ಹೊಸ ಅರಮನೆಯಂತೂ ತಯಾರಾಗಿದೆ, ಎಲ್ಲರನ್ನೂ ಕರೆಸಿ ಶೋ ಆಫ್ ಮಾಡುವಾ ಅನಿಸಿತು ಇಂದ್ರನಿಗೆ. ಕರೆಸೇ ಕರಿಸಿದ. ಡಿಜೆಗಳು ಭೂಮಿವರೆಗೂ ಕೇಳುವಂತೆ ಸಂಗೀತ ಬಾರಿಸಿದರು. ಡ್ಯಾನ್ಸ್ ಫ್ಲೋರಿನಲ್ಲಿ ಕಂಪನವಾಗುವಷ್ಟು ಎಲ್ಲರೂ ಕುಣಿದರು. ಇಂದ್ರ ತನ್ನನ್ನು ಬಿಟ್ಟರಿಲ್ಲ ಅನ್ನುವಂತೆ ಬೀಗುತ್ತಿದ್ದಾಗ, ನಟ್ಟನಡೂ ಹಾಲ್`ನಲ್ಲಿ ಏಳೆಂಟು ಇರುವೆಗಳು ಸಾಲು ಹೊರಟಿದ್ದು ಕಣ್ಣಿಗೆ ಬಿತ್ತು. ಆಮೇಲೆ… । ನಿರೂಪಣೆ: ಅಲಾವಿಕಾ
ಇಂದ್ರ ವೃತ್ರಾಸುರನನ್ನು ಕೊಂದ. ಭಾರೀ ರಾಕ್ಷಸನ್ನ ಕೊಂದ ಸಂಭ್ರಮಕ್ಕೆ ದೇವತೆಗಳೆಲ್ಲ ಸೇರಿ ಇಂದ್ರನಿಗೆ ಪಾರ್ಟಿ ಕೊಟ್ಟರು. ಈ ಕೂಟದಲ್ಲಿ ಎಲ್ಲರೂ ಒಕ್ಕೊರಲಿನಲ್ಲಿ “ಇಂದ್ರ, ನಿನಗೇನು ಬೇಕೋ ಮಾಡಿಕೋ. ಕುಬೇರ ಖಜಾನೆಯ ಚಾವಿ ನಿನಗೆ ಕೊಟ್ಟುಬಿಡ್ತಾನೆ” ಅಂದರು. ಇಂದ್ರ ಉಬ್ಬಿಹೋದ.
ಮಾರನೇ ದಿನವೇ ಇಂದ್ರನಿಗೆ ತನ್ನ ಅರಮನೆ ಇಕ್ಕತ್ತಿಕ್ಕಟ್ಟು ಅನಿಸತೊಡಗಿತು. ಹೊಗಳಿಕೆಗೆ ಉಬ್ಬಿದ್ದನಲ್ಲ, ಬಹುಶ ಅದಕ್ಕೇ. ಕೂಡಲೇ ವಿಶ್ವಕರ್ಮನಿಗೆ ಹೇಳಿ ಕಳಿಸಿದ. ನನಗೊಂದು ಈ ಅರಮನೆಗಿಂತ ದೊಡ್ಡದು, ತುಂಬಾ ತುಂಬಾ ದೊಡ್ಡಕಿರೋ ಅರಮನೆ ಕಟ್ಟಿಕೊಡು ಅಂದ. ವಿಶ್ವಕರ್ಮ ಎರಡೇ ದಿನದಲ್ಲಿ ಅತ್ಯಂತ ವೈಭವದ ಅರಮನೆ ನಿರ್ಮಿಸಿಕೊಟ್ಟ. ಅದನ್ನು ನೋಡಲು ಹೋದ ಇಂದ್ರ ಮುಖ ಕಿವುಚಿಕೊಂಡು, ಇದೇನು ಉದ್ಯಾನವನ ಇಷ್ಟು ಚಿಕ್ಕದಿದೆ, ಸ್ವಿಮ್ಮಿಂಗ್ ಪೂಲ್ ಇಷ್ಟು ಚಿಕ್ಕದಿದೆ, ಬಾರ್ ಕೌಂಟರ್ ಲಿವಿಂಗ್ ರೂಮಲ್ಲಿಡಬೇಕಿತ್ತು ಅಂತೆಲ್ಲ ಹದ ಹೇಳತೊಡಗಿದ.
ವಿಶ್ವಕರ್ಮನಿಗೆ ಸಿಟ್ಟೇಬಂತು. ಏನು ಮಾಡೋದು? ಹೇಳೀಕೇಳೀ ದೇವತೆಗಳ ರಾಜ. ಸಾಲದ್ದಕ್ಕೆ ಹೊಸತಾಗಿ ದೊಡ್ಡ ರಾಕ್ಷಸನ್ನೊಬ್ಬನನ್ನ ಕೊಂದಿದಾನೆ! ಸರಿ, ಎರಡು ದಿನ ಸಮಯ ಕೇಳಿ ಮತ್ತೆ ಹೊಸತಾಗಿ ಕಟ್ಟತೊಡಗಿದ. ಈ ಸಲವೂ ಇಂದ್ರ ಅದು ಸರಿ ಇಲ್ಲ ಇದು ಸರಿಯಿಲ್ಲ ಅಂತ ಕಣಿ ಹಾಡಿದ. ಹಾಗೇ ಮತ್ತೂ ಎರಡು ಸಲ ಆದ ಮೇಲೆ, ವಿಶ್ವಕರ್ಮನಿಗೆ ಸಿಟ್ಟು ಬಂದು ಕೈಲಿದ್ದ ಸುತ್ತಿಗೆ – ಚಾಣ ನೆಲಕ್ಕೆ ಬಿಸಾಡಿದೆ. ಅದು ಠಣ್ಣನೆ ಸದ್ದು ಮಾಡಿದ್ದು ಇಂದ್ರನಿಗೆ ಕಿರಿಕಿರಿಯಾಯ್ತು. ಅವ ಸಿಟ್ಟಿಗೆದ್ದು ವಿಶ್ವಕರ್ಮನನ್ನ ಜೈಲಿಗೆ ಹಾಕಿಸಿದ.
ಸರಿ ತನಗೆ ಪೂರ್ತಿ ಇಷ್ಟವಾಯ್ತೋ ಇಲ್ಲವೋ, ಹೊಸ ಅರಮನೆಯಂತೂ ತಯಾರಾಗಿದೆ, ಎಲ್ಲರನ್ನೂ ಕರೆಸಿ ಶೋ ಆಫ್ ಮಾಡುವಾ ಅನಿಸಿತು ಇಂದ್ರನಿಗೆ. ಕರೆಸೇ ಕರಿಸಿದ. ಡಿಜೆಗಳು ಭೂಮಿವರೆಗೂ ಕೇಳುವಂತೆ ಸಂಗೀತ ಬಾರಿಸಿದರು. ಡ್ಯಾನ್ಸ್ ಫ್ಲೋರಿನಲ್ಲಿ ಕಂಪನವಾಗುವಷ್ಟು ಎಲ್ಲರೂ ಕುಣಿದರು. ಇಂದ್ರ ತನ್ನನ್ನು ಬಿಟ್ಟರಿಲ್ಲ ಅನ್ನುವಂತೆ ಬೀಗುತ್ತಿದ್ದಾಗ, ನಟ್ಟನಡೂ ಹಾಲ್`ನಲ್ಲಿ ಏಳೆಂಟು ಇರುವೆಗಳು ಸಾಲು ಹೊರಟಿದ್ದು ಕಣ್ಣಿಗೆ ಬಿತ್ತು. ಇಂದ್ರ ಅದನ್ನು ಕೆಕ್ಕರಿಸಿ ನೋಡುತ್ತಿರುವಾಗಲೇ ಲೋಮಷ ಋಷಿ ಎದ್ದು ನಿಂತು ಗಹಗಹಿಸಿ ನಗತೊಡಗಿದರು. ಇಂದ್ರ ಮತ್ತೂ ಸಿಟ್ಟಿಗೆದ್ದ. ಅದರಲ್ಲಿ ನಗುವಂಥದೇನಿದೆ ಅಂತ ಅಬ್ಬರಿಸಿದ.
ಲೋಮಷರು ನಗು ನುಂಗುತ್ತಾ, “ಇಂದ್ರ, ಈ ಸಾಲಿನಲ್ಲಿರುವ ಇರುವೆಗಳು ಮೊದಲು ಏನಾಗಿದ್ದವು ಗೊತ್ತಾ?” ಕೇಳಿದರು. ಇಂದ್ರ ತಲೆ ಆಡಿಸಿದ. ಲೋಮಷರು ತಮ್ಮ ಎದೆ ಮೇಲೆ ಜುಂಗುಗಟ್ಟಿದ್ದ ರೋಮದ ಪೊದೆ ನೀವಿಕೊಳ್ತಾ “ಆ ಎಲ್ಲ ಇರುವೆಗಳೂ ತಮ್ಮ ಹಿಂದಿನ ಜನ್ಮದಲ್ಲಿ ಇಂದ್ರರಾಗಿದ್ದವು” ಅಂದರು. ಇಂದ್ರ ನಂಬಲಾರದವನಂತೆ ಗಕ್ಕನೆ ಎದ್ದು ನಿಂತ. ಅದೇ ವೇಳೆಗೆ ಲೋಮಷರ ಪಕ್ಕದಲ್ಲಿದ್ದ ಒಬ್ಬ ದೇವತೆ, “ಋಷಿಗಳೇ, ನಿಮ್ಮ ಎದೆ ಮೇಲೆ ಇಷ್ಟೊಂದು ರೋಮ ಯಾಕಿದೆ” ಅಂತ ಕೇಳಿದ. ಲೋಮಷರು ಇಂದ್ರನನ್ನೆ ದಿಟ್ಟಿಸುತ್ತಾ, “ಬ್ರಹ್ಮಾಂಡ ಸೃಷ್ಟಿಯಾದಾಗ ನನ್ನೆದೆ ತುಂಬಾ ರೋಮಗಳಿದ್ದವು. ಒಬ್ಬೊಬ್ಬನೇ ಇಂದ್ರ ಅಳಿದು ಹೋದಾಗೆಲ್ಲಾ ಒಂದೊಂದು ರೋಮ ಉದುರುತ್ತ ಹೋಯಿತು. ಈಗ ಇಷ್ಟು ಉಳಿದುಕೊಂಡಿವೆ” ಅಂದರು.
ಇಂದ್ರ ಪಾಠಕಲಿತವನಂತೆ ತಲೆ ತಗ್ಗಿಸಿ ಕುಳಿತ. ವಿಶ್ವಕರ್ಮನನ್ನು ಸಗೌರವ ಬಿಡುಗಡೆ ಮಾಡಿಸಿದ. ತನ್ನ ಅಹಂಕಾರಕ್ಕೆ ನಾಚಿ ತನ್ನ ಪದವಿ ಬಿಟ್ತುಕೊಟ್ಟು ತಪಸ್ಸಿಗೆ ತೆರಳಿದ. ಹೊಸಾ ಅರಮನೆಯಲ್ಲಿದ್ದ ಇರುವೆ ಸಾಲು ಇಂದ್ರನನ್ನು ಹಿಂಬಾಲಿಸಿತು. ದೇವತೆಗಳು ಹೊಸ ಇಂದ್ರನಾಗಿ ನಹುಷನಿಗೆ ಪಟ್ಟ ಕಟ್ಟಿದರು.
ಇನ್ನು ಈ ನಹುಷನೆಂಬ ಇಂದ್ರನದ್ದು ಮತ್ತೊಂದು ದೊಡ್ಡ ಕಥೆ!