ಸುಖ – ಶಾಂತಿ ನಿಮ್ಮದಾಗಬೇಕೆ? ಹಾಗಾದರೆ ಈ 6 ಗುಣಗಳನ್ನು ಗುಡಿಸಿ ಹೊರಹಾಕಿ!

poster

ಈ ಆರು ಗುಣಗಳನ್ನು ಅಂತರಂಗದಿಂದ ಗುಡಿಸಿ ಹೊರಹಾಕಿ. ಅನಂತರ ಶಾಂತಿ ನೆಮ್ಮದಿಗಳು ತಾವೇತಾವಾಗಿ ನಿಮ್ಮ ಹೃದಯದಲ್ಲಿ ಬಂದು ನೆಲೆಸುವವು…. | ಸಾ.ಹಿರಣ್ಮಯಿ


“ಅಸೂಯೆ, ನಿರ್ದಯೆ, ಅಸಂತುಷ್ಟಿ, ಕೋಪ, ಸಂಶಯ ಪ್ರವೃತ್ತಿ, ಮತ್ತೊಬ್ಬರ ಸಂಪತ್ತು ಅಪಹರಿಸಿ ಸುಖಿಸುವುದು – ಈ ಆರು ದುರ್ಗುಣಗಳು ಎಂಥವರಿಗೂ ದುಃಖವನ್ನೇ ನೀಡುತ್ತದೆ. ಈ ಆರನ್ನು ತ್ಯಜಿಸಿದರಷ್ಟೆ ನಮಗೆ ಸುಖ ಶಾಂತಿ” ಎಂದು ಹೇಳುತ್ತದೆ ಪಂಚತಂತ್ರದ ‘ಮಿತ್ರಲಾಭ’ ಪರಿಚ್ಛೇದದಿಂದ ಆಯ್ದ ಈ ಸುಭಾಷಿತ.

ಅಸೂಯೆ ಸದಾ ನಾವು ಮತ್ತೊಬ್ಬರ ಬಗ್ಗೆ ಯೋಚಿಸುತ್ತಾ ಇರುವಂತೆ ಮಾಡುತ್ತದೆ. ಮತ್ತೊಬ್ಬರ ಏಳಿಗೆಯನ್ನು ಸಹಿಸದ ಅಸೂಯೆಯಿಂದ ಅವರನ್ನು ಕ್ರಮೇಣ ದ್ವೇಷಿಸತೊಡಗುತ್ತೇವೆ. ಅವರು ಹಾಳಾಗಲಿ ಎಂದು ಬಯಸತೊಡಗುತ್ತೇವೆ. ಹೀಗೆ ಸದಾ ಆ ವ್ಯಕ್ತಿಯ ಮೇಲೇ ಗಮನ ಇರಿಸುವ ನಾವು ನಮ್ಮ ಅಂತರಂಗದ ಪ್ರಗತಿಗೆ, ನಮ್ಮ ಬಾಹ್ಯ ಬೆಳವಣಿಗೆಗೆ ಒತ್ತುಕೊಡುವುದೇ ಇಲ್ಲ. ಕ್ರಮೇಣ ನಮ್ಮ ಅಸೂಯೆ ನಮ್ಮನ್ನೇ ತಿಂದುಹಾಕುತ್ತದೆ.

ನಿರ್ದಯೆ ನಮ್ಮನ್ನು ಅಸಹಿಷ್ಣುಗಳನ್ನಾಗಿ ಮಾಡುತ್ತದೆ. ದಯೆ ಇಲ್ಲದ ಹೃದಯದಲ್ಲಿ ಕ್ರೌರ್ಯ ನೆಲೆಸುತ್ತದೆ. ಕ್ರೂರಿಗಳು ಯಾರನ್ನೂ ಪ್ರೀತಿಸಲಾರರು. ಪ್ರೀತಿ ಇಲ್ಲದವರು ನೆಮ್ಮದಿಯ ಬದುಕು ಬಾಳಲಾರರು.

ಅಸಂತುಷ್ಟಿ ನಮ್ಮ ಬಹಳ ದೊಡ್ಡ ಶತ್ರು. ಅದು ನಮ್ಮನ್ನು ಸದಾ ಗೊಣಗುತ್ತ ಇರುವಂತೆ ಮಾಡುತ್ತದೆ. ಗೊಣಗಾಟ ನಮ್ಮಲ್ಲಿ ಸದಾ ಕಾಲ ನಕಾರಾತ್ಮಕ ಚಿಂತನೆ ತುಂಬಿರುವಂತೆ ಮಾಡುತ್ತದೆ. ಪರಿಣಾಮ ನಾವು ಸದಾ ಮುಖ ಗಂಟಿಕ್ಕಿಕೊಂಡೇ ಇರುತ್ತೇವೆ. ನಗು ಇಲ್ಲದ ಮುಖ, ಸಂತೃಪ್ತಿಯಿಲ್ಲದ ಮನಸ್ಸು ಯಾರನ್ನೂ ಆಕರ್ಷಿಸುವುದಿಲ್ಲ. ಪರಿಣಾಮ, ನಾವು ಏಕಾಂಗಿಯಾಗಿಬಿಡುತ್ತೇವೆ.

ಕೋಪದ ಕುರಿತು ಹೇಳುವುದೇ ಬೇಡ. ನಾವೆಲ್ಲರೂ ಇದರ ಪರಿಣಾಮವನ್ನು ಚೆನ್ನಾಗಿಯೇ ಅನುಭವಿಸಿದ್ದೇವೆ, ಅನುಭವಿಸುತ್ತಾ ಇದ್ದೇವೆ, ಕೋಪ ನಮ್ಮನ್ನು ವಿಚಲಿತಗೊಳಿಸುತ್ತದೆ. ನಮ್ಮ ಏಕಾಗ್ರತೆ ಕೆಡಿಸುತ್ತದೆ. ನಾವು ಯಾವ ಕೆಲಸವನ್ನೂ ಸಮರ್ಪಕವಾಗಿ ಮಾಡಲಾಗದಂತೆ ತಡೆಯುತ್ತದೆ.


ಸಂಶಯಪ್ರವೃತ್ತಿ ನಮ್ಮನ್ನು ಸದಾ ಕಾಲ ಮತ್ತೊಬ್ಬರ ಚಲನವಲನದ ಮೇಲೆ ನಿಗಾ ಇಡುವಂತೆ ಪ್ರಚೋದಿಸುತ್ತದೆ. ಮತ್ತೊಬ್ಬರು ನಮಗೆ ಮೋಸ ಮಾಡುತ್ತಿದ್ದಾರೆ, ನಮ್ಮನ್ನು ದ್ವೇಷಿಸುತ್ತಿದ್ದಾರೆ ಎಂದೆಲ್ಲ ನಮಗೆ ನಾವೆ ತೀರ್ಮಾನ ಮಾಡಿಕೊಳ್ಳುತ್ತೇವೆ. ಇದರಿಂದಾಗಿ ನಮ್ಮಲ್ಲಿ ದ್ವೇಷ ಭಾವನೆ, ಕ್ರೌರ್ಯಗಳೂ ಹುಟ್ಟಿಕೊಳ್ಳುತ್ತವೆ.

ಕೊನೆಯದಾಗಿ ಮತ್ತೊಬ್ಬರ ಸಂಪತ್ತು ಅಪಹರಿಸಿ ಸುಖಿಸುವುದು. ಇದರ ಅರ್ಥ ಕೇವಲ ಕಳ್ಳತನವಲ್ಲ, ಸೋಮಾರಿತನ, ಸಾಲ ಮಾಡುವುದೂ ಸೇರಿಕೊಂಡಿದೆ. ನಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಸಂಪತ್ತು ಮಾಥ್ರ ನಮ್ಮದು. ಅದನ್ನು ನಾವು ಯಥೇಚ್ಛ ವಿನಿಯೋಗಿಸುವ ಅಧಿಕಾರವಿದೆಯೇ ಹೊರತು ಮತ್ತೊಬ್ಬರ ದುಡಿಮೆಯನ್ನಲ್ಲ. ಹೀಗೆ ಮಾಡುವ ವ್ಯಕ್ತಿ ಆತ್ಮಗೌರವ ಕಳೆದುಕೊಳ್ಳುತ್ತಾರೆ. ಜನರ ದೃಷ್ಟಿಯಲ್ಲೂ ತಾತ್ಸಾರಕ್ಕೆ ಒಳಗಾಗುತ್ತಾರೆ.

ಆದ್ದರಿಂದ ಈ ಆರು ಗುಣಗಳನ್ನು ಅಂತರಂಗದಿಂದ ಗುಡಿಸಿ ಹೊರಹಾಕಿ. ಅನಂತರ ಶಾಂತಿ ನೆಮ್ಮದಿಗಳು ತಾವೇತಾವಾಗಿ ನಿಮ್ಮ ಹೃದಯದಲ್ಲಿ ಬಂದು ನೆಲೆಸುವವು.

Leave a Reply