ಕಂಚು ಸದ್ದು ಮಾಡುವಷ್ಟು ಕಾಂಚನ ಮಾಡುವುದಿಲ್ಲ! : ಸುಪ್ರಭಾತ ಸುಭಾಷಿತ

ಜ್ಞಾನಿ ಬಹುತೇಕ ಮೌನಿ. ಅರೆಬರೆ ತಿಳುವಳಿಕೆಯುಳ್ಳವರು ತಮ್ಮ ಕೊರತೆಯನ್ನು ಮುಚ್ಚಿಕೊಳ್ಳಲೋ ಎಂಬಂತೆ ಸದಾ ತಟವಟ ಮಾಡುತ್ತಾ ಇರುತ್ತಾರೆ. ಸತ್ಯವನ್ನು ಕಂಡುಕೊಂಡವರಿಗೆ ಜಗತ್ತಿನ ಮಿಥ್ಯೆಯನ್ನು ನೋಡಿ ಬಾಯಿಕಟ್ಟಿಬಿಡುತ್ತದೆ! ಸತ್ಯವನ್ನು ವರ್ಣಿಸಲಾಗದ ಕಾರಣಕ್ಕೆ ಮಾತ್ರವಲ್ಲ, ಈ ಕಾರಣದಿಂದಲೂ ಅವರು ಮೌನವಾಗಿದ್ದುಬಿಡುತ್ತಾರೆ!!

ತುಂಬಿದ ಕೊಡ ತುಳುಕುವುದಿಲ್ಲ. ಆದರೆ ಅರೆತುಂಬಿದ ಕೊಡದ ನೀರು, ಬಾಕಿ ಇರುವ ಖಾಲಿ ಭಾಗದ ಕೊರತೆ ತುಂಬಲು ಮೇಲೆ ಮೇಲಕ್ಕೆ ಚಿಮ್ಮುತ್ತಲೇ ಇರುತ್ತದೆ. ಆದ್ದರಿಂದಲೇ ಅದರ ಕಲಕಲ ಸದ್ದು ಹೆಚ್ಚುವುದು. 

ಯಾರಾದರೂ ಸುಖಾಸುಮ್ಮನೆ ಮಾತಾಡುತ್ತಿದ್ದಾರೆ ಅಂದಾಗ ಈ ಸುಭಾಷಿತ ನೆನೆಯಿರಿ. ಅಥವಾ ನೀವೇ ಅನಗತ್ಯವಾಗಿ, ವಿಪರೀತವಾಗಿ ಮಾತಾಡುತ್ತಿದ್ದರೆ ನಾನೇಕೆ ಇಷ್ಟೊಂದು ಮಾತಾಡುತ್ತಿದ್ದೇನೆ ಎಂದು ಅವಲೋಕನ ಮಾಡಿಕೊಳ್ಳಿ. ನಿಜಕ್ಕೂ ಅದರ ಅಗತ್ಯವಿದ್ದರೆ, ಆ ಮಾತುಗಳು ಸಾಧ್ಯವಾದಷ್ಟೂ ಜೊಳ್ಳಾಗಿರದಂತೆ, ಸತ್ವಪೂರ್ಣವಾಗಿರುವಂತೆ ನೋಡಿಕೊಳ್ಳಿ. 

 

2 Comments

Leave a Reply