ಬೌದ್ಧೀಯತೆ : ಸದಾ ಕಾಲದ ತುರ್ತು

 

ಯಾವುದು ಸ್ವಯಂ ಗಂಧ ಬೀರುತ್ತದೆಯೋ ಅದು ತನ್ನ ಇರುವಿನವರೆಗೆ ಘಮಲನ್ನು ಹಂಚುತ್ತಲೇ ಇರುತ್ತದೆ. ಬುದ್ಧ ಹಾಗೆ ಸ್ವಯಂ ಬೋಧೆ ಪಡೆದವನಾಗಿದ್ದ. ಅದನ್ನು ಪಡೆದವರು ಮತ್ತೊಬ್ಬರಿಗೆ ದಾಟಿಸುವ ವಾಹಕಗಳಂತೆ ಆದರು. ಆಯಾ ವಾಹಕವು ತನ್ನ ಗ್ರಹಿಕೆಯಂತೆ ಬೋಧೆಯನ್ನು ದಾಟಿಸಿತು. ಆದ್ದರಿಂದಲೇ ಬುದ್ಧನ ತಿಳಿವಿಗೆ ಇಂದು ಹತ್ತಾರು ವ್ಯಾಖ್ಯೆಗಳು. ~ ಚೇತನಾ ತೀರ್ಥಹಳ್ಳಿ

ಬುದ್ಧ….! ಬಹುಶಃ ಜಗತ್ತು ಅತ್ಯಂತ ಪ್ರೀತಿಯಿಂದ ಕೇಳಿಸಿಕೊಳ್ಳುವ ಪದವಿದು. `ಬುದ್ಧ’ ಅನ್ನುವ ಉಚ್ಚಾರಣೆಯೊಂದಿಗೇ ಮನದೊಳಗೊಂದು ಶಾಂತಿಯ ಸೆಳಕು ಹಾದು ಹೋಗುತ್ತದೆ. ಎರಡು ಸಾವಿರ ವರ್ಷಗಳಿಗೂ ಹಿಂದೆ ಆಗಿ ಹೋದ ಈ ವ್ಯಕ್ತಿ ಮತ್ತೆ ಮತ್ತೆ ನಮ್ಮ ನಡುವೆ ಸಂಭವಿಸುತ್ತಲೇ ಇದ್ದಾನೆ. ಇಂದಿಗೆ ಬುದ್ಧ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. ಬುದ್ಧ ಒಂದು ತತ್ತ್ವವಾಗಿ, ಬೆಸುಗೆಯಾಗಿ, ಒಂದು ಘಟನೆಯಾಗಿ ಉಳಿದಿದ್ದಾನೆ.

ನಾವು ಬಲ್ಲ ಕಥೆಗಳ ಪ್ರಕಾರ ರಾಜಕುಮಾರನಾಗಿ ಜನಿಸಿದ ಸಿದ್ಧಾರ್ಥ ಜೀವನದ ನಾಲ್ಕು ಸತ್ಯಗಳ ದರ್ಶನದಿಂದ ಬದುಕಿನ ಸಾರ್ಥಕತೆಯ ಬಗ್ಗೆ ಚಿಂತಿಸತೊಡಗಿದ. ಅದನ್ನು ಕಂಡುಕೊಳ್ಳಲು ಸಂಸಾರ ಬಿಟ್ಟು ಹೊರಟ. ಸತತ ಧ್ಯಾನದಿಂದ ಸಿದ್ಧಾರ್ಥನಿಗೆ ತಿಳಿವು ದಕ್ಕಿತು. ಬದುಕಿನ ಅರ್ಥ ಗೋಚರಿಸಿತು.

ತಾನು ಕಂಡುಕೊಂಡಿದ್ದನ್ನ ಇತರಿಗೂ ಹಂಚಬೇಕಲ್ಲ?
ಯಾವುದನ್ನಾದರೂ ಸರಿ, ಹಂಚಿಕೊಂಡಾಗಲಷ್ಟೆ ಅದಕ್ಕೆ ಸಾರ್ಥಕತೆ. ಗಾಳಿಯಂತೆ, ನೀರಿನಂತೆ ಜ್ಞಾನವೂ. ಒಂದೆಡೆ ಕೂಡಿಟ್ಟರೆ ಪ್ರಯೋಜಕ ಮಾತ್ರವಲ್ಲ, ಕೆಡುಕು ಕೂಡ. ಬೋಧೆ ಪಡೆದ ಸಿದ್ಧಾರ್ಥ ಬುದ್ಧನಾದ. ಬೋಧೆಯನ್ನು ಹಂಚುವುದು ಹೇಗೆ? ಘಮಲನ್ನು ಹಂಚುವುದು ಹೇಗೆ? ಹೂವು ಅರಳಿಕೊಳ್ಳುತ್ತದೆ, ಘಮ ತಾನಾಗಿ ಹೊಮ್ಮುತ್ತದೆ. ಮೂಗು ಶುದ್ಧ ಇದ್ದವರೆಲ್ಲರನ್ನೂ ಅದು ತಲುಪುತ್ತದೆ.

ಬುದ್ಧ ಹೂವಿನಂತೇ ಸುಮ್ಮನಿದ್ದ. ಅವನ ಬೋಧೆಯ ಘಮಲು ಊರು ತುಂಬ ಹಬ್ಬಿತು. ಜನ ಅವನತ್ತ ಸೆಳೆದು ಬಂದರು. ತಮ್ಮ ಗ್ರಹಿಕೆಗೆ ನಿಲುಕಿದಷ್ಟನ್ನು ತೆಗೆದುಕೊಂಡರು.

ಘಮಲನ್ನು ಹೊರಗಿಂದ ಆಸ್ವಾದಿಸುವುದು ಬೇರೆ, ಸ್ವತಃ ಅದನ್ನು ಬೀರುವುದು ಬೇರೆ. ಹೆಚ್ಚೆಂದರೆ ಗಂದದ ಕೊರಡನ್ನು ಮುಟ್ಟಿ, ಅದರಿಂದ ಕೈಗಂಟುವ ಸುಗಂಧವನ್ನು ಬೇರೆಯವರ ಕೈಗೆ ದಾಟಿಸಬಹುದು. ಕೈಗೆ ಹತ್ತಿಸಿಕೊಂಡ ಸುಗಂಧ ಕೆಲವು ಕ್ಷಣಗಳವರೆಗೆ, ತೀರ ಹೆಚ್ಚೆಂದರೆ ಒಂದಿಡೀ ದಿನ ಇರಬಹುದು. ಆದರೆ ಯಾವುದು ಸ್ವಯಂ ಗಂಧ ಬೀರುತ್ತದೆಯೋ ಅದು ತನ್ನ ಇರುವಿನವರೆಗೆ ಘಮಲನ್ನು ಹಂಚುತ್ತಲೇ ಇರುತ್ತದೆ.

ಬುದ್ಧ ಹಾಗೆ ಸ್ವಯಂ ಬೋಧೆ ಪಡೆದವನಾಗಿದ್ದ. ಅದನ್ನು ಪಡೆದವರು ಮತ್ತೊಬ್ಬರಿಗೆ ದಾಟಿಸುವ ವಾಹಕಗಳಂತೆ ಆದರು. ಆಯಾ ವಾಹಕವು ತನ್ನ ಗ್ರಹಿಕೆಯಂತೆ ಬೋಧೆಯನ್ನು ದಾಟಿಸಿತು. ಆದ್ದರಿಂದಲೇ ಬುದ್ಧನ ತಿಳಿವಿಗೆ ಇಂದು ಹತ್ತಾರು ವ್ಯಾಖ್ಯೆಗಳು.

ಒಮ್ಮೆ ಬುದ್ಧನೇ ಇದರ ಸೂಚನೆಯನ್ನು ಕೊಟ್ಟಿದ್ದ. ಹೀಗಾಯ್ತು;
ಒಮ್ಮೆ ಬುದ್ಧ ಕೊಳದ ಬಳಿ ಬರುತ್ತಾನೆ, ಜೊತೆಗೆ ಅವನ ಶಿಷ್ಯ ಸಾಗರ. ಅವತ್ತು ಬುದ್ಧ ಏನೂ ಮಾತಾಡುವುದಿಲ್ಲ. ಒಂದು ಕಮಲವನ್ನು ತೆಗೆದುಕೊಂಡು, ಅದರ ದಂಟನ್ನು ಹಿಡಿದು ಪ್ರತಿಯೊಬ್ಬ ಶಿಷ್ಯನ ಮುಂದೆ ಹಿಡಿಯುತ್ತಾನೆ. ಅವರು ತಮತಮಗೆ ತೋಚಿದ ಅರ್ಥವನ್ನು ತಮ್ಮೆಲ್ಲ ತಿಳಿವು ಬಸಿದು ವಿವರಿಸತೊಡಗುತ್ತಾರೆ. ಕೊನೆಗೆ ಬುದ್ಧ ಮಹಾಕಸ್ಸಪನ ಬಳಿ ಬರುತ್ತಾನೆ. ಕಮಲವನ್ನು ನೋಡಿದ ಕೂಡಲೆ ಮಹಾಕಸ್ಸಪ ಜೋರಾಗಿ ನಗತೊಡಗಿದ. ಅದನ್ನು ನೋಡಿ ಬುದ್ಧ ಮುಗುಳ್ನಗುತ್ತಾನೆ ಮತ್ತು ಹೇಳುತ್ತಾನೆ; `ಏನನ್ನು ಹೇಳಬಹುದೋ ಅದನ್ನು ನಾನು ನಿಮಗೆಲ್ಲರಿಗೆ ಹೇಳಿದ್ದೇನೆ. ಏನನ್ನು ಹೇಳಲಾಗದೋ ಅದನ್ನು ಮಹಾಕಸ್ಸಪನಿಗೆ ನೀಡಿದ್ದೇನೆ’.
ಬುದ್ಧನನ್ನು ನೋಡುವುದಾಗಲೀ ಕೇಳುವುದಾಗಲೀ ಸಾಧ್ಯವಿಲ್ಲ. ಬುದ್ಧನನ್ನು ಅನುಭವಿಸಬೇಕು. ಬುದ್ಧನನ್ನು ಅರ್ಥೈಸಿಕೊಳ್ಳಬೇಕು. ಹೊರಮುಖಿ ಗ್ರಹಿಕೆಯಿಂದ ಬುದ್ಧ ಹೇಳುವುದನ್ನು ಕೇಳಲು ಸಾಧ್ಯವೇ ಹೊರತು ಬುದ್ಧನನ್ನು ಗ್ರಹಿಸಲು ಸಾಧ್ಯವಿಲ್ಲ.

ಶಾಂತಿ ಪ್ರಜ್ಞೆ
ನಮ್ಮ ಲೌಕಿಕಾರ್ಥದಲ್ಲಿ ಶಾಂತಿಗೆ ನಾನಾರ್ಥ. ಅದು ಬಹಳಷ್ಟು ಬಾರಿ ಶಾಂತಿಯೂ ಚಡಪಡಿಕೆಗೆ ಕಾರಣವಾಗುತ್ತದೆ. ಗದ್ದಲರಹಿತ ಸ್ಥಿತಿಯಷ್ಟೆ ಶಾಂತಿಯೆಂದು ಅರ್ಥೈಸಿಕೊಳ್ಳುವ ಅಪಾಯಗಳೂ ಇವೆ. ಆದರೆ ಬುದ್ಧ `ಬದುಕಿದ’ (`ಬೋಧಿಸಿದ’ ಅಲ್ಲ) ಶಾಂತಿ ಇಂಥದ್ದಲ್ಲ. ಬುದ್ಧ ಗದ್ದಲ ರಹಿತ ಸ್ಥಿತಿಯನ್ನು ಬದುಕಲಿಲ್ಲ. ಆತನ ಶಾಂತಿ ಪರ್ವದಲ್ಲಿ ಚಡಪಡಿಕೆಯಿರಲಿಲ್ಲ. ಅದು ಯುದ್ಧದ ಪೂರ್ವ ತಯಾರಿಯಾಗಿರಲಿಲ್ಲ. ಅದು ಯಾವುದರ ಗೈರು ಹಾಜರಿ (ಆಬ್ಸೆನ್ಸ್) ಆಗಿರಲಿಲ್ಲ. ಬುದ್ಧನಲ್ಲಿ ಶಾಂತಿ ಸಹಜ ಸ್ಥಿತಿಯಾಗಿತ್ತು. ಅದು ಕದಡಲಾಗದ ಕೊಳದಂತೆ ಇತ್ತು.

ಬುದ್ಧನಿಗೆ ಇದು ಹೇಗೆ ಸಾಧ್ಯವಾಯಿತು? ಅಂಗುಲೀಮಾಲ ತಡೆದು ನಿಂತಾಗಲೂ, ಕಿಸಾಗೌತಮಿ ಬಂದು ಅತ್ತಾಗಲೂ ದಾಯಾದಿ ದೇವದತ್ತನ ವಿದ್ರೋಹಗಳ ನಡುವೆಯೂ ಬುದ್ಧ ಸುಮ್ಮನಿರುವುದು ಹೇಗೆ ಸಾಧ್ಯವಾಯಿತು? ಬುದ್ಧನ ಮೌನ ರಣಹೇಡಿತನದಿಂದ ಹುಟ್ಟಿಕೊಂಡಿದ್ದಲ್ಲ. ಅದು ಅಸಹಾಯಕತೆಯಾಗಿರಲಿಲ್ಲ. ಬುದ್ಧನ ಶಾಂತಿ ಪ್ರಜ್ಞೆಯಿಂದ ಹುಟ್ಟಿಕೊಂಡಿದ್ದು. ಪ್ರಜ್ಞಾಪೂರ್ವಕವಾಗಿ, ಸಾಕ್ಷೀಭಾವದಿಂದ ತನ್ನನ್ನೂ ಜಗತ್ತನ್ನೂ ನೋಡುವ ಸಾಧನೆಯಿಂದ ಹುಟ್ಟಿಕೊಂಡಿದ್ದು.

ಸಾರ್ವಕಾಲಿಕ ಮೌಲ್ಯ
ಬುದ್ಧ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ಬುದ್ಧ ಸಾರ್ವಕಾಲಿಕ ಸಂಗತಿ. ಬೌದ್ಧ `ಧರ್ಮ’ದಾಚೆಗೂ ಬುದ್ಧ ಚಾಚಿಕೊಂಡಿದ್ದಾನೆ. ಹೀನಯಾನ, ಮಹಾಯಾನ, ವಜ್ರಯಾನ, ಝೆನ್, ತಾವೋಗಳಷ್ಟೆ ಅಲ್ಲದೆ ವಿವಿಧ ಧರ್ಮಗಳ ತತ್ತ್ವಜ್ಞಾನದೊಳಗೂ ಬೌದ್ಧೀಯತೆ ಸೇರಿದೆ. ಆಧುನಿಕ `ಸ್ಪಿರಿಚುವಲ್ ಏಥಿಸ್ಟ್’ಗಳ ಪಾಲಿಗಂತೂ ಬುದ್ಧ ಅತ್ಯಂತ ಫೇವರಿಟ್.

ವಿವಿಧ ಚಳವಳಿಗಳು, ಸಾಮಾಜಿಕ ಚಿಂತನೆಗಳು, ನಡಾವಳಿಗಳಲ್ಲೂ ಬುದ್ಧ ತತ್ತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ, ಧಾರ್ಮಿಕ, ಸಾಮಾಜಿಕ, ರಾಜಕೀಯ ತಾಕಲಾಟಗಳನ್ನು ಮೀರುವ, ಅವುಗಳಿಂದ ಹೊರತಾಗುಳಿದು ಶುದ್ಧ ಮಾನವೀಯತೆಯೊಂದಿಗೆ ಬದುಕು ನಡೆಸಲು ಬಯಸುವವರಿಗೆ ಬುದ್ಧ ಸರ್ವೋತ್ಕೃಷ್ಟ ಐಕಾನ್ ಆಗಿದ್ದಾನೆ. ಸಮಾನತೆಯ ಮುದ್ರೆಯಾಗಿದ್ದಾನೆ ಬುದ್ಧ.

ಇಂದಿನ ಯುವ ಜನಾಂಗವೂ ಬುದ್ಧನನ್ನು ಬಗೆಗಣ್ಣಲ್ಲಿ ನೋಡುತ್ತಿದೆ. ಬುದ್ಧ ತತ್ತ್ವಗಳಿಗಿಂತ ಆತನ ಚಿತ್ರ, ಆತನ ಆಕಾರ ಹೊತ್ತ `ಮೆಟೀರಿಯಲ್’ಗಳ ಸೆಳೆತವೇ ಇಲ್ಲಿ ಸ್ಥಾನ ಪಡೆದಿದೆಯೆಂಬ ಚಿಕ್ಕ ಆತಂಕದ ನಡುವೆಯೂ ಬುದ್ಧನನ್ನು ಮೆಚ್ಚುವುದು ಈ ಸಂಘರ್ಷಗಳ ಕಾಲದಲ್ಲಿ ಒಂದು ಭರವಸೆಯ ಸೆಳಕಾಗಿ ತೋರುತ್ತದೆ. ಇಂದಿನ ಯುಗಧರ್ಮವಾದ `ಮೆಟೀರಿಯಲಿಸಮ್’ ಮೂಲಕವಾದರೂ ಬುದ್ಧನೆಡೆಗೆ ಪ್ರೇಮ ಬೆಳೆಯುವಂತಾಗಬಹುದು, ಬುದ್ಧನ ಹೊರಚಿತ್ರ ಮೂಡಿಸುವ ಆಸಕ್ತಿ ಆತನ ಒಳಹೊಕ್ಕು ನೋಡಲು ದಾರಿ ಮಾಡಿಕೊಡಬಹುದು ಎಂಬ ಭರವಸೆ ಮೂಡಿಸುತ್ತದೆ.

ಇಂದಿನ ತಲೆಮಾರು ಬಹುತೇಕವಾಗಿ ಆಚರಣೆಗಳು, ಸಾಂಕೇತಿಕತೆ ಹಾಗೂ ನಿರ್ದಿಷ್ಟ ದೇವತೆಗಳಿಂದ ಹೊರತಾದ ಧರ್ಮವನ್ನು ಬಯಸುತ್ತದೆ. ಭಾರತ ಮಾತ್ರವಲ್ಲದೆ ಇಡಿಯ ಜಗತ್ತು ನಿಧಾನಗತಿಯಲ್ಲಿ ಇಂಥದೊಂದು ಕ್ರಾಂತಿಗೆ ತೆರೆದುಕೊಳ್ಳುತ್ತಿದೆ ಮತ್ತು ಬುದ್ಧ ಇಂಥ `ಜೀವನ ಧರ್ಮ’ದ ದಾರಿಯಾಗಿ ಕಾಣಿಸುತ್ತಿದ್ದಾನೆ. ಇಲ್ಲಿ ಪೂರ್ವ – ಪಶ್ಚಿಮಗಳೆನ್ನುವ ಭೇದವಿಲ್ಲ. ಭಾರತದ ಬುದ್ಧ ಮತ್ತಷ್ಟು ಪೂರ್ವಕ್ಕೆ ಚಲಿಸಿ, ಅಲ್ಲಿಂದ ಪಶ್ಚಿಮವನ್ನೂ ಬೆಳಗುವ ಸೂರ್ಯನಾಗಿ ಮೂಡುತ್ತಿದ್ದಾನೆ.

ಈಗಿನ ಜನಾಂಗದ `ಅಬ್ಸೆಷನ್’ಗೆ ತಕ್ಕಂತೆ ಯೋಗ, ಝೆನ್, ಮೆಡಿಟೇಷನ್ – ಇವೆಲ್ಲಕ್ಕೆ ಬುದ್ಧ ಊರುಗೋಲಾಗಿದ್ದಾನೆ. ಸಾಂಪ್ರದಾಯಿಕವಾಗಿ ಯೋಚಿಸುವವರಿಗೆ ಇಲ್ಲೆಲ್ಲ ಬುದ್ಧ ದುರುಪಯೋಗವಾಗುತ್ತಿರುವಂತೆ ಕಾಣಬಹುದು. ಆದರೆ ಬುದ್ಧ ಸದ್ದಿಲ್ಲದೆ `ಶುಗರ್ ಕೋಟೆಡ್ ಪಿಲ್’ ಆಗಿ ಬಳಕೆಯಾಗುತ್ತಿದ್ದಾನೆ. ಇನ್ನೆರಡು ತಲೆಮಾರು ಕಾಯಬೇಕಾಗಿ ಬಂದರೂ ಸರಿ, ಬುದ್ಧನ ಪರಿಣಾಮ ಆಗುವುದೇ ಆದರೆ ಬುದ್ಧ ಚೌಕಟ್ಟಿನೀಚೆಗೆ ಬರುವುದರಲ್ಲಿ ತಪ್ಪೇನಿಲ್ಲ. ಅಲ್ಲವೆ?

Leave a Reply