ಕಾಮ ಕೇಂದ್ರಿತ ಪ್ರೀತಿ (ಭಾಗ 2) : Art of love #23

“ಲೈಂಗಿಕ ಆಕರ್ಷಣೆ ತಾತ್ಕಾಲಿಕವಾಗಿ ಒಂದಾಗುವಿಕೆಯ ಭ್ರಮೆಯನ್ನು ಸೃಷ್ಟಿ ಮಾಡುತ್ತದೆ, ಆದರೆ ಪ್ರೀತಿ ಹೊರತಾದ ಇಂಥ ‘ಒಂದಾಗುವಿಕೆ’ , ಅವರಿಬ್ಬರನ್ನೂ ಮೊದಲಿನಷ್ಟೇ ಅಪರಿಚಿತರನ್ನಾಗಿ ಉಳಿಸುತ್ತದೆ, ಕೆಲವೊಮ್ಮೆ ಅವರಿಬ್ಬರಲ್ಲಿಯೂ ಪರಸ್ಪರರ ಬಗ್ಗೆ ನಾಚಿಕೆ ಹುಟ್ಟಿಸುತ್ತದೆ, ಅಥವಾ ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತದೆ. ಇದಕ್ಕೆಲ್ಲ ಕಾರಣ, ಭ್ರಮೆ ಕಳಚಿದ ನಂತರ ಹೆಚ್ಚಿರುವ ಅವರ ನಡುವಿನ ವೈಮನಸ್ಸು ಮೊದಲಿಗಿಂತಲೂ ಹೆಚ್ಚು ದಟ್ಟವಾಗಿರುವುದು” ಅನ್ನುತ್ತಾರೆ ಎರಿಕ್ ಫ್ರಾಮ್. ಮುಂದೆ ಓದಿ… । ಕನ್ನಡಕ್ಕೆ: ಚಿದಂಬರ ನರೇಂದ್ರ 

ಹಿಂದಿನ ಭಾಗ –  ಈ ಕೊಂಡಿಯಲ್ಲಿ ಓದಿ…….

ಕಾಮ ಕೇಂದ್ರಿತ ಪ್ರೀತಿಯಲ್ಲಿ, ಸೋದರ ಪ್ರೀತಿ ಮತ್ತು ತಾಯಿ ಪ್ರೀತಿಯಲ್ಲಿಲ್ಲದ ಒಂದು ಪ್ರತ್ಯೇಕಿಸುವ (exclusiveness) ಅಂಶವಿದೆ. ಕಾಮ ಕೇಂದ್ರಿತ ಪ್ರೀತಿಯ ಈ ಪ್ರತ್ಯೇಕಿಸುವ ಸ್ವಭಾವ ಇನ್ನಷ್ಟು ಚರ್ಚೆಯನ್ನು ಅಪೇಕ್ಷಿಸುತ್ತದೆ. ಇರಾಟಿಕ್ ಲವ್ ನ ಈ ಎಕ್ಸಕ್ಲೂಸಿವನೆಸ್ ನ ಬಹಳಷ್ಟು ಸಲ, ಇನ್ನೊಬ್ಬರನ್ನು ತನ್ನ ಸ್ವತ್ತು ಎಂದು ಭಾವಿಸುವ ಅತೀ ಪ್ರೀತಿ (possessiveness) ಗೆ ಸಮೀಕರಿಸಿ ತಪ್ಪು ಮಾಡಲಾಗುತ್ತದೆ. ಬೇರೆ ಯಾರನ್ನೂ ಪ್ರೀತಿಸದ ಆದರೆ ಪರಸ್ಪರರನ್ನು ಗಾಢವಾಗಿ ಪ್ರೀತಿಸುತ್ತಿರುವ ಇಬ್ಬರನ್ನ ನಾವು ಅಲ್ಲಲ್ಲಿ ನೋಡುತ್ತೇವೆ. ಈ ಪ್ರೀತಿ ಇವರಿಬ್ಬರ ವಿಸ್ತ್ರತ ಅಹಂ ಅಷ್ಟೇ; ಈ ಇಬ್ಬರು ಪರಸ್ಪರರಲ್ಲಿ ತಮ್ಮನ್ನ ಗುರುತಿಸಿಕೊಳ್ಳುತ್ತಾರೆ, ಮತ್ತು ತಮ್ಮ ಒಂದು ವ್ಯಕ್ತಿತ್ವವನ್ನ ತಮ್ಮ ಜೊತೆಯವರ ಇನ್ನೊಂದು ವ್ಯಕ್ತಿತ್ವದ ವರೆಗೆ ಮಾತ್ರ ವಿಸ್ತಾರ ಮಾಡಿಕೊಂಡು, ತಮ್ಮ ಪ್ರತ್ಯೇಕತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತಾರೆ. ಆಗ ಅವರಿಗೆ ತಮ್ಮ ಒಂಟಿತನವನ್ನು ಮೀರುವ ಅನುಭವ ಆಗುತ್ತದೆಯೇನೋ ಹೌದು, ಆದರೆ ಅವರು ಸುತ್ತಲಿನ ಬೇರೆಲ್ಲ ಮನುಷ್ಯ ಜಾತಿಯಿಂದ ಬೇರೆಯಾಗಿಯೇ ಉಳಿಯುವ ಕಾರಣದಿಂದ, ಅವರು ತಮ್ಮ ಜೊತೆಗಾರರಿಂದಲೂ ಪರಸ್ಪರ ಪ್ರತ್ಯೇಕವಾಗಿಯೇ ಉಳಿಯುತ್ತಾರೆ ಮತ್ತು ತಮಗೆ ತಾವೇ ಅನ್ಯರಾಗಿಬಿಡುತ್ತಾರೆ. ಒಂದಾಗುವಿಕೆಯ ಇವರ ಅನುಭವ ಕೇವಲ ಒಂದು ಭ್ರಮೆಯಾಗಿ ಉಳಿದುಬಿಡುತ್ತದೆ.

ಕಾಮ ಕೇಂದ್ರಿತ ಪ್ರೀತಿ, ಪ್ರತ್ಯೇಕತೆಯ ಅಂಶವನ್ನು ಹೊಂದಿದ್ದರೂ, ಅದು ತನ್ನ ಜೊತೆಗಾರನ (ಜೊತೆಗಾತಿಯ) ಪ್ರೀತಿಯಲ್ಲಿ ಇಡೀ ಮನುಷ್ಯ ಜನಾಂಗವನ್ನೂ, ಜೀವಂತಿಕೆ ಇರುವ ಎಲ್ಲವನ್ನೂ ತನ್ನ ಪ್ರೀತಿಯ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಕಾಮ ಕೇಂದ್ರಿತ ಪ್ರೀತಿಯ ಪ್ರತ್ಯೇಕತೆ (exclusiveness) ಇರುವುದು, ನಾನು ಒಬ್ಬರೊಡನೆ ಮಾತ್ರ ಪೂರ್ಣವಾಗಿ, ತೀವ್ರವಾಗಿ ಒಂದಾಗಬಲ್ಲೆ ಎನ್ನುವ ತಿಳುವಳಿಕೆಯಲ್ಲಿ ಮಾತ್ರ. ಕಾಮ ಕೇಂದ್ರಿತ ಪ್ರೀತಿ ತನ್ನ ಜೊತೆಯ ವ್ಯಕ್ತಿಯನ್ನು ಬಿಟ್ಟು ಬೇರೆಲ್ಲರನ್ನೂ ಪ್ರತ್ಯೇಕಮಾಡಿ ನೋಡುತ್ತದೆಯೆನ್ನುವುದರ ಅರ್ಥ, ಕೇವಲ ಒಬ್ಬರೊಡನೆ ಮಾತ್ರ ಕಾಮಕೇಂದ್ರಿತ ಒಂದಾಗುವಿಕೆ (erotic fusion) ಮತ್ತು ಬದುಕಿನ ಎಲ್ಲ ಅಂಶಗಳ ಕುರಿತು ಪೂರ್ಣ ಬದ್ಧತೆ ಸಾಧ್ಯ ಎನ್ನುವುದೇ ಹೊರತು, ಇತರರ ಕುರಿತಾದ ಆಳ ಸೋದರ ಪ್ರೀತಿ ಸಾಧ್ಯವಿಲ್ಲ ಎನ್ನುವುದಲ್ಲ.

ಕಾಮ ಕೇಂದ್ರಿತ ಪ್ರೀತಿ, ಅದು ಪ್ರೀತಿಯಾಗಿದ್ದ ಪಕ್ಷದಲ್ಲಿ, ಅದಕ್ಕೆ ಒಂದು ಆಧಾರವಿದೆ. ಈ ಆಧಾರವೆಂದರೆ, ನಾನು ನನ್ನ ಅಸ್ತಿತ್ವದ ತಿರುಳಿನ (essence of my being ) ಮೂಲಕ ಇನ್ನೊಬ್ಬರನ್ನ ಪ್ರೀತಿಸುತ್ತೇನೆ, ಮತ್ತು ಇನ್ನೊಬ್ಬರನ್ನು ಅವನ ಅಥವಾ ಅವಳ ಅಸ್ತಿತ್ವ ತಿರುಳಿನ ಮೂಲಕ ಅನುಭವಿಸುತ್ತೇನೆ ಎನ್ನುವುದು. ಮೂಲ ತಿರುಳಿನ (essence) ವಿಷಯದಲ್ಲಿ ಎಲ್ಲ ಮನುಷ್ಯರೂ ಒಂದೇ. ನಾವೆಲ್ಲರೂ ಒಂದು, ಒಂದೇ ಸಮಗ್ರದ ಬೇರೆ ಬೇರೆ ಭಾಗಗಳು. ಹೀಗಿರುವಾಗ, ನಾವು ಯಾರನ್ನು ಪ್ರೀತಿಸುತ್ತೇವೆ ಎನ್ನುವುದು ಅಂಥ ವ್ಯತ್ಯಾಸವನ್ನೇನೂ ಹುಟ್ಟುಹಾಕಬಾರದು. ಪ್ರೀತಿ ಎನ್ನುವುದು ಮೂಲಭೂತವಾಗಿ ಒಂದು ಇಚ್ಛೆಯನ್ನು ಆಧರಿಸಿದ ಕ್ರಿಯೆ, ನಮ್ಮ ಬದುಕನ್ನ ಪೂರ್ಣವಾಗಿ ಇನ್ನೊಬ್ಬರ ಬದುಕಿನ ಜೊತೆ ಬದ್ಧಗೊಳಿಸುವ ನಿರ್ಧಾರ. ಮದುವೆ ಒಂದು ಬೆರೆಯದ ಸ್ಥಿತಿಯಾಗಿ ಚಾಲ್ತಿಯಲ್ಲಿರುವುದರ ಹಿಂದಿನ ತಾರ್ಕಿಕ ವಿವರಣೆಯೇ ಇದು. ಎಷ್ಟೋ ಬಗೆಯ ಸಾಂಪ್ರದಾಯಿಕ ಮದುವೆಗಳಲ್ಲಿ ಜೊತೆಯಾಗುತ್ತಿರುವ ಇಬ್ಬರು, ಪರಸ್ಪರರನ್ನು ಆಯ್ಕೆ ಮಾಡಿಕೊಂಡಿರುವುದೇ ಇಲ್ಲ, ಬೇರೊಬ್ಬರು ನಿರ್ಧರಿಸಿರುತ್ತಾರೆ. ಆದರೂ ಅವರು ಒಬ್ಬರನ್ನೊಬ್ಬರು ಪ್ರೀತಿಸಲೇಬೇಕಾದ ಅನಿವಾರ್ಯತೆಯಲ್ಲಿರುತ್ತಾರೆ. ಸಮಕಾಲೀನ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಈ ಬಗೆಯ ಸಂಬಂಧದಿಂದ ಪ್ರೀತಿ ಸಾಧ್ಯ ಎನ್ನುವ ತಿಳುವಳಿಕೆ ಪೂರ್ತಿ ಸುಳ್ಳು ಎನ್ನುವಂತೆ ತೋರುತ್ತದೆ. ಇಲ್ಲಿ ಪ್ರೀತಿಯೆಂದರೆ ಭಾವನೆಗಳ ಸ್ವಾಭಾವಿಕ ಹೊರಹೊಮ್ಮುವಿಕೆ, ಭಾವನಾತ್ಮಕ ಪ್ರತಿಕ್ರಿಯೆ, ಸಹಿಸಲಸಾಧ್ಯವಾದ ಅನುಭವವೊಂದರಲ್ಲಿ ಹಟಾತ್ ನೇ ಸಿಕ್ಕಿಹಾಕಿಕೊಳ್ಳುವುದು. ಈ ದೃಷ್ಟಿಯಲ್ಲಿ, ಪ್ರೀತಿಯೊಳಗೆ ಭಾಗವಹಿಸುವ ವ್ಯಕ್ತಿಗಳ ವೈಶಿಷ್ಟ್ಯಗಳನ್ನು ಮಾತ್ರ ಗಮನಿಸಲಾಗುತ್ತದೆಯೇ ಹೊರತು ಎಲ್ಲ ಗಂಡುಗಳೂ ಆ್ಯಡಂನ ಭಾಗ, ಎಲ್ಲ ಹೆಣ್ಣುಗಳೂ ಈವ್ ಗೆ ಸೇರಿದವರು ಎನ್ನುವ ಸಂಗತಿಯನ್ನು ಮರೆಮಾಚಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ಕಾಮ ಕೇಂದ್ರಿತ ಪ್ರೀತಿಯ ಬಹುಮುಖ್ಯ ಅಂಶವಾದ “ ಇಚ್ಛೆ “ ಯನ್ನು ಕಡೆಗಣಿಸಲಾಗಿದೆ. ಒಬ್ಬರನ್ನು ಪ್ರೀತಿಸುವುದೆಂದರೆ, ಅದು ಕೇವಲ ಗಾಢ ಭಾವನೆಗಳನ್ನು ಹೊಂದುವುದಲ್ಲ – ಒಬ್ಬರನ್ನು ಸದಾಕಾಲ ಪ್ರೀತಿಸುತ್ತಲೇ ಇರುತ್ತೇವೆ ಎನ್ನುವ ಒಂದು ನಿರ್ಧಾರ, ಒಂದು ನಿರ್ಣಯ, ಒಂದು ಪ್ರಾಮಿಸ್. ಗಾಢ ಭಾವನೆಗಳು ಇಂದು ಇರಬಹುದು ನಾಳೆ ಇರದೇ ಇರಬಹುದು. ನನ್ನ ಪ್ರೀತಿ, ನಿರ್ಣಯ ಮತ್ತು ನಿರ್ಧಾರಗಳನ್ನು ಒಳಗೊಳ್ಳದೇ ಹೋದರೆ ಭಾವನೆಗಳು ಸದಾಕಾಲ ಇರುತ್ತವೆ ಎನ್ನುವುದನ್ನ ಖಚಿತವಾಗಿ ಹೇಳುವುದು ಹೇಗೆ ?

ಈ ಎಲ್ಲ ದೃಷ್ಟಿಕೋನಗಳನ್ನು ಪರಿಗಣಿಸಿ, ಒಬ್ಬರು ತೆಗೆದುಕೊಳ್ಳಬಹುದಾದ ಪೋಸಿಷನ್ ಎಂದರೆ, ಪ್ರೀತಿ ಎನ್ನುವುದು ಇಚ್ಛೆ ಮತ್ತು ಬದ್ಧತೆಗಳನ್ನು ಒಳಗೊಂಡ ಕ್ರಿಯೆ, ಹಾಗು ಮೂಲಭೂತವಾಗಿ ಯಾರು ಪ್ರೀತಿಸುವ ಆ ಇಬ್ಬರು ವ್ಯಕ್ತಿಗಳು ಎನ್ನುವುದು ಅಷ್ಟು ಮುಖ್ಯವಾಗುವುದಿಲ್ಲ. ಮದುವೆಯನ್ನ ನಿರ್ಧರಿಸಿದವರು ಬೇರೆಯವರೋ ಅಥವಾ ಆ ವ್ಯಕ್ತಿಗಳೇ ತಮ್ಮ ವೈಯಕ್ತಿಕ ಆಯ್ಕೆಯ ಕಾರಣವಾಗಿ ಮದುವೆಗೆ ಒಪ್ಪಿಕೊಂಡಿದ್ದಾರೋ, ಒಮ್ಮೆ ಮದುವೆ ಆಯಿತೆಂದರೆ, ವ್ಯಕ್ತಿಗಳಲ್ಲಿ “ಇಚ್ಛೆ” ಎನ್ನುವುದೊಂದಿದ್ದರೆ ಅದು ಪ್ರೀತಿಯ ಮುಂದುವರಿಕೆಯನ್ನ ಖಚಿತಪಡಿಸಬೇಕು. ಈ ದೃಷ್ಟಿಕೋನ ಮನುಷ್ಯ ಸ್ವಭಾವದ ಮತ್ತು ಕಾಮ ಕೇಂದ್ರಿತ ಪ್ರೀತಿಯ ದ್ವಂದ್ವಾತ್ಮಕ ಅಂಶವನ್ನ ಕಡೆಗಣಿಸುತ್ತದೆ. ನಾವೆಲ್ಲರೂ ಒಂದು, ಆದರೂ ಪ್ರತಿಯೊಬ್ಬರೂ ಅನನ್ಯರು (unique), ಅ’ಪ್ರತಿ’ಮರು (unduplicable). ಇನ್ನೊಬ್ಬರ ಜೊತೆಗಿನ ನಮ್ಮ ಸಂಬಂದದಲ್ಲಿ ಇದೇ ದ್ವಂದ್ವ ಮರುಕಳಿಸುತ್ತದೆ. ನಾವೆಲ್ಲ ‘ಒಂದು’ ಆಗಿರುವ ಕಾರಣಕ್ಕೆ, ನಾವು ಎಲ್ಲರನ್ನೂ ಸೋದರ ಪ್ರೀತಿಯ ಭಾವದಲ್ಲಿ ಪ್ರೀತಿಸಬಹುದು. ಆದರೆ ‘ಒಂದು’ ಆಗಿರುವ ಜೊತೆಯಲ್ಲಿಯೇ ನಾವು ಪ್ರತಿಯೊಬ್ಬರು ಅನನ್ಯರೂ, ಬೇರೆ ಬೇರೆಯೂ ಆಗಿರುವುದರಿಂದ, ಕಾಮ ಕೇಂದ್ರಿತ ಪ್ರೀತಿ, ಎಲ್ಲರ ನಡುವೆಯೂ ಇರದ ಆದರೆ ಕೆಲವರ ನಡುವೆ ಮಾತ ಇರುವಂಥ ಕೆಲವು ನಿರ್ದಿಷ್ಟ , ತೀರ ವೈಯಕ್ತಿಕ ಅಂಶಗಳನ್ನು ಅಪೇಕ್ಷಿಸುತ್ತದೆ.

ಹಾಗಾದರೆ ಎರಡು ದೃಷ್ಟಿಕೋನಗಳಿವೆ ಎಂದಾಯ್ತು; ಮೊದಲನೇಯದು, ಕಾಮ ಕೇಂದ್ರಿತ ಪ್ರೀತಿ ಎಂದರೆ ಸಂಪೂರ್ಣವಾಗಿ ವೈಯಕ್ತಿಕ ಆಕರ್ಷಣೆ ಮತ್ತು ಇಬ್ಬರು ನಿರ್ದಿಷ್ಟ ವ್ಯಕ್ತಿಗಳ ನಡುವೆ ಮಾತ್ರ ಸಂಭವಿಸಬಹುದಾದ ವಿಶಿಷ್ಟ ಪ್ರೀತಿ ಎನ್ನುವುದು. ಹಾಗು ಎರಡನೇಯದಾಗಿ, ಕಾಮ ಕೇಂದ್ರಿತ ಪ್ರೀತಿ ಎಂದರೆ “ಇಚ್ಛೆ” ಯನ್ನ ಆಧರಿಸಿದ ಕ್ರಿಯೆ. ಈ ಎರಡೂ ದೃಷ್ಟಿಕೋನಗಳು ನಿಜ, ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ಈ ರೀತಿಯೂ ನಿಜವಲ್ಲ ಅಥವಾ ಆ ರೀತಿಯೂ ನಿಜವಲ್ಲ. ಹಾಗಾಗಿ ಯಶಸ್ವಿ ಆಗದ ಸಂಬಂಧವನ್ನು ಮುರಿದುಬಿಡಬೇಕು ಎನ್ನುವ ಪರಿಕಲ್ಪನೆ ಎಷ್ಟು ತಪ್ಪೋ, ಅಷ್ಟೇ ತಪ್ಪು ಇಂಥ ಒಂದು ಸಂಬಂಧವನ್ನು ಮುರಿಯಬಾರದು ಎನ್ನುವ ನಿಲುವು ಕೂಡ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply