ಬೋಧಾಯನ ಧರ್ಮ ಸೂತ್ರದಿಂದ ಒಂದು ಸುಭಾಷಿತ

ಇಂದಿನ ಸುಭಾಷಿತ ಬೋಧಾಯನ ಧರ್ಮ ಸೂತ್ರದಿಂದ …

ಅದ್ಭಿಃ ಶುಧ್ಯನ್ತಿ ಗಾತ್ರಾಣಿ ಬುದ್ಧಿರ್ಜ್ಞಾನೇನ ಶುಧ್ಯತಿ ।
ಅಹಿಂಸಯಾ ಚ ಭೂತಾತ್ಮಾ ಮನಃ ಸತ್ಯೇನ ಶುಧ್ಯತಿ ॥ ಬೋಧಾಯನ ಧರ್ಮ ಸೂತ್ರ – 1.5.3 ॥
ಅರ್ಥ: ದೇಹವು ನೀರಿನಿಂದಲೂ ಬುದ್ಧಿಯು ತತ್ವಜ್ಞಾನದಿಂದಲೂ ಮನಸ್ಸು ಸತ್ಯದಿಂದಲೂ ವ್ಯಕ್ತಿತ್ವವು ಅಹಿಂಸೆಯಿಂದಲೂ ಪರಿಶುದ್ಧರಾಗುತ್ತಾರೆ.

ತಾತ್ಪರ್ಯ: ದೇಹಶುದ್ಧಿಗೆ ನಾವೆಲ್ಲರೂ ನೀರನ್ನು ಬಳಸುವುದು ತಿಳಿದೇ ಇದೆ. ಆದರೆ ಬುದ್ಧಿ ಶುಚಿಯಾಗುವುದು ಯಾವುದರಿಂದ? ಜ್ಞಾನ ದಿಂದ ಅನ್ನುತ್ತದೆ ಬೋಧಾಯನ ಧರ್ಮ ಸೂತ್ರ. ಜ್ಞಾನವಿಲ್ಲದ ಬುದ್ಧಿ ಮೌಢ್ಯತೆಯಿಂದ ಮಲಿನವಾಗಿಹೋಗಿರುತ್ತದೆ. ಅದನ್ನು ಶುಚಿಗೊಳಿಸಬೇಕೆಂದರೆ ಅರಿವು ಮುಖ್ಯ. ಈ ಸೂತ್ರ ಮುಂದುವರಿದು, ಮನಸ್ಸು ಸತ್ಯದಿಂದ ಶುದ್ಧವಾಗುತ್ತದೆಯೆಂದೂ, ಯಾವುದೇ ವ್ಯಕ್ತಿಯ ವ್ಯಕ್ತಿತ್ವವು ಅಹಿಂಸೆಯಿಂದ ಶುದ್ಧವಾಗುತ್ತದೆ ಎಂದೂ ಹೇಳುತ್ತದೆ. ಸತ್ಯವಿಲ್ಲದ ಮನಸ್ಸು ಅತ್ಯಂತ ಕೊಳಕು ಮನಸ್ಸು. ಅದು ಅಪಾಯಕಾರಿ ಹಾಗೂ ವಿಕೃತವಾಗಿರುವುದು. ಅಂತೆಯೇ ಒಬ್ಬ ವ್ಯಕ್ತಿಯ ಶುದ್ಧಿ ಆತನ ಸರ್ವಭೂತ ದಯೆಯಲ್ಲಿ ಎದ್ದು ಕಾಣುವುದು. ಆತನ ಅಹಿಂಸಾ ಪ್ರವೃತ್ತಿಯಲ್ಲಿ ಕಾಣುವುದು. ಹಿಂಸ್ರ ಸ್ವಭಾವದ ಮನುಷ್ಯರು ತಮ್ಮ ವ್ಯಕ್ತಿತ್ವದಲ್ಲೇ ದೋಷವನ್ನು ಹೊತ್ತಿರುತ್ತಾರೆ. ಆದ್ದರಿಂದ ನಮ್ಮ ದೇಹ ಶುದ್ಧಿಗೆ ನೀರನ್ನೂ ಬುದ್ಧಿ ಶುದ್ಧಿಗೆ ಅರಿವನ್ನೂ ಮನಃ ಶುದ್ಧಿಗೆ ಸತ್ಯವನ್ನೂ ವ್ಯಕ್ತಿತ್ವ ಶುದ್ಧಿಗೆ ಅಹಿಂಸೆಯನ್ನೂ ಮಾಧ್ಯಮ ಮಾಡಿಕೊಳ್ಳಬೇಕು ಅನ್ನೋದು ಈ ಸುಭಾಷಿತದ ತಾತ್ಪರ್ಯ

Leave a Reply