ಸೂಫಿ ಬಯಾಜಿದ ಪಾಠ ಕಲಿತ ಕಥೆ : tea time story

ಬದಲಾವಣೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಜಗತ್ತು ಬದಲಾಗಬೇಕೆಂದು ಹಪಹಪಿಸುತ್ತಾರೆ, ಮತ್ತೆ ಕೆಲವರು ನಾನು ಜಗತ್ತನ್ನು ಬದಲಾಯಿಸಿಬಿಡುತ್ತೇನೆ ಎಂದು ಭ್ರಮಿಸುತ್ತಾರೆ. ತಾನು ಕೂಡಾ ಇಂಥ ಭ್ರಮೆಯಲ್ಲಿ ಇದ್ದೆನೆಂದು ಸೂಫಿ ಸಂತ ಬಯಾಜಿದ್ ಬಸ್ತಮಿ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ 

ನಾನು ಚಿಕ್ಕವನಿದ್ದಾಗ ದೇವರಲ್ಲಿ ಪ್ರತಿದಿನವೂ ಬೇಡುತ್ತಿದ್ದುದು ಒಂದನ್ನೇ. ಈ ಜಗತ್ತನ್ನು ಬದಲಾಯಿಸುವ ಶಕ್ತಿ ನನಗೆ ಕೊಡು ಎಂದು. ನನಗೆ ನನ್ನ ಸುತ್ತಲಿನ ಎಲ್ಲ ಜನರೂ ತಪ್ಪಾಗಿ ಕಾಣುತ್ತಿದ್ದರು. ಪ್ರತಿಯೊಂದು ವ್ಯವಸ್ಥೆಯೂ ತಪ್ಪಾಗಿ ಕಾಣುತ್ತಿತ್ತು. ಯೌವನದ ದಿನಗಳಲ್ಲೂ ಇದು ಮುಂದುವರಿಯಿತು. ಆ ದಿನಗಳಲ್ಲಿ ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ ಮತ್ತು ಭೂಮಿಯ ಚಹರೆಯನ್ನೆ ಬದಲಿಸಲು ಬಯಸಿದ್ದೆ.

“ಮಧ್ಯವಯಸ್ಕನಾಗುವ ವೇಳೆಗೆ ನನಗೆ ಸ್ವಲ್ಪ ಪ್ರಬುದ್ಧತೆ ಬಂದಿತ್ತು. ನನ್ನ ಪ್ರಾರ್ಥನೆಯಲ್ಲಿ ಸ್ವಲ್ಪ ರಾಜಿ ಮಾಡಿಕೊಂಡೆ. ನನ್ನ ಕುಟುಂಬದವರನ್ನು ಬದಲಾಯಿಸುವ ಶಕ್ತಿಯನ್ನಾದರೂ ಕೊಡು ಎಂದು ದೇವರಲ್ಲಿ ಪ್ರಾರ್ಥಿಸತೊಡಗಿದೆ.

“ನಾನು ಮುದುಕನಾಗುವ ವೇಳೆಗೆ ನನಗೆ ಮತ್ತಷ್ಟು ಬುದ್ಧಿ ಬಂದಿತ್ತು. ನನ್ನಿಂದ ನನ್ನ ಕುಟುಂಬವನ್ನು ಕೂಡಾ ಬದಲಾಯಿಸಲು ಸಾಧ್ಯವಿಲ್ಲ. ಮಾತ್ರವಲ್ಲ, ಅವರನ್ನೆಲ್ಲ ಬದಲಿಸುವ ಅಧಿಕಾರ ನನಗೆ ಇಲ್ಲವೂ ಇಲ್ಲ – ಎಂಬುದು ಅರ್ಥವಾಗತೊಡಗಿತು. ಈಗ ದೇವರಲ್ಲಿ, ನನ್ನನ್ನು ನಾನು ಬದಲಾಯಿಸಿಕೊಳ್ಳುವಷ್ಟು ಶಕ್ತಿ ನೀಡು ಎಂದು ಪ್ರಾರ್ಥಿಸಿದೆ.

ಕೊನೆಗೂ ದೇವರು ಉತ್ತರಿಸಿದ. ನಿನ್ನ ಬಳಿ ಈಗ ಹೆಚ್ಚು ಸಮಯವಿಲ್ಲ. ನಿನ್ನನ್ನು ನೀನು ಬದಲಾಯಿಸಿಕೊಳ್ಳುವಷ್ಟು ಕೂಡಾ…. ಈ ಪ್ರಾರ್ಥನೆಯನ್ನು ನೀನು ಮೊದಲೇ ಮಾಡಿದ್ದಿದ್ದರೆ, ನಿನ್ನ ಮೊದಲ ಪ್ರಾರ್ಥನೆಯೂ ಈ ಹೊತ್ತಿಗೆ ಈಡೇರುತ್ತಿತ್ತು ಅಂದ.

Leave a Reply