ಧನ್ವಂತರಿ ದೇವತೆಗಳ ವೈದ್ಯ. ವೈದ್ಯರ ದೇವತೆ ಕೂಡಾ! ದೈಹಿಕ ಕಾಯಿಲೆಗಳಿಗೆ ಔಷಧ ನೀಡುವ ಧನ್ವಂತರಿಯನ್ನು ಸ್ತುತಿಸುತ್ತಾ ಯಾಚಕರು “ಎಲ್ಲ ರೋಗಗಳಿಗೂ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ ನಿವಾರಿಸುವ ಕೃಪೆ ತೋರು” ಎಂದು ಪ್ರಾರ್ಥಿಸುತ್ತಿದ್ದಾರೆ….
ನಮಾಮಿ ಧನ್ವಂತರಿಮಾದಿದೇವಂ
ಸುರಾಸುರೈರ್ವಂದಿತ ಪಾದಪದ್ಮಮ್ |
ಲೋಕೇ ಜರಾರುಗ್ಭಯಮೃತ್ಯು ನಾಶಂ
ದಾತಾರಮೀಶಂ ವಿವಿಧೌಷಧೀನಾಂ ||1||
ಭಾವಾರ್ಥ: ದೇವಾದಿದೇವತೆಗಳೂ, ಅಸುರರೂ ಯಾರ ಪಾದಗಳಿಗೆ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ; ರೋಗ, ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರ ಮಾಡುವ; ಹಲವು ಬಗೆಯ ಔಷಧಗಳನ್ನು ಕರುಣಿಸಿ ಕೃಪೆ ತೋರುವ ಧನ್ವಂತರಿಗೆ ನನ್ನ ಪ್ರಣಾಮಗಳು.
ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ-
ಪ್ರಕಟಿತ ಕರಕಾಂತಃ ಕಾಂತ ಪೀತಾಂಬರಾಢ್ಯಃ|
ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ
ಶತಮುಖ ಮಣಿವರ್ಣಃ ಪಾತು ಧನ್ವಂತರಿರ್ನಃ ||2||
ಭಾವಾರ್ಥ: ಹಸ್ತಗಳಲ್ಲಿ ಅಮೃತಕಲಶದೊಡನೆ ಚಕ್ರ, ಶಂಖಗಳನ್ನು ಧರಿಸಿ, ಜಿಗಣೆಗಳನ್ನು (ಅಥವಾ ಮೂಲಿಕೆಗಳನ್ನು) ಹಿಡಿದು ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವರ್ಣದ ಶಲ್ಯ ಹೊದ್ದು ಶೋಭಿಸುತ್ತಿರುವ; ಇಂದ್ರನೀಲಮಣಿಯ ಮೈಬಣ್ಣ ಹೊಂದಿರುವ, ಆರೋಗ್ಯದಾತಾರನಾದ ಧನ್ವಂತರಿಯು ನಮ್ಮನ್ನು ರಕ್ಷಿಸಲಿ.
ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ
ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||3||
ಭಾವಾರ್ಥ: ತನ್ನ ದೇಹದಿಂದ ಹೊಮ್ಮುವ ಚಂದ್ರಕಾಂತಿಯಂಥ ಅಮೃತ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ, ಆತ್ಮಾನುಭೂತಿಯುಳ್ಳ, ಜ್ಞಾನಮುದ್ರೆ ಮತ್ತು ಮೋಕ್ಷಕುಂಭವನ್ನು ಧರಿಸಿ, ಚಂದ್ರಮಂಡಲದೊಳಗೆ ನೆಲೆಸಿರುವ ದೇವನಾದ ಧನ್ವಂತರಿಯು ನಮ್ಮ ಶರೀರದಲ್ಲಿಯೂ ನೆಲೆಸಿ ನಮ್ಮನ್ನು ಆರೋಗ್ಯವಂತರನ್ನಾಗಿಸಿದ್ದಾನೆ.
ಶಂಖಂ ಚಕ್ರಂ ಜಲೂಕಾಂ ದಧದಮೃತಘಟಂ ಚಾಪಿ ದೋರ್ಭಿಶ್ಚತುರ್ಭಿಃ
ಸೂಕ್ಷ್ಮಸ್ವಚ್ಛಂ ಚ ಹೃದ್ಯಾಂಶುಕಪರಿವಿಲಸನ್ಮೌಲಿಂ ಅಂಭೋಜ ನೇತ್ರಮ್ |
ಕಾಲಾಂಭೋದೋಜ್ವಲಾಂಗಂ ಕಟಿತಟಿ ವಿಲಸಚ್ಚಾರು ಪೀತಾಂಬರಾಢ್ಯಂ
ವಂದೇ ಧನ್ವಂತರೀಂ ತಂ ನಿಖಿಲ ಗದವನ ಪ್ರೌಢದಾವಾಗ್ನಿ ಲೀಲಮ್ ||4||
ಭಾವಾರ್ಥ: ಅಮೃತಕಲಶದೊಡನೆ ಶಂಕ, ಚಕ್ರ, ಜಿಗಣೆಗಳನ್ನು ತನ್ನ ನಾಲ್ಕುಕೈಗಳಲ್ಲಿ ಹಿಡಿದು ಸಾಮಾನ್ಯರಿಗೆ ಅಗೋಚರನಾಗಿ, ತಾನು ಇಚ್ಛಿಸಿದ ಭಕ್ತರಿಗೆ ಪ್ರತ್ಯಕ್ಷನಾಗುವ, ಮನಮೋಹಕವಾಗಿರುವ ವಸ್ತ್ರವನ್ನು ಶಿರದಲ್ಲಿ ಧರಿಸಿರುವ, ವಿಸ್ತಾರವಾದ ನೇತ್ರಗಳನ್ನು ಹೊಂದಿರುವ, ಮಳೆಗಾಲದ ಕಾರ್ಮುಗಿಲ ಬಣ್ಣದ ದೇಹವುಳ್ಳವನಾದ, ಮೋಹಕವಾದ ಪೀತಾಂಬರವನ್ನು ಸೊಂಟಕ್ಕೆ ಸುತ್ತಿಕೊಂಡು ರೋಗಗಳೆಂಬ ಕಾಡ್ಗಿಚ್ಚನ್ನು ಅಳಿಸಿಹಾಕುತ್ತಿರುವ ದೇವನಾದ ಧನ್ವಂತರಿಗೆ ನನ್ನ ಪ್ರಣಾಮಗಳು.
ಶಂಖಂ ಚಕ್ರಮುಪರ್ಯಧಶ್ಚಕರಯೋರ್ದಿವ್ಯೌಷಧಂ ದಕ್ಷಿಣೇ
ವಾಮೇನಾನ್ಯ ಕರೇಣ ನಿರ್ಮಲ ಸುಧಾಕುಂಭಂ ಜಲೂಕಾವಲಿಮ್ |
ಬಿಭ್ರಾಣಃ ಕರುಣಾಕರಃ ಶುಭಕರಃ ಸರ್ವಾಮಯ ಧ್ವಂಸಕಃ
ಸರ್ವಂ ಮೇ ದುರಿತಂ ಛಿನತ್ತು ಭಗವಾನ್ ಧನ್ವಂತರಿಃ ಸಂತತಮ್ ||5||
ಭಾವಾರ್ಥ: ಮೇಲಕ್ಕೆತ್ತಿರುವ ತನ್ನ ಎರಡು ಹಸ್ತಗಳಲ್ಲಿ ಶಂಖ ಚಕ್ರಗಳನ್ನು ಧರಿಸಿ; ಕೆಳಗಿರುವ ಬಲಗೈಯಲ್ಲಿ ದಿವ್ಯೌಷಧವಾಗಿರುವ ಅಮೃತಕುಂಭವನ್ನು ಹಿಡಿದು, ಎಡಗೈಯಲ್ಲಿ ಜಿಗಣೆಗಳ ಗುಂಪನ್ನು ಹಿಡಿದಿರುವ, ಕರುಣಾಸಾಗರನೂ ಸರ್ವ ರೋಗ ನಿವಾರಕನೂ ಆಗಿರುವ, ಸದಾ ಒಳಿತನ್ನುಂಟುಮಾಡುವ ಸಾಕ್ಷಾತ್ ಭಗವಂತನಾದ ಧನ್ವಂತರಿಯು ಎಲ್ಲ ರೋಗಗಳಿಗೂ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ ನಿವಾರಿಸುವ ಕೃಪೆ ತೋರಲಿ.