ಸರಸ್ವತಿ, “ಸದ್ಯಕ್ಕೆ ನಾನೊಂದು ವ್ಯವಸ್ಥೆ ಮಾಡಿರ್ತೀನಿ, ವಿಶ್ವರೂಪನ್ನ ಕೊಂದು ಇಷ್ಟು ಫಜೀತಿ ಮಾಡಿಕೊಂಡ ಇಂದ್ರನ್ನ ಆಮೇಲೆ ವಿಚಾರಿಸೋಣ” ಅಂತ ಹೋಮಕುಂಡಕ್ಕೆ ಹವಿಸ್ಸು ಸುರೀತಿದ್ದ ಋಷಿಗಳ ನಾಲಿಗೆ ಮೇಲೆ ಪ್ರಭಾವ ಬೀರ್ತಾಳೆ. ವಾಗ್ದೇವಿಯ ಅಣತಿಯಂತೆ ಆ ಋಷಿಗಳ ನಾಲಗೆಗಳು, “ಇಂದ್ರಶತ್ರೋ ವಿವರ್ಧಸ್ವ” ಅನ್ನುವ ಬದಲಾಗಿ, “ಇಂದ್ರ, ಶತ್ರೋ ವಿವರ್ಧಸ್ವ” ಅನ್ನಲು ಶುರು ಮಾಡ್ತವೆ! ಆಮೇಲೆ… । ಅಲಾವಿಕಾ
ಪಂಕ್ಚುಯೇಶನ್ ಮಾರ್ಕುಗಳು ಬರೀವಾಗ್ಲೂ ಮಾತಾಡುವಾಗ್ಲೂ ಇಡಬೇಕಾದಲ್ಲಿ ಬಿಟ್ಟು ಮತ್ತೆಲ್ಲೋ ಇಟ್ರೆ ಆಗೋ ಫಜೀತಿ ಒಂದೆರಡಲ್ಲ. ನಮ್ಮಲ್ಲಿ ಬಹಳಷ್ಟು ಜನಕ್ಕೆ “Let us eat Grandma” / “Let us eat, Grandma” ತಮಾಷೆ ಗೊತ್ತಿದ್ಯಲ್ಲಾ? ಒಂದು ‘ಕಾಮಾ’, “ಅಜ್ಜಿ, ತಿನ್ನೋಣ” ಅನ್ನೋದಕ್ಕೆ “ಅಜ್ಜೀನ ತಿನ್ನೋಣ” ಅನ್ನುವ ಅರ್ಥ ವ್ಯತ್ಯಾಸ ಮಾಡಿಬಿಡತ್ತೆ!
ಮಹಾರಾಕ್ಷಸ ವೃತ್ರಾಸುರನಿಗೆ ಆಗಿದ್ದೂ ಹೀಗೇ. ಇವನಿಗಂತೂ ಇದು ಕುತ್ತಿಗೆಗೇ ಬಂದುಬಿಡ್ತು. ಕೊನೆಗೆ ಇವ ಸತ್ತಿದ್ದೂ ಈ ತಪ್ಪಿನ ಕಾರಣದಿಂದ್ಲೇ ಅಂದರೆ ನೀವು ನಂಬಲೇಬೇಕು!
ಭಾಗವತದ (6ನೇ ಸ್ಕಂದ) ಪ್ರಕಾರ ಈ ಕಥೆ ಹೀಗಿದೆ:
ದೇವಶಿಲ್ಪಿ ತ್ವಷ್ಟ್ರನ ಮಗ ವಿಶ್ವರೂಪನ್ನ ದೇವೇಂದ್ರ ಅನುಮಾನ ಬಿದ್ದು ಕೊಲ್ತಾನೆ. ಅದ್ಯಾಕೆ ಕೊಲ್ತಾನೆ ಅನ್ನೋದು ಮತ್ತೊಂದು ಕಥೆ. ಇನ್ನೊಮ್ಮೆ ಹೇಳ್ತೀನಿ. ಇರಲಿ, ಅವ ಕೊಂದುಬಿಟ್ಟ ಅನ್ನೋ ಸಿಟ್ಟಿಗೆ ತ್ವಷ್ಟ್ರ, ಮಹಾ ಬಲಶಾಲಿಯಾದ ‘ವೃತ್ರ’ ಅನ್ನೋ ಮಗನ್ನ ನಿರ್ಮಿಸ್ತಾನೆ. ಇದು ಹುಟ್ಟಿಸಿದ್ದಲ್ಲ, ಅಕ್ಷರಶಃ ‘ನಿರ್ಮಿಸಿದ್ದು’. ಈ ವೃತ್ರನ್ನ ವೇದಗಳು ‘ಅಹಿ’ ಅಂತಲೂ ಕರೆದಿವೆ. ಅಹಿ ಅಂದ್ರೆ ಸರ್ಪ. ಹೆಸರಿಗೆ ತಕ್ಕಂತೆ ಈ ವೃತ್ರ ಮಹಾನ್ ಘಟಸರ್ಪನೇ!
ಈ ವೃತ್ರಾಸುರನಿಗೆ ತ್ವಷ್ಟ್ರನ ಕಡೆಯ ಋಷಿಗಳು ಮತ್ತಷ್ಟು ಬಲ ತುಂಬಿ ಇಂದ್ರನ ಮೇಲೆ ಛೂಬಿಡಲು ಸಜ್ಜಾಗ್ತಾರೆ. ಅದಕ್ಕೋಸ್ಕರ ಒಂದು ಯಾಗಾನೂ ಮಾಡ್ತಾರೆ. ಹೀಗೆ ಯಾಗ ಮಾಡ್ತಾ ಹವಿಸ್ಸು ಹಾಕುವಾಗ “ಇಂದ್ರಶತ್ರೋ ವಿವರ್ಧಸ್ವ” ಅನ್ನುತ್ತಾ ಇರುತ್ತಾರೆ. ಇದರ ಅರ್ಥ, ಇಂದ್ರನ ಶತ್ರುವೇ, ಮತ್ತಷ್ಟು ಬಲಶಾಲಿಯಾಗು! ಅಂತ. ಅವನ್ನ ಒಡಲುಗೊಳಿಸಿದ್ದೇ ಇಂದ್ರನ್ನ ಸೋಲಿಸಲಿಕ್ಕೆ ಆದ್ದರಿಂದ, ಯಾಗ ಮಾಡುವಾಗ್ಲೂ ಉದ್ದೇಶ ಬಿಟ್ಟು ಆಚೀಚೆ ಸರಿಯದ ಋಷಿಗಳು “ಇಂದ್ರಶತ್ರು” ಅನ್ತಲೇ ಅನ್ನುತ್ತಾ ಇರ್ತಾರೆ!
ಈಗ ಯಥಾಪ್ರಕಾರ ಇಂದ್ರನಿಗೆ ಖುರ್ಚಿ ನಡುಕ! ಈ ಇಂದ್ರ ಹಗಲು ಹಗಲೂ ಹೀಗೆ ಇದ್ದೋರನ್ನೆಲ್ಲ ಎದುರು ಹಾಕ್ಕೊಂಡು ದೈತ್ಯರಿಗೋ ದಾನವರಿಗೂ ಖುರ್ಚಿ ರಿಸ್ಕಿಗೆ ದೂಡೋದು ದೇವತೆಗಳಿಗೂ ತಲೆಬಿಸಿ. ಸರಿ, ಎಲ್ಲರೂ ಸೀದಾ ಬ್ರಹ್ಮನ ಬಳಿ ಹೋಗ್ತಾರೆ. ಸರಸ್ವತಿ, “ಸದ್ಯಕ್ಕೆ ನಾನೊಂದು ವ್ಯವಸ್ಥೆ ಮಾಡಿರ್ತೀನಿ, ವಿಶ್ವರೂಪನ್ನ ಕೊಂದು ಇಷ್ಟು ಫಜೀತಿ ಮಾಡಿಕೊಂಡ ಇಂದ್ರನ್ನ ಆಮೇಲೆ ವಿಚಾರಿಸೋಣ” ಅಂತ ಹೋಮಕುಂಡಕ್ಕೆ ಹವಿಸ್ಸು ಸುರೀತಿದ್ದ ಋಷಿಗಳ ನಾಲಿಗೆ ಮೇಲೆ ಪ್ರಭಾವ ಬೀರ್ತಾಳೆ. ವಾಗ್ದೇವಿಯ ಅಣತಿಯಂತೆ ಆ ಋಷಿಗಳ ನಾಲಗೆಗಳು, “ಇಂದ್ರಶತ್ರೋ ವಿವರ್ಧಸ್ವ” ಅನ್ನುವ ಬದಲಾಗಿ, “ಇಂದ್ರ, ಶತ್ರೋ ವಿವರ್ಧಸ್ವ” ಅನ್ನಲು ಶುರು ಮಾಡ್ತವೆ! ಇಲ್ಲಿ ಇಂದ್ರ ಮತ್ತು ಶತ್ರುವಿನ ಮಧ್ಯ ಒಂದು ಕಾಮಾ ಬಿತ್ತು!! ಇಂದ್ರಶತ್ರುವೇ ಬಲಶಾಲಿಯಾಗು ಅನ್ನುವ ಬದಲಿಗೆ, ಇಂದ್ರ, ಶತ್ರುವೇ (ನೀನು) ಬಲಶಾಲಿಯಾಗು ಅಂದ ಹಾಗಾಯ್ತು!!
ಕೊನೆಗೂ ಎಲ್ಲ ಪುರಾಣ ಕಥೆಯಲ್ಲಿ ಏನಾಗ್ತದೋ ಅದೇ ಆಯ್ತು. ಯಕಃಶ್ಚಿತ್ ಒಂದು ಪಂಕ್ಚುಯೇಶನ್ ಮಾರ್ಕ್, ವ್ರತ್ರಾಸುರನ ಮುಂದೆ ಇಂದ್ರನ ಬಲ ಹೆಚ್ಚಿಸಿ, ವ್ರತ್ರನ ಸೋಲಿಗೆ – ಸಾವಿಗೆ ಕಾರಣವಾಯ್ತು. ಇಂದ್ರ ಗೆದ್ದ, ವೃತ್ರ ಸತ್ತ.
ಅದಕ್ಕೇ ಹೇಳೋದು, ಯಾವುದೂ ಅಮುಖ್ಯವಲ್ಲ. ಒಂದು ಚಿಕ್ಕ ಪಂಕ್ಚುಯೇಶನ್ ಮಾರ್ಕ್ ಕೂಡಾ ಎಂತೆಂಥಾ ಭಾರೀ ಬದಲಾವಣೆಯನ್ನೇ ಮಾಡಬಲ್ಲದು!!
(ಮಾಹಿತಿಗಿರಲಿ: ಇದೇ ಇಂದ್ರ – ವೃತ್ರನ ಕಥೆ ಬೌದ್ಧ ಪುರಾಣದಲ್ಲೂ ಇದೆ. ಹಾಗೇ ಗ್ರೀಕ್ ಪುರಾಣದಲ್ಲೂ ಬೇರೆ ಹೆಸರುಗಳೊಂದಿಗೆ ಇದೆ. ಹಾಗೇ, ಭಾಗವತದಲ್ಲಿ ಬರುವ ಈ ಕಥೆ ಮಹಾಭಾರತದಲ್ಲೂ ಬರುತ್ತದೆ. ವೇದಗಳಲ್ಲಿ ವೃತ್ರನ ಇದೇ ಕಥೆ ಚೂರು ಭಿನ್ನವಾಗಿದೆ. ಈ ಕಥೆಯ ತ್ವಷ್ಟ್ರ – ದೇವಶಿಲ್ಪಿ ವಿಶ್ವಕರ್ಮನೇ ಎಂದೂ ಹೇಳಲಾಗುತ್ತದೆ)