ಸ್ವ ಪ್ರೀತಿ (ಮುಂದುವರಿದ ಭಾಗ…) : Art of love #25

“ಒಬ್ಬರಿಗೆ ಸೃಜನಾತ್ಮಕವಾಗಿ ಪ್ರೀತಿಸುವುದು ಸಾಧ್ಯವಾಗಬಹುದಾದರೆ, ಅವರಿಗೆ ತಮ್ಮನ್ನು ಪ್ರೀತಿಸಿಕೊಳ್ಳುವುದೂ ಸಾಧ್ಯ ; ಒಬ್ಬರು ಇನ್ನೊಬ್ಬರನ್ನು ಮಾತ್ರ ಪ್ರೀತಿಸಬಲ್ಲರಾದರೆ, ಅವರಿಗೆ ಪ್ರೀತಿ ಸಾಧ್ಯವೇ ಆಗುವುದಿಲ್ಲ” ಅನ್ನುತ್ತಾರೆ ಎರಿಕ್ ಫ್ರಾಮ್. ಮುಂದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ 

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/06/04/love-38/

ಸ್ವ ಪ್ರೀತಿ ಮತ್ತು ಬೇರೆಯವರನ್ನು ಪ್ರೀತಿಸುವುದು ತತ್ವವಾಗಿ ಒಂದಕ್ಕೊಂದು ಪೂರಕ ಎಂದು ಒಪ್ಪಿಕೊಂಡರೂ, ಇತರರನ್ನು ಪ್ರೀತಿಯ ಪರಿಧಿಯಿಂದ ಹೊರಗಿಡುವ ಸ್ವಾರ್ಥವನ್ನು ಹೇಗೆ ವಿವರಿಸುವುದು? ಸ್ವಾರ್ಥಿ ಮನುಷ್ಯ ಕೇವಲ ತನ್ನನ್ನು ಕುರಿತು ಮಾತ್ರ ಆಸಕ್ತನಾಗಿದ್ದಾನೆ, ಅವನಿಗೆ ಸ್ವೀಕರಿಸುವುದರಲ್ಲಿ ಮಾತ್ರ ಆಸಕ್ತಿ, ಕೊಡುವುದರಲ್ಲಿ ಯಾವ ಖುಶಿಯೂ ಇಲ್ಲ, ಎಲ್ಲವೂ ತನಗೇ ಬೇಕೆಂದು ಬಯಸುತ್ತಾನೆ. ಸ್ವಾರ್ಥಿ ಮನುಷ್ಯ ಹೊರ ಜಗತ್ತನ್ನು ನೋಡುವುದು, ಆ ಜಗತ್ತಿನಿಂದ ತಾನು ಏನು ಪಡೆಯಬಹುದು ಎನ್ನುವ ದೃಷ್ಟಿಕೋನದಿಂದ ಮಾತ್ರ; ಇತರರ ಬೇಕು ಬೇಡಗಳ ಬಗ್ಗೆ , ಅವರ ಆತ್ಮಾಭಿಮಾನ (dignity) ಮತ್ತು ಸಮಗ್ರತೆಯ (integrity) ಬಗ್ಗೆ ಅವನಿಗೆ ಯಾವ ಆಸಕ್ತಿಯೂ ಇಲ್ಲ. ಅವನಿಗೆ ತನ್ನನ್ನು ಬಿಟ್ಟರೆ ಬೇರೆ ಯಾರೂ ಕಾಣಿಸುವುದೇ ಇಲ್ಲ ; ಅವನು ಎಲ್ಲರನ್ನೂ ಮತ್ತು ಎಲ್ಲವನ್ನೂ ಅವರು(ಅವು) ತನಗೆ ಹೇಗೆ ಉಪಯೋಗ ಎನ್ನುವ ನೆಲೆಯಲ್ಲಿ ಮಾತ್ರ ನೋಡುತ್ತಾನೆ ; ಮೂಲಭೂತವಾಗಿ ಅವನು ಪ್ರೀತಿಸುವಲ್ಲಿ ಅಸಮರ್ಥ. ಇಂಥದೊಂದು ಸಂಗತಿ, ಮನುಷ್ಯನ ತನ್ನ ಕುರಿತಾದ ಕಾಳಜಿ ಮತ್ತು ಇತರರ ಬಗ್ಗೆಯ ಕಾಳಜಿ ಎರಡೂ ಅನಿವಾರ್ಯ ಪರ್ಯಾಯಗಳು ಎಂದು ಸಾಕ್ಷೀಕರಿಸಿದಂತಾಗುವುದಿಲ್ಲವೆ? ಸ್ವಾರ್ಥ ಮತ್ತು ಸ್ವ ಪ್ರೀತಿ ಎರಡೂ ಒಂದೇ ಆಗಿದ್ದರೆ ಇದು ನಿಜವಾಗಿರಬಹುದಿತ್ತು. ಆದರೆ ಇಂಥ ಒಂದು ತಪ್ಪು ಅನಿಸಿಕೆಯೇ ನಮ್ಮ ಸಮಸ್ಯೆಯ ಹಲವಾರು ತಪ್ಪು ತೀರ್ಮಾನಗಳಿಗೆ ಕಾರಣವಾಗಿದೆ. ಸ್ವಾರ್ಥ ಮತ್ತು ಸ್ವ ಪ್ರೀತಿಗಳು ಒಂದೇ ಆಗಿರುವುದು ಎಷ್ಟು ಸುಳ್ಳೋ ಅವೆರಡೂ ಪರಸ್ಪರ ವಿರುದ್ಧದ ಸಂಗತಿಗಳು ಎನ್ನುವುದು ಅಷ್ಟೇ ನಿಜ. ಸ್ವಾರ್ಥಿ ಮನುಷ್ಯ ತನ್ನನ್ನು ಪೂರ್ತಿಯಾಗಿ ಪ್ರೀತಿಸಿಕೊಳ್ಳುವುದಿಲ್ಲ ಅಷ್ಟೇ ಅಲ್ಲ ಅವನು ತನ್ನನ್ನು ಕಡಿಮೆ ಪ್ರೀತಿಸುತ್ತಾನೆ; ಹಾಗೆ ನೋಡಿದರೆ ಅವನು ತನ್ನನ್ನು ದ್ವೇಷಿಸುತ್ತಾನೆ. ತನ್ನ ಕುರಿತಾದ ಅವನ ಅನಾಸಕ್ತಿ ಮತ್ತು ಕಾಳಜಿಯ ಕೊರತೆ, ಯಾವುದು ಅವನ ಸೃಜನಶೀಲತೆಯ ಕೊರತೆಯೋ, ಅದು ಅವನನ್ನು ಬರಡಾಗಿಸುತ್ತದೆ, ಹತಾಶನನ್ನಾಗಿಸುತ್ತದೆ. ಹಾಗಾಗಿ ಸ್ವಾಭಾವಿಕವಾಗಿಯೇ ಅವನು ಖುಶಿಯಿಂದ ಹೊರತಾದವನು ಮತ್ತು ತಾನೇ ತನ್ನಿಂದ ದೂರವಾಗಿಸಿಕೊಂಡಿರುವ ತೃಪ್ತಿಯನ್ನು ಬದುಕಿನಿಂದ ಕಸಿದುಕೊಳ್ಳಲು ಆತಂಕಿತನಾಗಿರುವವನು. ಅವನು ತನ್ನ ಬಗ್ಗೆ ಅತೀ ಕಾಳಜಿ ಮಾಡುವವನಂತೆ ಕಾಣಿಸುತ್ತಾನಾದರೂ, ನಿಜದಲ್ಲಿ ಅವನು ತನ್ನನ್ನು ತಾನು ಪ್ರೀತಿಸಿಕೆೊಳ್ಳುವಿಕೆಯಲ್ಲಿಯ ತನ್ನ ಸೋಲನ್ನ ಮುಚ್ಚಿಕೊಳ್ಳಲು ಇಂಥ ಅಯಶಸ್ವಿ ಪ್ರಯತ್ನಗಳನ್ನು ಮಾಡುತ್ತಾನೆ. ಸ್ವಾರ್ಥಿ ಮನುಷ್ಯ ನಾರ್ಸಿಸ್ಟಿಕ್ ಎಂದು ಫ್ರಾಯ್ಡ್ ಹೇಳುವುದು, ಆ ಮನುಷ್ಯ ಇತರರ ಕುರಿತಾದ ತನ್ನ ಎಲ್ಲ ಪ್ರೀತಿಯನ್ನು ಹಿಂತೆಗೆದುಕೊಂಡು ತನ್ನತ್ತ ತಿರುಗಿಸಿಕೊಂಡಿದ್ದಾನೇನೋ ಎನ್ನುವ ತಿಳುವಳಿಕೆಯಲ್ಲಿ. ಸ್ವಾರ್ಥಿಗಳು ಇತರರನ್ನು ಪ್ರೀತಿಸಲು ಅಸಮರ್ಥರು ಎನ್ನುವುದು ನಿಜವಾದರೂ, ಅವರು ತಮ್ಮನ್ನು ತಾವು ಪ್ರೀತಿಸಿಕೊಳ್ಳಲೂ ಸಾಮರ್ಥ್ಯವಿಲ್ಲದವರು ಎನ್ನುವುದೂ ನಿಜ.

ತಮ್ಮ ದುರಾಸೆಗಾಗಿ ಇತರರ ಬಗ್ಗೆ ಕಾಳಜಿ ತೋರಿಸುವವರ ಜೊತೆ ಹೋಲಿಸಿದಾಗ ಸ್ವಾರ್ಥವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ, ಅತೀ ಕಾಳಜಿಯ ತಾಯಿ; ತನ್ನ ಮಗುವಿನ ಕುರಿತಾಗಿ ತನಗೆ ವಿಶೇಷ ಪ್ರೀತಿಯಿರುವುದನ್ನು ಪ್ರಜ್ಞಾಪೂರ್ವಕವಾಗಿ ಆಕೆ ನಂಬುತ್ತಾಳಾದರೂ, ಆಕೆಗೆ ತನ್ನ ಕಾಳಜಿಯ ವಸ್ತುವಿನ ಕುರಿತಾಗಿ ಅದುಮಿಟ್ಟುಕೊಂಡ ಆಳ ಹಗೆತನ ಇದೆ. ಆಕೆ ಮಗುವಿನೆಡೆ ಅತೀ ಕಾಳಜಿ ತೋರಿಸುತ್ತಿರುವುದು ತಾನು ಮಗುವನ್ನು ಅತೀ ಹೆಚ್ಚು ಪ್ರೀತಿಸುತ್ತಿರುವ ಕಾರಣಕ್ಕಲ್ಲ ಬದಲಾಗಿ, ಮಗುವನ್ನು ಪ್ರೀತಿಸಲಾಗದ ತನ್ನ ಸಾಮರ್ಥ್ಯದ ಕೊರತೆಯನ್ನು ಸರಿದೂಗಿಸುವ ಸಲುವಾಗಿ.

ಸ್ವಾರ್ಥದ ಸ್ವರೂಪದ ಕುರಿತಾದ ಈ ಥಿಯರಿ ಹುಟ್ಟಿದ್ದು ನ್ಯೂರಾಟಿಕ್ “ನಿಸ್ವಾರ್ಥತೆ” ಯ ಕುರಿತಾದ ಮನೋವೈಜ್ಞಾನಿಕ ವಿಶ್ಲೇಷಣೆಯ ಅನುಭವದಿಂದ. ಖಿನ್ನತೆ, ನಿಶಕ್ತಿ, ಕೆಲಸದಲ್ಲಿ ನಿರಾಸಕ್ತಿ, ಪ್ರೇಮ ವೈಫಲ್ಯ, ಮುಂತಾದವುಗಳು ಇಂಥ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು. “ನಿಸ್ವಾರ್ಥತೆ” ಯನ್ನು ರೋಗದ ಲಕ್ಷಣ ಎಂದು ಪರಿಗಣಿಸುವುದು ಒತ್ತಟ್ಟಿಗಿರಲಿ, ಅದನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದು ತಿಳಿಯಲಾಗುತ್ತದೆ. ನಿಸ್ವಾರ್ಥಿ ಮನುಷ್ಯನಿಗೆ ತನಗಾಗಿ ಏನೂ ಬೇಡ, ಆತ ಬದುಕುವುದು ಕೇವಲ ಇನ್ನೊಬ್ಬರಿಗಾಗಿ, ತನ್ನನ್ನು ತಾನು ಮುಖ್ಯ ಎಂದು ಪರಿಗಣಿಸದೇ ಇರುವುದು ಅವನಿಗೆ ಹೆಮ್ಮೆ. ತನ್ನ ನಿಸ್ವಾರ್ಥತೆಯ ಹೊರತಾಗಿಯೂ ತಾನು ಖುಶಿಯಾಗಿಲ್ಲ ಎನ್ನುವ ಸಂಗತಿ ಅವನಿಗೆ ಒಗಟಿನಂಥದು, ಮತ್ತು ತನ್ನ ಹತ್ತಿರದವರೊಂದಿಗಿನ ಅವನ ಸಂಬಂಧ ಅತೃಪ್ತಿಕರವಾದದ್ದು. ಮನೋವಿಶ್ಲೇಷಣೆಯ ಪ್ರಕಾರ ನಿಸ್ವಾರ್ಥತೆ ಅವನ ಹಲವು ರೋಗ ಲಕ್ಷಣಗಳಲ್ಲಿ ಒಂದು ಮಾತ್ರ ಅಲ್ಲ, ಎಲ್ಲ ಲಕ್ಷಣಗಳಲ್ಲಿ ಇದೇ ಮುಖ್ಯವಾದದದ್ದು, ಮತ್ತು ಅವನ ಪ್ರೀತಿಸುವ ಹಾಗು ಯಾವುದನ್ನಾದರೂ ಸುಖಿಸುವ ಸಾಮರ್ಥ್ಯವನ್ನು ನಿಶಕ್ತಗೊಳಿಸಿದ್ದು. ಈ ಕಾರಣವಾಗಿಯೇ ಅವನು ಬದುಕಿನ ಕುರಿತಾದ ದ್ವೇಷವನ್ನು ಕಟ್ಟಿಕೊಂಡಿರುವುದು. ಈ ನಿಸ್ವಾರ್ಥತೆಯ ಹಿಂದೆ ಸೂಕ್ಷ್ಮವಾದರೂ ದಟ್ಟವಾದ ಸ್ವಕೇಂದ್ರಿಯತೆ ಅಡಗಿಕೊಂಡಿದೆ. ಇತರ ರೋಗ ಲಕ್ಷಣಗಳೊಂದಿಗೆ ನಿಸ್ವಾರ್ಥತೆಯನ್ನೂ ರೋಗದ ಮುಖ್ಯ ಲಕ್ಷಣ ಎಂದು ವ್ಯಾಖ್ಯಾನ ಮಾಡಿದಾಗ ಮಾತ್ರ ಈ ಮನುಷ್ಯನ ನಿಸ್ವಾರ್ಥತೆ ಮತ್ತು ಬೇರೆ ತೊಂದರೆಗಳ ಮೂಲವಾಗಿರುವ ಸೃಜನಶೀಲತೆಯ ಕೊರತೆಯನ್ನು ಸರಿ ಮಾಡಬಹುದು.

ನಿಸ್ವಾರ್ಥತೆಯ ಸ್ವರೂಪ ವಿಶೇಷವಾಗಿ ಎದ್ದು ಕಾಣುವುದು ಅದು ಬೇರೆಯವರ ಮೇಲೆ ಉಂಟು ಮಾಡುವ ಪರಿಣಾಮಗಳಲ್ಲಿ, ಮತ್ತು ಮೇಲಿಂದ ಮೇಲೆ ನಮ್ಮ ಸಂಸ್ಕೃತಿಯಲ್ಲಿ ನಿಸ್ವಾರ್ಥ ತಾಯಿ ತನ್ನ ಮಕ್ಕಳ ಮೇಲೆ ಬೀರುವ ಪರಿಣಾಮಗಳಲ್ಲಿ. ಆಕೆ ತನ್ನ ನಿಸ್ವಾರ್ಥತೆಯ ಕಾರಣವಾಗಿ ತನ್ನ ಮಕ್ಕಳು ಪ್ರೀತಿಸಲ್ಪಡುವುದೆಂದರೇನು, ಕಲಿಯುವುದೆಂದರೇನು ಎನ್ನುವುದನ್ನ ಅನುಭವಿಸುತ್ತಾರೆ ಹಾಗಾಗಿ ಪ್ರೀತಿ ಎಂದರೇನು ಎನ್ನುವುದನ್ನ ಕಲಿಯುತ್ತಾರೆ ಎಂದು ನಂಬುತ್ತಾಳೆ. ಆದರೆ ಅವಳ ನಿರೀಕ್ಷೆಯಂತೆ ಅವಳ ನಿಸ್ವಾರ್ಥ ಅವಳ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಆಕೆಯ ಮಕ್ಕಳು ತಾವು ಪ್ರೀತಿಸಲ್ಪಡುತ್ತಿದ್ದೇವೆ ಎನ್ನುವುದನ್ನ ಸೂಚಿಸುವ ಯಾವ ಖುಶಿಯ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಆ ಮಕ್ಕಳು ಎಲ್ಲಿ ತಮಗೆ ತಮ್ಮ ತಾಯಿಯ ನಿರೀಕ್ಷೆಗಳನ್ನು ಪೂರೈಸಲಾಗುವುದಿಲ್ಲೋ, ಎಲ್ಲಿ ತಮ್ಮ ತಾಯಿ ತಮ್ಮನ್ನು ಒಪ್ಪಿಕೊಳ್ಳುವುದಿಲ್ಲವೋ ಎನ್ನುವ ಭಯ, ಆತಂಕ ಮತ್ತು ಒತ್ತಡದಲ್ಲಿ ಸಿಲುಕಿಕೊಂಡಿರುತ್ತಾರೆ. ಬಹುತೇಕ ಮಕ್ಕಳು ತಮ್ಮ ತಾಯಿ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಬದುಕಿನ ಕುರಿತಾದ ಹಗೆತನದ ಪರಿಣಾಮವನ್ನು ಅನುಭವಿಸುತ್ತಿರುತ್ತಾರೆ. ಇಂಥ ಹಗೆತನವನ್ನ ಅವರು ಸ್ಪಷ್ಟವಾಗಿ ಗುರುತಿಸುವುದಕ್ಕಿಂತ ತಾಯಿಯೊಡನೆಯ ತಮ್ಮ ಅನುಭವದ ಮೂಲಕ ಪಡೆದುಕೊಂಡು ಕೊನೆಗೆ ಇಂಥದೊಂದು ಹಗೆತನದಲ್ಲಿ ತಾವೂ ಒಂದಾಗುತ್ತಾರೆ. ಒಟ್ಟಾರೆಯಾಗಿ ತನ್ನ ಮಕ್ಕಳ ಮೇಲೆ ನಿಸ್ವಾರ್ಥ ತಾಯಿಯ ಪರಿಣಾಮ, ಸ್ವಾರ್ಥಿ ತಾಯಿಗಿಂತ ಹೆಚ್ಚು ಬೇರೇನೂ ಆಗಿರುವುದಿಲ್ಲ. ಬಹುತೇಕ ಸಂಧರ್ಭಗಳಲ್ಲಿ ನಿಸ್ವಾರ್ಥ ತಾಯಿ ತನ್ನ ಮಕ್ಕಳ ಮೇಲೆ ಬೀರುವ ಪರಿಣಾಮ ಸ್ವಾರ್ಥಿ ತಾಯಿಗಿಂತಲೂ ಕೆಟ್ಟದಾಗಿರುತ್ತದೆ, ಏಕೆಂದರೆ ತಾಯಿಯ ನಿಸ್ವಾರ್ಥತೆಯ ಕಾರಣವಾಗಿ ಮಕ್ಕಳು ಅವಳನ್ನು ಟೀಕಿಸಲು ಹಿಂಜರಿಯುತ್ತಾರೆ. ತಮ್ಮ ತಾಯಿಯನ್ನು ನಿರಾಶೆಗೊಳಿಸಬಾರದು ಎನ್ನುವ ನಿಬಂಧನೆಗೆ ಮಕ್ಕಳು ಒಳಗಾಗಿರುತ್ತಾರೆ ಮತ್ತು ಮೌಲ್ಯದ ಮುಸುಕಿನಲ್ಲಿ ಬದುಕಿನ ಕುರಿತಾದ ಹಗೆತನವನ್ನು ಅವರಿಗೆ ಕಲಿಸಲಾಗುತ್ತದೆ. ಪ್ರಾಮಾಣಿಕವಾದ ಸ್ವ ಪ್ರೀತಿಯ ತಾಯಿ ತನ್ನ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಾಳೆ ಎನ್ನುವುದನ್ನ ಅಭ್ಯಾಸ ಮಾಡಲು ಯಾರಿಗಾದರೂ ಅವಕಾಶ ದೊರೆತರೆ ಗೊತ್ತಾಗುತ್ತದೆ, ಪ್ರೀತಿ ಖುಶಿ, ಆನಂದ ಎಂದರೇನು ಎನ್ನುವುದನ್ನ ಮಕ್ಕಳು ಅನುಭವಿಸಲು, ಅವರು ತನ್ನನ್ನು ಪ್ರೀತಿಸಿಕೊಳ್ಳುವ ತಾಯಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಅತ್ಯುತ್ತಮ ದಾರಿ ಬೇರೆ ಇಲ್ಲ.

ಸ್ವ ಪ್ರೀತಿಯ ಕುರಿತಾದ ಈ ಪರಿಕಲ್ಪನೆಗಳನ್ನ ಸಂಕ್ಷಿಪ್ತ ರೂಪದಲ್ಲಿ ಹೇಳಲು, ಮೇಯಿಸ್ಟರ್ ಎಕ್ ಹಾರ್ಟ ನ ಈ ಮಾತಿಗಿಂತ ಬೇರೆ ಉತ್ತಮವಾದ ಸೂಕ್ತಿ ಇಲ್ಲ :

“ ನೀವು ನಿಮ್ಮನ್ನು ಪ್ರೀತಿಸಿಕೊಳ್ಳಬಲ್ಲಿರಾದರೆ ಬೇರೆ ಎಲ್ಲರನ್ನೂ ನಿಮ್ಮಂತೆಯೇ ಪ್ರೀತಿಸಬಲ್ಲಿರಿ. ಇನೊಬ್ಬ ಮನುಷ್ಯನನ್ನ, ನೀವು ನಿಮ್ಮನ್ನ ಪ್ರೀತಿಸಿಕೊಳ್ಳುವುದಕ್ಕಿಂತ ಕಡಿಮೆ ಪ್ರೀತಿಸುವಿರಾದರೆ, ನಿಮ್ಮನ್ನು ಪ್ರೀತಿಸಿಕೊಳ್ಳುವಲ್ಲಿಯೂ ನೀವು ಯಶಸ್ಸು ಕಾಣಲಾರಿರಿ. ಆದರೆ ನೀವು ಎಲ್ಲರನ್ನೂ ಒಂದೇ ರೀತಿಯಲ್ಲಿ ಪ್ರೀತಿಸಬಲ್ಲಿರಾದರೆ ನಿಮ್ಮನ್ನೂ ಸೇರಿಸಿ, ಆಗ ಎಲ್ಲರನ್ನೂ ಒಬ್ಬನೇ ಮನುಷ್ಯನೆಂದು ತಿಳಿದು ಪ್ರೀತಿಸುತ್ತೀರಿ. ಆ ವ್ಯಕ್ತಿ ದೇವರೂ ಆಗಿರುತ್ತಾನೆ, ಮನುಷ್ಯನೂ ಆಗಿರುತ್ತಾನೆ. ಆದ್ದರಿಂದ ತನ್ನನ್ನು ತಾನು ಪ್ರೀತಿಸಿಕೊಳ್ಳುವಂತೆಯೇ ಇತರರನ್ನೂ ಪ್ರೀತಿಸುವ ಮನುಷ್ಯ ನೀತಿವಂತ, ಮಹಾ ಮನುಷ್ಯ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply