ದೈವ ಪ್ರೀತಿ – 3 (continued…) : Art of love #28

ಹೆಚ್ಚೆಂದರೆ ನಾವು ಮಾಡಬಹುದಾದದ್ದು ಇಷ್ಟೇ, ದೇವರು ಎಂದರೆ ಯಾವುದು ಅಲ್ಲ ಎಂದು ನಿರೂಪಿಸುವುದು, ಋಣಾತ್ಮಕ ಗುಣ ಲಕ್ಷಣಗಳನ್ನು ಹೇಳುವುದು, ಅವನು ಸೀಮಿತ ಅಲ್ಲ, ಕ್ರೂರಿಯಲ್ಲ, ಅನ್ಯಾಯ ಮಾಡುವವನಲ್ಲ ಎಂದು ಪ್ರತಿಪಾದಿಸುವುದು. ದೇವರು ಯಾವುದು ಅಲ್ಲ ಎನ್ನುವುದು ನನಗೆ ಹೆಚ್ಚು ಹೆಚ್ಚು ಗೊತ್ತಾದಂತೆ , ದೇವರ ಕುರಿತಾದ ಹೆಚ್ಚು ಹೆಚ್ಚು ತಿಳುವಳಿಕೆ ನನ್ನನ್ನು ಸೇರಿಕೊಳ್ಳುವುದು… | ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/page/2/

ದೈವ ಪ್ರೀತಿಯಲ್ಲಿನ, ತಾಯಿ ಮತ್ತು ತಂದೆಯ ಅಂಶಗಳ ನಡುವಿನ ಈ ವ್ಯತ್ಯಾಸವೊಂದೇ ದೈವ ಪ್ರೀತಿಯ ಸ್ವಭಾವವನ್ನು ನಿರ್ಧರಿಸುವ ಸಂಗತಿಯಾಗಿದೆ ; ದೈವ ಪ್ರೀತಿಯ ಇನ್ನೊಂದು ಅಂಶವೆಂದರೆ, ವ್ಯಕ್ತಿಗತವಾಗಿ ಒಬ್ಬರು ತಲುಪಿರುವ ಪ್ರಬದ್ಧತೆಯ ಪ್ರಮಾಣ, ದೇವರ ಬಗ್ಗೆಯ ಅವರ ಪರಿಕಲ್ಪನೆಯಲ್ಲಿ ಮತ್ತು ದೇವರ ಕುರಿತಾದ ಅವರ ಪ್ರೀತಿಯ ವಿಷಯದಲ್ಲಿ.

ಮನುಷ್ಯ ಜನಾಂಗ ಹಾಗು ಧರ್ಮದ ವಿಕಾಸ, ಮಾತೃ ಕೇಂದ್ರಿತ ವ್ಯವಸ್ಥೆಯಿಂದ ಪಿತೃ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯ ಕಡೆಗೆ ವರ್ಗಾವಣೆಯಾಗಿದ್ದರಿಂದ, ನಾವು ಪ್ರಬುದ್ಧ ಪ್ರೀತಿಯ ಬೆಳವಣಿಗೆಯ ಹೆಜ್ಜೆಗಳನ್ನ ಮುಖ್ಯವಾಗಿ ಪಿತೃ ಕೇಂದ್ರಿತ ಧರ್ಮ ವ್ಯವಸ್ಥೆಯ ಬೆಳವಣಿಗೆಯಲ್ಲಿಯೇ ಹುಡುಕಬೇಕಾಗುತ್ತದೆ. (17)
ಈ ಬೆಳವಣಿಗೆಯ ಶುರುವಾತಿನ ಹಂತದಲ್ಲಿ ನಮಗೆ, ತಾನು ಸೃಷ್ಟಿಸಿದ ಮನುಷ್ಯನನ್ನು ತನ್ನ ಸ್ವತ್ತು ಎಂದು ಪರಿಗಣಿಸುವ, ಮತ್ತು ಆ ಮನುಷ್ಯನನ್ನು ತನ್ನ ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುವ ಅಧಿಕಾರವುಳ್ಳ ಅಸೂಯಾಪರ, ನಿರಂಕುಶ ದೇವರು ಕಾಣಿಸುತ್ತಾನೆ. ಇದು ಧರ್ಮದ ಬೆಳವಣಿಗೆಯ ಯಾವ ಹಂತವೆಂದರೆ, ಎಲ್ಲಿ ಮನುಷ್ಯ ಜ್ಞಾನ ವೃಕ್ಷದ ಫಲವನ್ನು ತಿಂದು ತಾನೇ ದೇವರಾಗುತ್ತಾನೋ ಎಂದು ದೇವರು ಅವನನ್ನು ಸ್ವರ್ಗದಿಂದ ಹೊರದೂಡುವ ಹಂತ ; ಇದು ದೇವರು, ತನ್ನ ಪ್ರೀತಿಯ ಮಗ ನೋಹ್ ನನ್ನು ಹೊರತುಪಡಿಸಿ ಬೇರಾವ ಮನುಷ್ಯನೂ ತನ್ನನ್ನು ಮೆಚ್ಚಿಸುತ್ತಿಲ್ಲ ಎಂದು, ಮನುಷ್ಯ ಕುಲವನ್ನೇ ಪ್ರವಾಹದಿಂದ ನಿರ್ನಾಮ ಮಾಡಲು ನಿರ್ಧರಿಸುವ ಹಂತ; ಇದು ತನ್ನ ಆತ್ಯಂತಿಕ ವಿಧೇಯತೆಯನ್ನು ಸಾಬೀತುಪಡಿಸಲು ಅಬ್ರಹಾಂ, ತನ್ನ ಏಕೈಕ ಪ್ರೀತಿಯ ಮಗ ಐಸಾಕ್ ನನ್ನು ಕೊಲ್ಲುವಂತೆ ದೇವರು ಹಕ್ಕೊತ್ತಾಯ ಮಾಡುವ ಹಂತ. ಈ ಹಂತದ ಜೊತೆ ಜೊತೆಯೇ ಇನ್ನೊಂದು ಹೊಸ ಹಂತವೂ ಶುರುವಾಯಿತು; ಈ ಹೊಸ ಹಂತದಲ್ಲಿ ದೇವರು ನೋಹ್ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾನೆ, ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ಮನುಷ್ಯ ಕುಲವನ್ನು ಮತ್ತೊಮ್ಮೆ ನಾಶ ಮಾಡುವುದಿಲ್ಲವೆಂದು ದೇವರು ವಾಗ್ದಾನ ಮಾಡುತ್ತಾನೆ ಮತ್ತು, ಈ ಒಡಂಬಡಿಕೆಗೆ ತನ್ನನ್ನು ತಾನು ಬದ್ಧನಾಗಿಸಿಕೊಳ್ಳುತ್ತಾನೆ. ಮುಂದುವರೆದು ದೇವರು ತನ್ನ ವಾಗ್ದಾನಗಳಿಗಷ್ಟೇ ಬದ್ಧನಾಗಲಿಲ್ಲ, ಜೊತೆಗೆ ತನ್ನ ನ್ಯಾಯಪರತೆಯ ತತ್ವಕ್ಕೂ ಬದ್ಧನಾದ, ಮತ್ತು ಈ ಕಾರಣದಿಂದಾಗಿ ದೇವರು ಅಬ್ರಹಾಂ ನ ಬೇಡಿಕೆಯನ್ನ ಒಪ್ಪಿಕೊಂಡು ಒಂದು ಹತ್ತು ಜನರಾದರೂ ನ್ಯಾಯವಂತ ಜನರಿರುವುದಾದರೆ ಸೋಡೊಮ್ ನನ್ನು ಕ್ಷಮಿಸಲು ಸಿದ್ಧನಾದ. ಆದರೆ ಈ ಬೆಳವಣಿಗೆ ದೇವರನ್ನು ನಿರಂಕುಶ ಬುಡಕಟ್ಟಿನ ನಾಯಕನ ಪಾತ್ರದಿಂದ, ಪ್ರೀತಿಯ ತಂದೆಯ ಪಾತ್ರಕ್ಕೆ ಬದಲಾಯಿಸುವುದಕ್ಕಿಂತಲೂ ಮುಂದೆ ಹೋಗಿ ದೇವರನ್ನು ತಾನೇ ಪ್ರತಿಪಾದಿಸಿದ ತತ್ವಗಳಿಗೆ ಬದ್ಧನಾಗುವ ತಂದೆಯಾಗಿ ಮಾಡಿತು ; ಈ ಹೊಸ ಬೆಳವಣಿಗೆ ದೇವರ ಪಾತ್ರವನ್ನು ಕೇವಲ ತಂದೆಯಾಗಿ ಬದಲಾಯಿಸುವುದಕ್ಕಿಂತ ಮುಂದೆ ಹೋಗಿ ಅವನನ್ನು ಅವನೇ ಪ್ರತಿಪಾದಿಸಿದ ತತ್ವಗಳಾದ ನ್ಯಾಯ, ಸತ್ಯ ಮತ್ತು ಪ್ರೀತಿಯ ಸಂಕೇತವನ್ನಾಗಿಸಿತು. ಈಗ ದೇವರು ಎಂದರೆ ಸತ್ಯ, ದೇವರು ಎಂದರೆ ನ್ಯಾಯ, ದೇವರು ಎಂದರೆ ಪ್ರೀತಿ. ಈ ಬೆಳವಣಿಗೆಯಿಂದಾಗಿ ದೇವರು ತನ್ನ ವ್ಯಕ್ತಿಯ, ಮನುಷ್ಯನ, ತಂದೆಯ ಸ್ಥಾನವನ್ನು ಬಿಟ್ಟುಕೊಟ್ಟು, ಜಗತ್ತಿನ ಬಹುಮುಖಿ ವಿದ್ಯಮಾನಗಳ ಹಿಂದಿರುವ ಏಕ ಸೂತ್ರತೆಯ ಹಾಗು, ಮನುಷ್ಯನೊಳಗಿರುವ ಆಧ್ಯಾತ್ಮಿಕ ಬೀಜ ಅರಳಿ ಹೂವಾಗುವ ಕಾಣ್ಕೆಯ ಸಂಕೇತವಾಗಬೇಕಾಯ್ತು. ದೇವರಿಗೆ ಹೆಸರಿರುವುದು ಸಾಧ್ಯವಿಲ್ಲ. ಹೆಸರು ಯಾವಾಗಲೂ ಒಂದು ಸಂಗತಿಯನ್ನ, ಒಬ್ಬ ವ್ಯಕ್ತಿಯನ್ನ , ಏನೋ ಒಂದು ಸೀಮಿತತೆಯನ್ನ (finite) ಸೂಚಿಸುತ್ತದೆ. ದೇವರು ವ್ಯಕ್ತಿಯಲ್ಲವಾದರೆ, ಸಂಗತಿಯಲ್ಲವಾದರೆ, ವಸ್ತುವಲ್ಲವಾದರೆ ಅವನಿಗೆ ಹೆಸರಿರುವುದು ಹೇಗೆ ಸಾಧ್ಯ?

ಈ ಬದಲಾವಣೆಯ ಒಂದು ಎದ್ದು ಕಾಣುವ ನಿದರ್ಶನ, ಮೋಸೆಸ್ ನಿಗೆ ದೈವ ಸಾಕ್ಷಾತ್ಕಾರವಾಗುವ ಬೈಬಲ್ ನ ಕಥೆಯಲ್ಲಿದೆ. ತಾನು ದೇವರ ಹೆಸರು ( ಮೂರ್ತಿ ಪೂಜೆ ಮಾಡುವುದೆಂದರೆ ಒಂದು ಹೆಸರನ್ನು ಆರಾಧಿಸುವುದು, ಹೀಗಿರುವಾಗ ಮೂರ್ತಿ ಪೂಜೆ ಮಾಡುವವರು ಹೇಗೆ ತಾನೆ ಹೆಸರಿರದ ದೇವರನ್ನು ಒಪ್ಪುವುದು ಸಾಧ್ಯ? ) ಹೇಳದೇ ಹೋದರೆ, ತನ್ನನ್ನು ದೇವರು ಕಳುಹಿಸಿರುವ ಸಂಗತಿಯನ್ನ ಯಹೂದ್ಯರು ಒಪ್ಪಲಾರರು ಎಂದು ಮೋಸೆಸ್ ದೇವರಿಗೆ ಹೇಳಿದಾಗ, ದೇವರು ಮೋಸೆಸ್ ನಿಗೆ ಒಂದು ವಿನಾಯತಿ ನೀಡಿದ. ದೇವರು ಮೋಸೆಸ್ ನಿಗೆ ತನ್ನ ಹೆಸರು “ ನಾನು ಏನು ಆಗುತ್ತಿರುವೆನೋ ನಾನು ಅದನ್ನೇ ಆಗುತ್ತಿದ್ದೇನೆ” ಎಂದು ಹೇಳುತ್ತಾನೆ. “ನಾನು ಆಗುತ್ತಿದ್ದೇನೆ ಎನ್ನುವುದು ನನ್ನ ಹೆಸರು” “ನಾನು ಆಗುತ್ತಿದ್ದೇನೆ” ಎಂದರೆ ದೇವರು ಸೀಮಿತನಲ್ಲ, ವ್ಯಕ್ತಿಯಲ್ಲ, “ ಇರುವವನು” ಅಲ್ಲ. ಈ ಸಾಲಿನ ಅತ್ಯಂತ ಸೂಕ್ತ ಅನುವಾದವೆಂದರೆ : ಅವರಿಗೆ ಹೇಳು “ನನ್ನ ಹೆಸರು ಹೆಸರಿಲ್ಲದವ” ಎಂದು.

ದೇವರ ಮೂರ್ತಿಯ ನಿರ್ಮಾಣವನ್ನು ನಿಷೇಧಿಸುವುದು, ಅವನ ಹೆಸರು ಹೇಳುವುದರಲ್ಲಿನ ವ್ಯರ್ಥತೆಯನ್ನು ಎತ್ತಿ ಹಿಡಿಯುವುದು, ಕೊನೆಗೆ ಅವನ ಹೆಸರು ಹೇಳುವುದನ್ನೇ ನಿಲ್ಲಿಸುವುದು, ಈ ಎಲ್ಲದರ ಗುರಿ ಒಂದೇ, ದೇವರು ಒಬ್ಬ ತಂದೆ, ಒಬ್ಬ ವ್ಯಕ್ತಿ ಎಂಬ ವಿಚಾರದಿಂದ ಮನುಷ್ಯನನ್ನು ಮುಕ್ತಗೊಳಿಸುವುದು. ಮತ ಧರ್ಮಗಳ ತದನಂತರದ ಬೆಳವಣಿಗೆಯಲ್ಲಿ , ಈ ವಿಚಾರವನ್ನೇ ಒಂದು ತತ್ವವನ್ನಾಗಿಸಿ, ದೇವರ ಮೇಲೆ ಯಾವ ಧನಾತ್ಮಕ ಗುಣ ಲಕ್ಷಣಗಳನ್ನೂ ಆರೋಪಿಸಬಾರದೆಂದು, ಇನ್ನೂ ಮುಂದಕ್ಕೆ ಬೆಳೆಸಲಾಯಿತು. ದೇವರನ್ನು ಜ್ಞಾನಿ, ವಿವೇಕಿ, ಶಕ್ತಿಶಾಲಿ, ಒಳ್ಳೆಯವ ಎಂದೆಲ್ಲ ಹೇಳುವುದು ಅವನನ್ನು ಮತ್ತೇ ಮನುಷ್ಯೀಕರಣ ಮಾಡಿದಂತಾಗುವುದು; ಹೆಚ್ಚೆಂದರೆ ನಾವು ಮಾಡಬಹುದಾದದ್ದು ಇಷ್ಟೇ, ದೇವರು ಎಂದರೆ ಯಾವುದು ಅಲ್ಲ ಎಂದು ನಿರೂಪಿಸುವುದು, ಋಣಾತ್ಮಕ ಗುಣ ಲಕ್ಷಣಗಳನ್ನು ಹೇಳುವುದು, ಅವನು ಸೀಮಿತ ಅಲ್ಲ, ಕ್ರೂರಿಯಲ್ಲ, ಅನ್ಯಾಯ ಮಾಡುವವನಲ್ಲ ಎಂದು ಪ್ರತಿಪಾದಿಸುವುದು. ದೇವರು ಯಾವುದು ಅಲ್ಲ ಎನ್ನುವುದು ನನಗೆ ಹೆಚ್ಚು ಹೆಚ್ಚು ಗೊತ್ತಾದಂತೆ , ದೇವರ ಕುರಿತಾದ ಹೆಚ್ಚು ಹೆಚ್ಚು ತಿಳುವಳಿಕೆ ನನ್ನನ್ನು ಸೇರಿಕೊಳ್ಳುವುದು.

ಏಕದೈವತಾವಾದದ ವಿಚಾರಗಳು ಪ್ರಬುದ್ಧವಾಗುತ್ತ ಹೋದಂತೆಲ್ಲ ಅದರ ಪರಿಣಾಮಗಳು ಬಂದು ತಲುಪುವ ಕೇವಲ ಒಂದು ತೀರ್ಮಾನವೆಂದರೆ : ದೇವರ ಹೆಸರನ್ನೇ ಹೇಳದಿರುವುದು, ದೇವರ ಕುರಿತು ಉಲ್ಲೇಖವನ್ನೇ ಮಾಡದಿರುವುದು. ಆಗ ದೇವರು ಏಕದೈವತಾವಾದದ ಮತಧರ್ಮಗಳಲ್ಲಿ ಮಾತ್ರ ತಾನು ಇರಬಹುದಾದ ಹಾಗೆ ಇರುತ್ತಾನೆ ; ಹೆಸರಿಲ್ಲದಂತೆ , ಅಸ್ಪಷ್ಟ ತೊದಲು ನುಡಿಗಾರನಂತೆ, ಅಸಾಧಾರಣ ಜಗತ್ತಿನ ಏಕ ಸೂತ್ರದಂತೆ, ಎಲ್ಲ ಅಸ್ತಿತ್ವಗಳ ಏಕ ನೆಲೆಯಂತೆ ; ದೇವರು ಸತ್ಯ, ಪ್ರೀತಿ, ನ್ಯಾಯವಾಗುತ್ತಾನೆ. ದೇವರೆಂದರೆ ನಾನು, ನಾನು ಮನುಷ್ಯ ಎನ್ನುವಷ್ಟರಮಟ್ಟಿಗೆ. (18)


(17) ವಿಶೇಷವಾಗಿ ಪಶ್ಚಿಮದ ಏಕದೈವತಾರಾಧನೆಯ ಮತಧರ್ಮಗಳನ್ನು ಕುರಿತಂತೆ ಇದು ನಿಜ. ಭಾರತೀಯ ಧರ್ಮಗಳಲ್ಲಿ ತಾಯಿಯ ಸ್ವರೂಪವನ್ನ ಪ್ರಭಾವಶಾಲಿಯಾಗಿಯೇ ಉಳಿಸಿಕೊಳ್ಳಲಾಗಿದೆ, ಉದಾಹರಣೆಗೆ ಕಾಳೀ ದೇವಿ ; ಬೌದ್ಧ ಮತ್ತು ತಾವೋಯಿಸಂನಲ್ಲಿ , ದೇವರ ಅಥವಾ ದೇವತೆಯ ಪರಿಕಲ್ಪನೆಗೆ ಯಾವ ಅವಶ್ಯಕ ಪ್ರಾಧಾನ್ಯತೆ ಇಲ್ಲವಾದರೂ, ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ.

(18) Cf. Maimonides’ concept of the negative attributes in The Guide for the Perplexed.

***************************

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply