ನಮ್ಮ ಅಹಂಕಾರಕ್ಕೆ ಯಾವಾಗಲೂ ಪ್ರಬಲ ಸವಾಲುಗಳೇ ಬೇಕು. ಗುದ್ದಿಕೊಳ್ಳುವ ಗೋಡೆ ಗಟ್ಟಿಯಾಗಿದ್ದಷ್ಟೂ ಗುದ್ದುವ ಮುಷ್ಟಿ ಬೀಗುತ್ತದೆ. ತನ್ನ ಬಲದ ಬಗ್ಗೆ ಹೆಮ್ಮೆ ಪಡುತ್ತದೆ. ದುರ್ಬಲರು ಕ್ಷಮೆ ಕೇಳಿದರೆ ಅವರನ್ನು ಕ್ಷಮಿಸುವುದರಲ್ಲಿ ನಮಗೆ ಮಜಾ ಬರುವುದಿಲ್ಲ. ಆದ್ದರಿಂದಲೇ ಎಷ್ಟೋ ಸಲ ನಾವು ದುರ್ಬಲರನ್ನು ಕ್ಷಮಿಸುವುದೇ ಇಲ್ಲ! ~ ಅಲಾವಿಕಾ
ಒಮ್ಮೆ ಅಧ್ಯಾತ್ಮ ಪಥಿಕನೊಬ್ಬ ಝೆನ್ ಗುರುವೊಬ್ಬನ ಬಳಿ ಬಂದು ತನಗೆ ಜ್ಞಾನೋದಯ ಪಡೆಯುವ ದಾರಿ ತೋರಿಸಿ ಎಂದು ಕೇಳುತ್ತಾನೆ. ಅವನ ಬೇಡಿಕೆ ಕೇಳಿಸಿಕೊಳ್ಳುತ್ತಲೇ ಝೆನ್ ಗುರು ಅವನ ತಲೆ ಮೇಲೆ ಧಡ್ಡನೆ ಗುದ್ದುತ್ತಾನೆ. ಶಿಷ್ಯ ಕೈಮುಗಿದು ತಲೆಬಾಗಿ ಅವನ ಶಿಷ್ಯತ್ವ ಸ್ವೀಕರಿಸುತ್ತಾನೆ.
ಈ ಕಥೆ ಕೇಳಿದ ಯಾರಾದರೂ ಝೆನ್ ಗುರುವನ್ನು ವಿಕ್ಷಿಪ್ತ ಮನುಷ್ಯ ಎಂದು ತಿಳಿಯಬಹುದು. ಶಿಷ್ಯನ ನಮ್ರ ಬೇಡಿಕೆಗೆ ಅತಿರೇಕದ ಪ್ರತಿಕ್ರಿಯೆ ಅನಿಸಬಹುದು. ಅಬ್ಬಾ, ಇವನೆಂಥ ಕ್ರೂರಿ! ಇಂಥಾ ಕ್ರೂರ ಮನುಷ್ಯ ಗುರುವಾಗಲೂ ಸಾಧ್ಯವೇ ಅನ್ನುವ ಪ್ರಶ್ನೆ ಮೂಡಬಹುದು. ಅಥವಾ ಯಾವ ತರ್ಕಕ್ಕೂ ಆಸ್ಪದ ಕೊಡದೇ ಅವನು ಗುರುವೇ ಅಲ್ಲವೆಂದು ಷರಾ ಬರೆದುಬಿಡಬಹುದು.
ಸಾವಧಾನ. ವಾಸ್ತವದಲ್ಲಿ, ಆ ಗುರುವೇ ನಿಜವಾದ ಗುರು. ಏಕೆಂದರೆ ಗುರುವಿನ ಜವಾಬ್ದಾರಿಯೇ ದಾರಿ ತೋರುವುದು. ಕತ್ತಲು ಕಳೆದು ಬೆಳಕಿನತ್ತ ನಡೆಸುವುದು. ಅಜ್ಞಾನದ ಪೊರೆ ಹರಿದು ತಿಳಿವು ಹೊಳೆಸುವುದು.
ಅಜ್ಞಾನ ಕಳೆಯಲಿಕ್ಕೆ, ಬೆಳಕಿನತ್ತ ನಡೆಸಲಿಕ್ಕೆ ಇಂಥಾ ಹಿಂಸೆ ಅಗತ್ಯವಿತ್ತೇ? ನೀವು ಕೇಳಬಹುದು. ಆದರೆ ಅದು ಹಿಂಸೆಯಲ್ಲ, ಅದು ಪರೀಕ್ಷೆಯಾಗಿತ್ತು!
ಹೌದು. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ತನ್ನನ್ನು ತನ್ನ ದೇಹದೊಡನೆ, ತನ್ನ ದೈಹಿಕ ಅಸ್ತಿತ್ವದೊಡನೆ ಗುರುತಿಸಿಕೊಳ್ಳುತ್ತಾನೋ ಅಲ್ಲಿಯವರೆಗೆ ಅವನು ಜ್ಞಾನೋದಯ ಹೊಂದಲು, ಕೊನೆಪಕ್ಷ ಅದನ್ನು ಹೊಂದುವ ದಾರಿಯಲ್ಲಿ ನಡೆಯಲೂ ಅರ್ಹರಾಗಿರುವುದಿಲ್ಲ. ಜ್ಞಾನೋದಯ ಹೊಂದುವ ಬಯಕೆ ಕಟ್ಟಿಕೊಳ್ಳುವ ಮೊದಲು, ನಾವು ನಮ್ಮ ಅಹಂಕಾರ ಕಳಚಿಕೊಳ್ಳಬೇಕಾಗುತ್ತದೆ. ದೇಹ ಭಾವನೆ ಕಿತ್ತೊಗೆಯಬೇಕಾಗುತ್ತದೆ.
ಝೆನ್ ಗುರುವಿನ ಬಳಿ ಬಂದ ಆಕಾಂಕ್ಷಿ ಜ್ಞಾನೋದಯದ ಮಾರ್ಗದಲ್ಲಿ ನಡೆಯಲು ಅರ್ಹನೋ ಅಲ್ಲವೋ ಅನ್ನುವ ಪರೀಕ್ಷೆ ನಡೆಯಬೇಕಿತ್ತು. ಆ ಕಾರಣಕ್ಕೇ ಝೆನ್ ಗುರು ಅವನ ತಲೆಗೆ ಗುದ್ದಿದ್ದು! ಆತ ಅದಾಗಲೇ ಜ್ಞಾನೋದಯದ ಹಂಬಲ ಹೊಂದಿದ್ದ ಶಿಷ್ಯ. ಬಹುಶಃ ಅವನು ಒಂದು ಕ್ಷಣ ವಿಚಲಿತನಾಗಿದ್ದಿರಬೇಕು. ಮತ್ತು ಆ ದಾರಿಯಲ್ಲಿ ಅದಾಗಲೇ ಸಾಕಷ್ಟು ದಾರಿ ಸವೆಸಿದ್ದರಿಂದ ತನ್ನ ಕೊರತೆ ತನಗೇ ಕಂಡಿರಬೇಕು. ಆದ್ದರಿಂದ ಅಹಂಕಾರವನ್ನು ಪೂರ್ತಿ ಕಳಚಿಟ್ಟು ಅರ್ಹನಾಗುವ ತರಬೇತಿಗಾಗಿ ಆ ಗುರುವಿನ ಶಿಷ್ಯತ್ವ ಸ್ವೀಕರಿಸಿದ್ದಿರಬೇಕು.
ಅಹಂಕಾರ ಪರೀಕ್ಷಿಸಲು ಬೇರೆ ದಾರಿಯೇ ಇರಲಿಲ್ಲವೆ? ಅಚಾನಕ್ಕಾಗಿ ಅಂಥಾ ಪ್ರತಿಕ್ರಿಯೆ ಕೊಡುವ ಅಗತ್ಯ ಇತ್ತೇ? ಅದೂ ಅಷ್ಟು ಜೋರಾಗಿ ಗುದ್ದಬೇಕಿತ್ತೆ? ನೀವು ಮತ್ತೂ ಕೇಳಬಹುದು.
ಹೌದು. ನಾವು ನಾಟಕಕ್ಕೆ ಎಷ್ಟು ಚೆನ್ನಾಗಿ ಒಗ್ಗಿಕೊಂಡಿದ್ದೇವೆ ಅಂದರೆ, ನಮಗೆ ನಮ್ಮ ಪರೀಕ್ಷೆ ನಡೆಯುತ್ತದೆ ಅನ್ನುವ ಸಣ್ಣ ಸುಳಿವು ಸಿಕ್ಕರೂ ಸಾಕು ನಟನೆಗೆ ಸಜ್ಜಾಗಿಬಿಡುತ್ತೇವೆ. ಅದಕ್ಕೇ, ನಮ್ಮ ಕಳ್ಳಾಟ ಬಲ್ಲ ಗುರುಗಳು ಹೀಗೆ ಅಚಾನಕ್ಕಾಗಿ ನಮ್ಮ ಭೂತ ಬಿಡಿಸೋದು! ಹಾಗೇ ಆ
ಝೆನ್ ಗುರುವೂ ಅಚಾನಕ್ಕಾಗಿ ಹೊಡೆದ. ಜೋರಾಗಿ ಯಾಕೆ ಹೊಡೆದ? ನಮ್ಮ ಅಹಂಕಾರಕ್ಕೆ ಯಾವಾಗಲೂ ಪ್ರಬಲ ಸವಾಲುಗಳೇ ಬೇಕು. ಗುದ್ದಿಕೊಳ್ಳುವ ಗೋಡೆ ಗಟ್ಟಿಯಾಗಿದ್ದಷ್ಟೂ ಗುದ್ದುವ ಮುಷ್ಟಿ ಬೀಗುತ್ತದೆ. ತನ್ನ ಬಲದ ಬಗ್ಗೆ ಹೆಮ್ಮೆ ಪಡುತ್ತದೆ. ದುರ್ಬಲರು ಕ್ಷಮೆ ಕೇಳಿದರೆ ಅವರನ್ನು ಕ್ಷಮಿಸುವುದರಲ್ಲಿ ನಮಗೆ ಮಜಾ ಬರುವುದಿಲ್ಲ. ಆದ್ದರಿಂದಲೇ ಎಷ್ಟೋ ಸಲ ನಾವು ದುರ್ಬಲರನ್ನು ಕ್ಷಮಿಸುವುದೇ ಇಲ್ಲ. ಅದೇ ಘನಂದಾರಿ ವ್ಯಕ್ತಿಗಳನ್ನು – ಉದಾ, ಸಿನೆಮಾ ನಟರು, ರಾಜಕಾರಣಿಗಳು ಇತ್ಯಾದಿಗಳನ್ನು ನಾವು ಅವರು ಕ್ಷಮೆ ಕೇಳದೆ ಇದ್ದರೂ ಕ್ಷಮಿಸಿಬಿಡುತ್ತೇವೆ! ಅದರಿಂದ ನಮ್ಮ ಅಹಂ ತೃಪ್ತಿಗೊಳ್ಳುತ್ತದೆ ಅನ್ನುವ ಕಾರಣವಷ್ಟೇ ಅದರ ಹಿಂದೆ.
ಆದ್ದರಿಂದ, ಝೆನ್ ಗುರು ತಲೆಗೆ ಗುದ್ದಿದ. ಜೋರಾಗಿ ಗುದ್ದಿದ. ಅವನು ಗುದ್ದಿದ ಓಘಕ್ಕೆ ಶಿಷ್ಯನ ಒಳಗಿದ್ದ ಅಹಂಕಾರ ಅದೇ ಓಘದಲ್ಲಿ ಮೇಲಕ್ಕೆ ಚಿಮ್ಮಿದ್ದಿರಬೇಕು. ಆದರೆ, ಆವರೆಗಿನ ಸಾಧನೆಯ ಅಲ್ಪಸ್ವಲ್ಪ ವಿವೇಕ ಅವನನ್ನು ಪ್ರತಿಕ್ರಿಯೆ ತೋರದಂತೆ ತಡೆದಿರಬೇಕು. ಆದರೂ ಆ ಚಿಮ್ಮುವಿಕೆಯನ್ನು ಕಂಡುಕೊಂಡ ಶಿಷ್ಯನಿಗೆ ಅದನ್ನೂ ಇಲ್ಲವಾಗಿಸಲು ಅಹಂಕಾರ ತೊಡೆಯುವ ಈ ಗುರುವಿಗೆ ಮಾತ್ರ ಸಾಧ್ಯ ಅನಿಸಿರಬೇಕು. ಅದಕ್ಕೇ ಅವನ ಶಿಷ್ಯತ್ವ ಒಪ್ಪಿಕೊಂಡು ಅಲ್ಲೇ ಅವನ ಜೊತೆ ಇರುವ ತೀರ್ಮಾನ ಮಾಡಿರಬೇಕು.
ಆದ್ದರಿಂದ, ತಲೆಗೆ ಗುದ್ದಿದ ಝೆನ್ ಗುರುವಿನ ವರ್ತನೆಯನ್ನ ಹಿಂಸೆ ಎಂದು ತಿಳಿಯಬಾರದು. ಅದನ್ನು ಅವನ ಔದಾರ್ಯವೆಂದು ತಿಳಿಯಬೇಕು. ಅವನ ಅನುಕಂಪೆ ಎಂದು ತಿಳಿಯಬೇಕು. ಅವನ ವರ್ತನೆ, ನಮ್ಮ ಅಂತರಂಗದ ಕೊಳಕ್ಕೆ ಕಲ್ಲೆಸೆದು ತಳದಲ್ಲೆಷ್ಟು ರಾಡಿ ಇದೆ ಅಂದು ತೋರಿಸಿಕೊಡುವ ಕೃಪೆಯಷ್ಟೆ.
ನೆನಪಿರಲಿ, ಗುರುವಿನ ಕ್ರೌರ್ಯದಷ್ಟು ಉದಾತ್ತವಾದುದು ಮತ್ತೊಂದಿಲ್ಲ!