ತಾಪತ್ರಯಗಳು ಅಂದರೇನು? : ಬೆಳಗಿನ ಹೊಳಹು

ಸಾಮಾನ್ಯವಾಗಿ ನಾವೆಲ್ಲರೂ ‘ತಾಪತ್ರಯ’ ಅನ್ನುವ ಪದವನ್ನು ಆಗಾಗ ಬಳಸುತ್ತಲೇ ಇರುತ್ತೇವೆ. ಅದರಲ್ಲೂ ‘ಸಂಸಾರ ತಾಪತ್ರಯ’ ಅನ್ನುವ ಪದಬಳಕೆಯೇ ಹೆಚ್ಚು! ಆದರೆ ನಮ್ಮಲ್ಲಿ ಎಷ್ಟು ಜನಕ್ಕೆ ಈ ಪದದ ಅರ್ಥ ಗೊತ್ತಿದೆ? ಗೊತ್ತಿಲ್ಲದವರು ಇಲ್ಲಿ ನೋಡಿ…

ತಾಪತ್ರಯಗಳೆಂದರೆ ಆಧ್ಯಾತ್ಮಿಕ, ಆದಿಭೌತಿಕ ಮತ್ತು ಆದಿದೈವಿಕ ಎಂಬ ಮೂರು ಬಗೆಯ ತಾಪಗಳು.

1. ಆಧ್ಯಾತ್ಮಿಕ ತಾಪ: ಆಧ್ಯಾತ್ಮಿಕ ತಾಪವೆಂಬುದು ನೇರವಾಗಿ ನಮಗೇ ಸಂಬಂಧಪಟ್ಟಿದ್ದು. ನಮ್ಮ ಅಂತರಂಗದಲ್ಲಿ ಅಡಗಿರುವ ಕಾಮ, ಕ್ರೋದ, ಲೋಭ, ಮದ, ಮೋಹ, ಮತ್ಸರ ಎಂಬ ಅರಿಷಡ್ವರ್ಗಗಳಿಂದ ಬರುವಂತಹದು. ನಮ್ಮಲ್ಲಿ ಕಾಮ ಅಥವಾ ಆಸೆಗಳು ಹೆಚ್ಚುತ್ತಾ; ಅವು ಈಡೇರದ ಸ್ಥಿತಿಯನ್ನು ತಲುಪಿದಾಗ ನಮಗೆ ನಾವೆ ನೊಂದುಕೊಳ್ಳುತ್ತೇವೆ. ಅತಿಯಾದ ಮೋಹದಿಂದಾಗಿ ಆ ವಸ್ತು /  ವ್ಯಕ್ತಿಯನ್ನು ಕಳೆದುಕೊಂಡಾಗ ದುಃಖದಿಂದ ಗೋಳಾಡುತ್ತೇವೆ. ಹಾಗೆಯೇ ಮತ್ತೊಬ್ಬರ ಏಳಿಗೆಗೆ ಕರುಬುತ್ತೇವೆ. ಈ ಕರುಬುವಿಕೆಯೂ ಒಂದು ಬಗೆಯ ತಾಪವೇ ಆಗಿದೆ. ಇದು ನಮ್ಮನ್ನು ಒಳಗೊಳಗೆ ಕೊಳೆಸುತ್ತಾ ಹೋಗುತ್ತದೆ. ಹೀಗೆ ನಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಚಿಂತನೆಯ ಕೊರತೆಯಿಂದಲೂ, ಲೌಕಿಕ ವಾಂಛೆಗಳ ಮೇಲುಗೈಯಿಂದಲೂ ಉಂಟಾಗುವ ಸಂಕಟಗಳನ್ನು ಆಧ್ಯಾತ್ಮಿಕ ತಾಪವೆಂದು ಕರೆಯಲಾಗಿದೆ.

2.  ಆದಿಭೌತಿಕ ತಾಪ: ಇದು ಭೌತಿಕವಾಗಿ (ದೈಹಿಕವಾಗಿ) ನಾವು ಅನುಭವಿಸುವ ತಾಪಗಳನ್ನು ಸೂಚಿಸುತ್ತದೆ. ಅಂದರೆ ಇತರ ಜೀವಿಗಳಿಂದ ನಮ್ಮ ದೇಹ ಮತ್ತು ಮನಸ್ಸಿಗೆ ಉಂಟಾಗುವ ನೋವುಗಳನ್ನು ಆದಿಭೌತಿಕ ತಾಪವೆನ್ನಲಾಗಿದೆ. ಯುದ್ಧ, ವಾಹನ ಅಪಘಾತ, ದೈಹಿಕಹಿಂಸೆ ಮತ್ತು ಮಾನಸಿಕ ಹಿಂಸೆಯೇ ಮೊದಲಾದ ಮನುಷ್ಯ ನಿರ್ಮಿತ ತೊಂದರೆಗಳು, ಇನ್ನಿತರ ಆಕಸ್ಮಿಕ ಆಪತ್ತುಗಳನ್ನು ಆದಿಭೌತಿಕ ತಾಪಗಳು ಅನ್ನಲಾಗುತ್ತದೆ.

3. ಆದಿದೈವಿಕ ತಾಪ: ಪ್ರಕೃತಿಯಲ್ಲಿನ ವೈಪರೀತ್ಯದಿಂದಾಗಿ ಉಂಟಾಗುವ ತೊಂದರೆಗಳನ್ನು ಆದಿದೈವಿಕ ತಾಪ ಅನ್ನಲಾಗುತ್ತದೆ. ಸಿಡಿಲು, ಅತಿಶೀತ ಅಥವಾ ಅತಿ ಉಷ್ಣ, ಬಿರುಗಾಳಿ, ಅತಿವೃಷ್ಟಿ-ಅನಾವೃಷ್ಟಿ, ಭೂಕಂಪ, ಜ್ವಾಲಾಮುಖಿ ಮೊದಲಾದ ಪ್ರಾಕೃತಿಕ ವಿಕೋಪಗಳಿಂದ ಮನುಷ್ಯ ಸಂಕುಲ ತೊಂದರೆಗೆ ಈಡಾಗುತ್ತದೆ. ಇವೆಲ್ಲವೂ ಆದಿದೈವಿಕ ತಾಪಗಳೆಂದು ಕರೆಯಲಾಗಿದೆ.

Leave a Reply