ದೈವ ಪ್ರೀತಿ (continued……) : Art of love #27

ಧರ್ಮದಲ್ಲಿನ ಪಿತೃಪ್ರಧಾನ ಅಂಶ ದೇವರನ್ನು ತಂದೆಯಂತೆ ಪ್ರೀತಿಸಲು ನನ್ನನ್ನು ಒತ್ತಾಯಿಸುತ್ತದೆ ; ಆಗ ದೇವರನ್ನು ನಾನು ನ್ಯಾಯವಂತ, ಶಿಸ್ತು ಪಾಲಕ ಎಂದುಕೊಳ್ಳುತ್ತೇನೆ, ಅವನು ವರ ಕೊಡುವವನು, ಶಿಕ್ಷೆ ನೀಡುವವನು ಎಂದು ಭಾವಿಸುತ್ತೇನೆ, ಮತ್ತು ಕೊನೆಗೆ ನನ್ನನ್ನು ತನ್ನ ಮೆಚ್ಚಿನ ಮಗುವಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ ಎಂದು ತಿಳಿಯುತ್ತೇನೆ. ಧರ್ಮದಲ್ಲಿನ ಮಾತೃಪ್ರಧಾನ ಅಂಶದ ಪ್ರಕಾರ ನಾನು ದೇವರನ್ನು, ಎಲ್ಲವನ್ನೂ ಅಪ್ಪಿಕೊಳ್ಳುವ ತಾಯಿಯಂತೆ ಪ್ರೀತಿಸುತ್ತೇನೆ. ನನಗೆ ಅವಳ ಪ್ರೀತಿಯಲ್ಲಿ ನಂಬಿಕೆಯಿದೆ. ನಾನು ಬಡವನಾಗಿರಲಿ, ಅಶಕ್ತನಾಗಿರಲಿ, ಪಾಪಿಯಾಗಿರಲಿ ಆಕೆ ಯಾವ ಭೇದವನ್ನೂ ಮಾಡದೇ ನನ್ನ ಪ್ರೀತಿಸುತ್ತಾಳೆ, ಎಂಥ ಪರಿಸ್ಥಿತಿ ಬಂದರೂ ನನ್ನ ರಕ್ಷಣೆ ಮಾಡುತ್ತಾಳೆ, ನನ್ನನ್ನು ಕಾಪಾಡುತ್ತಾಳೆ, ನನ್ನನ್ನು ಕ್ಷಮಿಸುತ್ತಾಳೆ ಎಂದುಕೊಳ್ಳುತ್ತೇನೆ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ನೋಡಿ… : https://aralimara.com/2022/06/11/love-40/

ಮನುಷ್ಯನ ವಿಕಾಸದ ಮುಂದಿನ ಹಂತ, ಯಾವುದರ ಕುರಿತು ನಮಗೆ ಸಂಪೂರ್ಣ ಮಾಹಿತಿ ಇದೆಯೋ, ಯಾವುದನ್ನ ನಾವು ಯಾವ ಊಹೆ ಮತ್ತು ಪುನಾರಚನೆಯಿಲ್ಲದೇ ವ್ಯಾಖ್ಯಾನ ಮಾಡಬಲ್ಲೆವೋ, ಆ ಹಂತವೇ ಪಿತೃಪ್ರಧಾನ ವ್ಯವಸ್ಥೆಯ ಹಂತ. ಈ ಹಂತದಲ್ಲಿ ತಾಯಿಯನ್ನ ಅವಳ ಉಚ್ಚ ಸ್ಥಾನದಿಂದ ಕೆಳಗಿಳಿಸಲಾಯಿತು, ಮತ್ತು ಧಾರ್ಮಿಕ ಹಾಗು ಸಾಮಾಜಿಕ ವಲಯದ ಉನ್ನತ ಸ್ಥಾನವನ್ನ ತಂದೆ ಆಕ್ರಮಿಸಿಕೊಂಡ.

“ತಂದೆ ಪ್ರೀತಿಯ” ಸ್ವರೂಪ ಪ್ರೀತಿಸಲ್ಪಡುವವರಿಂದ ಕೆಲವು ಬೇಡಿಕೆಗಳನ್ನ ನಿರೀಕ್ಷಿಸುತ್ತದೆ, ಕೆಲವು ನೀತಿ ನಿಯಮಗಳನ್ನ, ಕಾನೂನುಗಳನ್ನ ಸ್ಥಾಪಿಸುತ್ತದೆ. ಮಗುವಿನ ಮೇಲಿನ ತಂದೆಯ ಪ್ರೀತಿ, ಮಗು ತಂದೆಯ ಬೇಡಿಕೆಗಳನ್ನು ಎಷ್ಟು ವಿಧೇಯತೆಯಿಂದ ಪೂರೈಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಬಹುತೇಕ ತನ್ನ ಹಾಗೇ ಇರುವ, ತನ್ನ ಎಲ್ಲ ಬೇಡಿಕೆಗಳನ್ವು ವಿಧೇಯತೆಯಿಂದ ಪೂರ್ಣ ಮಾಡುವ, ತನ್ನ ಉತ್ತರಾಧಿಕಾರಿಯಾಗಲು, ತನ್ನ ಸ್ವತ್ತಿನ ಮಾಲಿಕನಾಗಲು ಅರ್ಹವಾಗಿರುವ ಮಗು ಎಂದರೆ, ತಂದೆಗೆ ಅಚ್ಚುಮೆಚ್ಚು. ( ಪಿತೃಪ್ರಧಾನ ವ್ಯವಸ್ಥೆ ಮತ್ತು ಖಾಸಗಿ ಆಸ್ತಿಯನ್ನು ಹೊಂದುವ ವ್ಯವಸ್ಥೆ ಎರಡೂ ಜೊತೆ ಜೊತೆಯೇ ಬೆಳೆದುಕೊಂಡು ಬಂದಂಥವು) ಆದ್ದರಿಂದಲೇ ಪಿತೃಪ್ರಧಾನ ವ್ಯವಸ್ಥೆಯು ಶ್ರೇಣಿಕೃತ ವ್ಯವಸ್ಥೆಯನ್ನೂ ಒಳಗೊಂಡಿರುವಂಥದು, ಹಾಗಾಗಿ ಸಹೋದರರ ನಡುವಿನ ಸಮಾನತೆ ಕೊನೆಗೊಂಡು ಅಲ್ಲಿ ಪರಸ್ಪರರ ನಡುವೆ ಸ್ಪರ್ಧೆ ಮತ್ತು ಕಲಹಕ್ಕೆ ವೇದಿಕೆಯೊಂದು ಸೃಷ್ಟಿಯಾಗಿದೆ. ಭಾರತೀಯ, ಈಜಿಪ್ಶಿಯನ್ ಅಥವಾ ಗ್ರೀಕ್ ಯಾವುದೇ ಸಂಸ್ಕೃತಿಯನ್ನು ಗಮನಿಸಿದಾಗಲೂ, ಅಥವಾ ಯಹೂದಿ-ಕ್ರಿಶ್ಚಿಯನ್ ಹಾಗು ಇಸ್ಲಾಂ ಧರ್ಮ ವ್ಯವಸ್ಥೆಯನ್ನ ಗಮನಿಸಿದಾಗಲೂ, ನಮಗೆ ಸ್ಪಷ್ಟವಾಗುವ ವಿಷಯವೆಂದರೆ, ನಾವು ಪಿತೃಪ್ರಧಾನ ಜಗತ್ತಿನ ನಟ್ಟ ನಡುವೆ, ಅದರ ಎಲ್ಲ ಗಂಡು ದೇವರುಗಳೊಂದಿಗೆ, ಆ ಎಲ್ಲ ದೇವರುಗಳಿಗೆ ಅಧಿಪತಿಯಂತಿರುವ ಇನ್ನೊಬ್ಬ ಗಂಡು ದೇವರೊಂದಿಗೆ, ಅಥವಾ ಎಲ್ಲ ದೇವರುಗಳನ್ನ ತೆಗೆದುಹಾಕಿ ಕೇವಲ ಒಬ್ಬ ಪರಮ ದೇವರನ್ನು ಮಾತ್ರ ಉಳಿಸಿಕೊಂಡಿರುವ ವ್ಯವಸ್ಥೆಯೊಂದಿಗೆ ಬದುಕುತ್ತಿದ್ದೇವೆ. ಆದರೂ “ತಾಯಿ ಪ್ರೀತಿ” ಯ ಬಯಕೆಯನ್ನ ಮನುಷ್ಯ ನ ಹೃದಯದಿಂದ ಸಂಪೂರ್ಣವಾಗಿ ತೆಗೆದು ಹಾಕುವುದು ಸಾಧ್ಯವಿಲ್ಲವಾದ್ದರಿಂದ, ಹೆಣ್ಣು ದೇವತೆಗಳು ಆರಾಧನೆಯ ಸ್ಥಾನದಲ್ಲಿ ಇನ್ನೂ ಕಾಣಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಯಹೂದಿ ಧರ್ಮಾಚರಣೆಯಲ್ಲಿ ದೇವರಲ್ಲಿನ ತಾಯ್ತನದ ಸ್ವರೂಪವನ್ನ ಹಲವಾರು ಅನುಭಾವದ ಧಾರೆಗಳ ಮೂಲಕ ಮತ್ತೆ ಪರಿಚಯಿಸಲಾಗಿದೆ. ಕ್ಯಾಥೋಲಿಕ್ ಧರ್ಮದಲ್ಲಿ ತಾಯಿಯು ಚರ್ಚ ಮತ್ತು ವರ್ಜಿನ್ ಮೇರಿಯ ಮುಖಾಂತರ ಸಂಕೇತಿಕರಿಸಲ್ಪಟ್ಟಿದ್ದಾಳೆ. ಪ್ರೊಟೆಸ್ಟಂಟ್ ಧರ್ಮದಲ್ಲಿ ತಾಯಿ ಸ್ವರೂಪವೂ ಪೂರ್ಣವಾಗಿ ನಿರ್ಮೂಲನೆಗೊಂಡಿಲ್ಲವಾದರೂ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಮನುಷ್ಯ ಏನು ಮಾಡಿದರೂ ದೈವ ಪ್ರೀತಿಯನ್ನು ಪಡೆಯುವುದು ಸಾಧ್ಯವಿಲ್ಲವೆಂಬುದನ್ನ ಲೂಥರ್ ತನ್ನ ಪ್ರಮುಖ ಸಿದ್ಧಾಂತವಾಗಿ ಮಂಡಿಸಿದ.

ಕ್ಯಾಥೋಲಿಕ್ ಸಿದ್ಧಾಂತಗಳ ಪ್ರತಿಪಾದನೆಯ ಪ್ರಕಾರ, ಭಗವಂತನ ಪ್ರೀತಿ ಎನ್ನುವುದು ಅವನ ಅನುಗ್ರಹ, ಮತ್ತು ಅವನ ಕರುಣೆಯಲ್ಲಿ ನಂಬಿಕೆ ಇಡುವುದು, ಮತ್ತು ಅವನೆದುರು ದೀನನಂತೆ, ಅಲ್ಪನಂತೆ, ಅಸಹಾಯಕನಂತೆ ಇರುವುದು ಒಳ್ಳೆಯ ಧಾರ್ಮಿಕ ಮನೋಭಾವ; ನಮ್ಮ ಯಾವ ಒಳ್ಳೆಯ ಕೆಲಸವೂ ದೇವರನ್ನು ಪ್ರಭಾವಿಸುವುದಿಲ್ಲ, ನಮ್ಮನ್ನು ದೇವರು ಪ್ರೀತಿಸುವಂತೆ ಮಾಡುವುದಿಲ್ಲ. ಇಲ್ಲಿ ಕ್ಯಾಥೋಲಿಕ್ ಸಿದ್ಧಾಂತದ “ಒಳ್ಳೆಯ ಕೆಲಸ” ಎನ್ನುವುದನ್ನ ನಾವು ಪಿತೃಪ್ರಧಾನ ವ್ಯವಸ್ಥೆಯ ಚಿತ್ರದ ಭಾಗವಾಗಿ ಗುರುತಿಸಬಹುದು.

ಆದರೆ ಲೂಥರ್ ನ ಸಿದ್ಧಾಂತ ಹೊರಗಿನಿಂದ ಪಿತೃಪ್ರಧಾನ ಸ್ವಭಾವದಂತೆ ಕಂಡರೂ ತನ್ನ ಅಂತರಾಳದಲ್ಲಿ ಮಾತೃಪ್ರಧಾನ ಅಂಶವನ್ನ ಬಚ್ಚಿಟ್ಟುಕೊಂಡಿದೆ. ತಾಯಿ ಪ್ರೀತಿಯನ್ನ ಸ್ವಾಧೀನ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಅದು ಇದೆ ಅಥವಾ ಇಲ್ಲ ಅಷ್ಟೇ ; ನಾನು ಮಾಡಬೇಕಾದದ್ದು, ತಾಯಿಯಲ್ಲಿ ನಂಬಿಕೆಯಿಟ್ಟು ( ಬೈಬಲ್ ನ ಸಾಮುಗಳಲ್ಲಿ ಹೇಳುವಂತೆ, ನನ್ನ ತಾಯಿಯ ಮೊಲೆಗಳಲ್ಲಿ ನಂಬಿಕೆಯಿಡಲು ನನಗೆ ಅವಕಾಶ ಮಾಡಿಕೊಡು, ಸಾಮು 22:9 ) ಅವಳೆದುರು ಅಸಹಾಯಕನಂತೆ, ಸಾಮರ್ಥ್ಯಹೀನ ಮಗುವಿನಂತೆ ನನ್ನನ್ನು ನಾನು ತೋರಿಸಿಕೊಳ್ಳುವುದು. ಆದರೆ ಲೂಥರ್ ನ ಸಿದ್ಧಾಂತದ ವೈಶಿಷ್ಟವೆಂದರೆ, ಅವನ ನಂಬಿಕೆಯ ಹೊರರೂಪದಲ್ಲಿ ತಾಯಿಯ ರೂಪವನ್ನು ತೆಗೆದುಹಾಕಿ, ತಂದೆಯ ರೂಪವನ್ನು ಮಾತ್ರ ಉಳಿಸಿಕೊಂಡಿರುವುದು ; ಹೊರ ರೂಪದಲ್ಲಿ ತಾಯಿಯಿಂದ ಖಂಡಿತವಾಗಿ ಪ್ರೀತಿಸಲ್ಪಡುವ ಸಂಗತಿಗೆ ಬದಲಾಗಿ, ತೀವ್ರ ಸಂಶಯ, ತಂದೆಯಿಂದ ಬೇಷರತ್ ಪ್ರೀತಿ ನಿರೀಕ್ಷಿಸುವ ಅಸಾಧ್ಯಗಳನ್ನು ಎದ್ದುಕಾಣುವ ಲಕ್ಷಣಗಳಾಗಿ ಕಾಣಿಸಿಕೊಳ್ಳುವಂತೆ ಮಾಡಿರುವುದು.

ನಾನು ಈಗ ಧರ್ಮಗಳಲ್ಲಿನ ಮಾತೃಪ್ರಧಾನ ಮತ್ತು ಪಿತೃಪ್ರಧಾನ ಅಂಶಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಚರ್ಚೆ ಮಾಡಬೇಕು. ದೈವ ಪ್ರೀತಿಯ ಗುಣಲಕ್ಷಣಗಳು, ಧರ್ಮದಲ್ಲಿ ಮಾತ್ಯಪ್ರಧಾನ ಅಂಶಗಳು ಹೆಚ್ಚಿವೆಯಾ ಅಥವಾ ಪಿತೃಪ್ರಧಾನ ಅಂಶಗಳು ಹೆಚ್ಚಿವೆಯಾ ಎನ್ನುವುದರ ಮೇಲೆ ಅವಲಂಬಿತವಾಗಿವೆ ಎನ್ನುವುದನ್ನ ತಿಳಿದುಕೊಳ್ಳಲು ಇಂಥದೊಂದು ಚರ್ಚೆ ಅವಶ್ಯಕ. ಧರ್ಮದಲ್ಲಿನ ಪಿತೃಪ್ರಧಾನ ಅಂಶ ದೇವರನ್ನು ತಂದೆಯಂತೆ ಪ್ರೀತಿಸಲು ನನ್ನನ್ನು ಒತ್ತಾಯಿಸುತ್ತದೆ ; ಆಗ ದೇವರನ್ನು ನಾನು ನ್ಯಾಯವಂತ, ಶಿಸ್ತು ಪಾಲಕ ಎಂದುಕೊಳ್ಳುತ್ತೇನೆ, ಅವನು ವರ ಕೊಡುವವನು, ಶಿಕ್ಷೆ ನೀಡುವವನು ಎಂದು ಭಾವಿಸುತ್ತೇನೆ, ಮತ್ತು ಕೊನೆಗೆ ನನ್ನನ್ನು ತನ್ನ ಮೆಚ್ಚಿನ ಮಗುವಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ ಎಂದು ತಿಳಿಯುತ್ತೇನೆ ; ದೇವರು ಅಬ್ರಹಾಂ-ಇಸ್ರೇಲ್ ನ ಆಯ್ಕೆ ಮಾಡಿಕೊಂಡಂತೆ, ಐಸಾಕ್, ಜಾಕೋಬ್ ನನ್ನು ಆಯ್ಕೆ ಮಾಡಿಕೊಂಡಂತೆ, ದೇವರು ತನ್ನ ಮೆಚ್ಚಿನ ದೇಶವನ್ನು ಆಯ್ಕೆ ಮಾಡಿಕೊಂಡಂತೆ ಎಂದುಕೊಳ್ಳುತ್ತೇನೆ.

ಧರ್ಮದಲ್ಲಿನ ಮಾತೃಪ್ರಧಾನ ಅಂಶದ ಪ್ರಕಾರ ನಾನು ದೇವರನ್ನು, ಎಲ್ಲವನ್ನೂ ಅಪ್ಪಿಕೊಳ್ಳುವ ತಾಯಿಯಂತೆ ಪ್ರೀತಿಸುತ್ತೇನೆ. ನನಗೆ ಅವಳ ಪ್ರೀತಿಯಲ್ಲಿ ನಂಬಿಕೆಯಿದೆ. ನಾನು ಬಡವನಾಗಿರಲಿ, ಅಶಕ್ತನಾಗಿರಲಿ, ಪಾಪಿಯಾಗಿರಲಿ ಆಕೆ ಯಾವ ಭೇದವನ್ನೂ ಮಾಡದೇ ನನ್ನ ಪ್ರೀತಿಸುತ್ತಾಳೆ, ಎಂಥ ಪರಿಸ್ಥಿತಿ ಬಂದರೂ ನನ್ನ ರಕ್ಷಣೆ ಮಾಡುತ್ತಾಳೆ, ನನ್ನನ್ನು ಕಾಪಾಡುತ್ತಾಳೆ, ನನ್ನನ್ನು ಕ್ಷಮಿಸುತ್ತಾಳೆ ಎಂದುಕೊಳ್ಳುತ್ತೇನೆ. ನನ್ನ ದೇವರ ಮೇಲಿನ ಪ್ರೀತಿ ಮತ್ತು ದೇವರ ನನ್ನ ಮೇಲಿನ ಪ್ರೀತಿಯನ್ನ ಬೇರ್ಪಡಿಸಲಾಗದು ಎನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇವರು ತಂದೆಯಾಗಿದ್ದ ಪಕ್ಷದಲ್ಲಿ, ಅವನು ನನ್ನನ್ನು ಮಗನಂತೆ ಪ್ರೀತಿಸುತ್ತಾನೆ ಮತ್ತು ನಾನು ಅವನನ್ನ ತಂದೆಯಂತೆ ಪ್ರೀತಿಸುತ್ತೇನೆ. ದೇವರು ತಾಯಿಯಾಗಿದ್ದರೆ, ಆಕೆಯ ಪ್ರೀತಿ ಮತ್ತು ನನ್ನ ಪ್ರೀತಿ ಈ ಸಂಗತಿಯಿಂದಲೇ ನಿರ್ಧರಿಸಲ್ಪಟ್ಟಿರುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply