ಜಗದ ದೊರೆ ನಿನ್ನ ಕಸದ ಬುಟ್ಟಿಯಲಿ ಹುಟ್ಟಿ ಬರಲು ನಿನ್ನ ಎದೆಯನು ಗುಡಿಸು… । ಸೂಫಿ Corner

ರಮದಾನಿಗೊಂದು ಸೂಫಿ ಪದ್ಯ… । ಮೂಲ: ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ, ಕನ್ನಡಕ್ಕೆ: ಕೇಶವ ಮಳಗಿ

ನೆಲೆಯಿಲ್ಲದೆಡೆಯಿಂದ ಹುಟ್ಟಿ ಬರುವುದು ಪ್ರೀತಿ
ಪ್ರೇಮಿಗಳ ಹೃದಯದಲಿ ಬೆಸೆವುದು ಪ್ರೀತಿ

ಜಗದ ದೊರೆ ನಿನ್ನ ಕಸದ ಬುಟ್ಟಿಯಲಿ ಹುಟ್ಟಿ ಬರಲು
ನಿನ್ನ ಎದೆಯನ್ನು ಗುಡಿಸು, ಸಾರಿಸು ಶುಚಿಯಾಗಿಟ್ಟಿರು 

ಎಲ್ಲ ಜೀವಿಗಳ ಜೀವ ಹುಟ್ಟಿ ಬಂದಾಗಲೊಮ್ಮೆ
ಲೌಕಿಕದ ದೇಹ ಬದಲಾಗಿ ಚಿಮ್ಮುವುದು ಜೀವರಸ

ಪ್ರೀತಿ ನಿನ್ನ ಎದೆಯನ್ನು ತುಂಬಿ ತುಳುಕುವ ಮುನ್ನ
ನಿನ್ನ ಒಳಗು ಬರಿಯ ಬರಿದೋ ಬರಿದಾಗಿರಬೇಕು

ನಿನ್ನ ನೆಲೆಯಿಂದ ನೀನು ಹೊರ ಹೋದಾಗಲೇ
ಪ್ರೀತಿಯ ದೊರೆ ಒಳಹೊಗುವನು ನಿನ್ನ ನಿವಾಸದೊಳಗೆ

ಗೆಳೆಯನ ಹೊರತಾಗಿ ಪೂರ್ಣ ಖಾಲಿಯಿರಲಿ ನಿನ್ನ ಹೃದಯ
ಆ ಗಳಿಗೆಯಲ್ಲಿಯೇ ಉಕ್ಕಿ ಹರಿಯುವುದು ದೈವ ಕರುಣೆ

ಈ ಲೋಕದಲಿ ಆತ ಮತ್ತೊಮ್ಮೆ ಇಳಿದು ಬಂದುದೇ ಆದರೆ
ಗುತ್ತಿಗೆಯ ಈ ಹೃದಯವನು ಆಳುವವನು ಆ ದೊರೆಯೇ

ಆಗ ಈ-ಲೋಕ, ಆಲೋಕವೆಲ್ಲ ಮಟಾಮಾಯ
ಎಲ್ಲವೂ ಕಣ್ಮರೆ, ಅಸ್ತಿತ್ವವಿಲ್ಲ, ಸಕಲವೂ ಇಲ್ಲಮೆ

ಅದು ಹೇಗೆ ದೈವಿಕ ಸಗ್ಗದ ಗರುಡ ರಾಜ  
ತನ್ನ ಗೂಡೆಂದು ನಿನ್ನ ಎದೆಯಲ್ಲಿ ಇಳಿಯುವುದು?

'ಮೊಯಿನ'ನು ಆತನ ಹೊಸಿಲಿನ ಧೂಳಿನ ಕಣದಂತೆ
ಅವತರಣದಲಿ ಗೆಳೆಯ ಈ ಹೊಸಿಲನ್ನು ದಾಟುವನಂತೆ.  

Leave a Reply