ಹೆಣ್ಣು : ಅರಿವಿನ ಸ್ವಯಂಸ್ರೋತ

ಪರಬ್ರಹ್ಮ, ಇಂದ್ರಾದಿಗಳಿಗೆ ಪಾಠ ಕಲಿಸಲು ಹೆಣ್ಣಾಗಿಯೇ ಬಂದಿದ್ದು ಯಾಕೆ? ಬೈಬಲ್ಲಿನಲ್ಲಿ ಗಂಡಿನ ಗೊಂಬೆಯ ಪಕ್ಕೆಲಬು ಕಿತ್ತು ಹೆಣ್ಣನ್ನು ಸೃಷ್ಟಿಸಿದ ಪರಮಪ್ರಭು ಆ ಮೂಲಕ ಸೂಚಿಸಿದ್ದೇನು? ಮಹಾಗರ್ವಿ ತಾಪಸಿಯನ್ನು ಗೃಹಿಣಿಯೊಬ್ಬಳು ಮಾಂಸದಂಗಡಿಯವನ ಬಳಿ ಪಾಠ ಕಲಿ ಎಂದು ಕಳಿಸಿಕೊಟ್ಟ ಕಥೆ ಗೊತ್ತಾ? ಅಧ್ಯಾತ್ಮ ಸಾಧಕರೆಲ್ಲ ಹೆಣ್ಣಿಂದ ದೂರವಿರಿ ಅನ್ನುವುದು ಸರಿಯೇ? ಹೆಣ್ಣು ಸ್ವಯಂ ಬೋಧೆಯಾಗಿರುವಾಗ!? । ಚೇತನಾ ತೀರ್ಥಹಳ್ಳಿ

ಯಾವುದೆಲ್ಲ ಜೀವಜಗತ್ತನ್ನು ತನ್ನ ಒಡಲಲ್ಲಿ ಇರಿಸಿಕೊಳ್ಳುತ್ತವೆಯೋ ಅವೆಲ್ಲವನ್ನೂ ಭಾರತೀಯ ಸಂಸ್ಕೃತಿಯು ಹೆಣ್ಣೆಂದು ಕರೆದು ಪೂಜಿಸಿದೆ. ಇದು ಹೆಣ್ಣಿಗೆ ಮಾತ್ರ ಸಾಧ್ಯವಿರುವ ಸೃಷ್ಟಿ ಮತ್ತು ಪಾಲನಾಕ್ರಿಯೆಗೆ ನೀಡಲಾಗಿರುವ ಗೌರವ. ಹಾಗೆಂದೇ ಇಲ್ಲಿ ನದಿ, ನೆಲ, ಫಸಲು ಮೊದಲಾದವು ಮಾತೃಭಾವದಿಂದ ಕಾಣಲ್ಪಡುತ್ತವೆ. ವೇದ ಸಂಸ್ಕೃತಿಯ ಕಾಲದಲ್ಲಿ ಪ್ರಕೃತಿಯ ಆರಾಧನೆ ರೂಢಿಯಲ್ಲಿತ್ತು. ಆ ಸಂದರ್ಭದಲ್ಲಿ ದಾರ್ಶನಿಕ ಖುಷಿಗಳು ಪ್ರಕೃತಿಯನ್ನು ಸ್ತ್ರೀ ಎಂದು ಕರೆದು, ಅದರ ಸೃಷ್ಟಿ ರಹಸ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧನೆ ಸಡೆಸುತ್ತಿದ್ದರು. ಸ್ತ್ರೀ ಮತ್ತು ಪ್ರಕೃತಿ ಎರಡೂ ಅರಿಯಲು ಯತ್ನಿಸಿದಷ್ಟೂ ನಿಗೂಢವಾಗುತ್ತಾ ಹೋಗುವ ವಿಸ್ಮಯವಾಗಿ ಅವರಿಗೆ ಕಂಡವು.

ಯಾವುದೇ ಸಂಗತಿಯು ನಿಗೂಢವಾದಷ್ಟೂ ಅದರತ್ತ ಆಸಕ್ತಿ ಹೆಚ್ಚುತ್ತ ಹೋಗುತ್ತದೆ. ಗೌರವ ಭಾವನೆ ಮೂಡತೊಡಗುತ್ತದೆ. ಅಂತೆಯೇ ಸ್ತ್ರೀ ಕೂಡ ಗೌರವಾರ್ಹಳಾಗಿ ಹೊಮ್ಮಿದಳು.

ಹೆಣ್ಣು ಅರಿವಿನ ಬ್ರಹ್ಮದಂತೆ. ಯಾರಿಗೆ ಎಷ್ಟು ಅರ್ಥವಾಗಬೇಕೆಂದು ನಿರ್ಧರಿಸುತ್ತಾಳೋ ಅವರಿಗೆ ಅಷ್ಟೇ ಅರ್ಥವಾಗುತ್ತಾಳೆ. ಆಕೆಯ ದಕ್ಕುವಿಕೆ ಕೂಡ ಆಕೆಯ ನಿಶ್ಚಯದಂತೆಯೇ! ಸ್ತ್ರೀ ಶೋಷಣೆ, ದೌರ್ಜನ್ಯದಂತಹ ಯಾವತ್ತಿನ ಸಂದರ್ಭದಲ್ಲೂ ಇದು ನಿಜ. ದೈಹಿಕವಾಗಿ ಆಕೆಯನ್ನು ಒಂದು ಚೌಕಟ್ಟಿಗೆ ಅಂಟಿಸಬಹುದು. ಆದರೆ ಆಕೆಯ ಮನೋಲೋಕವನ್ನು ಆಕೆಯ ಅನುಮತಿ ಇಲ್ಲದೆ ಯಾರೂ ಆಳಲಾರರು. ಈ ಸ್ತ್ರೀವಿಶಿಷ್ಟಗುಣದಿಂದಾಗಿಯೇ ಆಕೆ ಪ್ರಾಚೀನದಿಂದಲೂ ಬೋಧನೆಯ ಮಾಧ್ಯಮವಾಗುತ್ತಾ ಬಂದಿದ್ದಾಳೆ.

ಉದಾಹರಣೆಗೆ ಉಪನಿಷತ್ತಿನಲ್ಲಿ ಹೇಳಲಾಗಿರುವ ಈ ಪ್ರಕರಣವನ್ನು ಗಮನಿಸಿ:

ದೇವತೆಗಳು ದಾನವರ ಮೇಲಿನ ಯುದ್ಧದಲ್ಲಿ ಗೆಲುವು ಸಾಧಿಸುತ್ತಾರೆ. ಹಾಗೆ ಗೆದ್ದಿದ್ದೇ ತಡ ಅವರನ್ನು ಅಹಂಕಾರ ಮುತ್ತಿಕೊಳ್ಳುತ್ತದೆ. ತಮ್ಮಶೌರ್ಯದ ಬಗ್ಗೆ ಬೀಗುತ್ತಾ ತಾವೇ ಸರ್ವಶಕ್ತರು ಎಂದು ಮೆರೆಯತೊಡಗುತ್ತಾರೆ. ಆಗ ಬ್ರಹ್ಮ (ನಾಲ್ಕು ಮುಖದ ದೇವರಲ್ಲ. ಪರಬ್ರಹ್ಮ ಅಂದರೆ ಪರಮ ಶಕ್ತಿ, ಜಗನ್ನಿಯಾಮಕ) ಅವರ ಸನಿಹ ಒಂದು ಮರದ ಕೆಳಗೆ ಯಕ್ಷರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ದೇವತೆಗಳಿಗೆ ಕುತೂಹಲ. ಅದು ಯಾರೆಂದು ತಿಳಿದು ಬರಲು ಇಂದ್ರ ಕ್ರಮವಾಗಿ ವಾಯು, ಅಗ್ನಿ ಇತ್ಯಾದಿ ಕಳುಹಿಸುತ್ತಾನೆ. ಆದರೆ ಅವರ್ಯಾರಿಗೂ ಆ ಯಕ್ಷ ಯಾರೆಂದು ಗೊತ್ತಾಗುವುದಿಲ್ಲ. ವರುಣಾದಿಗಳು ತಮತಮಗೆ ಏನು ಗ್ರಹಿಕೆಯಾಯಿತೋ ಅದನ್ನೆ ಬಂದು ಹೇಳುತ್ತಾರೆ. ಕೊನೆಗೆ ಇಂದ್ರನೇ ಯಕ್ಷನ ಬಳಿ ಹೋಗುತ್ತಾನೆ. ಆಗ ಅಲ್ಲೊಬ್ಬ ದಿವ್ಯ ರೂಪದ ಹೆಣ್ಣು ತೋರುತ್ತಾಳೆ.

ನೀನ್ಯಾರು? ಇಲ್ಲಿಯ ತನಕ ಇಲ್ಲಿದ್ದವರು ಯಾರು? ಕೇಳುತ್ತಾನೆ ಇಂದ್ರ. ಆಕೆ ಉಮಾ ಹೈಮವತೀ. ಬಂಗಾರದ ಮೈಬಣ್ಣದಿಂದ ಜ್ವಾಜಲ್ಯಮಾನವಾಗಿ ಕಂಗೊಳಿಸುತ್ತ ಉಮೆಯಾಗಿ ಆಕೆ ಇಂದ್ರನಿಗೆ ಕಾಣಿಸಿಕೊಳ್ಳುತ್ತಾಳೆ. ಅನಂತರ ಆಕೆ ಇಂದ್ರನಿಗೆ ಬ್ರಹ್ಮವನ್ನು (ಆತ್ಯಂತಿಕ ಅರಿವನ್ನು) ತಿಳಿಸಿಕೊಡುತ್ತಾ, ಅದನ್ನು ಸಾಕ್ಷಾತ್ಕರಿಸಿಕೊಳ್ಳುವಂತೆ ಸೂಚಿಸುತ್ತಾಳೆ. ದೇವತೆಗಳ ಗೆಲುವಿಗೆ ಕಾರಣ ಸರ್ವವ್ಯಾಪಕ ಬ್ರಹ್ಮವೆಂದು ಬೋಧಿಸುತ್ತಾಳೆ. ಹೀಗೆ ಇಂದ್ರ ಪರಿವಾರದ ಗರ್ವಭಂಗ ಮಾಡಿ, ಆತ್ಯಂತಿಕವಾದ ಬ್ರಹ್ಮವೇ, ಪರಮ ಅಸ್ತಿತ್ವವೇ ಸರ್ವಕಾರಣಕಾರಣವೆಂದು ಮನದಟ್ಟು ಮಾಡಿಕೊಡುತ್ತಾಳೆ.

– ಇದು ಕೇನೋಪನಿಷತ್ತಿನ ಸಾರ. ಈ ಪ್ರಕರಣವು ಬ್ರಹ್ಮದ ಗ್ರಹಿಕೆಗೆ ಪ್ರಚೋದಿಸುವ ಮಾಧ್ಯಮವಾಗಿ ಹೆಣ್ಣನ್ನು ತೋರಿಸಿ ಕೊಡುತ್ತದೆ. ಹೆಣ್ಣು ಜ್ಞಾನ ಸಂವಾಹಕಿ. ಆಕೆ ಬೋಧಕಿಯೂ ಸ್ವಯಂಬೋಧವೂ ಆಗಿರುವಳು.

ಬೈಬಲ್ಲಿನ ಸೃಷ್ಟಿ ಕಥೆಯಲ್ಲಿ ಒಂದು ಅಂಶವಿದೆ. ಮೊದಲು ದೇವನು ಗಂಡನ್ನು ಸೃಷ್ಟಿಸುತ್ತಾನೆ. ಅವನಿಗೊಂದು ಜೊತೆ ಬೇಕೆಂದು ಯೋಚಿಸಿ ಅವನ ಪಕ್ಕೆಲುಬು ತೆಗೆದು ಅದರಿಂದ ಹೆಣ್ಣನ್ನು ಸೃಷ್ಟಿಸುತ್ತಾನೆ. ಒಂದು ಮಣ್ಣಿನ ಮೂರ್ತಿಯ ಭಾಗವನ್ನು ತೆಗೆದು ಮತ್ತೊಂದು ಮೂರ್ತಿಯನ್ನು ಮಾಡಿದಾಗ ಆ ಎರಡನೆ ಮೂರ್ತಿಯು ಪೂರ್ಣವಾಗಿಯೇ ಮಾಡಲ್ಪಡುತ್ತದೆಯಷ್ಟೇ?  ಆದರೆ ತನ್ನ ಭಾಗವನ್ನು ಕಳೆದುಕೊಂಡ ಮೊದಲ ಮೂರ್ತಿಯು ಭಿನ್ನಗೊಳ್ಳುತ್ತದೆ. ಅಪೂರ್ಣವಾಗಿ ಉಳಿಯುತ್ತದೆ. ಬೈಬಲ್ಲಿನ ಈ ವಿವರಣೆಯು ಹೆಣ್ಣು ಎರಡನೇ ಸೃಷ್ಟಿಯಾಗಿ ಮಾಡಲ್ಪಟ್ಟರೂ ಆಕೆಗಿರುವ ಪರಿಪೂರ್ಣತೆಯನ್ನು ಮತ್ತು ಆಕೆಯು ಜೊತೆಗಿದ್ದರೆ ಮಾತ್ರ ಪರಿಪೂರ್ಣನಾಗುವ ಗಂಡಿನ ಸೀಮಿತಿಯನ್ನು ಸೂಚ್ಯವಾಗಿ ತಿಳಿಸುತ್ತದೆ.

ಗಂಡಿನ ಲೌಕಿಕ ಸಾಧನೆಗೆ ಹೇಗೋ ಹಾಗೆಯೇ ಆಧ್ಯಾತ್ಮಿಕ ಸಾಧನೆಗೂ ಹೆಣ್ಣಿನ ಸಹಕಾರ ಅಗತ್ಯ. ಶ್ರೀಮಾತೆ ಶಾರದಾ ದೇವಿ ತಮ್ಮ ಪತಿ ಶ್ರೀ ರಾಮಕೃಷ್ಣರ ಹೆಗಲೆಣೆಯಾಗಿ ನಿಂತು ಅವರ ಅಧ್ಯಾತ್ಮ ಸಾಧನೆಗೆ ಪೂರಕವಾದರು. ಆಯ್ದಕ್ಕಿ ಲಕ್ಕಮ್ಮ ತನ್ನ ಪತಿ ಮಾರಯ್ಯನಿಗೆ ನೀತಿ ಬೋಧಿಸಿದಳು. ಪುರಂದರ ದಾಸರ ಬದುಕಿನ ತಿರುವಿಗೆ ಅವರ ಪತ್ನಿಯೇ ಕಾರಣಕರ್ತಳು. ನಮ್ಮ ಸಮಾಜ ಸುಧಾರಕರ ಸಾಲಿನಲ್ಲಂತೂ ಸಾವಿತ್ರಿ ಫುಲೆ, ಕಸ್ತೂರ್ ಬಾ, ರಮಾಬಾಯಿ ಅಂಬೇಡ್ಕರ್ ಇಂಥವರ ಸಾಲು ಸಾಲೇ ಕಣ್ಣ ಮುಂದಿದೆ.

ಅಧ್ಯಾತ್ಮ ಸಾಧನೆಯಾಗಲೀ ಮಾರ್ಗದರ್ಶನವಾಗಲೀ ಹೆಣ್ಣಿಗೆ ಕಷ್ಟದ ಸಂಗತಿಯೇನಲ್ಲ. ಪುರುಷ ಎಲ್ಲವನ್ನೂ ಬಿಟ್ಟುಕೊಟ್ಟು ವೈರಾಗ್ಯ ತಾಳುವ ಮೂಲಕ ಜ್ಞಾನೋದಯಕ್ಕಾಗಿ ಹಂಬಲಿಸಿದರೆ, ಸ್ತ್ರೀ ಎಲ್ಲವನ್ನೂ ಒಳಗೊಳ್ಳುತ್ತಲೇ, ತನ್ನ ಕರ್ತವ್ಯವನ್ನೇ  ಸಾಧನೆಯಾಗಿ ಮಾಡಿಕೊಂಡು ಅಧ್ಯಾತ್ಮ ಪಥದಲ್ಲಿಯೂ ಪಯಣಿಸಬಲ್ಲಳು. ಹೆಣ್ಣು ಮನೆಯಲ್ಲಿದ್ದುಕೊಂಡೇ ಸಾಧನೆ ನಡೆಸುವುದನ್ನು ಆಕೆಯ ಮಿತಿ ಅಂದುಕೊಳ್ಳಬಾರದು. ಅದು ಆಕೆಯ ಅಸೀಮ ಶಕ್ತಿ! ಆಕೆ ತನ್ನ ಮನೆ, ಕುಟುಂಬಕ್ಕೆ ಅಂಟಿಕೊಳ್ಳುವುದು ಸಂಸಾರವನ್ನು, ಆ ಮೂಲಕ ಸಮಾಜವನ್ನು ಒಗ್ಗಟ್ಟಾಗಿ ಇರಿಸಲಿಕ್ಕೇ ಹೊರತು ಬಿಟ್ಟುಕೊಡಲಾಗದ ಮೋಹದಿಂದಲ್ಲ. ಗಂಡು ಸಂಸಾರ ತನ್ನನ್ನು ವಿಮುಖಗೊಳಿಸಬಹುದೆಂದು ಕಾಡಿನ ಕಡೆ ಕಾಲು ಹಾಕಿದರೆ, ಹೆಣ್ಣು ಮನೆಯಲ್ಲಿದ್ದುಕೊಂಡೇ ಮೋಕ್ಷದ ದಾರಿ ನಡೆಯಬಲ್ಲಳು.

ಉಪನಿಷತ್ತಿನಲ್ಲಿ ಒಂದು ಕಥೆಯಿದೆ. ತಪೋನಿರತನಾಗಿದ್ದ ಬ್ರಾಹ್ಮಣನೊಬ್ಬ ಭಿಕ್ಷೆಗೆಂದು ಮನೆಯೊಂದರ ಮುಂದೆ ನಿಲ್ಲುತ್ತಾನೆ. ಆ ಮನೆಯ ಗೃಹಿಣಿಯನ್ನು ಕರೆಯುತ್ತಾ ಭಿಕ್ಷೆಗಾಗಿ ಯಾಚಿಸುತ್ತಾನೆ. ಆದರದು ಮಧ್ಯಾಹ್ನದ ಸಮಯ. ಆ ಮನೆಯೊಡೆಯ ಊಟಕ್ಕೆ ಕುಳಿತಿರುತ್ತಾನೆ ಮತ್ತು ಗೃಹಿಣಿ ಆತನಿಗೆ ಪ್ರೀತಿಯಿಂದ ಬಡಿಸುತ್ತಿರುತ್ತಾಳೆ. ಇದರಿಂದಾಗಿ ಆ ಬ್ರಾಹ್ಮಣ ಕೊಂಚ ಕಾಯಬೇಕಾಗಿ ಬರುತ್ತದೆ. ಕೊನೆಗೆ ಆ ಮನೆಯ ಗೃಹಿಣಿ ಆಹಾರದ ತಟ್ಟೆ ಹಿಡಿದು ಬಂದಾಗ ಬ್ರಾಹ್ಮಣನು ಆಕೆಯನ್ನು ಕೋಪದಿಂದ ದುರುಗುಟ್ಟಿ ನೋಡುತ್ತಾನೆ. ಅದಕ್ಕುತ್ತರವಾಗಿ ಆಕೆ, “ನೀನು ದುರುಗುಟ್ಟಿದರೆ ಸುಟ್ಟುಹೋಗಲು ನಾನೇನು ಬಲಾಕ ಪಕ್ಷಿಯೇ!?’ ಅನ್ನುತ್ತಾಳೆ ತಣ್ಣಗೆ.

ಆ ಬ್ರಾಹ್ಮಣ ತಪೋನಿರತನಾಗಿದ್ದಾಗ ಆತನ ತಲೆಯ ಮೇಲೆ ಬಲಾಕ ಹಕ್ಕಿಯೊಂದು ಹಿಕ್ಕೆ ಹಾಕಿರುತ್ತದೆ. ಅದರಿಂದ ಕೋಪಗೊಂಡ ಬ್ರಾಹ್ಮಣ ಅದನ್ನು ದುರುಗುಟ್ಟಿ ನೋಡುತ್ತಾನೆ ಮತ್ತು ಕೊಂಬೆ ಮೇಲಿನ ಆ ಹಕ್ಕಿಯು ಹೊತ್ತುರಿದು ಸುಟ್ಟುಹೋಗಿರುತ್ತದೆ. ಈಗ ಈ ಗೃಹಿಣಯು “ಸುಟ್ಟುಹೋಗಲು ನಾನೇನು ಬಲಾಕ ಪಕ್ಷಿಯೇ” ಎಂದು ಕೇಳುತ್ತಿದ್ದಾಳೆ!

ಬ್ರಾಹ್ಮಣನಿಗೆ ಅಚ್ಚರಿಯಾಗುತ್ತದೆ. ಕಾಡಿನಲ್ಲಿನಡೆದ ಸಂಗತಿ ಅಷ್ಟು ಬೇಗ ಯಾರು ಹೇಳಿದರೆಂದು ಅವಳನ್ನು ಕೇಳಿದಾಗ ಆಕೆ ತನ್ನ ಸಾಧನೆಯ ಫಲವಿದು ಅನ್ನುತ್ತಾಳೆ. ಹಾಗೂ ಸಂತೆಯಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿರುವ ‘ಧರ್ಮವ್ಯಾಧನ’ ಬಳಿ ಉಪದೇಶ ಪಡೆದುಕೋ ಎಂದು ಅವನನ್ನು ಕಳಿಸಿ ಕೊಡುತ್ತಾಳೆ.

ಹೆಣ್ಣಿನ ಆಧ್ಯಾತ್ಮಿಕ ಶಕ್ತಿ, ನೈತಿಕ ಬಲ ಮತ್ತು ಸಾಧನೆಯ ನಿದರ್ಶನಗಳಿವು. ಇವೆಲ್ಲ ಹಾಳೆ ಕಥೆಗಳೇ ಆಗಿರಬಹುದು. ನಮ್ಮ ಇಂದಿನ ದೈನಂದಿನದಲ್ಲೂ ನಮ್ಮ ಸುತ್ತಮುತ್ತ ಕಣ್ಣು ಹಾಯಿಸಿದರೆ ಇಂಥಾ ಅದೆಷ್ಟೋ ಹೆಣ್ಣುಮಕ್ಕಳು ಬೆಳಕು ಹೊತ್ತು ನಡೆಯುತ್ತಿರುವುದು ಕಾಣುತ್ತದೆ; ಕಣ್ಣಿಗೆ ಕವಿದಿರುವ ಮೇಲು-ಕೀಳಿನ ಪೊರೆ ಕಳೆದಿದ್ದರೆ ಮಾತ್ರ!

Leave a Reply