ ಭ್ರಾಂತಿ ನಿಮಗೇಕೆ? ‘ಪ್ರಭುಲಿಂಗ ಲೀಲೆ’ಯಲ್ಲಿ ಸತ್ಯಸಾಕ್ಷಾತ್ಕಾರದ ಕಾರ್ಯವನ್ನು ಬಿಟ್ಟು ಕೀರ್ತಿಪೂಜಾಲಾಭದಾಶೆಗೆ ದೇವಸ್ಥಾನವನ್ನು ಕಟ್ಟಿಸುತ್ತಿದ್ದ ಸಿದ್ಧರಾಮನನ್ನು ಕುರಿತು ಅಲ್ಲಮನು ―

ಸಕಲ ಕಲ್ಲನು ಕಡಿದು, ಕಲ್ಲಿಗೆ
ಶಿಖರ ದೇಗುಲವೆಂದು ಮಾಡಿಸಿ,
ಮಕರಿಸುವರಿವರೊಡ್ಡರಲ್ಲದೆ ಸಿದ್ಧರಲ್ಲ ―

ಎಂದಿದ್ದಾನೆ. ಒಡ್ಡತನದ ಕೆಲಸವನ್ನು ನಾವೇಕೆ ಮಾಡಬೇಕು! ಗುಡಿಯೊಳಗೆ ಹೋಗಿ ಮತದ ಮೌಢ್ಯಕ್ಕೂ ಪುರೋಹಿತರ ಸುಲಿಗೆಗೂ ಒಳಗಾಗುವುದಕ್ಕಿಂತ ದೂರವಾಗಿದ್ದುಕೊಂಡು ಎದೆಯ ದೇಗುಲದಲ್ಲಿಯೆ ಈಶ್ವರನನ್ನು ಇನ್ನಷ್ಟು ಅತಿಶಯವಾದ ಭಾವಭಕ್ತಿಯಿಂದ ಪೂಜಿಸಬಾರದೆ? ಅಸ್ಪೃಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿರುವುದು ಉಚ್ಚವರ್ಗದ ಹಿಂದುಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿವೈಶಾಲ್ಯ ಸಾಧನೆಗಾಗಿಯೆ ಹೊರತು ಹರಿಜನರ ಮೋಕ್ಷಕ್ಕಾಗಿಯಲ್ಲ. ಹೊರಗಿನ ಸುಂದರ ಪ್ರಕೃತಿಮಯ ಜಗತ್ತೂ ಅಂತರಂಗದ ದಿವ್ಯಭಾವಗಳ ಪ್ರಪಂಚವೂ ಸರ್ವರಿಗೂ ಸುಲಭವಾದ ಮಹಾಪುರಷರ ಕೃತಿಗಳಲ್ಲಿರುವ ಮಹದಾಲೋಚನೆಗಳೂ ನಮಗೆ ದೇವಸ್ಥಾನ, ಪೂಜೆ, ಗುರು, ಮಂತ್ರ ಇವುಗಳೆಲ್ಲವೂ ಆಗಲಿ; ಪ್ರಯತ್ನಿಸುವವರಿಗೆಲ್ಲ ಆ ‘ದರ್ಶನ’ ಲಭಿಸುವುದರಲ್ಲಿ ಸಂದೇಹವಿಲ್ಲ; ಅದು ಸಿದ್ಧಿಸುವವರೆಗೂ ನಮಗಾಗಲಿ ನಮ್ಮ ದೇಶಕ್ಕಾಗಲಿ ಮೋಕ್ಷವಿಲ್ಲ; ಸುಖವಿಲ್ಲ; ಶಾಂತಿಯಿಲ್ಲ; ದಾಸ್ಯದಿಂದ ಬಿಡುಗಡೆಯಿಲ್ಲ.

ಆದ್ದರಿಂದ ಯುವಕ ಸಹೋದರರೇ, ಯಾವ ಒಂದು ಸಂಪ್ರದಾಯದ ಸಂಕೋಚಕ್ಕೂ ಸಿಕ್ಕಿಕೊಳ್ಳಬಾರದು. ಯಾವ ಒಂದು ಪಂಥದ ಇಕ್ಕಟ್ಟಿಗೂ ಒಳಗಾಗಬಾರದು. ಸರ್ವಧರ್ಮಗಳ ಸಾರವಾದ ಉದಾರ ‘ದರ್ಶನ’ವೊಂದನ್ನು ಕಂಡು, ಕಟ್ಟಿಕೊಂಡು ಬಾಳಬೇಕು. ಜಾತಿ ಮತ ದೇಶ ಕಾಲಗಳ ಭೇದವಿಲ್ಲದೆ ಎಲ್ಲ ಮಹಾಪುರಷರ ಜ್ಞಾನಗಂಗೆಗಳ ಮಂಗಳಸಂಗಮದಲ್ಲಿ ತೀರ್ಥಸ್ನಾನಮಾಡಿ ಪೂರ್ಣ ಜೀವನವನ್ನು ಪೂರ್ಣವಾಗಿ ಅನುಭವಿಸಬೇಕು.

ಸೋದರರೇ ಅಂತಹ ‘ದರ್ಶನ’ದ ಸಂಪಾದನೆ ಅಷ್ಟೇನೂ ದುಸ್ಸಾಧ್ಯವಲ್ಲ. ಮತಭ್ರಾಂತಿಯನ್ನು ಬಿಟ್ಟು ಮತಿಯ ದೀವಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಡುವ ಸರ್ವರಿಗೂ ಅದು ಸುಲಭಸಾಧ್ಯ.

ಆ ‘ದರ್ಶನ’ ವನ್ನು ಪಡೆದ ಮೇಲೆ ನಮಗೆ ದೇವಸ್ಥಾನಗಳ ಆವಶ್ಯಕತೆ ಇರುವುದಿಲ್ಲ. ದೇವದೇವನ ಶರೀರರೂಪಿಯಾದ ಜಗತ್ತೆಲ್ಲವೂ ದೇವಸ್ಥಾನವಾಗುತ್ತದೆ. ಅಸ್ಪೃಶ್ಯರೆಂದು ಪರಿಗಣಿತರಾಗಿರುವ ಈಶ್ವರ ಶಿಶುಗಳು ಕಲ್ಲು ಕಟ್ಟಡದ ದೇವಸ್ಥಾನಗಳಿಗೆ ಹೋಗಿ ಭಕ್ತಿಪ್ರದರ್ಶನ ಮಾಡಿದ ಪಾಪಕ್ಕೆ ಆಮೇಲೆ ಸಂಪ್ರೋಕ್ಷಣೆಗಾಗಿ ಜುಲುಮಾನೆ ಕೊಡುವುದೂ ತಪ್ಪುತ್ತದೆ.

ಇಂತಹ ದಿವ್ಯ ‘ದರ್ಶನ’ದ ಪ್ರಾಪ್ತಿಗಾಗಿ ನಮಗೆ ಬೇಕಾಗುವ ಧೀರ, ಸ್ವತಂತ್ರ, ಉದಾರ ಪ್ರತಿಭಾಪೂರ್ಣವಾದ ಬುದ್ಧಿಯನ್ನೆ ನಾನು ‘ನಿರಂಕುಶಮತಿ’ ಎಂದು ಕರೆದಿದ್ದೇನೆ. ಆದ್ದರಿಂದ ತಮ್ಮ ತಮ್ಮ ಜಗತ್ತಿನ ಶ್ರೇಯಸ್ಸನ್ನು ಕೋರುವ ಯುವಕರೆಲ್ಲರೂ ‘ನಿರಂಕುಶಮತಿ’ ಗಳಾಗಬೇಕು.

‘ನಿರಂಕುಶಮತಿ’ಗಳಾಗಬೇಕಾದರೆ ದಾಸ್ಯಬುದ್ಧಿ, ತೊಲಗಬೇಕು; ದಾಸ್ಯಬುದ್ಧಿ ತೊಲಗಬೇಕಾದರೆ ಸ್ವತಂತ್ರವಾಗಿ ಜೀವಿಸಲು ಪ್ರಯತ್ನಿಸಬೇಕು; ಎಂದರೆ ಸ್ವಾಲಂಬನ ಬೇಕು; ಎಂದರೆ ಇನ್ನೊಬ್ಬರ ಕೈ ಹಾರೈಸಿ ಹೊಟ್ಟೆ ಹೊರೆಯುವುದು ತಪ್ಪಬೇಕು. ಮುಚ್ಚುಮರೆಯಿಲ್ಲದೆ ಬಿಚ್ಚಿ ಹೇಳುವುದಾದರೆ, ಸಂಪತ್ತುಬೇಕು, ಹಣಬೇಕು; ಉದ್ಯೋಗ ಬೇಕು. ಮಿತ್ರರೇ, ನಾನು ಒಪ್ಪಿಕೊಳ್ಳುತ್ತೇನೆ, ಈ ಸಮಸ್ಯೆ ನಿಜವಾಗಿಯೂ ಕಗ್ಗಂಟಾಗಿದೆ. ಆ ಸಮಸ್ಯೆಯನ್ನು ಪರಿಹರಿಸಲೆಂದೇ ದೇಶದ ನಾಯಕರೆಲ್ಲರೂ ಕಷ್ಟಪಡುತ್ತಿದ್ದಾರೆ. ಆಶಾಬುದ್ಧಿಯಿಂದ ಅವರ ಉದ್ಯಮದಲ್ಲಿ ನಾವೂ ಭಾಗಿಗಳಾಗಿ ಇಂದಿನ ತಪಸ್ಸು ಮುಂದಿನ ಸತ್ಫಲಕ್ಕೆ ಮಾರ್ಗವೆಂದು ಶ್ರದ್ಧೆಯಿಂದ ಮುಂದುವರಿಯಬೇಕಾಗಿದೆ. ಸಮಸ್ಯೆಯ ಅಗಾಧತೆ ನಮ್ಮ ಮುಂದಿರುವ ಸಾಹಸದ ಆಳ ಅಗಲಗಳನ್ನು ಸೂಚಿಸುತ್ತದೆ.

ಆದರೂ ಪಾರಾಗಲೂ ಕೆಲವು ಸೂಚನೆಗಳನ್ನು ಕೊಡಬಹುದು. ಹೀಗೆಯೇ ಮಾಡಿ ಎಂದು ಇತಿವಿಧಿಗಳನ್ನು ಸೂಚಿಸುವುದು ಕಷ್ಟಸಾಧ್ಯವಾದರೂ ಹೀಗೆ ಮಾಡದಿದ್ದರೆ ಒಂದಿಷ್ಟು ಲೇಸಾಗಬಹುದೆಂದು ನೇತಿವಿಧಾನವನ್ನಾದರೂ ಹೇಳಲು ಸಾಧ್ಯ.

ಕೃತವಿದ್ಯರಾದ ಯುವಕರು ನಾಗರಿಕತೆಯ ಮೆರುಗಿಗೆ ಮನಸೋತು ಪಟ್ಟಣಗಳನ್ನು ಸೇರುತ್ತಿದ್ದಾರೆ. ಅಲ್ಲಿಯೂ ಕೂಡ ಅವರು ಕೈಕೊಳ್ಳುವ ವೃತ್ತಿ ಸ್ವಲ್ಪ ಹೆಚ್ಚು ಕಡಿವೆ ‘ಉತ್ಪತ್ತಿಕಾರಕ’ ವಾಗಿರುವುದಿಲ್ಲ; ‘ಸಂಗ್ರಹಕಾರಕ’ವಾಗಿರುತ್ತದೆ. ಹಾಗೆ ಮಾಡುವುದರಿಂದ ಹಲಕೆಲವರಿಗೆ ಅವರವರ ಮಟ್ಟಿಗೆ ನೆಮ್ಮದಿಯಾಗಬಹುದು. ಆದರೆ ಎಲ್ಲರೂ ಎಷ್ಟು ಕಾಲ ತಾನೆ ಸಂಪತ್ತನ್ನು ಸೃಷ್ಟಿಸದೆ ಸಮಗ್ರಹಿಸುತ್ತಲೆ ಹೋಗಲಾಗುತ್ತದೆ? ಆದ್ದರಿಂದ ಮೇಧಾವಿಗಳಾದ ಯುವಕರು ತಮಗೆ ನವನಾಗರಿಕತೆಯ ಮಾಯಾಸ್ಮಿತರುಚಿ ದೊರಕೊಳ್ಳದಿದ್ದರೂ ಚಿಂತೆಯಿಲ್ಲ ಎಂದುಕೊಂಡು, ಗ್ರಾಮಗಳಲ್ಲಿಯೆ ನಿಂತು ಜನರ ಆಧ್ಯಾತ್ಮಿಕ ಅಜ್ಞಾನವನ್ನೂ ಆಧಿದೈವಿಕ ಮೌಢ್ಯವನ್ನೂ ಆಧಿಭೌತಿಕ ಕಷ್ಟನಷ್ಟಗಳನ್ನೂ ಪರಿಹರಿಸಲು ಪ್ರಯತ್ನಿಸುವ ತಪಸ್ಸನ್ನು ಕೈಕೊಳ್ಳಬೇಕು.

ಮತದ ಹೆಸರಿನಲ್ಲಿ, ಸಮಾಜದ ಕಟ್ಟುಕಟ್ಟಲೆಗಲ ಹೆಸರಿನಲ್ಲಿ, ದೆವ್ವ, ಪಿಶಾಚಿ ಗ್ರಹಗಳ ಹೆಸರಿನಲ್ಲಿ, ಮಾಮೂಲಗಳ ಹೆಸರಿನಲ್ಲಿ ದುರ್ವ್ಯಯವಾಗುತ್ತಿರುವ ಸಂಪತ್ತನ್ನು ತಡೆಗಟ್ಟಿ, ಅದನ್ನು ಹಚ್ಚು ಅವಶ್ಯಕವಾಗಿರುವ ಮತ್ತು ಹೆಚ್ಚು ಉಪಯೋಗಕರವಾಗಿರುವ ಜೀವನ ಪಥಗಳಲ್ಲಿ ವಿನಿಯೊಗಿಸುವಂತೆ ಮಾಡಬೇಕು.

ಯುವಕರು ವೇಷ ಭೂಷಣಗಲ್ಲಿ ಅತಿ ಷೋಕಿಗೆ ಹೋಗದೆ ಸರಳ ಸಾಧಾರಣವಾಗಿದ್ದರೆ ಸ್ವಲ್ಪವಾದರೂ ಉಳಿತಾಯವಾಗುತ್ತದೆ. ಅಲ್ಲದೆ ಷೋಕಿ ಮಾಡಲೆಂದು ಮದುವೆ ಮಾಡಿಕೊಂಡು ಮಾವಂದಿರ ಮೂಲಧನಕ್ಕೆ ಬಾಯಿ ಬಾಯಿ ಬಿಡುವುದೂ ತಪ್ಪುತ್ತದೆ.

ಯುವಕನು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಪಡೆಯುವ ಮೊದಲೆ ಮದುವೆ ಮಾಡಿಕೊಂಡಲ್ಲಿ ಒಡನೆಯೆ ಚತುಷ್ಪಾದಿಯಾಗುತ್ತಾನೆ. ಅವನ ಸ್ವತಂತ್ರ ಬುದ್ಧಿ, ನಿರಂಕುಶ ಮತಿ ಎಲ್ಲವೂ ಮಣ್ಣುಗೂಡುತ್ತವೆ. ಅವರಿವರ ಕೈ ಹಾರೈಸಿ, ನಾಲ್ಕು ಕಾಸು ಸಂಪಾದನೆಗಾಗಿ ಅವರಿವರನ್ನು ಓಲಗಿಸ, ಅಧಿಕಾರಿಗಳ ಅಥವಾ ಸಾಹುಕಾರರ ಕಾಲಬಳಿ ಮೂಲಗಿಸಿ, ತನ್ನಲ್ಲಿರುವ ದಿವ್ಯಾತ್ಮವನ್ನು ಸಂಪೂರ್ಣವಾಗಿ ಅವಮಾನಪಡಿಸುತ್ತಾನೆ. ಆತನ ತಾರುಣ್ಯದ ‘ದರ್ಶನ’ ಜ್ಯೋತಿ ಸಾಂಸಾರಿಕ ಜೀವನದ ದಾಸ್ಯದಲ್ಲಿ, ಕೋಟಲೆಯಲ್ಲಿ, ಕಷ್ಟದಲ್ಲಿ ಧೂಳಿಧೂಮಗಳಲ್ಲಿ ನಂದಿಹೋಗುತ್ತದೆ ಅಥವಾ ನಂದಿಹೋಗುವಷ್ಟರ ಮಟ್ಟಿಗೆ ಮಾಸಿಹೋಗುತ್ತದೆ. ಕಡೆಕಡೆಗೆ ಅನೀತಿ ಕೂಡ ಹೀನವಾಗಿ ತೋರುವುದಿಲ್ಲ. ಅವನ ಔದಾರ್ಯದ ವಲಯ ಬರಬರುತ್ತಾ ಕಿರಿದಾಗಿ, ಕಡೆಗೆ ತಾನು, ತನ್ನ ಹೆಂಡತಿ, ತನ್ನ ಮಗು ಮೂವರನ್ನು ಮಾತ್ರ ಸುತ್ತುವರಿಯುತ್ತದೆ. ಅವರಿಗಾಗಿ ಏನನ್ನೂ ಬೇಕಾದರೂ ಮಾಡಲು ಹೇಸುವುದಿಲ್ಲ. ಹಾಗಾಗುವವರು ದೇಶದ ಪ್ರಗತಿಗೆ ಕಂಟಕಪ್ರಾಯರಾಗುತ್ತಾರೆ. ಆದ್ದರಿಂದ, ಮಿತ್ರರೇ, ನಿಮ್ಮ ಕಾಲ ಮೇಲೆ ನೀವು ನೆಮ್ಮದಿಯಾಗಿ ನಿಲ್ಲುವ ಶಕ್ತಿ ಬರುವ ಮೊದಲು ಮದುವೆಯಾಗಬೇಡಿ; ಆತ್ಮಕ್ಕೆ ಅಗೌರವವನ್ನೂ ಮನಸ್ಸಿಗೆ ಯಾತನೆಯನ್ನೂ ದೇಶಕ್ಕೆ ಹಾನಿಯನ್ನೂ ತರಬೇಡಿ.

ಅದಕ್ಕೆ ಬದಲು ವೈವಾಹಿಕ ಜೀವನವನ್ನು ಸಾಂಗವಾಗಿ ನಡೆಸಲು ತಕ್ಕ ಸಂಪತ್ತೂ ಸಾಮರ್ಥ್ಯವೂ ಲಭಿಸುವ ತನಕ ಬ್ರಹ್ಮಚಾರಿಗಳಾಗಿದ್ದುಕೊಂಡು ದೇಶಕ್ಕೆ ಹಿತಕರವಾದ ಕಾರ್ಯಗಳನ್ನು ಮಾಡುತ್ತಿರಬಹುದು. ಭೀಷ್ಮನು ಬ್ರಹ್ಮಚಾರಿಯಾಗಿದ್ದನು. ಹನುಮಂತನು ಬ್ರಹ್ಮಚಾರಿಯಾಗಿದ್ದನು. ಅವರು ಮಹತ್ಕಾರ್ಯಗಳನ್ನು ಸಾಧಿಸಿದರು. ಇಂದಿನ ಮನಶ್ಯಾಸ್ತ್ರವೂ ಕೂಡ ಬ್ರಹ್ಮಚಯಾದಿಂದ ತೇಜಸ್ಸು ಓಜಸ್ಸುಗಳೂ ದರ್ಪ ಬಲ ಅಧಿಕಾರಿಗಳೂ ಲಭಿಸುತ್ತವೆ ಎಂದು ಹೇಳುತ್ತಿದೆ. “ನಾಯಮಾತ್ಮಾ ಬಲಹೀನೇನ ಲಭ್ಯಃ.”

ದೇಶವು ಸರ್ವತೊಮುಖವಾಗಿ ಎಚ್ಚರಗೊಳ್ಳುತ್ತಿರುವ ಕಾಲವಿದು. ಎಲ್ಲೆಲ್ಲಿಯೂ ಎಲ್ಲ ಶಾಖೆಗಳಲ್ಲಿಯೂ ಕೆಲಸಗಾರರು ಬೇಕಾಗಿದ್ದಾರೆ. ಸಂಘಬದ್ಧರಾಗಿಯೊ, ಸಂಸ್ಥೆಗಳಿಗೆ ಸದಸ್ಯರಾಗಿಯೊ, ಅಥವಾ ವ್ಯಕ್ತಿಶಃವಾಗಿಯೊ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಆ ಕಾರ್ಯಗಳ ರೀತಿ ನೀತಿ ವಲಯ ವಿಸ್ತಾರಗಳನ್ನು ಯಾರೊಬ್ಬರೂ ನಿಷ್ಕರ್ಷಿಸಿ ಹೇಳಲಾರರು. ಆಯಾ ಸನ್ನಿವೇಶಕ್ಕೆ ತಕ್ಕಂತೆ ಅವರವರ ಮನೋಧರ್ಮ ಆತ್ಮಾನುಭವ ಅಭಿರುಚಿ ಉದ್ದೇಶಗಳಿಗೆ ತಕ್ಕಂತೆ ಕಾರ್ಯಾರಂಭ ಮಾಡಬೇಕು. ಮೈಸೂರು ಪಟ್ಟಣದಲ್ಲಿರುವ ಯುವಕರು ಕೈಕೊಳ್ಳಬೇಕಾಗಿರುವ ಕಾರ್ಯದ ಸ್ವಭಾವ ರೀತಿ ನೀತಿ ವಲಯಗಳು ಶ್ರೀರಂಗಪಟ್ಟಣಕ್ಕೆ ಹೊಂದದಿರಬಹುದು; ಶ್ರೀರಂಗಪಟ್ಟಣಕ್ಕೆ ಹೊಂದುವ ಕಾರ್ಯಗಳು ಪಕ್ಕದ ಹಳ್ಳಿಗೆ ಹೊಂದದಿರಬಹುದು. ಹಳ್ಳಿಗಳಲ್ಲಿ ನೈರ್ಮಲ್ಯ ವಿದ್ಯಾಪ್ರಚಾರಗಳು ಬೇಕಾಗುವಂತೆ ಪಟ್ಟಣಗಳಲ್ಲಿ ಬಹುಶಃ ಅನೌದಾರ್ಯ ಮತಭ್ರಾಂತಗಳನ್ನು ಪರಿಹಾರ ಮಾಡುವ ಬೋಧಪ್ರದ ಕಾರ್ಯಗಳು ಬೇಕಾಗಬಹುದು. ಆದ್ದರಿಂದ ಮಿತ್ರರೇ, ನೂತನ ಭಾರತರಾಷ್ಟ್ರ ಭವನ ನಿರ್ಮಾಣ ಕಾರ್ಯದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಗೌರವಪೂರ್ಣವಾದ ಸ್ಥಾನವಿದೆ; ಪ್ರತಿಯೊಬ್ಬರ ಸಾಹಸಕ್ಕೂ ಅವಕಾಶವಿದೆ.

ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಹೇಳಿ ಮುಂದುವರಿಯಬೇಕಾಗಿದೆ.

ನಮ್ಮಲ್ಲಿ ಅನೇಕರು ಸದ್ಯಃಫಲಾಕಾಂಕ್ಷಿಗಳು. ದೀರ್ಘಕಾಲ ಸಾಧನೆ ಮಾಡುವ ತಾಳ್ಮೆಯಿಲ್ಲ, ದೃಢಚಿತ್ತವಿಲ್ಲ. ಸತ್ಕರ್ಮ ಸತ್ಫಲವನ್ನು ತಂದೇ ತರುತ್ತದೆ ಎಂಬ ಸ್ರದ್ಧೆಯಿಲ್ಲ. ಗೀತೆಯಲಿ ಶ್ರೀ ಕೃಷ್ಣನು “ಪಾರ್ಥ, ನೈವೇಹ ನಾಮುತ್ರ ವಿನಾಶಸ್ತಸ್ಯ  ವಿದ್ಯತೇ| ನ ಹಿ ಕಲ್ಯಾಣಕೃತ್ ಕಶ್ಚಿದ್ದುರ್ಗತಿಂ ತಾತ ಗಚ್ಛತಿ|| (೬-೪೦) ಪೃಥಾನಂದನನೆ, ಇಹದಲ್ಲಿಯಾಗಲಿ ಪರದಲ್ಲಿಯಾಗಲಿ ಅವನಿಗೆ ವಿನಾಶವಿಲ್ಲ. ಎಳ್ಳನಿತಾದರೂ ಆಗಲಿ ಒಳ್ಳೆಯದನ್ನು ಮಾಡಿದವನಿಗೆ ದುರ್ಗತಿಯಿಲ್ಲ” ಎಂದು ಆಘೋಷಿಸಿದ್ದಾನೆ. ಮಹಾಫಲಕ್ಕೆ ಹೆಚ್ಚು ಕಾಲವೂ ಹೆಚ್ಚು ಸಾಧನೆಯೂ ಬೇಕಾಗುತ್ತದೆ. ಆದ್ದರಿಂದ ಅಲ್ಪಕಾಲದಲ್ಲಿ ಫಲ ಲಭಿಸದ್ದರೆ ಹತಾಶರಾಗದೆ ಮುಂದುವರಿಯುವ ಉಕ್ಕಿನಂತಹ ಚಿತ್ತದಾರ್ಢ್ಯವನ್ನು ನಾವು ಸಂಪಾದಿಸಬೇಕು. ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು; ಕಲ್ಲಿದ್ದಲ ಕಾವಾಗಬೇಕು.

ಸದ್ಯಃಫಲಾಕಾಂಕ್ಷೆಗಿಂತಲೂ ಕೀರ್ತಿಮೋಹದಿಂದ ಹೆಚ್ಚು ಅನಾಹುತವಾಗುತ್ತದೆ! ‘ಕೀರ್ತಿ ಮಹಾಪುರುಷರಲ್ಲಿರುವ ಕಟ್ಟಕಡೆಯ ದೌರ್ಬಲ್ಯ’ ಎಂಬುದಾಗಿ ಒಂದು ಸುಭಾಷಿತವಿದೆ. ಮಹಾಪುರುಷರಾದವರೇ ಈ ಯಶೋಲೋಭಕ್ಕೊಳಗಾದ ಮೇಲೆ ಸಾಮಾನ್ಯರ ಗತಿಯೇನು? ಆದರೂ ಮಹಾಪುರುಷರಲ್ಲಿರುವ ದೌರ್ಬಲ್ಯವನ್ನು ಸಾಮಾನ್ಯರೂ ಪೋಷಿಸಬೇಕೆಂಬ ನಿಯಮವಿಲ್ಲ. ಮಹಾಪುರುಷರಿಗೆ ಬಂದೊದಗುವ ಕೀರ್ತಿಯ ಪ್ರಭಾವದಿಂದಲೇ ಅದರ ಲೋಭವನ್ನು ಗೆಲ್ಲಲು ಅವರಿಂದ ಸಾದ್ಯವಾಗದಿರಬಹುದು. ನಮಗೆ ಅದರ ಅಭಾವವೇ ಅದರ ಲೋಭದಿಂದ ಪಾರಾಗಲು  ಸಹಾಯವಾಗುತ್ತದೆ. ಮಂದಿಯ ಕೈಚಪ್ಪಾಳೆ, ವೃತ್ತಪತ್ರಿಕೆಗಳ ಅಗ್ಗದ ಸ್ತುತಿ, ಬಿರುದು ಬಾವಲಿಗಳ ವ್ಯಾಮೋಹ ಇವುಗಳಿಗೆ ವಶನಾಗದೆ, ತಾನು ಹಿಡಿದ ಕೆಲಸವನ್ನು ಪಟ್ಟುಹಿಡಿದು ನಿಃಶಬ್ದವಾಗಿ ಮಾಡುವಾತನೇ ನಿಜವಾದ ಕರ್ಮಯೋಗಿ. ಸ್ವಾಮಿ ವಿವೇಕಾನಂದರು ಒಂದು ಕಡೆ ಈ ಆರ್ಥದ ಮಾತುಗಳನ್ನು ಹೇಳಿದ್ದಾರೆ: ಸಾವಿರಾರು ಜನರು ಸುತ್ತಲೂ ನೆರೆದು ಕರತಾಡನ ಮಾಡುವಾಗ, ಜಯಘೋಷದಿಂದ ಹುರಿದುಂಬಿಸುವಾಗ, ಸ್ಮಾರಕ ಸ್ತೂಪಗಳೂ ಜೀವನ ಚರಿತ್ರೆಗಳೂ ತನ್ನನ್ನು ಕೊಂಡಾಡುತ್ತವೆ ಎಂದು ಗೊತ್ತಾದಾಗ, ತನ್ನ ಮರಣವೇ ತನ್ನ ಯಶೋದುಂದುಭಿಯನ್ನು ಮೊಳಗುತ್ತದೆಂದು ತಿಳಿದಾಗ, ಯಾವ ಹೇಡಿ ತಾನೇ ಮುಂದುವರಿದು ರಣ ರಂಗದಲ್ಲಿ ಮಡಿಯಾಲಾರ? ಯಾವ ಕ್ರಿಮಿ ತಾನೆ ಸಾಹಸಿಯಾಗಲಾರದು? ಆದರೆ ಕೀರ್ತಿಯ ಕಿರಣಮಾತ್ರವೂ ಪ್ರಕಾಶಿಸದಿರುವಾಗ, ಪ್ರಶಂಸೆ ಮಾಡುವವರಾಗಲಿ ಹುರಿದುಂಬಿಸುವವರಾಗಲಿ ಒಬ್ಬರೂ ಇಲ್ಲದಿರುವಾಗ, ಬಹುಕಾಲದ ಪ್ರಯತ್ನದಿಂದಲೂ ಕಾರ್ಯಸಿದ್ಧಿಯಾಗದಿರುವಾಗ ದೃಢಚಿತ್ತನಾಗಿ ಶ್ರದ್ಧಾನ್ವಿತನಾಗಿ, ಮೌನಿಯಾಗಿ, ಹಲ್ಲುಕಚ್ಚಿಕೊಂಡು, ಹಣೆಸುಕ್ಕಿಕೊಂಡು, ಬೆವರು ಸುರಿಸುತ್ತಾ, ನಸುಬಾಗಿ, ಕಟ್ಟಕಡೆಯ ಕಲ್ಯಾಣದಲ್ಲಿ ನೆಚ್ಚಿಟ್ಟುಕೊಂಡು, ಈಶ್ವರನನ್ನು ನೆನೆದು ಕರ್ಮಪರ್ವತವನ್ನೇರುವವನೇ ಮಹಾತಪಸ್ವಿ, ಅವನಿಗಿಂತಲೂ ಹೆಚ್ಚಾದ ವಿಭೂತಿಗಳಿನ್ನಿಲ್ಲ. ಅವನ ಹೆಸರು ಪತ್ರಿಕೆಗಳಿಗೆ ಗೊತ್ತಿಲ್ಲದಿರಬಹುದು; ಆದರೆ ಈಶ್ವರನ ದೃಷ್ಟಿಯಲ್ಲಿ ಅವನು ಅಗ್ರಗಣ್ಯನಾಗುತ್ತಾನೆ.

ಆದ್ದರಿಂದ ಪ್ರತಿಯೊಬ್ಬ ಯುವಕನೂ ಅಂತಿಮದ ಅನಂತ ಕಲ್ಯಾಣದಲ್ಲಿ ಶ್ರದ್ಧೆಯಿಟ್ಟು ಕಾರ್ಯರಂಗಕ್ಕಿಳಿಯಬೇಕು. ತಾನು ರಂಗಕ್ಕಿಳಿದೊಡನೆಯೆ ಜಗತ್ತು ಉದ್ಧಾರವಾಗುತ್ತದೆ ಎಂದಾಗಲಿ, ಲೋಕಲೋಚನವಲಯಕ್ಕೆ ತಾನು ಕೇಂದ್ರವಾಗುತ್ತೇನೆಂದಾಗಲಿ, ಶಾಂತಿಸ್ಥಾಪನೆಗಾಗಿ ಕೊಡುವ ನೊಬೆಲ್ ಬಹುಮಾನ ತನಗೇ ಬರುತ್ತದೆ ಎಂದಾಗಲಿ ಹೊಂಗನಸುಗಳನ್ನೂ  ಆಕಾಶಗೋಪುರಗಳನ್ನೂ ಕಟ್ಟಿಕೊಳ್ಳಬಾರದು.

ಇನ್ನು ನನಗೆ ಅತ್ಯಂತ ಪ್ರಿಯತಮವಾದ ಒಂದೆರಡು ವಿಷಯಗಳನ್ನು ಕುರಿತು ಪ್ರಸ್ತಾಪಿಸಿ ಉಪನ್ಯಾಸವನ್ನು ಕೊನೆಗಾಣಿಸುತ್ತೇನೆ. ಆ ವಿಷಯಗಳು ನಿಮ್ಮೆಲ್ಲರಿಗೂ ಕೂಡ ಪ್ರಿಯವಾಗಿರುತ್ತವೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ.

ಯುವಕರು ಕೈಕೊಳ್ಳಬೇಕಾಗಿರುವ ಅನೇಕ ಉದ್ಯಮಗಳಲ್ಲಿ ಭಾಷೆಯ ಅಭ್ಯುದಯವೂ ಸಾಹಿತ್ಯ ನಿರ್ಮಾಣ ಮತ್ತು ಪ್ರಚಾರಗಳೂ ಗಣ್ಯವಾಗಿವೆ. ಹಿಂದಿ, ಲ್ಯಾಟಿನ್, ಗ್ರೀಕ್, ಸಂಸ್ಕ್ರತ, ತೆಲುಗುಗಳನ್ನಲ್ಲ ನಾನು ಹೇಳುತ್ತಿರುವುದು: ಕನ್ನಡದ ಭಾಷೆ; ಕನ್ನಡ ಸಾಹಿತ್ಯ! ನಮ್ಮ ಮಾತೃಭಾಷೆ ಮತ್ತು ಅದರ ಸಾಹಿತ್ಯ!

ಜನಜೀವನವನ್ನು ಎಚ್ಚರಿಸುವ ತೂರ್ಯಧ್ವನಿ ಸಾಹಿತ್ಯದಿಂದ ಬರುತ್ತದೆ, ಸಾಹಿತ್ಯ ಜನಜೀವನದ ಇಂದಿನ ಸ್ಥಿಯನ್ನು ವರ್ಣಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ. ಕೃತವಿದ್ಯರಾದ ಯುವಕರು ತಮ್ಮ ಆಶೆ ಆಕಾಂಕ್ಷೆಗಳನ್ನು ಬರೆದು ಓದಿ, ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು. ಈಗಾಗಲೆ ನಮ್ಮನಾಡಿನ ಜೀವನ ಕೃತಿಕಾ ದೀಪೋತ್ಸವದಂತೆ ಸಾವಿರಾರು ಸೊಡರ್ಮಾಲೆಗಾಗಿ ಉರಿಯುತ್ತಿರುವ ಮನೋಹರ ಭವ್ಯ ದೃಶ್ಯ ಕಂಗೊಳಿಸುತ್ತಿದೆ. ಎಲ್ಲೆಲಿಯೂ ಕರ್ಣಾಟಕ ಸಂಘಗಳೇಳುತ್ತಿವೆ.; ಕನ್ನಡದ ಪುನರುಜ್ಜೀವನಕ್ಕಾಗಿಯೂ ಉದ್ಧಾರಕ್ಕಾಗಿಯೂ ದೀಕ್ಷೆ ತೊಟ್ಟು ಸೊಂಟಕಟ್ಟಿ ಕಂಕಣಬದ್ಧರಾಗಿರುವ ಅನೇಕ ಪ್ರತಿಭಾಸಂಪನ್ನರಾದ ಮಹನೀಯರು ಕರ್ಣಾಟಕದಲ್ಲೆಲ್ಲ  ಸಂಚರಿಸಿ ಹಣತಗಳನ್ನು ಹೊತ್ತಿಸುತ್ತಿದ್ದಾರೆ: ಕೇಂದ್ರಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ತನ್ನ ಕೈಯಲ್ಲಾದ ಮಟ್ಟಿಗೆ, ಹುರುಪಿನಿಂದ ಕಾರ್ಯಸಾಧನೆ ಮಾಡುತ್ತಿದೆ; ವಿದ್ಯಾಭ್ಯಾಸದ ಇಲಾಖೆ ಕನ್ನಡದಲ್ಲಿಯೆ ಪಾಠ ಹೇಳುವ ಏರ್ಪಾಡು ಮಾಡುತ್ತಿದೆ; ವಿಶ್ವವಿದ್ಯಾನಿಲಯ ಕನ್ನಡಗ್ರಂಥ ಪ್ರಕಟನೆಗಳಿಂದ ತನ್ನ ಭಾಗದ ತೈಲವನ್ನು ಹೊಯ್ದು ಉರಿಯನ್ನು ಪೋಷಿಸುತ್ತಿದೆ. ಇಂತಹ ಮಹಾ ಸಾಹಿತ್ಯದ ದೀಪೋತ್ಸವದಲ್ಲಿ ನಾವೆಲ್ಲರೂ ಉತ್ಸಾಹದಿಂದ ಭಾಗಿಗಳಾಗದಿದ್ದರೆ ಅದು ನಮ್ಮದೆಯ ಕಗ್ಗವಿಯ ಗಾಢಾಂಧಕಾರವನ್ನು ಮಾತ್ರ ಸೂಚಿಸುತ್ತದೆ. ಇಲ್ಲಿ ನೆರೆದಿರುವವರಲ್ಲಿ ಯಾರ ಹೃದಯದಲ್ಲಿಯೂ ಅಂತಹ ಕಗ್ಗತ್ತಲಿಲ್ಲವೆಂದು ನಾನು ದೃಢವಾಗಿ ನಂಬುತ್ತೇನೆ.

ಮಹನೀಯರೇ, ಮತ್ತೊಮ್ಮೆ ಹೇಳುತ್ತೇನೆ. ಮೇಲೆ ಹೇಳಿದಂತೆ ಜೀವನದಲ್ಲಿ ಮುಂಬರಿಯಬೇಕಾದ ನಮ್ಮ ಹೃದಯದಲ್ಲಿ  ಒಂದು ಶಕ್ತಿಯ ನಿಧಿಯನ್ನು ಶೇಖರಿಸಬೇಕು; ನಮ್ಮ ಆತ್ಮ ಓಜಸ್ವಿಯಾಗಬೇಕು; ನಾವೆಲ್ಲರೂ ‘ನಿರಂಕುಶಮತಿ’ ಗಳಾಗಿ ‘ದರ್ಶನ’ ದ್ರಷ್ಟಾರರಾಗಬೇಕು. ಧ್ಯಾನಮಯ ನಿರ್ಮಲ ಜೀವನದಿಂದ ಅಂತಹ ಓಜಸ್ಸು ಲಭಿಸುತ್ತದೆ. ಪುಣ್ಯ ಜೀವನವೆ ಪಾವನ ತಪಸ್ಸು.

ನಮ್ಮೆಲ್ಲರ ದಿವ್ಯ ‘ದರ್ಶನಕ್ಕೆ’ ಈ ಮಹಾಮಂತ್ರಗಳು ಅಡಿಗಲ್ಲುಗಳಾಗಿರಲಿ:

“ಏಕಂ ಸತ್ ವಿಪ್ರಾ ಬಹುಧಾ ವದಂತಿ”.

ಇರುವುದೊಂದೇ ಸತ್ಯ; ತಿಳಿದವರು ಬೇರೆ ಬೇರೆ ರೀತಿಯಿಂದ ಹೇಳುತ್ತಾರೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ ||

ಚರಾಚರ ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸು. ತ್ಯಾಗದಿಂದ ಅದನ್ನು ಅಸ್ವಾದಿಸು. ಇತರರ ಸಿರಿಗೆ ಅಳುಪದಿರು.

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋsಸ್ತಿ ನ ಕರ್ಮ ಲಿಪ್ಯರೇ ನರೇ ||

ಒಂದು ಶತಮಾನ ಬಾಳಬೇಕೆಂದು ಇಚ್ಛಿಸುವಾತನು ಕರ್ಮ ಮಾಡುತ್ತಲೇ ಬಾಳಬೇಕು. ಹಾಗೆ (ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸಿ) ಬಾಳಿದರೆ ಕರ್ಮಲೇಪನವಿಲ್ಲ.

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿಃ |
ವ್ಯಶೇಮ ದೇವಹಿತಂ ಯದಾಯುಃ ||

ಶುಭವಾದುದನ್ನೆ ನಮ್ಮ ಕಿವಿಯಾಲಿಸಲಿ. ಪೂಜಾರ್ಹವಾಗಿ ಮಂಗಳವಾದುದನ್ನೆ ನಮ್ಮ ಕಣ್ಣು ನೋಡಲಿ. ದೃಢದೇಹದಿಂದಲೂ ಆನಂದದಿದಲೂ ಜೀವಮಾನ ದೇವಹಿತವಾಗಿ ಸಾಗಲಿ.

ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply