ಸನ್ಯಾಸಿ ರಾಜನನ್ನು ಕಡುಬಡವ ಅಂದಿದ್ದೇಕೆ!? : tea time story

“ಈ ಸನ್ಯಾಸಿ ತಾಮ್ರದ ಚೂರುಗಳನ್ನ ಯಾರಾದರೂ ಕಡುಬಡವನಿಗೆ ಕೊಡ್ತೀನಿ ಅಂದಿದ್ದ, ಈಗ ನೋಡಿದರೆ ದೊರೆಗಳ ಮುಂದೆ ಹಾಕಿದಾನೆ” ಅಂದರು ಊರಜನ. ಮಂತ್ರಿ ಹುಬ್ಬೇರಿಸಿ ಸನ್ಯಾಸಿಯನ್ನೆ ದಿಟ್ಟಿಸಿದ. ಆಮೇಲೆ… । ನಿರೂಪಣೆ : ಅಲಾವಿಕಾ

ಒಂದೂರಲ್ಲೊಬ್ಬ ಸನ್ಯಾಸಿ. ಅವನಿಗೊಂದು ತಲಬಿತ್ತು. ಸಿಕ್ಕಸಿಕ್ಕ ತಾಮ್ರದ ಚೂರೆಲ್ಲ ಆಯ್ದು ತಂದು ಚೀಲದಲ್ಲಿ ಇಟ್ಟಿರುತ್ತಿದ್ದ. ಯಾರಾದರೂ ಅವನ ಬಳಿ ಬಂದು “ನಿನಗ್ಯಾಕೆ ಈ ತಾಮ್ರದ ಚೂರು?” ಅಂದರೆ, “ಇದು ತಾಮ್ರದ ಚೂರಲ್ಲ, ಕಾಸು. ಯಾರಾದರೂ ಕಡುಬಡವನಿಗೆ ಇದನ್ನ ಕೊಡಬೇಕು ನಾನು” ಅನ್ನುತ್ತಿದ್ದ.

ಒಮ್ಮೆ ಈ ಸನ್ಯಾಸಿ ತನ್ನ ಮಾಮೂಲು ಮರದ ಕೆಳಗೆ ಕುಳಿತು ಬೀದಿ ಮಕ್ಕಳ ಜೊತೆ ಆಟವಾಡುತ್ತಿದ್ದ. ಅದೇ ಹೊತ್ತಿಗೆ ರಾಜನ ಸವಾರಿ ಅತ್ತ ಬಂತು. ಆನೆಯ ಮೇಲೆ ಅಂಬಾರಿಯಲ್ಲಿ ಕೂತ ರಾಜನ ಹಣೆಯಲ್ಲಿ ಗೆರೆ ಮೂಡಿದ್ದವು. ಅವನ ಮುಖದಲ್ಲಿ ಪ್ರಸನ್ನತೆ ಇರಲಿಲ್ಲ. ಸನ್ಯಾಸಿ ಆತ ಬಿಟ್ಟು ಎದ್ದವನೇ ತನ್ನ ಚೀಲಕ್ಕೆ ಕೈಹಾಕಿ ನಾಲ್ಕಾರು ತಾಮ್ರದ ಚೂರನ್ನು ಆನೆಯ ಮೇಲಕ್ಕೆಸೆದ. ಅವು ಸೀದಾ ಅಂಬಾರಿಯೊಳಗೆ ಬಿದ್ದವು.

ರಾಜನಿಗೆ ಕಿರಿಕಿರಿ ಆಯಿತಾದರೂ ಕಾವಿ ಹೊದ್ದ ಸನ್ಯಾಸಿ, ಮಾತಾಡಿದರೆ ಹೇಗೋ ಏನೋ ಅಂದುಕೊಂಡು ಮಂತ್ರಿಯ ಮುಖ ನೋಡಿದ. ಸನ್ಯಾಸಿಯ ಅಕ್ಕಪಕ್ಕ ಇದ್ದ ಊರಜನ ಅಚ್ಚರಿಯಿಂದ “ಈ ಸನ್ಯಾಸಿ ತಾಮ್ರದ ಚೂರುಗಳನ್ನ ಯಾರಾದರೂ ಕಡುಬಡವನಿಗೆ ಕೊಡ್ತೀನಿ ಅಂದಿದ್ದ, ಈಗ ನೋಡಿದರೆ ದೊರೆಗಳ ಮುಂದೆ ಹಾಕಿದಾನೆ” ಅಂದರು. ಮಂತ್ರಿ ಹುಬ್ಬೇರಿಸಿ ಸನ್ಯಾಸಿಯನ್ನೆ ದಿಟ್ಟಿಸಿದ.

“ಯಾವಾಗಲೂ ರಾಜ್ಯ ವಿಸ್ತರಿಸಿ ಹೆಚ್ಚು ಹೆಚ್ಚು ಅಧಿಕಾರ ಹೊಂದುವ ಹಸಿವು; ತನ್ನ ಕೀರ್ತಿ ಎಲ್ಲೆಡೆ ಹರಡಬೇಕೆಂದ ತೃಶೆ (ಬಾಯಾರಿಕೆ) ಈ ರಾಜನಿಗೆ. ಇಡೀ ರಾಜ್ಯದಲ್ಲೇ ಇವನಷ್ಟು ಹಸಿದಿರುವವರು ಮತ್ತು ಬಾಯಾರಿದವರು ಯಾರೂ ಇಲ್ಲ. ಎಷ್ಟು ಬಂದು ಸೇರಿದರೂ ಈತನಿಗೆ ಸಾಲುವುದಿಲ್ಲ, ಇವನ ಅಗತ್ಯ ತೀರುವುದಿಲ್ಲ. ಆದ್ದರಿಂದ ನಾನು ನೋಡಿದಮಟ್ಟಿಗೆ ಈತನೇ ಕಡುಬಡವ. ಅದಕ್ಕೇ ಅವನಿಗೆ ಕಾಸು ಕೊಟ್ಟೆ” ಅಂದ, ಅನುಕಂಪದಿಂದ.

ರಾಜನ ಹಣೆಯ ಗೆರೆಗಳು ಸಪಾಟಾದವು, ಮುಖದಲ್ಲಿ ಮಂದಹಾಸ ಮೂಡಿತು. ಪರಿಣಾಮ, ಆ ರಾಜ್ಯದ ಇತಿಹಾಸ ಬದಲಾಯ್ತು.

1 Comment

  1. ಇವು ಕೂಡ ಅರ್ಥಗರ್ಬಿತವಾಗಿವೆ, ಆದರೆ ನಾನಂತೂ “Tea time story” ಲಿ ನಸ್ರುದ್ದೀನ್ ನ ಮಿಸ್ ಮಾಡ್ಕೊದಿನಿ ಅಂತ ಅನಿಸಿತು … ಓದುಗನಾಗಿ ಸಂಜೆ ಉದ್ದವಾದಕ್ಕಿಂತ ಚಿಕ್ಕವಾದದ್ದು ಓದಕ್ಕೆ ಇಷ್ಟ ಪಡುವೆ …

Leave a Reply