ಮನೋನಿಯಂತ್ರಣವಿದ್ದರೆ ಮಾತ್ರ ಕಾರ್ಯಸಿದ್ಧಿ : ಸುಭಾಷಿತ

ಇಂದಿನ ಸುಭಾಷಿತ, ‘ಮಾಂಡೂಕ್ಯಕಾರಿಕಾ’ದಿಂದ…


ಮನಸೋ ನಿಗ್ರಹಾಯತ್ತಮಭಯಂ ಸರ್ವಯೋಗಿನಾಮ್ |
ದುಃಖಕ್ಷಯಃ ಪ್ರಬೋಧಶ್ಚಾಪ್ಯಕ್ಷಯಾ ಶಾಂತಿರೇವ ಚ || ಮಾಂಡೂಕ್ಯಕಾರಿಕಾ ||
“ಎಲ್ಲ ಯೋಗಿಗಳ ಲಕ್ಷಣವಾದ ಅಭಯವು ಅವರ ಮೋನಿಗ್ರಹದ ಫಲ. ಎಲ್ಲ ಶೋಕದ ನಾಶಕ್ಕೂ ಆತ್ಮಜ್ಞಾನಪ್ರಾಪ್ತಿಗೂ ಶಾಶ್ವತಶಾಂತಿಗೂ ಕಾರಣವಾಗಬಲ್ಲ ಏಕೈಕ ಸಾಧನವೆಂದರೆ ಮನಸ್ಸಿನ ನಿಗ್ರಹವೇ” ಎನ್ನುತ್ತದೆ ಮಾಂಡೂಕ್ಯಕಾರಿಕಾದ ಒಂದು ಸುಭಾಷಿತ.

ನಾವು ಬಹುತೇಕರು ಮನಸ್ಸಿನ ಗುಲಾಮರಾಗಿದ್ದೇವೆ. ಈ ಮನಸ್ಸಾದರೂ ಹುಚ್ಚುಕುದುರೆಯಂತೆ ಕಡಿವಾಣವಿಲ್ಲದೆ ನಾಗಾಲೋಟ ನಡೆಸಿರುತ್ತದೆ. ಅದರ ವೇಗಕ್ಕೆ, ಅದು ಚಲಿಸುವ ದಿಕ್ಕುಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲಾಗದೆ ಹೈರಾಣಾಗಿಬಿಡುತ್ತೇವೆ. ನಾವು ಗೊಂದಲಕ್ಕೆ ಒಳಗಾಗುವುದು, ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದು, ದುಡುಕುವುದು – ಇವೆಲ್ಲಕ್ಕೂ ನಿಯಂತ್ರಣವಿಲ್ಲದ ಮನಸ್ಸೇ ಕಾರಣ.
ಆದ್ದರಿಂದಲೇ ಜ್ಞಾನಿಗಳು ‘ಮನೋನಿಯಂತ್ರಣವಿಲ್ಲದೆ ಯಾವ ಕೆಲಸವನ್ನು ಆರಂಭಿಸಿದರೂ ಅದು ವ್ಯರ್ಥವಾಗುತ್ತದೆ” ಎಂದಿರುವುದು. ಮನಸ್ಸಿನ ಹರಿವಿನಂತೆ ನಾವು ಕ್ಷಣಚಿತ್ತ ಕ್ಷಣಪಿತ್ಥವೆಂದು ವರ್ತಿಸಿದರೆ ನಾವು ಕೈಗೊಂಡ ಕೆಲಸ ಪೂರ್ಣಗೊಳ್ಳುವುದಾದರೂ ಹೇಗೆ?
ಮಂಡೂಕ್ಯಕಾರಿಕಾ ಹೇಳುತ್ತಿರುವುದು ಇದನ್ನೇ. ಮನಸ್ಸಿನ ಮೇಲೆ ನಿಗ್ರಹವಿದ್ದರೆ, ಅದನ್ನು ಬೇಕಾಬಿಟ್ಟಿಯಾಗಿ ಹರಿಯಲು ಬಿಡದೆ ನಿಯಂತ್ರಣದಲ್ಲಿಟ್ಟುಕೊಂಡರೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ನಮ್ಮ ಕೆಲಸಗಳನ್ನು ಸಾಧಿಸುವುದು ಸುಲಭವಾಗುತ್ತದೆ. ನಿರಾಶೆ, ವೈಫಲ್ಯಗಳಿಂದ ಶೋಕ ಉಂಟಾಗುವುದೂ ತಪ್ಪುತ್ತದೆ.
“ಹಾಗಾದರೆ ಈ ಮನಸ್ಸನ್ನು ನಿಗ್ರಹಿಸುವುದು ಹೇಗೆ? ಅದು ಬಹಳ ಕಷ್ಟ ಅಲ್ಲವೇ?” ಎಂದು ಕೇಳಬಹುದು. ಖಂಡಿತವಾಗಿಯೂ ಮನೋನಿಗ್ರಹ ಕಷ್ಟದ ಸಂಗತಿಯೇ. ಆದರೆ, ದೃಢನಿಶ್ಚಯ ಮತ್ತು ಸತತ ಅಭ್ಯಾಸದಿಂದ ಸಾಧನೆಯಾಗದ ಯಾವ ಕೆಲಸವೂ ಇಲ್ಲ. ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತಿದೆ, ಚಂಚಲವಾಗಿ ಹರಿಸುತ್ತಿದೆ ಅನ್ನಿಸಿದಾಗೆಲ್ಲ ಅದನ್ನು ಎಳೆದು ಒಂದು ವಿಷಯದ ಗೂಟಕ್ಕೆ ಕಟ್ಟಿಹಾಕಿ. ಈ ಪ್ರಕ್ರಿಯೆಯೂ ಒಂದು ಬಗೆಯ ‘ಧ್ಯಾನ’ವೇ. ಹೀಗೆ ಮಾಡುವುದರಿಂದ ನಿಮಗೆ ಕ್ರಮೇಣ ಏಕಾಗ್ರತೆ ಸಿದ್ಧಿಸುತ್ತದೆ. ಒಮ್ಮೆ ನಿಮಗೆ ಏಕಾಗ್ರತೆ ಸಾಧಿಸುವ ವಿದ್ಯೆ ಸಿದ್ಧಿಸಿತು ಎಂದರೆ, ಮುಂದೆ ಮನೋನಿಗ್ರಹ ಒಂದು ಕಠಿಣ ಸವಾಲಾಗಿ ಉಳಿಯುವುದೇ ಇಲ್ಲ!

Leave a Reply