ಧರ್ಮ ದೃಗ್ಗೋಚರವಲ್ಲ…. |ಸುಭಾಷಿತ ಸದಾಶಯ

ಕದಲೀಕಂದವದ್ಧರ್ಮೋ ನ ರೋಹತಿ ಬಹಿರ್ಗತಃ | ಭಾದಿತಸ್ತು ಫಲಂ ಚಾರು ಸೂತೇ ಮನಸಮೂಲವತ್||ಸುಭಾಷಿತ||

ಅರ್ಥ: “ಧರ್ಮವು ಬಾಳೆಗಿಡದ ಕಾಂಡದಂತೆ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಅದು ಹಲಸಿನ ಬೇರಿನಂತೆ ಅಡಗಿದ್ದು ಅತ್ಯುತ್ತಮ ಫಲಗಳನ್ನು ನೀಡುತ್ತದೆ.”

‘ಧರ್ಮ’ಕ್ಕೆ ವ್ಯಾಖ್ಯಾನ ಹಲವು. ಅವುಗಳಲ್ಲಿ ವ್ಯಾಕರಣಪ್ರಕಾರ ಅರ್ಥ – “ಧಾರಯತಿ ಇತಿ ಧರ್ಮಃ’. ಧರಿಸಲ್ಪಡುವಂಥದ್ದು ಧರ್ಮ. ಹಾಗಾದರೆ ಯಾವ ರೀತಿ ಧರಿಸುವುದು? ಧರ್ಮವೇನು ಬಟ್ಟೆಯೇ? ಆಭರಣವೇ? ಕೊನೆಗೆ ಇಂಗ್ಲಿಶ್ ನಾಣ್ಣುಡಿಯಂತೆ ಅದೇನು ಮುಗುಳ್ನೆಗೆಯೇ ಧರಿಸಲು? – ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಈ ಪ್ರಶ್ನೆಗೆ ಉತ್ತರ ಮೇಲಿನ ಸುಭಾಷಿತದಲ್ಲಿದೆ.

ಧರ್ಮವನ್ನು ಧರಿಸುವುದು ಎಂದರೆ ಅದನ್ನು ಆಚರಿಸುವುದು. ನಮ್ಮ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವುದು. ಅದು ಕಾಣುವಂಥದ್ದಲ್ಲ. ಆದರೆ ಅಗತ್ಯವಾಗಿ ಮಧುರ ಫಲಗಳನ್ನು ನಿಡುವಂಥದ್ದು.

ಧರ್ಮಮಾರ್ಗದಲ್ಲಿ ಪ್ರಾಮಾಣಿಕವಾಗಿ ನಡೆದವರು ಯಾರಾದರೂ ವಂಚನೆ ಅಥವಾ ನೋವು ಅನುಭವಿಸಿದ ಉದಾಹರಣೆಯಿದೆಯೇ? ಹೊರಗಿನಿಂದ ನೋಡುವ ನಮಗೆ ಅವರ ಬದುಕಿನ ಗತಿಗಳು ಸಂಕಟದಂತೆ ಕಂಡರೂ ಅವರು ಆ ಎಲ್ಲವನ್ನೂ, ಸುಖದಂತೆ ದುಃಖವನ್ನೂ ನಿಯಾಮಕನಿಗೆ ಅರ್ಪಿಸಿ ತಮ್ಮ ಧಾರ್ಮಿಕತೆಯನ್ನು ಕಾಯ್ದುಕೊಳ್ಳುತ್ತಾರೆ. ಯಾವ ಕಾರಣಕ್ಕೂ ನ್ಯಾಯ, ನೀತಿ, ಸತ್ಯವಂತಿಕೆ, ಸಹಿಷ್ಣುತೆ ಮತ್ತು ದಯಾಪರತೆಯ ಧಾರ್ಮಿಕ ಆಚರಣೆಯನ್ನು ಬಿಟ್ಟುಕೊಡುವುದಿಲ್ಲ. ಇಂಥಹಾ ಧರ್ಮನಿಷ್ಠರ ಬದುಕು ಸಹಜವಾಗಿಯೇ ಉತ್ತಮ ಫಲಿತಾಂಶಕ್ಕೆ ಪಾತ್ರವಾಗಿರುತ್ತದೆ.

ಆದ್ದರಿಂದ, ಧರ್ಮವನ್ನು ಸಂಕೇತಗಳ ಮೂಲಕವೋ, ಬಟ್ಟೆ, ಢಂಬಾಚಾರಗಳ ಮೂಲಕವೋ ಪ್ರದರ್ಶನಕ್ಕೆ ಇಡದೆ ಆಚರಣೆಯ ಮೂಲಕ ಧಾರ್ಮಿಕರಾಗೋಣ. ಇಂತಹಾ ಧರ್ಮವೇ ನಮ್ಮ ಕೈಹಿಡಿದು ನಡೆಸುವುದು. – ಇದು ಸುಭಾಷಿತದ ಸದಾಶಯ.

Leave a Reply