ಕನಸಿನ ಸತ್ಯದ ವ್ಯಾಖ್ಯಾನ

ಕನಸಿನಲ್ಲಿ ಯಾವ ನಿಜ ಇಲ್ಲಿದಿದ್ದರೂ ಕನಸುವಾಗ ಅದರಲ್ಲಿನ ನಿಜದ ಬಗ್ಗೆ ನಮಗೆ ನಂಬಿಕೆ. ಆದರೆ ನಿದ್ದೆಯಿಂದೆದ್ದ ಮೇಲೆ ನಮಗೆ ಕನಸಿನ ಮಿಥ್ಯೆಯ ಬಗ್ಗೆ ಅರಿವಾಗುತ್ತದೆ ಮತ್ತು ನಮ್ಮ ಬಗ್ಗೆ ನಮಗೇ ನಗೆ ಉಕ್ಕಿ ಬರುತ್ತದೆ. । ಚಿದಂಬರ ನರೇಂದ್ರ (ಆಕರ: ಝೆನ್ ಕಥೆ ಮತ್ತು Nagarjuna, Mahaprajñaparamitopadesa – Chapter XI)

ಒಮ್ಮೆ ಒಬ್ಬ ರಾಜ, ಝೆನ್ ಮಾಸ್ಟರ್ ನ ಆಶ್ರಮಕ್ಕೆ ಆಗಮಿಸಿದ. ಆದರೆ ಝೆನ್ ಮಾಸ್ಟರ್ ಎದ್ದು ಬಂದು ರಾಜನನ್ನು ಸ್ವಾಗತಿಸಲಿಲ್ಲ, ರಾಜನಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಮಾಸ್ಟರ್ ನ ಈ ವರ್ತನೆಯಿಂದ ರಾಜನಿಗೆ ಬಹಳ ಬೇಸರವಾಯಿತು. ರಾಜ ಜ್ಞಾನಿ ವ್ಯಕ್ತಿಯಾಗಿದ್ದರೂ ಮಾಸ್ಟರ್ ನಡತೆ ಅವನನ್ನು ಕಳವಳಕ್ಕೆ ದೂಡಿತ್ತು. ರಾಜ, ಝೆನ್ ಮಾಸ್ಟರನನ್ನು ಈ ಕುರಿತು ಪ್ರಶ್ನೆ ಮಾಡಿದ.

“ ಮಾಸ್ಟರ್, ಒಂದು ರಾಜ್ಯದ ರಾಜನಿಗೆ ಕೊಡಬೇಕಾದ ಮರ್ಯಾದೆಯನ್ನು ನೀವು ಕೊಡಲಿಲ್ಲ ಇದು ವಿಷಾದದ ಸಂಗತಿಯಲ್ಲವೆ”

ರಾಜನ ಮಾತಿಗೆ ಮುಗುಳ್ನಕ್ಕ ಮಾಸ್ಟರ್

“ ನಿನ್ನೆ ನನಗೊಂದು ಕನಸು ಬಿದ್ದಿತ್ತು, ಆ ಕನಸಿನಲ್ಲಿ ನಾನು ಈ ರಾಜ್ಯದ ರಾಜನಾಗಿದ್ದೆ. ಕನಸಿನಲ್ಲಿ ಸಾಮಾನ್ಯ ಮನುಷ್ಯನಾಗಿದ್ದ ನೀನು ನನ್ನನ್ನು ನೋಡಲು ಬಂದಾಗ ನನಗೆ ಯಾವ ಗೌರವ ಕೊಡಲಿಲ್ಲ. ಆದರೆ ಆಗ ನಿನ್ನ ವರ್ತನೆಯ ಬಗ್ಗೆ ನಾನು ಯಾವ ಆಕ್ಷೇಪವನ್ನೂ ಮಾಡಲಿಲ್ಲ. ಇವತ್ತು ನೀನು ನನ್ನ ನೋಡಲು ಬಂದಾಗ ನನಗೆ ನಿನ್ನೆಯ ಕನಸು ನೆನಪಾಯಿತು ಮತ್ತು ನಾನೂ ನಿನ್ನೆ ನೀನು ಕನಸಿನಲ್ಲಿ ವರ್ತಿಸಿದ ಹಾಗೆ ನಡೆದುಕೊಳ್ಳಲು ನಿರ್ಧರಿಸಿದೆ. “

“ ಅದು ನಿಮ್ಮ ಕನಸಲ್ಲವೆ ಮಾಸ್ಟರ್? ನಿಮ್ಮ ಕನಸಿನಲ್ಲಿನ ನನ್ನ ವರ್ತನೆಯ ಬಗ್ಗೆ ನಾನು ಹೇಗೆ ಜವಾಬ್ದಾರ? “

ರಾಜ, ಝೆನ್ ಮಾಸ್ಟರ್ ನ ಮತ್ತೆ ಪ್ರಶ್ನೆ ಮಾಡಿದ.

“ ಇದೂ ಒಂದು ಕನಸೇ. ಇದು ನಿನ್ನ ಕನಸು. ಈ ಕನಸಿನಲ್ಲಿ ನೀನು ನಿನ್ನನ್ನು ರಾಜನೆಂದು ತಿಳಿದುಕೊಂಡಿದ್ದೀಯ ಮತ್ತು ನಿನ್ನ ಕನಸಿನಲ್ಲಿ ನಾನು ನಿನಗೆ ಗೌರವ ಸಲ್ಲಿಸಲಿಲ್ಲವೆಂದು ನನ್ನ ಆಕ್ಷೇಪಿಸುತ್ತಿದ್ದೀಯಲ್ಲ ಇದು ಎಷ್ಟು ಸರಿ? “

ತನ್ನ ವರ್ತನೆಯ ಬಗ್ಗೆ ರಾಜನಿಗೆ ಸಮಜಾಯಿಷಿ ನೀಡಿದ ಝೆನ್ ಮಾಸ್ಟರ್.


ಕನಸಿನಲ್ಲಿ ಯಾವ ನಿಜ ಇಲ್ಲಿದಿದ್ದರೂ ಕನಸುವಾಗ ಅದರಲ್ಲಿನ ನಿಜದ ಬಗ್ಗೆ ನಮಗೆ ನಂಬಿಕೆ. ಆದರೆ ನಿದ್ದೆಯಿಂದೆದ್ದ ಮೇಲೆ ನಮಗೆ ಕನಸಿನ ಮಿಥ್ಯೆಯ ಬಗ್ಗೆ ಅರಿವಾಗುತ್ತದೆ ಮತ್ತು ನಮ್ಮ ಬಗ್ಗೆ ನಮಗೇ ನಗೆ ಉಕ್ಕಿ ಬರುತ್ತದೆ. ಹಾಗೆಯೇ ಆಳ ನಿದ್ದೆಯ ಸಂಕೋಲೆಯಲ್ಲಿರುವ (ಸಂಯೋಜನ ನಿದ್ರಾ) ಮನುಷ್ಯ ನಿಜವಾಗಿ ಅಸ್ತಿತ್ವದಲ್ಲಿರದ ಸಂಗತಿಗಳಿಗೆ ಅಪ್ಪಿಕೊಂಡಿರುತ್ತಾನೆ (abhiniviśate) ಮತ್ತು ಅವನಿಗೆ ಜ್ಞಾನೋದಯವಾದಾಗ ಅವನಿಗೆ ತಾನು ಪ್ರಯಾಣದಲ್ಲಿದ್ದ ಮಿಥ್ಯಾಪಥದ ಬಗ್ಗೆ ಗೊತ್ತಾಗುತ್ತದೆ ಮತ್ತು ತನ್ನ ಬಗ್ಗೆ ತಮಾಷೆ ಎನಿಸುತ್ತದೆ.

ನಿದ್ರೆಗಿರುವ ಶಕ್ತಿಯ (ನಿದ್ರಾಬಲ) ಕಾರಣವಾಗಿ ಕನಸು ಕಾಣುವವನಿಗೆ ಇಲ್ಲದಿರುವ ಸಂಗತಿಗಳೂ ಇರುವಂತೆ ತೋರುತ್ತದೆ. ಅದೇ ರೀತಿ ಅಜ್ಞಾನದ ನಿದ್ರೆ (ಅವಿದ್ಯನಿದ್ರಾ) ಯಲ್ಲಿರುವ ಮನುಷ್ಯ ನಿಜವಾಗಿ ಇಲ್ಲದಿರುವುದನ್ನೂ ಇದೆ ಎಂದು ನಂಬಲು ಶುರು ಮಾಡುತ್ತಾನೆ. ಉದಾಹರಣೆಗೆ, ‘ ನಾನು ‘ ಮತ್ತು ‘ನನ್ನದು’ (ātmātmīya), ಗಂಡು ಮತ್ತು ಹೆಣ್ಣು ಇತ್ಯಾದಿ. ಕನಸಿನಲ್ಲಿ ನಾವು ಖುಶಿ ಪಡುವಂಥದು ಏನೂ ಇಲ್ಲದಿರುವಾಗಲೂ ನಮಗೆ ಖುಶಿಯಾಗುತ್ತದೆ, ನಾವು ಸಿಟ್ಟಿಗೇಳುವಂಥದು ಏನೂ ಇಲ್ಲದಿರುವಾಗಲೂ ನಮಗೆ ಸಿಟ್ಟು ಬರುತ್ತದೆ, ನಾವು ಹೆದರಿಕೊಳ್ಳುವಂಥದು ಏನೂ ಇಲ್ಲದಿರುವಾಗಲೂ ನಮಗೆ ಹೆದರಿಕೆಯಾಗುತ್ತದೆ. ಥೇಟ್ ಇದೆ ಥರ ಈ ಮೂರು ಮಜಲಿನ ಜಗತ್ತಿನಲ್ಲಿ (traidhātukasattva) ಅಜ್ಞಾನದ ನಿದ್ರೆಯಲ್ಲಿರುವ ಮನುಷ್ಯರು ಹೆದರುವಂಥದು ಏನೂ ಇಲ್ಲದಿರುವಾಗಲೂ ಹೆದರುತ್ತಾರೆ, ಸಿಟ್ಟಿಗೇಳುವಂಥದು ಏನೂ ಇಲ್ಲದಿರುವಾಗಲೂ ಸಿಟ್ಟಿಗೇಳುತ್ತಾರೆ ಮತ್ತು ಖುಶಿಯಾಗುವಂಥದು ಏನೂ ಇಲ್ಲದಿರುವಾಗಲೂ ಖುಶಿಯಿಂದ ಉನ್ಮತ್ತರಾಗುತ್ತಾರೆ.

1 Comment

Leave a Reply