ಡೈಮಂಡ್ ಸೂತ್ರ ಮತ್ತು ರೊಟ್ಟಿಯ ಮುದುಕಿ : ಝೆನ್ ಕಥೆ

ಮುದುಕಿ ಕೇಳಿದಳು, “ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸಿನಿಂದ ತಿನ್ನುತ್ತೀಯೋ?” ಆಗ ಝೆನ್ ಸನ್ಯಾಸಿ ಏನು ಮಾಡಿದ ಗೊತ್ತಾ? ಈ ಕಥೆ ಓದಿ । ಸಂಗ್ರಹ ಮತ್ತು ಅನುವಾದ: ಅಲಾವಿಕಾ

ಜಪಾನಿನಲ್ಲೊಬ್ಬ ಝೆನ್ ಸನ್ಯಾಸಿ ಇದ್ದ. ಜಗತ್ತಿನಲ್ಲಿ ನಷ್ಟವಾಗಿಹೋಗಿದ್ದ ಬೌದ್ಧ ಧರ್ಮದ ‘ಡೈಮಂಡ್ ಸೂತ್ರ’ವನ್ನು ಅವನು ಅರೆದು ಕುಡಿದಿದ್ದ. ಅದು ಹೇಗೋ ಡೈಮಂಡ್ ಸೂತ್ರದ ಒಂದು ಪ್ರತಿ ಅವನ ಬಳಿ ಇದ್ದುಬಿಟ್ಟಿತ್ತು. ಅವನು ಅದನ್ನು ಜತನದಿಂದ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದ.

ಡೈಮಂಡ್ ಸೂತ್ರದ ಬಗ್ಗೆ ಭಿಕ್ಖುಗಳೇ ಅಲ್ಲ, ಜನಸಾಮಾನ್ಯರೂ ಕುತೂಹಲಿಗಳಾಗಿದ್ದರು. ಈ ಸನ್ಯಾಸಿಯ ಬಳಿ ಅದರ ಪ್ರತಿ ಇದೆ, ಅದರ ಜ್ಞಾನವಿದೆ ಎಂದು ಕೇಳಿ, ಅವನ ಬಳಿ ಧಾವಿಸಿ ಬರುತ್ತಿದ್ದರು.

ಆ ಸನ್ಯಾಸಿ, ಡೈಮಂಡ್ ಸೂತ್ರದ ಪ್ರತಿಯನ್ನು ಬೆನ್ನಿಗೆ ಕಟ್ಟಿಕೊಂಡು. ಊರೂರಿಗೆ ಹೋಗಿ ತನ್ನ ಜ್ಞಾನ ಪ್ರದರ್ಶನ ಮಾಡುತ್ತಿದ್ದ.
ಹೀಗೇ ಒಂದು ಮಧ್ಯಾಹ್ನ ಬೆಟ್ಟದ ಮೇಲೆ ನಡೆದು ಪಕ್ಕದ ಊರಿಗೆ ಹೋಗುತ್ತಿದ್ದ. ದಾರಿಯಲ್ಲಿ ಹಸಿವಾಗತೊಡಗಿತು. ತಿನ್ನಲು ತಂದಿದ್ದ ಬುತ್ತಿಯೆಲ್ಲ ಖಾಲಿಯಾಗಿತ್ತು. ಅವನ ಬಳಿ ಹಣವೂ ಇರಲಿಲ್ಲ.

ಹಸಿವು ತಾಳಲಾಗದೆ ಅತ್ತ ಇತ್ತ ನೋಡಿದಾಗ ಮುದುಕಿಯೊಬ್ಬಳು ಚಹಾ – ರೊಟ್ಟಿ ಮಾರುತ್ತಿರುವುದು ಕಂಡಿತು.
“ಪ್ರಿಯ ಮುದುಕಿ, ನನಗೊಂದಷ್ಟು ರೊಟ್ಟಿ, ಚಹಾ ಕೊಡು. ನನ್ನ ಬಳಿ ಹಣವಿಲ್ಲ; ಆದರೆ ಡೈಮಂಡ್ ಸೂತ್ರದ ಜ್ಞಾನವಿದೆ. ನಿನಗೆ ಅದರಿಂದ ಒಂದಷ್ಟನ್ನು ಹೇಳುತ್ತೇನೆ.” ಅಂದ.

ಆ ಮುದುಕಿಗೂ ಒಂದಷ್ಟು ಜ್ಞಾನವಿತ್ತು. “ಸನ್ಯಾಸಿ! ನನಗೂ ಯೌವನದಲ್ಲಿ ಡೈಮಂಡ್ ಸೂತ್ರ ಅಭ್ಯಾಸ ಮಾಡಿದ್ದೆ. ನಾನೊಂದು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಉತ್ತರ ಕೊಟ್ಟರೆ ಚಹಾ – ರೊಟ್ಟಿ ಕೊಡುತ್ತೇನೆ” ಅಂದಳು.

ಸನ್ಯಾಸಿ ಆಗಲೆಂದ. ಮುದುಕಿ ಕೇಳಿದಳು, “ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸಿನಿಂದ ತಿನ್ನುತ್ತೀಯೋ?”

ಸನ್ಯಾಸಿ ತಲೆ ಕೆರೆದುಕೊಂಡು ಯೋಚಿಸಿದ. ಉತ್ತರ ಹೊಳೆಯಲಿಲ್ಲ.

ಬೆನ್ನಿಂದ ಪುಸ್ತಕವಿಳಿಸಿ ಪುಟಪುಟವನ್ನೂ ಬಿಡದೆ ಓದತೊಡಗಿದ…. ಸಂಜೆಯಾಯಿತು. ಅವನಿಗೆ ಪುಸ್ತಕದಲ್ಲೂ ಉತ್ತರ ಸಿಗಲಿಲ್ಲ. ಮುಚ್ಚಿಟ್ಟು ಧ್ಯಾನಿಸತೊಡಗಿದ…. ಮುಸ್ಸಂಜೆಯಾದರೂ ಉತ್ತರ ಸಿಗಲಿಲ್ಲ.

ಮುದುಕಿ ತನ್ನ ಗೂಡಂಗಡಿಯನ್ನು ಮುಚ್ಚಿ ಅಲ್ಲಿಂದ ಹೊರಟಳು.

“ಪ್ರಿಯ ಮುದುಕಿ! ನನಗೆ ಉತ್ತರ ಗೊತ್ತಾಗಲಿಲ್ಲ. ಹೋಗಲಿ, ಅದೇನೆಂದು ಹೇಳು!” ಸನ್ಯಾಸಿ ಕೇಳಿದ.

“ನೀನೊಬ್ಬ ಮೂರ್ಖ! ಹಸಿವನ್ನು ಡೈಮಂಡ್ ಸೂತ್ರದಿಂದ ಹೋಗಲಾಡಿಸಿಕೊಳ್ಳಲು ಸಾಧ್ಯವೇ?” ಮುದುಕಿ ಬೈದಳು. “ಯಾವ ಕಾಲದ ಮನಸ್ಸಿನಿಂದಲೂ ರೊಟ್ಟಿಯನ್ನು ತಿನ್ನಲಾಗದು. ರೊಟ್ಟಿಯನ್ನು ತಿನ್ನುವುದು ಬಾಯಿಯಿಂದ” ಅನ್ನುತ್ತಾ ನಕ್ಕು ಅಲ್ಲಿಂದ ಹೊರಟಳು.

Leave a Reply