ಯುದ್ಧ ಯುದ್ಧವೆಂದು ಕನವರಿಸುವ ಮುನ್ನ…

ರಾಸಾಯನಿಕಗಳ ವಿಷ ಗಾಳಿ ಶ್ವಾಸಕೋಶ ತುಂಬಿಕೊಳ್ಳುತ್ತದೆ. ಬಾಂಬಿನಿಂದ ಹೊಮ್ಮಿ ಚರ್ಮ ಹೊಕ್ಕ ವಿಕಿರಣಗಳು ಮುಂದಿನ ಮೂರು ತಲೆಮಾರುಗಳನ್ನೂ ಕಾಡುತ್ತವೆ. ಆ ನೆಲದಲ್ಲಿ ಹುಟ್ಟುವ ಮಕ್ಕಳ ಅಂಗಾಂಗ ಊನ. ಮೆದುಳು ಬೆಳೆಯದೆ ಹುಟ್ಟಿದಾಗಿಂದ ಸಾಯುವವರೆಗೂ ಮಕ್ಕಳಾಗೇ ಉಳಿಯುತ್ತವೆ ಜೀವಗಳು. ಒಂದು ಮುಷ್ಟಿ ರಸ ಗೊಬ್ಬರ ಜಾಸ್ತಿಯಾದರೇ ನೆಲದ ಎದೆ ಸುಡುತ್ತದೆ. ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ. ಇಳುವರಿ ತಗ್ಗುತ್ತದೆ. ಹೀಗಿರುವಾಗ ಯುದ್ಧ ಕಾಲದಲ್ಲಿ ಎಸೆಯಲಾಗುವ ಕ್ಷಿಪಣಿಗಳು, ಬಾಂಬು – ಬುಲೆಟ್ಟುಗಳ ರಾಸಾಯನಿಕ ಉಂಟು ಮಾಡುವ ಪರಿಣಾಮವೇನು ಗೊತ್ತೆ? । ಅಲಾವಿಕಾ

ಬರಲಿರುವ ಯುದ್ಧ ಮೊದಲನೆಯದಲ್ಲ

ಅದಕ್ಕೆ ಹಿಂದೆಯೂ ಯುದ್ಧಗಳಾಗಿದ್ದವು.

ಹಿಂದಿನದು ಮುಗಿದಾಗ

ಗೆದ್ದ ಪಕ್ಷವಿತ್ತು, ಸೋತ ಪಕ್ಷವಿತ್ತು.

ಸೋತ ಪಕ್ಷದಲ್ಲಿ ಕೆಳಜನ ಹಸಿದರು,

ಗೆದ್ದ ಪಕ್ಷದಲ್ಲಿ ಸಹ

ಹಸಿದವರು ಕೆಳಜನರೇ.

ಅನ್ನುತ್ತಾನೆ ಮಹಾಕವಿ ಬ್ರೆಕ್ಟ್ (ಅನುವಾದ ಷಾ.ಬಾಲು ರಾವ್).

ಇದು ಎಲ್ಲ ಯುದ್ಧಗಳ ಹಣೆಬರಹ. ನೆಲದ ಗೆರೆಗಳಿಗಾಗಿ ಕಾದಾಡುತ್ತಾರೆ. ಧರ್ಮದ ಹೆಸರಲ್ಲಿ ಕತ್ತಿ ಹಿಡಿಯುತ್ತಾರೆ. ಬಂಡವಾಳಕ್ಕಾಗಿ ಬಾಂಬ್ ಎಸೆಯುತ್ತಾರೆ. ಪ್ರತಿಷ್ಠೆಯ ಕಾರಣವಂತೂ ಇದ್ದೇ ಇದೆ. ಯುದ್ಧ ಗೆದ್ದವನು ದೊಡ್ಡಣ್ಣ, ಸೋತವನು ಸುಣ್ಣ. ಏನೇ ಆದರೂ, ಎರಡೂ ಕಡೆಯಲ್ಲಿ ದಿನದ ಕೊನೆಯಲ್ಲಿ ಹಸಿದ ಹೊಕ್ಕುಳಿಗೆ ಮಂಡಿಯೊತ್ತಿ ಮಲಗುವವರು ಕೆಳಜನರೇ. ಕೆನೆ ಎಲ್ಲರ ಬಟ್ಟಲಿನಲ್ಲೂ ಮೇಲೆ ತೇಲುತ್ತಲೇ ಇರುತ್ತದೆ.

ಎಷ್ಟೆಲ್ಲ ಕಾರಣಗಳನ್ನು ಪಟ್ಟಿ ಮಾಡುತ್ತಾರೆ ಯುದ್ಧ ಮಾಡಲಿಕ್ಕೆ!? ಅವುಗಳಲ್ಲಿ ತೀರಾ ನಗೆಪಾಟಲಿನದು ‘ಶಾಂತಿ ಸ್ಥಾಪನೆ’. ನದೀ ತೀರದ ಚಿಕ್ಕ ಹಳ್ಳಿಯಲ್ಲಿ ನಿರುಮ್ಮಳ ಆಡಿಕೊಂಡಿರುವ ಮಗುವಿನ ಮನೆ, ಆಕಾಶದಿಂದ ಬಿದ್ದ ಒಂದು ಗುಂಡಿಗೆ ಕುಸಿದು ಬೀಳುತ್ತದೆ. ಅಲ್ಲಿಯವರೆಗೂ ಇದ್ದ ಖುಷಿ ಕ್ಷಣಮಾತ್ರದಲ್ಲಿ ಕಳೆದುಹೋಗಿದೆ. ಅಲ್ಲಿಯವರೆಗೂ ಇದ್ದ ಶಾಂತಿ ಹೇಳಹೆಸರಿಲ್ಲದಂತೆ ಮಾಯವಾಗಿದೆ. ತಿಳಿಗೊಳಕ್ಕೆ ಕಲ್ಲು ಬೀಸಿ ಕಂಪನವೇಳಿಸುವ ಈ ಮಂದಿ ಶಾಂತಿ ಸ್ಥಾಪನೆ ಮಾಡುವುದಾದರೂ ಎಲ್ಲಿ?

ಯುದ್ಧದ ನಂತರ ಮೂಡುವುದು ನೀರವತೆ ಮಾತ್ರ. ಮತ್ತು ನೀರವತೆಯನ್ನು ಶಾಂತಿ ಎನ್ನಲು ಬರುವುದಿಲ್ಲ. ಆದರೂ ಕತ್ತಿಗೆ ಸಾಣೆ ಹಿಡಿಯುವವರು ಮುಗ್ಧ ಜನರ ಕಿವಿಗೆ ಹೂವಿಡುತ್ತಾರೆ. ಅದರಿಂದೇನು?

ಪ್ರತಿ ದಿನವೂ ಬೇಲಿಯ ಆಚೀಚೆ ನಿಂತು ಪರಸ್ಪರ ಕೈಬೀಸಿ ನಗು ವಿನಿಮಯ ಮಾಡಿಕೊಳ್ಳುವ ಜನ ಬಲಿಯಾಗಿಹೋಗುತ್ತಾರೆ. ಗಡಿ – ದಂಡೆಗಳಲ್ಲಿ ಹೆಣಗಳ ರಾಶಿರಾಶಿ. ಗುಂಡೇಟಿಗೆ ತೂತು ಬಿದ್ದ ಮನೆಗಳ ಮರಾಮತ್ತಾದರೂ ಮಾಡಬಹುದು. ಮನಸಿನ ಗಾಯಗಳನ್ನು ಹೇಗೆ ಮುಚ್ಚುವುದು?

ಜೇನಿನಂತೆ ಚೂರುಚೂರೆ ದುಡಿದು ಕಟ್ಟಿಕೊಂಡ ಮನೆ, ಹಬ್ಬಿಕೊಂಡ ಹಳ್ಳಿ; ಕಲ್ಲೇಟಿಗೆ ಚೂರಾಗುವ ಜೇನುಗೂಡಿನಂತೆ ಚದುರಿಹೋಗುತ್ತವೆ. ರಾಸಾಯನಿಕಗಳ ವಿಷ ಗಾಳಿ ಶ್ವಾಸಕೋಶ ತುಂಬಿಕೊಳ್ಳುತ್ತದೆ. ಬಾಂಬಿನಿಂದ ಹೊಮ್ಮಿ ಚರ್ಮ ಹೊಕ್ಕ ವಿಕಿರಣಗಳು ಮುಂದಿನ ಮೂರು ತಲೆಮಾರುಗಳನ್ನೂ ಕಾಡುತ್ತವೆ. ಆ ನೆಲದಲ್ಲಿ ಹುಟ್ಟುವ ಮಕ್ಕಳ ಅಂಗಾಂಗ ಊನ. ಮೆದುಳು ಬೆಳೆಯದೆ ಹುಟ್ಟಿದಾಗಿಂದ ಸಾಯುವವರೆಗೂ ಮಕ್ಕಳಾಗೇ ಉಳಿಯುತ್ತವೆ ಜೀವಗಳು. ಒಂದು ಮುಷ್ಟಿ ರಸ ಗೊಬ್ಬರ ಜಾಸ್ತಿಯಾದರೇ ನೆಲದ ಎದೆ ಸುಡುತ್ತದೆ. ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ. ಇಳುವರಿ ತಗ್ಗುತ್ತದೆ. ಹೀಗಿರುವಾಗ ಯುದ್ಧ ಕಾಲದಲ್ಲಿ ಎಸೆಯಲಾಗುವ ಕ್ಷಿಪಣಿಗಳು, ಬಾಂಬು – ಬುಲೆಟ್ಟುಗಳ ರಾಸಾಯನಿಕ ಉಂಟು ಮಾಡುವ ಪರಿಣಾಮವೇನು ಗೊತ್ತೆ?

ಯುದ್ಧದಿಂದ ಬರಡಾದ ನೆಲದಲ್ಲಿ ಹುಲ್ಲುಕಡ್ಡಿ ಇರಲಿ, ಕನಸುಗಳೂ ಚಿಗುರುವುದಿಲ್ಲ. ಜನ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೋಗುತ್ತಾರೆ. ಕಾಲಿಟ್ಟ ಕಡೆಯೆಲ್ಲಾ ದಾಖಲೆಯಿಲ್ಲದ ನುಸುಳುಕೋರರೆಂಬ, ನೆಲೆಯಿಲ್ಲದ ನಿತ್ಯ ವಲಸಿಗರೆಂಬ ಹಣೆಪಟ್ಟಿ, ತಿರಸ್ಕಾರ. ಏನೆಲ್ಲ ಕಳೆದುಕೊಂಡ ಮೇಲೂ ಬದುಕಿನ ಛಲ ಹೊತ್ತು ನಡೆದವರು ಕುಗ್ಗಿ ಹಿಡಿಯಾಗಲು ಇಷ್ಟು ಸಾಕು. ಯಾವ ಜನ ಉನ್ಮಾದದಿಂದ ಯುದ್ಧ ಯುದ್ಧ ಎಂದು ಕನವರಿಸುತ್ತಿದ್ದಾರೋ, ಎದುರಾಳಿಯನ್ನು ನಾಮಾವಶೇಷ ಮಾಡಿರೆಂದು ಫರ್ಮಾನು ಹೊರಡಿಸುತ್ತಿದ್ದಾರೋ, ಅದೇ ಜನ ಯುದ್ಧ ಸಂತ್ರಸ್ತರನ್ನು ಕುರುಡುಗಣ್ಣಾಗಿ ನೋಡುತ್ತಾರೆ. ಅವರ ಪಾಲಿಗೆ ಯುದ್ಧದಲ್ಲಿ ಸಮವಸ್ತ್ರ ತೊಟ್ಟು ಜೀವ ತೆತ್ತವರಷ್ಟೆ ಹುತಾತ್ಮರು. ಯುದ್ಧದಿಂದ ಬದುಕನ್ನೇ ಕಳೆದುಕೊಂಡವರ ಬಗ್ಗೆ ಕಣದಷ್ಟೂ ಚಿಂತೆಯಿಲ್ಲ.

ಜಗತ್ತಿನೆಲ್ಲ ಕಡೆ ಇದು ಇರುವುದೇ ಹೀಗೆ. ಯಾವ ದೇಶದ ಹೆಸರೆತ್ತಿ ಹೇಳುವುದು? ಯುದ್ಧವೆಂದರೆ ನಾಗರಿಕತೆಯ ನಾಶ ಅನ್ನುತ್ತಾರೆ. ಅಷ್ಟು ಮಾತ್ರವಲ್ಲ, ಅದು ಮನುಷ್ಯತ್ವದ ನಾಶ. ಅನಾಗರಿಕ ಮನುಷ್ಯರಾದರೂ ಬದುಕು ನಡೆಸಬಲ್ಲರು. ಮನುಷ್ಯತ್ವವೇ ಇಲ್ಲವಾದರೆ? ಯುದ್ಧ ಕಾಲದಲ್ಲಿ ಜನರು ಜನರನ್ನೇ ಹಿಡಿದು ಮುಕ್ಕುತ್ತಾರೆ. ರಣಾಂಗಣದಲ್ಲಿ ಮಾತ್ರವಲ್ಲ, ಒಳ ಭೂಮಿಯಲ್ಲೂ. ತಿನ್ನುವ ಅನ್ನವೂ ತುಟ್ಟಿ, ದೇಹದ ಬೆಲೆ ಅಗ್ಗ. ಔಷಧಗಳಿಲ್ಲ, ಶಾಲೆಯಿಲ್ಲ, ಹಬ್ಬ ಹರಿದಿನಗಳೂ ಇಲ್ಲ; ನಡೆಯುವುದೇನಿದ್ದರೂ ನಿತ್ಯ ಶ್ರಾದ್ಧ. ಉರುಳಿ ಬೀಳುವ ಒಂದೊಂದೇ ಹೆಣದ ಜಾತಿ ಗುರುತಿಸಿ ಸುಡುವುದೋ ಹೂಳುವುದೋ ನಿಕ್ಕಿ ಮಾಡುವುದಷ್ಟೆ ಬಾಕಿ.

ಇದು ಯುದ್ಧ. ಇದು ಇರುವುದೇ ಹೀಗೆ. ಜೀವಿಗಳು ಗುಂಪುಗಳಾಗಿ ಬದುಕಲು ಕಲಿತಾಗಿನಿಂದ ‘ಕೊಂದರಷ್ಟೆ ಬದುಕು’ ಅನ್ನುವ ಭೀತಿ ನಂಬಿಕೆಯಾಗಿ, ಆದರ್ಶವಾಗಿ, ಈಗೀಗ ಹಿರಿಮೆಯಾಗಿ ಹಬ್ಬಿಕೊಂಡಿದೆ. ಯುದ್ಧ ಕಾಲದಲ್ಲಿ ಭೂಮಿಯೇ ಇಬ್ಭಾಗವಾಗಿ ಹೋಗುತ್ತದೆ. ಗಡಿ ಈಚೆ ಇರುವವರೆಲ್ಲ ದೇವತೆಗಳು, ಆಚೆಗಿನವರೆಲ್ಲ ಸೈತಾನರು, ಎರಡೂ ಕಡೆಯವರ ಪಾಲಿಗೂ! ಇಷ್ಟಕ್ಕೂ ಯುದ್ಧದಾಹಿಗಳಿಗೆ ದೇಶವೆಂದರೆ ಜನರಲ್ಲ, ಕೇವಲ ಭೂಪಟ ಚಿತ್ರ. ಪ್ರತಿಯೊಂದು ದೇಶದ ಭೂಪಟ ಚಿತ್ರಿಸಲ್ಪಟ್ಟಿರುವುದು ಯುದ್ಧದಲ್ಲಿ ಸತ್ತವರ ಸ್ಮಶಾನದ ಮೇಲೇ. ಎಷ್ಟು ವಿಸ್ತೀರ್ಣ ಸ್ಮಶಾನವೋ, ಅಷ್ಟು ಉದ್ದಗಲ ದೇಶ. ದಿನ – ವಾರಗಟ್ಟಲೆ, ತಿಂಗಳು – ವರ್ಷಗಟ್ಟಲೆ ಕಾದಾಡಿದ ದೇಶಗಳಿವೆ. ಒಂದು ಗಾಯ ಮಾಯುವಷ್ಟರಲ್ಲಿ ಮತ್ತೊಂದು ಕಡೆ ಇರಿತ.

ಯುದ್ಧ ಒಂದು ಸಮೂಹ ಸನ್ನಿ. ಅದೊಂದು ಹುಚ್ಚು. ದುಡಿದು – ತಿಂದು  – ಕಾಮಿಸುತ್ತ ಬದುಕು ಕಳೆಯುವ ಸಾಮಾನ್ಯ ಮನುಷ್ಯರಲ್ಲೂ ಯುದ್ಧ ವಿಕೃತಿ ಕೆರಳಿಸುತ್ತದೆ. ದೇಶ – ದೇಶಗಳ ನಡುವೆ ಯುದ್ಧ ನಡೆಯುವಾಗ ದೇಶದ ಭಾಗವಾದ ಸಾಮಾನ್ಯ ಪ್ರಜೆ ನೆರೆಮನೆಯವನ ಮೇಲೆ ದ್ವೇಷ ಕಾರತೊಡಗುತ್ತಾನೆ. ಅದಕ್ಕೆ ಆತನ ಧರ್ಮವೋ ಮೈಬಣ್ಣವೋ ಆಸಕ್ತಿಗಳೋ ಮತ್ತೇನೋ ನೆವವಾಗುತ್ತದೆ. ಅಕ್ಷರಶಃ ಕಾದಾಡುವಾಗ ನಿಜದ ಯುದ್ಧವೇನೋ ಸರಿ. ದೇಶಗಳು ಆಯುಧ ಪೇರಿಸಿಟ್ಟುಕೊಂಡಿರುವಷ್ಟೂ ಕಾಲ, ಪ್ರತಿದಿನವೂ ‘ಯುದ್ಧ ತಯಾರಿ’. ಯುದ್ಧದಷ್ಟೇ ಈ ಯುದ್ಧಸಿದ್ಧತೆಯ ದಿನಗಳೂ  ಆತಂಕಕಾರಿ. ಆಯುಧ ಪ್ರಯೋಗಕ್ಕಿಂತ ಆಯುಧ ಸಂಗ್ರಹ ಹೆಚ್ಚು ಅಪಾಯಕಾರಿ. ಮತ್ತು ಇದಕ್ಕೆ ಸುಲಭ ಬಲಿ, ಯುದ್ಧದಲ್ಲಿ ನೇರ ಭಾಗಿಯಲ್ಲದ ಅಮಾಯಕರು.

ಯುದ್ಧ ಒಂದು ಬಗೆಯ ಉನ್ಮಾದ. ಅದೊಂಥರಾ ಎಚ್ಚರಗೇಡಿ ನಶೆ. ಒಂದು ಮಾನಸಿಕ ವಿಕೃತಿ. ಈವರೆಗಿನ ಜಾಗತಿಕ ಇತಿಹಾಸದಲ್ಲಿ ಯಾವುದಾದರೂ ದೇಶ ಯುದ್ಧ ಮಾಡಿ ಗೆದ್ದಿದೆಯೇ? ತಾಂತ್ರಿಕವಾಗಿ ಯುದ್ಧ ಗೆದ್ದ ದೇಶಗಳೂ ಸತ್ವದಲ್ಲಿ ಸೋತಿವೆ. ತನ್ನ ಜನರ ಬದುಕೇ ಸೋತಿರುವಾಗ, ದೇಶವೊಂದಕ್ಕೆ ಯಾವ ಗೆಲುವು ತಾನೆ ಗೆಲುವಾಗಲು ಸಾಧ್ಯ!? ಇನ್ನು ಸೋತವರ ಕಥೆ ಕೇಳುವುದೇ ಬೇಡ. 

ಇಷ್ಟಕ್ಕೂ ಯುದ್ಧದಲ್ಲಿ ಗೆಲ್ಲುವವರು ಆಯುಧ ವ್ಯಾಪಾರಿಗಳು ಮತ್ತು ಸಾವಿನ ವ್ಯಾಪಾರಿಗಳು ಮಾತ್ರ. ಅವರು ಯುದ್ಧದಿಂದ ಉಂಟಾದ ಗಾಯದ ಕಲೆಗಳನ್ನೇ ದೇಶದ ಚರಿತ್ರೆ ಎಂದು ತೋರಿಸುತ್ತಾ ದಾರಿ ತಪ್ಪಿಸುತ್ತಾರೆ. ಬೇಕಿದ್ದರೆ ಮಕ್ಕಳ ಇತಿಹಾಸ ಪುಸ್ತಕ ತೆಗೆದು ನೋಡಿ. ಪ್ರಾಥಮಿಕ ಶಾಲೆಯಿಂದಲೂ ನಾವು ‘ಇತಿಹಾಸ’ವೆಂದು ಓದಿಸುತ್ತಿರುವುದು ಯುದ್ಧ ವಿವರಗಳನ್ನೇ. ಜಾಗತಿಕ ಮಹಾಯುದ್ಧಗಳಿಂದ ಹಿಡಿದು ಪಾಳೆಪಟ್ಟುಗಳ ಯುದ್ಧದವರೆಗೆ, ಅಂತಃಕಲಹದವರೆಗೆ ಎಲ್ಲವೂ ಪಠ್ಯ ವಿಷಯಗಳೇ! ಬಾಲ್ಯದಿಂದಲೇ ಇವನ್ನು ಓದುತ್ತಾ ಬೆಳೆದವರಿಗೆ ಯುದ್ಧವೊಂದು ಪ್ರತಿಷ್ಠೆಯ ಸಂಗತಿ ಅನ್ನಿಸುವುದು ಸಹಜ. ಅದರ ಬದಲು ಪಠ್ಯಗಳಲ್ಲಿ ಯುದ್ಧ ಬೀರುವ ಪರಿಣಾಮಗಳನ್ನು ಅಭ್ಯಾಸಕ್ಕೆ ಇರಿಸಿದರೆ? ಕೆಲವೇ ದಶಕಗಳಲ್ಲಿ ಮನುಷ್ಯರ ಚಿಂತನಾಕ್ರಮವೇ ಬದಲಾಗುವ ಸಾಧ್ಯತೆ ಇದೆ. ಆದರೆ ಆಯಕಟ್ಟಿನ ಸ್ಥಾನದಲ್ಲಿ ಕುಳಿತವರಿಗೆ ಇದು ಬೇಕಿಲ್ಲ. ದೇಶ ಯುದ್ಧದ ಕಲೆಗಳಿಂದ ತುಂಬಿದಷ್ಟೂ ಚಿನ್ನದ ಪದಕ ತೂಗಿದಂತೆ ಅವರು ಸಂಭ್ರಮಿಸುತ್ತಾರೆ.

ಹಾಗೆಂದೇ ಮಹಾಕವಿ ಬ್ರೆಕ್ಟ್;

ಮೇಲಿನವರು ಹೇಳುತ್ತಾರೆ

ಇದು ಕೀರ್ತಿವೈಭವಗಳಿಗೆ ದಾರಿ.

ಕೆಳಗಿನವರು ಹೇಳುತ್ತಾರೆ:

ಅಲ್ಲ, ಸುಡುಗಾಡಿಗೆ – ಎಂದು ಯುದ್ಧದ ನಿಜಾಯಿತಿಯನ್ನು ಬಿಚ್ಚಿಡುತ್ತಾನೆ. (ಅನುವಾದ : ಷಾ.ಬಾಲು ರಾವ್)

ಯುದ್ಧವೆಂದರೆ ಕೊನೆಗೂ ಇಷ್ಟೇ. ಪ್ರತ್ಯೇಕ ವಿವರಣೆ ಬೇಕೆ?

Leave a Reply