ಈಶಾವಾಸ್ಯಮಿದಂ ಸರ್ವಂ : ದಿನದ ಸುಭಾಷಿತ

‘ನನ್ನ’ದೆನ್ನುವಿಕೆಯೇ ‘ನಾನು’ಇರುವಿಕೆಯೇ ಪರಮಾತ್ಮನಿರುವಿಕೆಗೆ ಅಡ್ಡಿ…

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿಧ್ಧನಂ

ಉಪನಿಷತ್ ಅಂದರೆ ಸಮೀಪದಿಂದ ಆಲಿಸುವಂಥದ್ದು ಎಂದು.
ಅಂದರೆ ಸಮೀಪದಿಂದ ಬೇರೆಯವರು ಹೇಳಿದ್ದನ್ನು ಕೇಳುವುದೂ ಅಲ್ಲ , ಅಥವಾ ಧ್ವನಿಮುದ್ರಕಗಳ ಹತ್ತಿರ ಕೇಳುವಂತದ್ದೂ ಅಲ್ಲ..
ಅದೆಷ್ಟು ಹತ್ತಿರ ಅಂದರೆ ಅದೇ ನಾವಾಗುವಷ್ಟು ಹತ್ತಿರ.

‘ಯಾವುದು ಇದೆಲ್ಲ ಇದೆಯೊ ಎಲ್ಲವೂ ಪರಮಾತ್ಮದ ಆವಾಸ ಎಂದು ಪರಿಭಾವಿಸಿ ಇದೆಲ್ಲವನ್ನೂ ಎಲ್ಲರದ್ದು ಎಂದರಿತು ಇನ್ನೊಬ್ಬನಿಗೂ ಇರಿಸಿ ನೀನೂ ಅನುಭವಿಸು. ಇನ್ನೊಬ್ಬನ ಸ್ವತ್ತನ್ನು ಅಪಹರಿಸಬೇಡ’.

ಏಕೆ ‘ಪರಮಾತ್ಮ’ನದೆಂದು ಪರಿಭಾವಿಸಬೇಕು ?
ಏಕೆಂದರೆ ‘ನನ್ನ’ದೆನ್ನುವಿಕೆಯೇ ‘ನಾನು’ಇರುವಿಕೆಯೇ ಪರಮಾತ್ಮನಿರುವಿಕೆಗೆ ಅಡ್ಡಿ.
‘ನನ್ನತ್ವ’ ಎಂಬ ಗುರುತ್ವದ ಮೀರುವಿಕೆಯಿಂದಲೇ ಅದು ಪರಮಾತ್ಮ. ಆಕಾರ ಇರುವ ಎಲ್ಲ ವಸ್ತುಗಳಿಂದ’ನನ್ನತ್ವ’ ಎಂಬ ಗುರುತ್ವ ಮೀರುವಿಕೆಯೇ ಆನಂದದ ದಾರಿ.
ಏಕೆ ಪರಮಾತ್ಮನದೆಂದು ಪರಿಭಾವಿಸಬೇಕೆಂದರೆ ಅದು ಪರಮಾತ್ಮನಿಗೆ ಮಾಡುವ ಉಪಕಾರವಲ್ಲ,
ನಮ್ಮ ನಿರಾಳತೆಗೆ, ಶಾಂತಿಗೆ, ಆನಂದಕ್ಕೆ..
ಸಂಸಾರಬಿಡಬೇಕಿಲ್ಲ, ಕೆಲಸ ಬಿಡಬೇಕಿಲ್ಲ, ದಿಗಂಬರರಾಗಬೇಕಿಲ್ಲ, ಬಟ್ಟೆ ಬದಲಾಯಿಸಬೇಕಿಲ್ಲ..
ಇನ್ನೊಬ್ಬನಿಗೂ ಕೊಟ್ಟು ನೀನೂ ಅನುಭವಿಸು .

ಕೇವಲ ‘ಸ್ವಾಮ್ಯತ್ವ’ ತ್ಯಜಿಸು ‘ವಿಶ್ವಸ್ಥ’ ಆಗು
ತಕ್ಷಣ ಸರ್ವಕ್ಕೂ ‘ಈಶ'(ಒಡೆಯ) ನಾಗುವೆ.

ಅತೀ ಸಂಗ್ರಹವೂ ಕಳ್ಳತನವೇ..
ಏಕೆಂದರೆ ಅದು ಇನ್ನೊಬ್ಬನನ್ನು ಕಳ್ಳತನಕ್ಕೆ ಪ್ರೇರೇಪಿಸುತ್ತದೆ. ಆಗ ರಕ್ಷಣೆಯ ಭಯ , ಆಶಾಂತಿ.
ಇದು ಪಠಿಸುವುದಲ್ಲ , ‘ಆಗುವುದು’.
ಇದಕ್ಕೆ ‘ವೇದಾಂತ’ ಎನ್ನುವರು. ‘ವೇದ’ಅಂದರೆ ಜ್ಞಾನ ‘ಅಂತ’ ಅಂದರೆ ತುದಿ .
ಯಾರು ಜ್ಞಾನ ಶಿಖರದ ತುದಿ ಏರಿರುವರೋ ಅವರು, ಮಾನವರಿಗೆ ನೀಡಿದ ದೇಶ , ಕಾಲಾತೀತ ವಕ್ತವ್ಯ.
ಅವರ ಹೆಸರಿಲ್ಲ, ಊರಿಲ್ಲ, ಪಂಥವಿಲ್ಲ !!

Leave a Reply