ದೈವ ಪ್ರೀತಿ : art of love #26

ಎಲ್ಲ ದೇವತಾ ಪ್ರಧಾನ ಧರ್ಮಗಳಲ್ಲಿ, ಅದು ಏಕದೈವತಾರಾಧನೆಯಾಗಿರಬಹುದು ಅಥವಾ ಬಹುದೈವತಾರಾಧನೆಯಾಗಿರಬಹುದು, ಇಲ್ಲಿ ದೇವರು ಒಂದು ಅತ್ಯಂತ ದೊಡ್ಡ ಮೌಲ್ಯ, ಮನುಷ್ಯ ಮುಟ್ಟಬಯಸುವ ಪರಮ ಗುರಿ. ಹಾಗಾಗಿ ಯಾವುದು ಮನುಷ್ಯನ ಒಳ್ಳೆಯದೆನ್ನಬಹುದಾದ ಪರಮ ಆಕಾಂಕ್ಷೆಯೋ ಅದು ದೇವರ ಪಟ್ಟವನ್ನು ಅಲಂಕರಿಸುತ್ತದೆ. ಆದ್ದರಿಂದ ದೇವರ ಕುರಿತಾದ ತಿಳುವಳಿಕೆಯ ಪರಿಕಲ್ಪನೆ, ದೇವರನ್ನು ಪೂಜಿಸುವ ಮನುಷ್ಯನ ವ್ಯಕ್ತಿತ್ವದ ರಚನೆಯನ್ನು ವಿಶ್ಲೇಷಿಸುವುದರ ಮೂಲಕ ಆರಂಭವಾಗಬೇಕು…| ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ನೋಡಿ… https://aralimara.com/2022/06/05/love-39/

*****

ಮೇಲೆ ವಿವರಿಸಿದಂತೆ, ನಮ್ಮ ಪ್ರೀತಿಯ ಅವಶ್ಯಕತೆಯ ನೆಲೆ ಇರುವುದು ಪ್ರತ್ಯೇಕತೆಯ (separateness) ಕುರಿತಾದ ನಮ್ಮ ಅನುಭವದಲ್ಲಿ ಮತ್ತು ಈ ಕಾರಣವಾಗಿ ಹುಟ್ಟಿಕೊಂಡಿರುವ ಆತಂಕವನ್ನು ಒಂದಾಗುವಿಕೆಯ (union)ಅನುಭವದ ಮೂಲಕ ನಿವಾರಿಸಿಕೊಳ್ಳುವುದರಲ್ಲಿ. ಪ್ರೀತಿಯ ಧಾರ್ಮಿಕ ರೂಪ ಯಾವುದನ್ನ ದೈವಪ್ರೀತಿ ಎನ್ನಲಾಗುತ್ತದೆಯೋ, ಅದು ಕೂಡ ಮನೋವೈಜ್ಞಾನಿಕವಾಗಿ ಹೇಳಬೇಕೆಂದರೆ ಇದಕ್ಕಿಂತ ಬೇರೆ ಏನಲ್ಲ. ದೈವಪ್ರೀತಿ ಹುಟ್ಟಿಕೊಳ್ಳುವುದು ಕೂಡ ಪ್ರತ್ಯೇಕತೆಯನ್ನು ಒಂದಾಗುವಿಕೆಯ ಮೂಲಕ ಮೀರಬಯಸುವ ಮನುಷ್ಯನ ಅವಶ್ಯಕತೆ ಕಾರಣವಾಗಿ. ದೈವಪ್ರೀತಿಗೂ, ಮನುಷ್ಯ ಪ್ರೀತಿಯಂತೆ ಅನೇಕ ಗುಣಲಕ್ಷಣಗಳು, ಆಯಾಮಗಳು ಇವೆ ಮತ್ತು ಬಹುತೇಕ ಎರಡೂ ಕಡೆಗಳಲ್ಲಿ ನಾವು ಒಂದೇ ರೀತಿಯ ವ್ಯತ್ಯಾಸವನ್ನು ಕಾಣುತ್ತೇವೆ.

ಎಲ್ಲ ದೇವತಾ ಪ್ರಧಾನ ಧರ್ಮಗಳಲ್ಲಿ, ಅದು ಏಕದೈವತಾರಾಧನೆಯಾಗಿರಬಹುದು ಅಥವಾ ಬಹುದೈವತಾರಾಧನೆಯಾಗಿರಬಹುದು, ಇಲ್ಲಿ ದೇವರು ಒಂದು ಅತ್ಯಂತ ದೊಡ್ಡ ಮೌಲ್ಯ, ಮನುಷ್ಯ ಮುಟ್ಟಬಯಸುವ ಪರಮ ಗುರಿ. ಹಾಗಾಗಿ ಯಾವುದು ಮನುಷ್ಯನ ಒಳ್ಳೆಯದೆನ್ನಬಹುದಾದ ಪರಮ ಆಕಾಂಕ್ಷೆಯೋ ಅದು ದೇವರ ಪಟ್ಟವನ್ನು ಅಲಂಕರಿಸುತ್ತದೆ. ಆದ್ದರಿಂದ ದೇವರ ಕುರಿತಾದ ತಿಳುವಳಿಕೆಯ ಪರಿಕಲ್ಪನೆ, ದೇವರನ್ನು ಪೂಜಿಸುವ ಮನುಷ್ಯನ ವ್ಯಕ್ತಿತ್ವದ ರಚನೆಯನ್ನು ವಿಶ್ಲೇಷಿಸುವುದರ ಮೂಲಕ ಆರಂಭವಾಗಬೇಕು.

ಮಾನವ ಜನಾಂಗದ ಬೆಳವಣಿಗೆಯ ಕುರಿತಾಗಿ ನಮಗೆ ಗೊತ್ತಿರುವಷ್ಟು ತಿಳುವಳಿಕೆಯ ಆಧಾರದ ಮೇಲೆ ಹೇಳಬಹುದಾದರೆ, ಈ ಬೆಳವಣಿಗೆಯನ್ನ ಪ್ರಕೃತಿಯಿಂದ, ತಾಯಿಯಿಂದ, ರಕ್ತ ಸಂಬಂಧಗಳಿಂದ ಮತ್ತು ನೆಲದಿಂದ ಮನುಷ್ಯನ ಹೊರಹೊಮ್ಮುವಿಕೆ ಎಂದು ವಿಶದೀಕರಿಸಿ ಹೇಳಬಹುದು. ಮಾನವ ಇತಿಹಾಸದ ಶುರುವಾತಿನಲ್ಲಿ ಮನುಷ್ಯ, ಪ್ರಕೃತಿಯೊಂದಿಗಿನ ತನ್ನ ಮೂಲ ಐಕ್ಯತೆಯಿಂದ ಹೊರ ಹಾಕಲ್ಪಟ್ಟನಾದರೂ, ಮನುಷ್ಯ ಬದುಕಿನ ಕೆಲವು ಪ್ರಾಥಮಿಕ ಬಂಧಗಳಿಗೆ ಇನ್ನೂ ಸಿಕ್ಕಿಹಾಕಿಕೊಂಡಿದ್ದ. ಈ ಪ್ರಾಥಮಿಕ ಬಂಧಗಳಿಗೆ ಜೋತು ಬೀಳುವುದರಲ್ಲಿ ಅಥವಾ ಈ ಬಂಧಗಳಿಗೆ ವಾಪಸ್ಸಾಗುವುದರಲ್ಲಿ ಅವನು ತನ್ನ ಸುರಕ್ಷತೆಯನ್ನು ಕಂಡುಕೊಂಡಿದ್ದ. ಈಗಲೂ ಮನುಷ್ಯ, ಪ್ರಾಣಿ ಮತ್ತು ಅರಣ್ಯ ಜಗತ್ತಿನೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾನೆ ಮತ್ತು ನೈಸರ್ಗಿಕ ಜಗತ್ತಿನೊಂದಿಗೆ ಕೂಡಿ ಬದುಕುವ ಮೂಲಕ ತನ್ನ ಒಂದಾಗುವಿಕೆಯನ್ನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಹಲವಾರು ಪ್ರಾಚೀನ ಧರ್ಮಗಳಲ್ಲಿ ಈ ಹಂತದ ಬೆಳವಣಿಗೆಯನ್ನು ಸೂಚಿಸುವ ಸಾಕ್ಷಿಗಳಿವೆ. ಪ್ರಾಣಿಗಳನ್ನ ಕುಲ ಲಾಂಛನವಾಗಿ ಬಳಸಲಾಗುತ್ತಿತ್ತು ಮತ್ತು, ಗಂಭೀರ ಧಾರ್ಮಿಕ ವಿಧಿಗಳಲ್ಲಿ ಅಥವಾ ಯುದ್ಧದ ಸಂದರ್ಭಗಳಲ್ಲಿ ಮನುಷ್ಯ, ಪ್ರಾಣಿಗಳ ಮುಖವಾಡಗಳನ್ನು ಧರಿಸುತ್ತಿದ್ದ ಮತ್ತು ಪ್ರಾಣಿಗಳನ್ನು ದೇವರೆಂದು ಕಲ್ಪಿಸಿಕೊಂಡು ಪೂಜೆ ಮಾಡುತ್ತಿದ್ದ. ಮಾನವ ಬೆಳವಣಿಗೆಯ ಮುಂದಿನ ಹಂತದಲ್ಲಿ, ಯಾವಾಗ ಮನುಷ್ಯ ಕುಶಲಕರ್ಮಿಯಾಗಿ ರೂಪಗೊಂಡು ತನ್ನ ಕಲಾ ಕೌಶಲ್ಯವನ್ನು ಬೆಳೆಸಿಕೊಂಡನೋ, ಯಾವಾಗ ಮನುಷ್ಯ ತನ್ನ ಅವಶ್ಯಕತೆಗಳಿಗಾಗಿ ಪ್ರಕೃತಿಯ ಮೇಲೆ ಅವಲಂಬಿತನಾಗುವುದನ್ನ ನಿಲ್ಲಿಸಿದನೋ, ತನ್ನ ಆಹಾರಕ್ಕಾಗಿ ಹಣ್ಣು, ಪ್ರಾಣಿಗಳನ್ನು ಅವಲಂಬಿಸುವುದನ್ನ ಕಡಿಮೆ ಮಾಡಿಕೊಂಡನೋ ಆಗ ತನ್ನ ಕೈಯ್ಯಾರೆ ತಯಾರಿಸಿದ ವಸ್ತುವನ್ನೇ ದೇವರು ಎಂದು ಪೂಜಿಸತೊಡಗಿದ. ಇದು ಮನುಷ್ಯ ಮಣ್ಣು, ಬೆಳ್ಳಿ, ಬಂಗಾರಗಳಿಂದ ತಯಾರಿಸಿದ ಮೂರ್ತಿಗಳನ್ನು ಪೂಜಿಸುವ ಅವನ ಬೆಳವಣಿಗೆಯ ಹಂತ. ಮನುಷ್ಯ ತನ್ನ ಶಕ್ತಿ ಸಾಮರ್ಥ್ಯವನ್ನ, ಕೌಶಲ್ಯವನ್ನ ತಾನೇ ತಯಾರಿಸಿದ ಸಂಗತಿಯ ಮೇಲೆ ಆರೋಪಿಸುತ್ತ, ತನ್ನ ಸ್ವತ್ತನ್ನೇ, ತನ್ನ ಸಾಮರ್ಥ್ಯವನ್ನೇ ಇನ್ನೊಂದು ಪ್ರತ್ಯೇಕಗೊಂಡಿರುವ ಸ್ಥಿತಿಯಲ್ಲಿ ಆರಾಧಿಸತೊಡಗಿದ. ಇದನ್ನೂ ದಾಟಿದ ಹಂತದಲ್ಲಿ ಮನುಷ್ಯ, ದೇವರಿಗೆ ಮನುಷ್ಯನ ರೂಪ ನೀಡಲು ಆರಂಭ ಮಾಡಿದ. ಬಹುಶಃ ಮನುಷ್ಯ ಹೀಗೆ ಮಾಡುವುದು, ಅವನಿಗೆ ತನ್ನ ಬಗ್ಗೆ ಇನ್ನೂ ಹೆಚ್ಚಿನ ಅರಿವು ಸಾಧ್ಯವಾದಾಗ, ಮತ್ತು ಮನುಷ್ಯ, ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ, ಗೌರವಶಾಲಿ “ಸಂಗತಿ” ಎನ್ನುವುದನ್ನ ಅವನು ಕಂಡುಕೊಂಡಾಗ. ಮನುಷ್ಯರೂಪಿ ದೇವರ ಆರಾಧನೆಯ ಈ ಹಂತದಲ್ಲಿ, ನಾವು ಮನುಷ್ಯನ ಬೆಳವಣಿಗೆಯ ಎರಡು ಆಯಾಮಗಳನ್ನ ಗುರುತಿಸಬಹುದು. ಮೊದಲನೇಯದು, ದೇವರ ಗಂಡು ಅಥವಾ ಹೆಣ್ಣಿನ ಸ್ವರೂಪ ಮತ್ತು ಎರಡನೇಯದು, ಮನುಷ್ಯ ಸಾಧ್ಯಮಾಡಿಕೊಂಡಿರುವ ಪ್ರಬುದ್ಧತೆಯ ಪ್ರಮಾಣ ಮತ್ತು, ಅದು ನಿರ್ಧರಿಸುವ ಅವನ ದೇವರುಗಳ ಸ್ವರೂಪ ಹಾಗು ಈ ದೇವರನ್ನು ಕುರಿತಾದ ಅವನ ಪ್ರೀತಿಯ ಸ್ವರೂಪ.

ಮೊದಲು ನಾವು ಮಾತೃಪ್ರಧಾನ ಧರ್ಮಗಳು ಪಿತೃಪ್ರಧಾನ ಧರ್ಮಗಳಾಗಿ ಮಾರ್ಪಾಡುಗೊಂಡ ಬದಲಾವಣೆಯ ಸ್ವರೂಪದ ಬಗ್ಗೆ ಸ್ವಲ್ಪ ಗಮನಿಸೋಣ. ಹತ್ತೊಂಭತ್ತನೇ ಶತಮಾನದ ಮದ್ಯಭಾಗದಲ್ಲಿನ ಬಾಕೋಫೆನ್ ಮತ್ತು ಮೊರ್ಗನ್ ರ ಮಹಾ ನಿರ್ಣಾಯಕ ಅನ್ವೇಷಣೆಯ ಪ್ರಕಾರ (ಅವರ ಹಲವಾರು ತೀರ್ಮಾನಗಳು ಅಕಾಡೆಮಿಕ್ ವಲಯದಲ್ಲಿ ತಿರಸ್ಕೃತಗೊಂಡಿದ್ದಾಗ್ಯೂ) ಕೆಲವು ಸಂಸ್ಕೃತಿಗಳಲ್ಲಿಯಾದರೂ ಪಿತೃಪ್ರಧಾನ ಹಂತಕ್ಕಿಂತ ಮುನ್ನ ಮಾತೃಪ್ರಧಾನ ಹಂತ ಇದ್ದದ್ದು ನಿಜ. ಮಾತೃಪ್ರಧಾನ ಹಂತದಲ್ಲಿ, ತಾಯಿ ಅತ್ಯಂತ ಎತ್ತರದಲ್ಲಿರುವವಳಾಗಿದ್ದರಿಂದ ಅವಳೇ ಪ್ರಧಾನ ದೇವತೆ ಜೊತೆಗೆ ಕುಟುಂಬ ಹಾಗು ಸಮಾಜದಲ್ಲಿ ಅವಳದೇ ಅಧಿಕಾರ. ಮಾತೃಪ್ರಧಾನ ಧರ್ಮ ವ್ಯವಸ್ಥೆಯ ತಿರುಳನ್ನು ತಿಳಿದುಕೊಳ್ಳಬೇಕಾದರೆ, ಈಗಾಗಲೇ ತಾಯಿ ಪ್ರೀತಿಯ ತಿರುಳಿನ ಬಗ್ಗೆ ಹೇಳಿರುವ ಮಾತುಗಳನ್ನ ನಾವು ನೆನಪಿಸಿಕೊಂಡರೆ ಸಾಕು. ತಾಯಿ ಪ್ರೀತಿಗೆ ಯಾವ ಷರತ್ತುಗಳೂ ಇಲ್ಲ, ಅದು ರಕ್ಷಣೆಯ ಭಾರ ಹೊತ್ತಂಥಹದು, ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವಂಥದು. ತಾಯಿ ಪ್ರೀತಿ ಬೇಷರತ್ ಆಗಿರುವುದರಿಂದ ಅದನ್ನ ಹತೋಟಿಗೆ ತೆಗೆದುಕೊಳ್ಳುವುದು ಅಥವಾ ಅದರ ಮೇಲೆ ಅಧಿಕಾರ ಸ್ಥಾಪಿಸುವುದು ಸಾಧ್ಯವಿಲ್ಲ. ತಾಯಿ ಪ್ರೀತಿಯ ಹಾಜರಾತಿಯೇ, ಪ್ರೀತಿಸಲ್ಪಡುವ ವ್ಯಕ್ತಿಗೆ ಪರಮಾನಂದದ ಅನುಭವವನ್ನು ಸಾಧ್ಯಮಾಡುತ್ತದೆ ಮತ್ತು ಅನುಪಸ್ಥಿತಿ, ಅನಾಥಪ್ರಜ್ಞೆಯನ್ನ ಹಾಗು ತೀವ್ರ ಹತಾಶೆಯನ್ನ. ತಾಯಿ ತನ್ನ ಮಕ್ಕಳನ್ನ ಪ್ರೀತಿಸುವುದು, ಅವರು ಆಕೆಯ ಸ್ವಂತ ಮಕ್ಕಳಾಗಿರುವ ಕಾರಣಕ್ಕಾಗಿಯೇ ಹೊರತು, ಅವರು “ ಉತ್ತಮ”, ಆಜ್ಞಾಧಾರಕ, ಅವಳ ಎಲ್ಲ ಬಯಕೆಗಳನ್ನ ಪೂರೈಸುವ ಮಕ್ಕಳಾಗಿರುವ ಕಾರಣಕ್ಕಾಗಿ ಅಲ್ಲ, ಹಾಗಾಗಿ ತಾಯಿ ಪ್ರೀತಿ ನಿಂತಿರುವುದು ಸಮಾನತೆಯ ಆಧಾರದ ಮೇಲೆ. ಒಂದೇ ತಾಯಿಯ ಮಕ್ಕಳಾಗಿರುವುದರಿಂದ ಎಲ್ಲ ಮನುಷ್ಯರೂ ಸಮಾನರು, ಅವರೆಲ್ಲರೂ ಭೂಮಿತಾಯಿಯ ಮಕ್ಕಳು.

**************************

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply