ಒಬ್ಬರನ್ನು ಪ್ರೀತಿಸುವುದೆಂದರೆ, ನಮ್ಮ ಪ್ರೀತಿಸುವ ಸಾಮರ್ಥ್ಯವನ್ನು ನಿಜೀಕರಿಸುವುದು, ಕೇಂದ್ರೀಕರಿಸುವುದು. ಪ್ರೀತಿ ಹೊಂದಿರುವ ಒಂದು ಮೂಲ ಧೃಡೀಕರಣ, ಪ್ರೀತಿಸಲ್ಪಡುವ ವ್ಯಕ್ತಿ, ಅತ್ಯವಶ್ಯಕ ಮಾನವೀಯ ಗುಣಗಳ ಅವತಾರ ಎನ್ನುವುದು. ಹಾಗಾಗಿಯೇ ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ಮನುಷ್ಯ ಸಮಸ್ತವನ್ನೂ ಪ್ರೀತಿಸುವುದು… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ – https://aralimara.com/2022/05/29/love-37/
ಪ್ರೀತಿಯ ಪರಿಕಲ್ಪನೆಯನ್ನು ಬೇರೆ ಬೇರೆ ಸಂಗತಿಗಳಿಗೆ, ವಸ್ತುಗಳಿಗೆ ವಿಸ್ತರಿಸುವುದಕ್ಕೆ ಯಾವ ಆಕ್ಷೇಪಣೆ ಇಲ್ಲವಾದರೂ, ಬೇರೆಯವರನ್ನ ಪ್ರೀತಿಸುವುದನ್ನ ಮೌಲ್ಯವೆಂದೂ, ತಮ್ಮನ್ನು ತಾವು ಪ್ರೀತಿಸಿಕೊಳ್ಳುವುದನ್ನ ಪಾಪವೆಂದೂ ಬಹುತೇಕ ಎಲ್ಲಕಡೆಗಳಲ್ಲೂ ನಂಬಲಾಗಿದೆ. ನಾನು ನನ್ನನ್ನು ಎಷ್ಟು ಪ್ರೀತಿಸಿಕೊಳ್ಳುತ್ತೇನೋ, ಅದೇ ಮಟ್ಟಕ್ಕೆ ನಾನು ಬೇರೆಯವರನ್ನು ಪ್ರೀತಿಸಲಾರೆ ಮತ್ತು ಸ್ವ ಪ್ರೀತಿ ಎಂದರೆ ಸ್ವಾರ್ಥವಲ್ಲದೇ ಬೇರೇನೂ ಅಲ್ಲ ಎಂದು ಅಂದುಕೊಳ್ಳಲಾಗಿದೆ. ಬಹುಹಿಂದಿನ ಪಾಶ್ಚಿಮಾತ್ಯ ಚಿಂತನೆಯಲ್ಲೂ ಈ ದೃಷ್ಟಿಕೋನವನ್ನು ಕಾಣಬಹುದು. ಜಾನ್ ಕ್ಯಾಲ್ವಿನ್ ಸ್ವ-ಪ್ರೀತಿಯನ್ನ ಒಂದು ‘ಪಿಡುಗು’ ಎಂದು ಗುರುತಿಸುತ್ತಾನೆ. ಸಿಗ್ಮಂಡ್ ಫ್ರಾಯ್ಡ್ ಸ್ವ-ಪ್ರೀತಿಯ ಬಗ್ಗೆ ಮನೋವೈಜ್ಞಾನಿಕ ಭಾಷೆಯಲ್ಲಿ ಮಾತನಾಡುತ್ತಾನಾದರೂ ಅವನ ಮೌಲ್ಯ ನಿರ್ಣಯ ಕೂಡ ಕ್ಯಾಲ್ವಿನ್ ಗಿಂತ ಬೇರೆ ಏನಲ್ಲ. ಅವನಿಗೆ ಸ್ವ-ಪ್ರೀತಿ ಎನ್ನುವುದು ನಾರ್ಸಿಸಿಮ್ (ತೀವ್ರ ಸ್ವಾನುರಕ್ತಿ),
ಸುಪ್ತಕಾಮವನ್ನು ತನ್ನೆಡೆಗೇ ತಿರುಗಿಸಿಕೊಳ್ಳುವ ವಿಧಾನ. ನಾರ್ಸಿಸಿಮ್ ಮನುಷ್ಯನ ಬೆಳವಣಿಗೆಯ ಅತ್ಯಂತ ಮೊದಲಿನ ಹಂತಗಳಲ್ಲಿ ಒಂದು. ಮತ್ತು ತನ್ನ ಬೆಳವಣಿಗೆಯ ಮುಂದಿನ ಹಂತಗಳಲ್ಲಿ ನಾರ್ಸಿಸ್ಟಿಕ್ ಹಂತಕ್ಕೆ ಮರಳಿದ ಮನುಷ್ಯ ಪ್ರೀತಿಸಲು ಅನರ್ಹನಾಗಿರುತ್ತಾನೆ ; ಹಾಗು ನಾರ್ಸಿಸಿಮ್ ಅತಿಯಾದರೆ ಹುಚ್ಚಿನ ಸ್ಥಿತಿಗೆ ಬಂದು ತಲುಪುತ್ತಾನೆ. ಫ್ರಾಯ್ಡ್ ಪ್ರೀತಿಯನ್ನ ಸುಪ್ತಕಾಮದ (libido) ಅಭಿವ್ಯಕ್ತಿ ಎಂದುಕೊಳ್ಳುತ್ತಾನೆ, ಮತ್ತು ಈ ಸುಪ್ತಕಾಮವು ಇತರರತ್ತ ತಿರುಗಿದಾಗ ಪ್ರೀತಿಯೆಂದೂ, ಅಥವಾ ತನ್ನತ್ತಲೇ ತಿರುಗಿದಾಗ ಅದನು ಸ್ವ ಪ್ರೀತಿಯೆಂದೂ ವ್ಯಾಖ್ಯಾನ ಮಾಡುತ್ತಾನೆ. ಹಾಗಾಗಿ ಪ್ರೀತಿ ಮತ್ತು ಸ್ವ ಪ್ರೀತಿ ಎರಡೂ ಒಬ್ಬ ಮನುಷ್ಯನಲ್ಲಿ , ಒಂದು ಪ್ರಬಲವಾಗಿದ್ದರೆ ಇನ್ನೊಂದು ದುರ್ಬಲವಾಗಿರುತ್ತದೆ ಎನ್ನುವ ಅರ್ಥದಲ್ಲಿ ಪರಸ್ಪರ ಪ್ರತ್ಯೇಕ ವಿಶಿಷ್ಟಗಳು (mutually exclusive). ಆದ್ದರಿಂದಲೇ ಸ್ವ ಪ್ರೀತಿಯನ್ನ ಕೆಟ್ಟದು ಎಂದುಕೊಂಡಾಗ ನಿಸ್ವಾರ್ಥ ಮೌಲ್ಯದ ಪಟ್ಟ ಗಳಿಸುತ್ತದೆ.
ಇಂಥ ತಿಳುವಳಿಕೆಯ ಸ್ಥಿತಿಯಲ್ಲಿ ಈ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮನೋವೈಜ್ಞಾನಿಕ ಪ್ರಯೋಗಗಳು ಸ್ವಂತದ ಕುರಿತಾದ ಪ್ರೀತಿ ಮತ್ತು ಬೇರೆಯವರ ಕುರಿತಾದ ಪ್ರೀತಿಗಳ ನಡುವೆ ಮೂಲಭೂತ ದ್ವಂದ್ವಗಳು ಇದೆ ಎನ್ನುವ ಸಿದ್ಧಾಂತವನ್ನು ಬೆಂಬಲಿಸುತ್ತವೆಯೇ? ಸ್ವಂತದ ಕುರಿತಾದ ಪ್ರೀತಿ ಸ್ವಾರ್ಥದ ರೀತಿಯದೇ ಆದ ಇನ್ನೊಂದು ವಿದ್ಯಮಾನವೇ? ಅಥವಾ ಅವೆರಡೂ ಪರಸ್ಪರ ವಿರುದ್ಧದ ಸಂಗತಿಗಳೇ? ಮುಂದುವರೆದು, ಆಧುನಿಕ ಮನುಷ್ಯ ಎಲ್ಲ ಬೌದ್ಧಿಕ (intellectual), ಭಾವನಾತ್ಮಕ (emotional), ಮತ್ತು ಸಂವೇದನಾತ್ಮಕ (sensual) ಸಾಮರ್ಥ್ಯಗಳನ್ನು ಹೊಂದಿರುವಾಗಲೂ ಅವನ ಸ್ವಾರ್ಥ, ನಿಜವಾಗಿಯೂ ಅವನಿಗೆ ಸ್ವಂತದ ಕುರಿತಾದ ಕಾಳಜಿಯೇ? ‘ಅವನು’ ಬದುಕಿನಲ್ಲಿನ ತನ್ನ ಸಮಾಜೋ ಆರ್ಥಿಕ ಪಾತ್ರದ ಅಡಿಯಾಳಾಗಿದ್ದಾನೆಯೇ? ಅವನ ಸ್ವಾರ್ಥ, ಸ್ವ ಪ್ರೀತಿಗೆ( self love) ಸಮಾನವೇ? ಅಥವಾ ಅವನಲ್ಲಿಯ ಸ್ವ ಪ್ರೀತಿಯ ಕೊರತೆ ಅವನನ್ನು ಸ್ವಾರ್ಥಿಯಾಗಿಸಿದೆಯೇ?
ಸ್ವಾರ್ಥ ಮತ್ತು ಸ್ವ ಪ್ರೀತಿಯ ಗುಣ ಲಕ್ಷಣಗಳ ಬಗ್ಗೆ ಚರ್ಚಿಸುವುದಕ್ಕಿಂತ ಮುಂಚೆ, ತನ್ನ ಕುರಿತಾದ ಪ್ರೀತಿ ಮತ್ತು ಇತರರನ್ನು ಕುರಿತಾದ ಪ್ರೀತಿಗಳೆರಡೂ ಪ್ರತ್ಯೇಕ ವಿಶಿಷ್ಟಗಳು (mutually exclusive) ಎನ್ನುವ ತಪ್ಪು ತಿಳುವಳಿಕೆಯ ಬಗ್ಗೆ ಒತ್ತಿ ಹೇಳಬೇಕಿದೆ. ನಾನು ನನ್ನ ನೆರೆಯವನನ್ನು ಒಬ್ಬ ಮನುಷ್ಯ ಎಂದು ಪ್ರೀತಿಸುವುದು ಮೌಲ್ಯವಾದರೆ, ನಾನು ನನ್ನನ್ನು ಪ್ರೀತಿಸಿಕೊಳ್ಳುವುದು ಹೇಗೆ ತಪ್ಪಾಗುತ್ತದೆ? ನಾನು ಒಬ್ಬ ಮನುಷ್ಯನೇ ಅಲ್ಲವೇ? ನನ್ನನ್ನು ಹೊರತುಪಡಿಸಿದ ಮನುಷ್ಯನ ಕುರಿತಾದ ಯಾವ ಪರಿಕಲ್ಪನೆಯೂ ಇಲ್ಲ. ಇಂಥ ಪ್ರತ್ಯೇಕತೆಯನ್ನು ಪ್ರಚಾರ ಮಾಡುವ ಸಿದ್ಧಾಂತ ತನ್ನೊಳಗೆಯೇ ದ್ವಂದ್ವಗಳನ್ನು ಹುದುಗಿಸಿಕೊಂಡಿದೆ. “ ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು “ ಎನ್ನುವ ಬೈಬಲ್ ನ ಮಾತು ಸ್ವಂತದ ಸಮಗ್ರತೆಗೆ (integrity) ಮತ್ತು ಅನನ್ಯತೆಗೆ (uniqueness) ಗೌರವವನ್ನು ಸೂಚಿಸುತ್ತ, ಸ್ವಂತದ ಕುರಿತಾದ ಪ್ರೀತಿ ಮತ್ತು ತಿಳುವಳಿಕೆಯನ್ನು, ಇನ್ನೊಬ್ಬರನ್ನು ಕುರಿತಾದ ಪ್ರೀತಿ, ಗೌರವ ಮತ್ತು ತಿಳುವಳಿಕೆಯಿಂದ ಬೇರೆ ಮಾಡಿ ನೋಡುವುದು ಸಾಧ್ಯವಿಲ್ಲ ಎಂದು ಸಾರುತ್ತದೆ. ನನ್ನ ಸ್ವಂತದ ಕುರಿತಾದ ಪ್ರೀತಿ, ಇನ್ನೊಬ್ಬರನ್ನು ಕುರಿತಾದ ನನ್ನ ಪ್ರೀತಿಯೊಂದಿಗೆ ಬೇರೆ ಮಾಡಲಾಗದಂತೆ ಒಂದಾಗಿದೆ.
ಯಾವುದರ ಮೇಲೆ ನಮ್ಮ ವಾದದ ತೀರ್ಮಾನಗಳನ್ನು ಕಟ್ಟಿದ್ದೇವೆಯೋ ಆ ಪ್ರಾಥಮಿಕ ಮನೋವೈಜ್ಞಾನಿಕ ಆವರಣಕ್ಕೆ ನಾವು ಬಂದು ತಲುಪಿದ್ದೇವೆ. ಸಾಮಾನ್ಯವಾಗಿ ಈ ಆವರಣಗಳು ಹೀಗಿರುತ್ತವೆ : ಕೇವಲ ಇನ್ನೊಬ್ಬರಲ್ಲ, ನಾವು ಸ್ವತಃ ಕೂಡ ನಮ್ಮ ಭಾವನೆಗಳ, ಅನಿಸಿಕೆಗಳ ವಸ್ತುವಾಗಿರುತ್ತೇವೆ. ಇನ್ನೊಬ್ಬರ ಬಗೆಗಿನ ನಮ್ಮ ದೃಷ್ಟಿಕೋನ, ನಮ್ಮ ಕುರಿತಾದ ನಮ್ಮ ದೃಷ್ಟಿಕೋನಕ್ಕೆ ವಿರುದ್ಧವಾಗಿಲ್ಲ ಅಷ್ಟೇ ಅಲ್ಲ, ಪರಸ್ಪರ ಪೂರಕವಾಗಿದೆ. ಈಗ ನಾವು ಚರ್ಚಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಇದರ ಅರ್ಥ : ಇನ್ನೊಬ್ಬರನ್ನು ಪ್ರೀತಿಸುವುದು ಮತ್ತು ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವುದು ಪರ್ಯಾಯಗಳಲ್ಲ. ಬದಲಾಗಿ, ತಮ್ಮನ್ನು ಪ್ರೀತಿಸಿಕೊಳ್ಳುವ ದೃಷ್ಟಿಕೋನವನ್ನ, ನಾವು ಇನ್ನೊಬ್ಬರನ್ನು ಪ್ರೀತಿಸುವ ಸಾಮರ್ಥ್ಯವಿರುವ ಎಲ್ಲರಲ್ಲೂ ಗುರುತಿಸಬಹುದು. ಪ್ರೀತಿಯನ್ನ ಒಂದು ತತ್ವವಾಗಿ, ‘ವ್ಯಕ್ತಿ-ವಸ್ತುಗಳ’ ನಡುವಿನ ಸಂಬಂಧ ಹಾಗು ತನ್ನ ಸ್ವಂತದ ಜೊತೆಗಿನ ಸಂಬಂಧ ಎಂದು ವಿಭಜಿಸಲು ಸಾಧ್ಯವಾಗುವುದಿಲ್ಲ. ನೈಜ ಪ್ರೀತಿ ಸೃಜನಶೀಲತೆಯ ಅಭಿವ್ಯಕ್ತಿ ಮತ್ತು ತನ್ನೊಳಗೆ, ಪರಸ್ಪರರನ್ನು ಕುರಿತಾದ ಕಾಳಜಿ, ಗೌರವ, ಜವಾಬ್ದಾರಿ ಮತ್ತು ತಿಳುವಳಿಕೆಯನ್ನು ಒಳಗೊಂಡಿರುವಂಥದು. ಪ್ರೀತಿ ಒಂದು “ಪರಿಣಾಮ” (affect) ಅಲ್ಲ, ಇನ್ನೊಬ್ಬರು ನನ್ನ ಮೇಲೆ ಪರಿಣಾಮ ಬೀರಿದರು ಎನ್ನುವ ಅರ್ಥದಲ್ಲಿ, ಬದಲಾಗಿ ಪ್ರೀತಿಸಲ್ಪಡುವ ವ್ಯಕ್ತಿಯ ಬೆಳವಣಿಗೆಗಾಗಿ, ಖುಶಿಗಾಗಿ ಕ್ರಿಯಾತ್ಮಕವಾಗಿ ಸ್ಪಂದಿಸುವುದು ಮತ್ತು ಈ ಸ್ಪಂದನೆ ಬೇರೂರಿರುವುದು ಒಬ್ಬರ ಸ್ವ ಪ್ರೀತಿಯ ಸಾಮರ್ಥ್ಯದಲ್ಲಿ.
ಒಬ್ಬರನ್ನು ಪ್ರೀತಿಸುವುದೆಂದರೆ, ನಮ್ಮ ಪ್ರೀತಿಸುವ ಸಾಮರ್ಥ್ಯವನ್ನು ನಿಜೀಕರಿಸುವುದು, ಕೇಂದ್ರೀಕರಿಸುವುದು. ಪ್ರೀತಿ ಹೊಂದಿರುವ ಒಂದು ಮೂಲ ಧೃಡೀಕರಣ, ಪ್ರೀತಿಸಲ್ಪಡುವ ವ್ಯಕ್ತಿ, ಅತ್ಯವಶ್ಯಕ ಮಾನವೀಯ ಗುಣಗಳ ಅವತಾರ ಎನ್ನುವುದು. ಹಾಗಾಗಿಯೇ ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ಮನುಷ್ಯ ಸಮಸ್ತವನ್ನೂ ಪ್ರೀತಿಸುವುದು. ಇದು ಒಂದು ರೀತಿಯ ‘division of labour’ ಎಂದು ವಿಲಿಯಂ ಜೇಮ್ಸ್ ಹೇಳುವಂತೆ, ಒಬ್ಬ ತನ್ನ ಕುಟುಂಬವನ್ನು ಪ್ರೀತಿಸುತ್ತಾನೆ ಆದರೆ ಅವನಿಗೆ “ಅಪರಿಚಿತ”ರನ್ನು ಕುರಿತು ಯಾವುದೇ ಭಾವನೆಗಳಿಲ್ಲ ; ಇದು ಪ್ರೀತಿಸಲು ಸಾಧ್ಯವಾಗದ ಸ್ಥಿತಿಯ ಸಂಕೇತ. ಮತ್ತೆ ಮತ್ತೆ ಹೇಳುವ ಹಾಗೆ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಕುರಿತಾದ ಪ್ರೀತಿ, ಮನುಷ್ಯ ಸಮಸ್ತವನ್ನು ಕುರಿತಾದ ಪ್ರೀತಿಯಾಗದೇ ಇರಬಹುದಾದ ಸಾಧ್ಯತೆಯ ನಡುವೆಯೂ, ಅದು ಇಂಥದೊಂದು ಸಂಗತಿಗೆ ಪ್ರಸ್ತಾವನೆ ಎನ್ನುವುದಂತೂ ನಿಜ, ಇದು ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ಪ್ರೀತಿಸಿದಾಗ ಮಾತ್ರ ಜೆನೆಟಿಕಲೀ ಗಳಿಸಬಹುದಾದ ಸಾಮರ್ಥ್ಯವಾಗಿದ್ದರೂ.
ಮೇಲಿನ ಚರ್ಚೆಯಿಂದ ಹೊರಹೊಮ್ಮುವುದೇನೆಂದರೆ, ನನ್ನ ಸ್ವಂತದ ವ್ಯಕ್ತಿತ್ವ ಕೂಡ ಒಂದು ಪ್ರೀತಿಸಲ್ಪಡುವ ವಸ್ತು, ನಾನು ಪ್ರೀತಿಸುವ ವಸ್ತುವಿನ ಹಾಗೆ (ನಾನು ಇನ್ನೊಬ್ಬರನ್ನು ಪ್ರೀತಿಸುವಾಗ). ನಮ್ಮ ಬದುಕಿನ, ಖುಶಿಯ, ಬೆಳವಣಿಗೆಯ, ಸ್ವಾತಂತ್ರ್ಯದ ಖಾತ್ರಿ ಬೇರೂರಿರುವುದು ನಮ್ಮ ಪ್ರೀತಿಸುವ ಸಾಮರ್ಥ್ಯದಲ್ಲಿ, ಹಾಗೆಂದರೆ ಪರಸ್ಪರರ ಕುರಿತಾದ ನಮ್ಮ ಕಾಳಜಿ, ಗೌರವ, ಜವಾಬ್ದಾರಿ ಮತ್ತು ತಿಳುವಳಿಕೆಯಲ್ಲಿ. ಒಬ್ಬರಿಗೆ ಸೃಜನಾತ್ಮಕವಾಗಿ ಪ್ರೀತಿಸುವುದು ಸಾಧ್ಯವಾಗಬಹುದಾದರೆ, ಅವರಿಗೆ ತಮ್ಮನ್ನು ಪ್ರೀತಿಸಿಕೊಳ್ಳುವುದೂ ಸಾಧ್ಯ ; ಒಬ್ಬರು ಇನ್ನೊಬ್ಬರನ್ನು ಮಾತ್ರ ಪ್ರೀತಿಸಬಲ್ಲರಾದರೆ, ಅವರಿಗೆ ಪ್ರೀತಿ ಸಾಧ್ಯವೇ ಆಗುವುದಿಲ್ಲ.
[…] ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/06/04/love-38/ […]