ವೈಕುಂಠ ಏಕಾದಶಿಗೆ ಮಾತ್ರ ವಿಶೇಷ ಮಹತ್ವವೇಕೆ ?

ಧನುರ್ ಮಾಸ ಶುಕ್ಲ ಪಕ್ಷ ಏಕಾದಶಿಯನ್ನು ‘ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಪೌರಾಣಿಕ ಹಿನ್ನೆಲೆ ಹೀಗಿದೆ…

ತಿಥಿಗಳಲ್ಲಿ ‘ಏಕಾದಶಿ’ ಎಂದರೆ ಹದಿನೊಂದು (1+10) ಎಂದು ಅರ್ಥ. ಶುಕ್ಲ ಪಕ್ಷ ಏಕಾದಶಿ ಮತ್ತು ಕೃಷ್ಣ ಪಕ್ಷ ಏಕಾದಶಿ ಎಂದು ತಿಂಗಳಿಗೆ ಎರಡು ಸಲ ಬರುವ ಏಕಾದಶಿ, ತಿಥಿಗಳಲ್ಲಿ ಬಹಳ ಮುಖ್ಯವಾದದ್ದು. ಅವುಗಳಲ್ಲಿ, ಧನುರ್ ಮಾಸ ಶುಕ್ಲ ಪಕ್ಷ ಏಕಾದಶಿಯೇ ‘ವೈಕುಂಠ ಏಕಾದಶಿ’ ಎಂದು ಆಚರಿಸಲಾಗುತ್ತದೆ.

ಪುರಾಣಗಳ ಪ್ರಕಾರ ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ ಎನ್ನುತ್ತಾರೆ. ಅದರಲ್ಲಿ, ಆಷಾಡದ ಮೊದಲಿನಿಂದ ಧನುರ್ ಮಾಸದವರೆಗೆ ಉಳ್ಳ ಆರು ತಿಂಗಳು ಕಾಲ ದೇವತೆಗಳಿಗೆ ರಾತ್ರಿ ಸಮಯವೇ ದಕ್ಷಿಣಾಯನ ಉಂಟಾಗುತ್ತದೆ. ದೇವತೆಗಳ ದಕ್ಷಿಣಾಯನ ಮುಗಿಯುವ ಸಮಯ ಬ್ರಹ್ಮ ಮುಹೂರ್ತ ಸಮಯವಾದ ಮುಂಜಾವಿನ ಸಮಯವೇ ಧನುರ್. ಈ ಧನುರ್ ಮಾಸದಲ್ಲಿ, ಮಹಾವಿಷ್ಣು ಗಾಢ ನಿದ್ದೆಯಿಂದ ಎಚ್ಚರಗೊಳ್ಳುವ ಆ ಒಂದು ಗಳಿಗೆಯೇ ಏಕಾದಶಿ. ಭಗವಂತ ಕಣ್ಣು ತೆರೆದು ಎಲ್ಲರನ್ನೂ ದಯಪಾಲಿಸುತ್ತಾನೆ ಎಂಬುದನ್ನು ಸೂಚಿಸುವುದಕ್ಕೆ ಏಕಾದಶಿ, ಉಳಿದ ಎಲ್ಲಕ್ಕಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ.
ಈ ನಂಬಿಕೆಯ ಹಿಂದಿನ ಪೌರಾಣಿಕ ಹಿನ್ನೆಲೆ ಹೀಗಿದೆ…

ಚಂದ್ರಾವತಿ ಎಂಬ ನಗರದಲ್ಲಿ ಜಂಗಾಸುರ ಎಂಬ ಅಸುರ ಅವನ ಮಗ ಮರುವಾಸುರದೇವತೆಗಳಿಗೆ ಉಪಟಳ ನೀಡುತ್ತಿರುತ್ತಾರೆ. ಅಸುರರಿಂದ ತಾವು ಪಡುವ ಹಿಂಸೆಯನ್ನು ದೇವತೆಗಳು ಭಗವಂತನ ಬಳಿ ಮೊರೆಯಿಡಲು ಮಹಾವಿಷ್ಣು ಆ ಅಸುರರ ಮೇಲೆ ಯುದ್ದ ಹೂಡುತ್ತಾನೆ.

ಆ ಯುದ್ಧ ಹಲವು ವರ್ಷಗಳು ಮುಂದುವರೆದಿದ್ದರಿಂದ, ದಣಿದು ಸೊರಗಿ ಹೋದ ಭಗವಂತನು ಸಿಂಹಾವತಿ ಎಂಬ ಗುಹೆಯಲ್ಲಿ ವಿಶ್ರಾಂತಿ ಪಡೆಯಲು ನಿದ್ದೆಮಾಡುತ್ತಾನೆ. ಆಗ ಶ್ರೀಮನ್ ನಾರಾಯಣನ ಮನಸ್ಸಿನಲ್ಲಿ, ಅಸುರರನ್ನು ಸೋಲಿಸಲು ಉಂಟಾದ ಆಲೋಚನೆಗಳು, ಯೋಜನೆಗಳು ಎಲ್ಲವೂ ರೂಪಾತಾಳಿ ‘ಏಕಾದಶಿ’ ಎಂಬ ಒಂದು ಸ್ತ್ರೀಶಕ್ತಿಯಾಗಿ ಆ ಅಸುರರನ್ನು ಸೋಲಿಸುತ್ತದೆ. ಅಸುರರನ್ನು ಜಯಿಸಿದ ಮೇಲೆ ತನ್ನ ಬಳಿಯೇ ಮರಳಿದ ಏಕಾದಶಿಗೆ, ತನ್ನ ಕೆಲಸವನ್ನು ಅವಳು ವಹಿಸಿಕೊಂಡು ಅದನ್ನು ಉತ್ತಮವಾಗಿ ಮಾಡಿ ಮುಗಿಸಿದ್ದನ್ನು ಮೆಚ್ಚಿಕೊಂಡು ವರ ನೀಡಲು ತಯಾರಾದ ಭಗವಂತನ ಬಳಿ ಬಂದು, “ಭಗವಂತ, ನಿನ್ನ ಪ್ರೀತಿ ಪಾತ್ರಳಾಗಿ ನಾನು ಸದಾ ಇರಬೇಕು, ನಾನು ಹುಟ್ಟಿದ ಈ ದಿನ ಉಪವಾಸ ಇರುವವರಿಗೆ ಎಲ್ಲ ಸಿದ್ಧಿಸುವಂತೆ ಮಾಡಬೇಕು..!” ಎಂದು ಏಕಾದಶಿ ಬೇಡಿಕೊಳ್ಳುತ್ತಾಳೆ.

ಬೇಡಿದ ವರ ನೀಡಿದ ವರದನು, ತನ್ನಿಂದ ಸೃಷ್ಟಿಯಾದ ಏಕಾದಶಿಯನ್ನು ತನ್ನೊಳಗೆ ಮತ್ತೆ ಐಕ್ಯಮಾಡಿಕೊಳ್ಳುತ್ತಾನೆ.

ಹೀಗೆ ಭಗವಂತನಿಂದ ಸೃಷ್ಟಿಯಾದ ಏಕಾದಶಿ ಎಂಬ ಶಕ್ತಿಯಾದವಳು, ವರ್ಷಕ್ಕೆ 24 ಅಥವಾ 25 ಸಲ ಬರುತ್ತಾಳೆ. ಎಲ್ಲ ವ್ರತಗಳಿಗೂ ಮೇಲಾಗಿ, ಏಕಾದಶಿ ವ್ರತ ಇರುವುದು ಅತಿ ಶ್ರೇಷ್ಠ ಎನ್ನುತ್ತವೆ ಪುರಾಣಗಳು. ವರ್ಷ ಪೂರ್ತಿ ಏಕಾದಶಿ ವ್ರತ ಇರಲಾಗದವರು, ಧನುರ್ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿಯಲ್ಲಾದರೂ ವ್ರತ ಆಚರಿಸುವುದು ಉತ್ತಮ. ಈ 24 ಏಕಾದಶಿಯಲ್ಲೂ ವ್ರತ ಇರುವ ಮೊತ್ತ ಫಲವನ್ನೂ ವೈಕುಂಠ ಏಕಾದಶಿ ಕೊಡುತ್ತದೆ ಎಂಬುದೇ ಇದರ ವಿಶೇಷತೆ.

Leave a Reply