ಕಾಮ ಕೇಂದ್ರಿತ ಪ್ರೀತಿ (Erotic Love ) : Art of love #22

ಲೈಂಗಿಕ ಬಯಕೆಯ ಗುರಿ ಒಂದಾಗುವುದು – ಒಂದಾಗುವುದೆಂದರೆ, ಕೇವಲ ದೈಹಿಕ ಹಸಿವೆಯನ್ನು ತೀರಿಸಿಕೊಳ್ಳುವುದಲ್ಲ, ಒಳಗಿನ ಒತ್ತಡದ ನೋವಿನಿಂದ ಬಿಡುಗಡೆ ಹೊಂದುವುದಲ್ಲ. ಆದರೆ ಲೈಂಗಿಕ ಬಯಕೆಗಳು ಪ್ರೀತಿಯಿಂದಷ್ಟೇ ಅಲ್ಲ, ಒಂಟಿತನದ ಆತಂಕದಿಂದ, ಸ್ವಾಧೀನಪಡಿಸಿಕೊಳ್ಳುವ ಹುಕಿಯಿಂದ, ಶರಣಾಗತಿಯ ಭಾವದಿಂದ, ಅಹಂ ಕಾರಣವಾಗಿ, ಘಾಸಿ ಮಾಡುವ, ನಾಶ ಮಾಡುವ ಉದ್ದೇಶದಿಂದಲೂ ಉದ್ದೀಪನಗೊಳ್ಳಬಹುದು. ಲೈಂಗಿಕ ಬಯಕೆ ಯಾವುದೇ ತೀವ್ರ ಭಾವನೆಯೊಂದಿಗೆ ಸುಲಭವಾಗಿ ಬೆರೆಯಬಲ್ಲದು ಮತ್ತು ಆ ಮೂಲಕ ಉದ್ದೀಪನೆಗೊಳ್ಳಬಹುದು, ಮತ್ತು ಪ್ರೀತಿ ಇಂಥ ತೀವ್ರ ಭಾವನೆಗಳಲ್ಲಿ ಕೇವಲ ಒಂದು ಮಾತ್ರ…| ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/05/15/love-36/

ಸೋದರ ಪ್ರೀತಿ, ಸಮಾನರ ನಡುವಿನ ಪ್ರೀತಿ; ತಾಯಿ ಪ್ರೀತಿ ಅಸಹಾಯಕರಿಗಾಗಿ ಇರುವ ಪ್ರೀತಿ. ಈ ಎರಡೂ ಪ್ರೀತಿಗಳು ಬೇರೆ ಬೇರೆ ರೀತಿಯವಾದರೂ, ಅವುಗಳ ನಡುವಿನ ಸಮಾನ ಅಂಶವೆಂದರೆ, ಈ ಎರಡೂ ಪ್ರೀತಿಗಳು ಒಬ್ಬ ವ್ಯಕ್ತಿಗೆ ಮಾತ್ರ ಮೀಸಲಾಗಿರದೇ ಇರುವುದು. ನಾನು ನನ್ನ ಸೋದರನನ್ನು ಪ್ರೀತಿಸುತ್ತೇನೆಂದರೆ, ನಾನು ನನ್ನ ಎಲ್ಲ ಸೋದರರನ್ನೂ ಪ್ರೀತಿಸುತ್ತೇನೆ; ನಾನು ನನ್ನ ಮಗುವನ್ನು ಪ್ರೀತಿಸುತ್ತೇನೆಂದರೆ, ನಾನು ನನ್ನ ಎಲ್ಲ ಮಕ್ಕಳನ್ನೂ ಪ್ರೀತಿಸುತ್ತೇನೆ; ಇಷ್ಟೇ ಅಲ್ಲ, ಇದನ್ನು ದಾಟಿ, ನಾನು, ನನ್ನ ಸಹಾಯದ ಅವಶ್ಯಕತೆ ಇರುವ ಎಲ್ಲ ಮಕ್ಕಳನ್ನೂ ಪ್ರೀತಿಸುತ್ತೇನೆ. ಈ ಎರಡೂ ರೀತಿಯ ಪ್ರೀತಿಗಳಿಗೆ ವ್ಯತಿರಿಕ್ತವಾಗಿ ಇರುವುದು ಕಾಮ ಕೇಂದ್ರಿತ ಪ್ರೀತಿ ; ಇದು ಸಂಪೂರ್ಣ ಒಂದಾಗುವಿಕೆಗಾಗಿಯ ಮನುಷ್ಯನ ತೀವ್ರ ಬಯಕೆ, ಇನ್ನೊಬ್ಬ ವ್ಯಕ್ತಿಯೊಡನೆಯ ಮಿಲನದ ತೀವ್ರ ಚಡಪಡಿಕೆ. ಕಾಮ ಕೇಂದ್ರಿತ ಪ್ರೀತಿ, ತನ್ನ ಸಹಜ ಸ್ವಭಾವದ ಕಾರಣವಾಗಿಯೇ ಎಲ್ಲರನ್ನೂ ಒಳಗೊಳ್ಳದ, ಸಾರ್ವತ್ರಿಕವಲ್ಲದ ಪ್ರೀತಿ. ಮತ್ತು ಈ ಕಾರಣವಾಗಿಯೇ, ಬಹುಶಃ ಇರುವ ಎಲ್ಲ ಬಗೆಯ ಪ್ರೀತಿಗಳಲ್ಲಿ ಅತೀ ಹೆಚ್ಚು ದಾರಿ ತಪ್ಪಿಸುವಂಥದು.

ಮೊದಲು ನಾವು ಕಾಮ ಕೇಂದ್ರಿತ ಪ್ರೀತಿಯನ್ನು , ಪ್ರೀತಿಯಲ್ಲಿ ‘ಬೀಳುವ‘ ಸ್ಫೋಟಕ ಅನುಭವದೊಂದಿಗೆ, ಇಬ್ಬರು ಅಪರಿಚಿತರ ನಡುವೆ ಅಲ್ಲಿಯವರೆಗೂ ಇದ್ದ ಗಡಿಗಳು ಅಚಾನಕ್ ಆಗಿ ಮಾಯವಾಗುವ ರೋಮಾಂಚಕ ಅನುಭವದೊಂದಿಗೆ ಸಮೀಕರಿಸಿ ಗೊಂದಲ ಮಾಡಿಕೊಳ್ಳುತ್ತೇವೆ. ಆದರೆ ಈ ಹಿಂದೆ ಚರ್ಚೆ ಮಾಡಿದಂತೆ, ಥಟ್ಟನೇ ರೂಪಗೊಳ್ಳುವ ಸಲಿಗೆ, ಆತ್ಮೀಯತೆ (intimacy ) ತನ್ನ ಮೂಲ ಸ್ವಭಾವದ ಕಾರಣವಾಗಿ ಬಹುಕಾಲ ಬಾಳುವಂಥದ್ದಲ್ಲ. ಅಪರಿಚಿತ ಮನುಷ್ಯ ತುಂಬ ಆತ್ಮೀಯನಾದ ನಂತರ, ಅವರ ನಡುವೆ ದಾಟಬೇಕಾದ ಯಾವ ಗಡಿಗಳೂ ಇರುವುದಿಲ್ಲ , ಥಟ್ಟನೇ ಹತ್ತಿರವಾಗುವ ಅನುಭವವನ್ನು ಸಾಧಿಸುವ ಬೇರೆ ಯಾವ ಅವಕಾಶವೂ ಇರುವುದಿಲ್ಲ. ಆಗ ‘ಪ್ರೀತಿಸಲ್ಪಡುವ’ ಮನುಷ್ಯ ನನಗೆ ನನ್ನಷ್ಟೇ ಪರಿಚಿತ ವ್ಯಕ್ತಿಯಾಗಿ ಬದಲಾವಣೆ ಹೊಂದುತ್ತಾನೆ. ಅಥವಾ ನಿಜವಾಗಿ ಹೇಳುವುದಾದರೆ, ನನ್ನ ಬಗ್ಗೆ ನನಗೆ ಎಷ್ಟು ಕಡಿಮೆ ಗೊತ್ತಿದೆಯೋ, ಅವನು ನನಗೆ ಅಷ್ಟೇ ಕಡಿಮೆ ಪರಿಚಿತನಾಗುತ್ತಾನೆ. ಇನ್ನೊಬ್ಬ ಮನುಷ್ಯನೊಂದಿನ ನಮ್ಮ ಅನುಭವಕ್ಕೆ ಇನ್ನೂ ಹೆಚ್ಚು ಆಳ ಸಾಧ್ಯವಾಗಿದ್ದರೆ, ಇನ್ನೊಬ್ಬ ಮನುಷ್ಯನ ವ್ಯಕ್ತಿತ್ವದ ಅಪರಿಮಿತತೆಯನ್ನು ಅನುಭವಿಸುವುದು ನಮಗೆ ಸಾಧ್ಯವಾಗಿದ್ದರೆ, ಆ ಇನ್ನೊಬ್ಬ ಮನುಷ್ಯ ನಮಗೆ ಯಾವತ್ತೂ ಅಷ್ಟು ಪೂರ್ತಿಯಾಗಿ ಪರಿಚಿತನಾಗುವುದಿಲ್ಲ, ಮತ್ತು ನಡುವಿನ ಗಡಿಗಳನ್ನು ದಾಟುವ ಪವಾಡ ನಮಗೆ ಪ್ರತಿನಿತ್ಯ ಹೊಸದಾಗಿ ಸಾಧ್ಯವಾಗುತ್ತಿತ್ತು. ಆದರೆ ಬಹುತೇಕ ಜನರಿಗೆ, ಸ್ವಂತದ ಬಗ್ಗೆಯಾಗಲಿ ಅಥವಾ ಇನ್ನೊಬ್ಬರ ಬಗ್ಗೆಯಾಗಲಿ ಎಷ್ಟು ಬೇಗ ಎಲ್ಲವೂ ತಿಳಿದುಹೋಗುತ್ತದೆಯೋ ಅಷ್ಟೇ ಬೇಗ ಅವರ ಬಗ್ಗೆ ಆಸಕ್ತಿಯೂ ತೀರಿ ಹೋಗುತ್ತದೆ. ಅವರಿಗೆ ಇನ್ನೊಬ್ಬರ ಜೊತೆಗೆ ಸಲಿಗೆ, ಆತ್ಮೀಯತೆ ಸಾಧ್ಯವಾಗುವುದು ಪ್ರಾಥಮಿಕವಾಗಿ ಲೈಂಗಿಕ ಸಂಪರ್ಕದ ಮೂಲಕ. ಅವರು ಇನ್ನೊಬ್ಬರೊಂದಿಗಿನ ತಮ್ಮ ಪ್ರತ್ಯೇಕತೆಯನ್ನ ಮೂಲಭೂತವಾಗಿ ದೈಹಿಕ ಪ್ರತ್ಯೇಕತೆಯ ಜೊತೆ ಸಮೀಕರಿಸಿ ನೋಡುವುದರಿಂದ, ದೇಹಗಳ ಮಿಲನದಲ್ಲಿ ಅವರು ತಮ್ಮ ಪ್ರತ್ಯೇಕತೆಯ ಭಾವವನ್ನು ಮೀರುವ ದಾರಿಯನ್ನ ಗುರುತಿಸಿಕೊಳ್ಳುತ್ತಾರೆ.

ಇದರ ಆಚೆಗೂ, ಬಹಳಷ್ಟು ಜನರು ಇನ್ನೂ ಹತ್ತು ಹಲವು ಅಂಶಗಳಲ್ಲಿ ತಮ್ಮ ಪ್ರತ್ಯೇಕತೆಯನ್ನ ಮೀರಲು ಸಾಧ್ಯವಾಗುವ ಕಾರಣಗಳನ್ನು ಗುರುತಿಸುತ್ತಾರೆ ; ತಮ್ಮ ಜೊತೆಗಾರರೊಂದಿಗೆ ವೈಯಕ್ತಿಕ ಬದುಕಿನ ವಿವರಗಳನ್ನು ಹಂಚಿಕೊಳ್ಳುವ ಮೂಲಕ, ತಮ್ಮ ಆತಂಕಗಳನ್ನ, ಬಯಕೆಗಳನ್ನ, ಭರವಸೆಗಳನ್ನ ಹೇಳಿಕೊಳ್ಳುವ ಮೂಲಕ, ಮಗುವಿನ ಹಾಗೆ ಅವರನ್ನು ಮುಟ್ಟುವ, ಮುಖಭಾವಗಳನ್ನ ಪ್ರದರ್ಶಿಸುವ ಮೂಲಕ, ಜಗತ್ತಿನೊಡನೆಯ ತಮ್ಮಿಬ್ಬರ ಕಾಮನ್ ಆದ ಆಸಕ್ತಿಗಳನ್ನು ಹೇಳಿಕೊಳ್ಳುವುದರ ಮೂಲಕ ತಮ್ಮ ಸೆಪರೇಟನೆಸ್ ಮೀರಬಹುದೆಂದು ತಿಳಿದುಕೊಂಡಿರುತ್ತಾರೆ. ಸಿಟ್ಟನ್ನ ತೋರಿಸುವುದು, ದ್ವೇಷವನ್ನ ಹಂಚಿಕೊಳ್ಳುವುದು, ಯಾವ ಮುಜುಗರವೂ ಇಲ್ಲದಂತೆ ವರ್ತಿಸುವುದು, ಈ ಎಲ್ಲವನ್ನೂ ಸಲಿಗೆ, ಆತ್ಮೀಯತೆಯ (intimacy) ಹೆಸರಲ್ಲಿ ನೋಡಲಾಗುತ್ತದೆ. ಮನುಷ್ಯನ ಈ ವರ್ತನೆ, ಮದುವೆಯಾದ ಜೋಡಿಗಳು ಹಾಸಿಗೆಯಲ್ಲಿ ಮಾತ್ರ ಅಥವಾ ಇಬ್ಬರೂ ತೀವ್ರವಾಗಿ ಪರಸ್ಪರರ ಮೇಲಿನ ದ್ವೇಷ ಕಾರಿಕೊಂಡಾಗ ಮಾತ್ರ ಆತ್ಮೀಯತೆ ಅನುಭವಿಸುವ ವಿಕೃತ ಆಕರ್ಷಣೆಗೆ ಕಾರಣಗಳನ್ನು ವಿವರಿಸುತ್ತದೆ. ಆದರೆ ಕಾಲಕಳೆದಂತೆ ಆತ್ಮೀಯತೆಯ ಹೆಸರಿನ ಈ ಬಗೆಯ ಎಲ್ಲವೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತ ಹೋಗುತ್ತವೆ. ಇದರ ಪರಿಣಾಮವೆಂದರೆ ಮನುಷ್ಯ ಪ್ರೀತಿಯನ್ನ ಇನ್ನೊಬ್ಬರಲ್ಲಿ, ಇನ್ನೊಬ್ಬ ಅಪರಿಚಿತರಲ್ಲಿ ಹುಡುಕಲು ಶುರು ಮಾಡುತ್ತಾನೆ. ಮತ್ತೇ ಆ ಅಪರಿಚಿತ ವ್ಯಕ್ತಿ “ಆತ್ಮೀಯ” ಎಂದು ಬದಲಾವಣೆ ಹೊಂದಿದಾಗ, ಮತ್ತೆ ಪ್ರೀತಿಯಲ್ಲಿ “ಬೀಳುವ” ತೀವ್ರ ರೋಮಾಂಚಕ ಅನುಭವವನ್ನು ಅನುಭವಿಸುತ್ತಾನೆ. ನಿಧಾನವಾಗಿ ಮತ್ತೆ ಈ ಅನುಭವ ತನ್ನ ತೀವ್ರತೆಯನ್ನು ಕಳೆದುಕೊಂಡಾಗ ಮನುಷ್ಯ ಮತ್ತೆ ಹೊಸ ಪ್ರೀತಿಯ ಹುಡುಕಾಟದಲ್ಲಿ, ಈ ಹೊಸ ಪ್ರೀತಿ ತನ್ನ ಹಿಂದಿನ ಎಲ್ಲ ಪ್ರೀತಿಗಳಿಗಿಂತ ವಿಭಿನ್ನ ಎನ್ನುವ ಭ್ರಮೆಯಲ್ಲಿ ಮತ್ತೆ ಮತ್ತೆ ಅದೇ ತಪ್ಪು ದಾರಿಯಲ್ಲಿ ಮುಂದುವರೆಯುತ್ತಾನೆ. ಮನುಷ್ಯನ ಈ ಭ್ರಮೆಗಳಿಗೆ ಹೆಚ್ಚು ಶಕ್ತಿ ತುಂಬುವುದು ಅವನ ತೀವ್ರ ಲೈಂಗಿಕ ಬಯಕೆಯ ದಾರಿ ತಪ್ಪಿಸುವ ಸ್ವಭಾವ.

ಲೈಂಗಿಕ ಬಯಕೆಯ ಗುರಿ ಒಂದಾಗುವುದು – ಒಂದಾಗುವುದೆಂದರೆ, ಕೇವಲ ದೈಹಿಕ ಹಸಿವೆಯನ್ನು ತೀರಿಸಿಕೊಳ್ಳುವುದಲ್ಲ, ಒಳಗಿನ ಒತ್ತಡದ ನೋವಿನಿಂದ ಬಿಡುಗಡೆ ಹೊಂದುವುದಲ್ಲ. ಆದರೆ ಲೈಂಗಿಕ ಬಯಕೆಗಳು ಪ್ರೀತಿಯಿಂದಷ್ಟೇ ಅಲ್ಲ, ಒಂಟಿತನದ ಆತಂಕದಿಂದ, ಸ್ವಾಧೀನಪಡಿಸಿಕೊಳ್ಳುವ ಹುಕಿಯಿಂದ, ಶರಣಾಗತಿಯ ಭಾವದಿಂದ, ಅಹಂ ಕಾರಣವಾಗಿ, ಘಾಸಿ ಮಾಡುವ, ನಾಶ ಮಾಡುವ ಉದ್ದೇಶದಿಂದಲೂ ಉದ್ದೀಪನಗೊಳ್ಳಬಹುದು. ಲೈಂಗಿಕ ಬಯಕೆ ಯಾವುದೇ ತೀವ್ರ ಭಾವನೆಯೊಂದಿಗೆ ಸುಲಭವಾಗಿ ಬೆರೆಯಬಲ್ಲದು ಮತ್ತು ಆ ಮೂಲಕ ಉದ್ದೀಪನೆಗೊಳ್ಳಬಹುದು, ಮತ್ತು ಪ್ರೀತಿ ಇಂಥ ತೀವ್ರ ಭಾವನೆಗಳಲ್ಲಿ ಕೇವಲ ಒಂದು ಮಾತ್ರ. ಪ್ರೀತಿಯ ಪರಿಕಲ್ಪನೆಯೊಂದಿಗೆ ಜೊತೆಯಾಗಿರುವ ಬಹುತೇಕ ಜೋಡಿಯ ಮನಸ್ಸಿನಲ್ಲಿ ಲೈಂಗಿಕ ಭಾವನೆಗಳು ಇರುವುದರಿಂದ , ಬಹುತೇಕ ತಾವು ಪ್ರೀತಿಸುವುದು ಪರಸ್ಪರರಿಗೆ ದೈಹಿಕ ಅವಶ್ಯಕತೆ ಇರುವಾಗ ಮಾತ್ರ ಎಂದು ಅವರು ತಪ್ಪು ತಿಳಿಯುತ್ತಾರೆ.

ಪ್ರೀತಿ, ಲೈಂಗಿಕ ಒಂದಾಗುವಿಕೆಯ ಬಯಕೆಗೆ ಪ್ರೇರಣೆಯಾಗಬಲ್ಲದು ; ಇಂಥ ಸಂದರ್ಭದ ದೈಹಿಕ ಸಂಬಂಧದಲ್ಲಿ ಯಾವುದೇ ಅಸೂಯೆ ಇಲ್ಲ, ಸ್ವಾಧೀನಪಡಿಸಿಕೊಳ್ಳುವ, ಶರಣಾಗುವ ತಹತಹವಿಲ್ಲ, ಒಂದಾಗಿ ಬೆರೆತುಕೊಂಡಿದೆ ಪ್ರೀತಿ ಮಾರ್ದವತೆಯಲ್ಲಿ. ದೈಹಿಕವಾಗಿ ಒಂದಾಗುವಿಕೆಯ ಲೈಂಗಿಕ ಬಯಕೆಗೆ, ಪ್ರೀತಿ ಪ್ರೇರಣೆಯಾಗದ ಸ್ಥಿತಿಯಲ್ಲಿ, ಕಾಮ ಕೇಂದ್ರಿತ ಪ್ರೀತಿ ಸೋದರ ಪ್ರೀತಿಯೂ ಆಗದಿರುವ ಪಕ್ಷದಲ್ಲಿ, ಅಂಥ ಒಂದಾಗುವಿಕೆ ಯಾವತ್ತೂ ವಿಷಯಲಂಪಟತೆಗಿಂತ ಹಾಗು ತಾತ್ಕಾಲಿಕ ಲೈಂಗಿಕ ಸಂಬಂಧಕ್ಕಿಂತ ಹೆಚ್ಚಿನದನ್ನೇನೂ ಸಾಧಿಸುವುದಿಲ್ಲ.

ಲೈಂಗಿಕ ಆಕರ್ಷಣೆ ತಾತ್ಕಾಲಿಕವಾಗಿ ಒಂದಾಗುವಿಕೆಯ ಭ್ರಮೆಯನ್ನು ಸೃಷ್ಟಿ ಮಾಡುತ್ತದೆ, ಆದರೆ ಪ್ರೀತಿ ಹೊರತಾದ ಇಂಥ ‘ಒಂದಾಗುವಿಕೆ’ , ಅವರಿಬ್ಬರನ್ನೂ ಮೊದಲಿನಷ್ಟೇ ಅಪರಿಚಿತರನ್ನಾಗಿ ಉಳಿಸುತ್ತದೆ, ಕೆಲವೊಮ್ಮೆ ಅವರಿಬ್ಬರಲ್ಲಿಯೂ ಪರಸ್ಪರರ ಬಗ್ಗೆ ನಾಚಿಕೆ ಹುಟ್ಟಿಸುತ್ತದೆ, ಅಥವಾ ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತದೆ. ಇದಕ್ಕೆಲ್ಲ ಕಾರಣ, ಭ್ರಮೆ ಕಳಚಿದ ನಂತರ ಹೆಚ್ಚಿರುವ ಅವರ ನಡುವಿನ ವೈಮನಸ್ಸು ಮೊದಲಿಗಿಂತಲೂ ಹೆಚ್ಚು ದಟ್ಟವಾಗಿರುವುದು. ಫ್ರಾಯ್ಡ್ ನ ನಂಬಿಕೆಯಂತೆ ಇಬ್ಬರು ವ್ಯಕ್ತಿಗಳ ನಡುವಿನ ಮಾರ್ದವತೆ (tenderness) ಅವರ ಲೈಂಗಿಕ ಪ್ರವೃತ್ತಿಯ (sexual instinct) ಉದಾತ್ತೀಕರಣವಲ್ಲ ; ಅದು ಸೋದರ ಪ್ರೀತಿ ಉಂಟು ಮಾಡಿರುವ ನೇರ ಪರಿಣಾಮ, ಮತ್ತು ಈ ಮಾರ್ದವತೆ, ದೈಹಿಕ ಮತ್ತು ದೈಹಿಕ ಅಲ್ಲದಂಥ ಎರಡೂ ಬಗೆಯ ಪ್ರೀತಿಗಳಲ್ಲೂ ಇರುವಂಥದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply