ಬುದ್ಧ ಕಲಿಸಿದ್ದು ಏನು ? : ಬಾಬಾ ಸಾಹೇಬರ ಚಿಂತನೆ

“ಸ್ವತಃ ಬುದ್ಧನ ಪ್ರಕಾರ , ಧಮ್ಮವನ್ನ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೇಯದು ‘ಧಮ್ಮ’ ಮತ್ತು ಎರಡನೇಯದು ‘ ಅಧಮ್ಮ’ (ಇದು ಧಮ್ಮದ ಹೆಸರಿನಲ್ಲಿಯೇ ಪ್ರಚಾರದಲ್ಲಿದೆ) ಮತ್ತು ಮೂರನೇಯದು ‘ಸದ್ಧಮ್ಮ’ . ಮೂರನೇಯದು ಬೌದ್ಧ ಧಮ್ಮದ ಫಿಲಾಸೊಫಿ ಗೆ ಇನ್ನೊಂದು ಹೆಸರು. ಧಮ್ಮವನ್ನ ಅರ್ಥ ಮಾಡಿಕೊಳ್ಳಬೇಕಾದರೆ ಧಮ್ಮ, ಅಧಮ್ಮ ಮತ್ತು ಸದ್ಧಮ್ಮ ಈ ಮೂರನ್ನೂ ಅರ್ಥ ಮಾಡಿಕೊಳ್ಳಬೇಕು” ಅನ್ನುತ್ತಾರೆ ಡಾ.ಬಿ.ಆರ್.ಅಂಬೇಡ್ಕರ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧ ಕಲಿಸಿದ್ದು ಏನು ? ಬುದ್ಧ ನಿಜವಾಗಿಯೂ ಹೇಳಿದ್ದು ಏನು ಎನ್ನುವ ಬಗ್ಗೆ, ಬುದ್ಧನ ಯಾವ ಇಬ್ಬರು ಹಿಂಬಾಲಕರೂ ಅಥವಾ ಬೌದ್ಧ ಧರ್ಮದ ಯಾವ ಇಬ್ಬರು ವಿದ್ಯಾರ್ಥಿಗಳೂ ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ.

ಕೆಲವರಿಗೆ ಸಮಾಧಿ ಅಥವಾ ನಿರ್ವಾಣ, ಬುದ್ಧನ ಪ್ರಧಾನ ಬೋಧನೆಯಾದರೆ, ಇನ್ನೂ ಕೆಲವರಿಗೆ ವಿಪಸ್ಸನ (ಒಂದು ಬಗೆಯ ಪ್ರಾಣಾಯಾಮ) ಜಗತ್ತಿಗೆ ಬುದ್ಧನ ಅತ್ಯಂತ ಮಹತ್ವದ ಕೊಡುಗೆ.

ಕೆಲವರಿಗೆ ಬೌದ್ಧ ಧರ್ಮ, ಸಾಧನೆ ಮಾಡಿದ ಕೆಲವರಿಗೆ ಮಾತ್ರ ಅರ್ಥವಾಗುವ ನಿಗೂಢ ಜ್ಞಾನವಾದರೆ, ಇನ್ನೂ ಕೆಲವರಿಗೆ ಇದು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾದ ತಿಳುವಳಿಕೆ. ಕೆಲವರು ಬೌದ್ಧ ಧರ್ಮವನ್ನು ಬರಡು ತತ್ವಜ್ಞಾನ, ಅಸಂಗತ ವಿಚಾರಗಳ ವ್ಯವಸ್ಥೆ ಎಂದುಕೊಂಡರೆ, ಕೆಲವರಿಗೆ ಇದು ಆಳ ಅನುಭಾವ. ಕೆಲವರಿಗೆ ಇದು ಜಗತ್ತಿನ ವ್ಯವಹಾರಗಳಿಂದ ಹೊರತಾದ ಸ್ವಾರ್ಥಮಯ ಅಮೂರ್ತ ಚಿಂತನೆಯಾದರೆ, ಕೆಲವರಿಗೆ ಇದು ಹೃದಯದ ಪ್ರತಿ ಮಿಡಿತ ಮತ್ತು ಭಾವನೆಗಳ ಮೇಲಿನ ವ್ಯವಸ್ಥಿತ ಒತ್ತಡ.

ಬೌದ್ಧ ಧರ್ಮದ ಕುರಿತಾಗಿ ಇನ್ನೂ ಹತ್ತು ಹಲವು ವೈವಿಧ್ಯಮಯ ತಿಳುವಳಿಕೆಗಳನ್ನು ಹೇಳಬಹುದು ಆದರೆ ಈ ಪರಸ್ಪರ ನೋಟಗಳಲ್ಲಿನ ವೈರುಧ್ಯ ಬೆರಗು ಹುಟ್ಟಿಸುವಂಥದು. ಇಂಥ ವಿಚಾರಗಳನ್ನು ಹೊಂದಿರುವ ಕೆಲವರು, ಧರ್ಮದಲ್ಲಿನ ಕೆಲವು ವಿಷಯಗಳಾದ ಸಮಾಧಿ, ವಿಪಸ್ಸನ, ನಿಗೂಢ ಅಮೂರ್ತ ಸಂಗತಿಗಳನ್ನ ತೀವ್ರವಾಗಿ ಮೆಚ್ಚಿಕೊಂಡವರಾದರೆ, ಬೌದ್ಧ ಧರ್ಮದ ಬಗ್ಗೆ ಬರೆದ ಬಹುತೇಕ ಲೇಖಕರು ಪ್ರಾಚೀನ ಭಾರತೀಯ ಇತಿಹಾಸದ ವಿದ್ಯಾರ್ಥಿಗಳು ಮತ್ತು ಅವರ ಬೌದ್ಧ ಧರ್ಮದ ಅಭ್ಯಾಸ ಕೇವಲ ಸಾಂದರ್ಭಿಕ ಮತ್ತು ಪ್ರಾಸಂಗಿಕ.

ಕೆಲವರು ಬೌದ್ಧ ಧರ್ಮದ ವಿದ್ಯಾರ್ಥಿಗಳಲ್ಲ, ಮತ್ತು ಅವರು ಧರ್ಮಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಚರ್ಚಿಸುವ ಮಾನವ ಶಾಸ್ತ್ರವನ್ನೂ ಅಭ್ಯಾಸ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಹುಟ್ಚುವ ಪ್ರಶ್ನೆಯೆಂದರೆ, ಹಾಗಾದರೆ ಬುದ್ದ ಯಾವ ಸಾಮಾಜಿಕ ಸಂದೇಶವನ್ನೂ ಹೇಳಲಿಲ್ಲವೆ? ಈ ಪ್ರಶ್ನೆಯ ಉತ್ತರಕ್ಕಾಗಿ ಒತ್ತಾಯಿಸಿದಾಗ, ಬೌದ್ಧ ವಿದ್ಯಾರ್ಥಿಗಳು ಹೇಳುವ ಉತ್ತರ, ಬುದ್ಧ ಅಹಿಂಸೆ ಮತ್ತು ಶಾಂತಿಯನ್ನ ಪ್ರತಿಪಾದಿಸಿದ ಎನ್ನುವುದು.

ಬುದ್ಧ ಮತ್ತಿನ್ನೇನಾದರೂ ಸಾಮಾಜಿಕ ಮಹತ್ವದ ವಿಷಯಗಳ ಬಗ್ಗೆ ಹೇಳಿದ್ದಾನೆಯೇ ? ಬುದ್ಧ ನ್ಯಾಯದ ಬಗ್ಗೆ, ಪ್ರೀತಿಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ, ಸಮಾನತೆಯ ಬಗ್ಗೆ, ಬಂಧುತ್ವದ ಬಗ್ಗೆ ಮಾತನಾಡಿದ್ದಾನೆಯೇ? ಬೋಧನೆ ಮಾಡಿದ್ದಾನೆಯೇ? ಬುದ್ಧ, ಕಾರ್ಲ್ ಮಾರ್ಕ್ಸ್ ಎತ್ತಿದ ಪ್ರಶ್ನೆಗಳನ್ನು ಉತ್ತರಿಸಿದ್ದಾನೆಯೇ?

ಬುದ್ಧನ ಧಮ್ಮವನ್ನು ಕುರಿತು ಚರ್ಚೆ ಮಾಡುವಾಗ ಇಂಥ ಯಾವ ಪ್ರಶ್ನೆಯನ್ನೂ ಕೇಳಲಾಗುವುದಿಲ್ಲ. ಆದರೆ ನನ್ನ ತಿಳುವಳಿಕೆಯ ಪ್ರಕಾರ ಬುದ್ಧ ಈ ಎಲ್ಲದರ ಕುರಿತಾಗಿಯೂ ಚರ್ಚೆ ಮಾಡಿದ್ದಾನೆ, ತನ್ನ ವಿಚಾರಗಳನ್ನ ಸ್ಪಷ್ಟ ಮಾಡಿದ್ದಾನೆ, ಆದರೆ ಆಧುನಿಕ ಲೇಖಕರು ಈ ಯಾವುದನ್ನೂ ತಮ್ಮ ಲೇಖನಗಳಲ್ಲಿ ಹೇಳುವುದಿಲ್ಲ, ಎಲ್ಲವನ್ನೂ ಮುಚ್ಚಿ ಹಾಕಿ ಕೇವಲ ಬುದ್ಧನ ಕೆಲವು ಅಮೂರ್ತ ಚಿಂತನೆಯ ಮಾತುಗಳಿಗೆ ಮಣೆ ಹಾಕುತ್ತಾರೆ.

ಸ್ವತಃ ಬುದ್ಧನ ಪ್ರಕಾರ , ಧಮ್ಮವನ್ನ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೇಯದು ‘ಧಮ್ಮ’ ಮತ್ತು ಎರಡನೇಯದು ‘ ಅಧಮ್ಮ’ (ಇದು ಧಮ್ಮದ ಹೆಸರಿನಲ್ಲಿಯೇ ಪ್ರಚಾರದಲ್ಲಿದೆ) ಮತ್ತು ಮೂರನೇಯದು ‘ಸದ್ಧಮ್ಮ’ . ಮೂರನೇಯದು ಬೌದ್ಧ ಧಮ್ಮದ ಫಿಲಾಸೊಫಿ ಗೆ ಇನ್ನೊಂದು ಹೆಸರು. ಧಮ್ಮವನ್ನ ಅರ್ಥ ಮಾಡಿಕೊಳ್ಳಬೇಕಾದರೆ ಧಮ್ಮ, ಅಧಮ್ಮ ಮತ್ತು ಸದ್ಧಮ್ಮ ಈ ಮೂರನ್ನೂ ಅರ್ಥ ಮಾಡಿಕೊಳ್ಳಬೇಕು.

Leave a Reply