ದೈವ ಪ್ರೀತಿ – 4 (ಮುಂದುವರಿದಿದೆ…) : Art of love #29

ನಿಸ್ಸಂಶಯವಾಗಿ ಬಹುತೇಕ ಜನರಿಗೆ ತಮ್ಮ ವೈಯಕ್ತಿಕ ವಿಕಾಸದ ಹಾದಿಯಲ್ಲಿ ಈ ಶೈಶವಾವಸ್ಥೆಯಿಂದ ಹೊರಬರಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದಲೇ ಬಹುತೇಕ ಜನರಿಗೆ ದೇವರಲ್ಲಿನ ನಂಬಿಕೆಯೆಂದರೆ ಸಹಾಯ ಮಾಡುವ ತಂದೆಯನ್ನು ನಂಬುವುದು ಎನ್ನುವ ಬಾಲಿಶ ಭ್ರಮೆ. ಇಂಥದೊಂದು ಧರ್ಮದ ಕಲ್ಪನೆಯನ್ನು ಮನುಷ್ಯ ಕುಲದ ಎಷ್ಟೋ ಶ್ರೇಷ್ಠ ಚಿಂತಕರು, ಮತ್ತು ಕೆಲ ಜನ ಸಾಮಾನ್ಯರು ಮೀರಿ ಹೊರಬಂದಿರುವರಾದರೂ ಈ ಕಲ್ಪನೆ ಇನ್ನೂ ತನ್ನ ಪ್ರಬಲ ಪ್ರಭಾವವನ್ನು ಕಳೆದುಕೊಂಡಿಲ್ಲ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ದೈವಕ್ಕೆ ಮನುಷ್ಯ ಗುಣ ಲಕ್ಷಣಗಳನ್ನು ಆರೋಪಿಸುವ ವ್ಯವಸ್ಥೆಯಿಂದ (anthropomorphic) ಶುದ್ಧ ಏಕದೈವತಾವಾದದ (monotheistic) ವರೆಗಿನ ಬೆಳವಣಿಗೆ, ದೈವ ಪ್ರೀತಿಯ ಸ್ವರೂಪದಲ್ಲಿನ ಎಲ್ಲ ವ್ಯತ್ಯಾಸಗಳಿಗೆ ಕಾರಣವಾಯಿತು. ಕೆಲವೊಮ್ಮೆ ಕ್ಷಮಾಗುಣ , ಕೆಲವೊಮ್ಮೆ ಕ್ರೋಧ ಅವನ ಪ್ರಬಲ ಗುಣಲಕ್ಷಣವಾಗಿರುವುದರಿಂದ ಅಬ್ರಹಾಂನ ದೇವರರನ್ನು ತಂದೆಯಂತೆ ಪ್ರೀತಿಸಬಹುದು, ಕಂಡು ಭಯಪಡಬಹುದು. ದೇವರು ಎಷ್ಟು ತಂದೆಯಾಗಿದ್ದಾನೋ, ಅಷ್ಟು ನಾನು ಅವನ ಮಗು. ಸರ್ವಜ್ಞನೂ ಸರ್ವವ್ಯಾಪಿಯೂ ಆಗಬೇಕೆಂಬ ಭೋಳೆ ಬಯಕೆಯಿಂದ ನಾನಿನ್ನೂ ಪೂರ್ಣವಾಗಿ ಹೊರಗೆ ಬಂದಿಲ್ಲ. ಮನುಷ್ಯನಾಗಿ ನನ್ನ ಮಿತಿಗಳನ್ನ, ನನ್ನ ಅಜ್ಞಾನವನ್ನ, ನನ್ನ ಅಸಹಾಯಕತೆಯನ್ನ ಅರ್ಥಮಾಡಿಕೊಳ್ಳುವ ವಸ್ತುನಿಷ್ಠತೆಯನ್ನು ನಾನಿನ್ನೂ ಗಳಿಸಿಕೊಂಡಿಲ್ಲ. ನನ್ನನ್ನು ನಾನು ಇನ್ನೂ ಮಗುವೆಂದೇ ತಿಳಿದುಕೊಂಡಿದ್ದೇನೆ ಮತ್ತು ನನ್ನನ್ನು ರಕ್ಷಿಸಲು, ನೋಡಿಕೊಳ್ಳಲು, ಶಿಕ್ಷಿಸಲು, ನಾನು ವಿಧೆಯತೆಯನ್ನು ಪ್ರದರ್ಶಿಸಿದಾಗ ಹೊಗಳಲು, ನಾನು ಹೊಗಳಿದಾಗ ಖುಷಿಪಡಲು, ನಾನು ಅಸಹಕಾರ ತೋರಿದಾಗ ನನ್ನ ಮೇಲೆ ಸಿಟ್ಟಾಗಲು ನನಗೆ ತಂದೆಯೊಬ್ಬನ ಅವಶ್ಯಕತೆಯಿದೆ ಎಂದು ಬಯಸುತ್ತೇನೆ. ನಿಸ್ಸಂಶಯವಾಗಿ ಬಹುತೇಕ ಜನರಿಗೆ ತಮ್ಮ ವೈಯಕ್ತಿಕ ವಿಕಾಸದ ಹಾದಿಯಲ್ಲಿ ಈ ಶೈಶವಾವಸ್ಥೆಯಿಂದ ಹೊರಬರಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದಲೇ ಬಹುತೇಕ ಜನರಿಗೆ ದೇವರಲ್ಲಿನ ನಂಬಿಕೆಯೆಂದರೆ ಸಹಾಯ ಮಾಡುವ ತಂದೆಯನ್ನು ನಂಬುವುದು ಎನ್ನುವ ಬಾಲಿಶ ಭ್ರಮೆ. ಇಂಥದೊಂದು ಧರ್ಮದ ಕಲ್ಪನೆಯನ್ನು ಮನುಷ್ಯ ಕುಲದ ಎಷ್ಟೋ ಶ್ರೇಷ್ಠ ಚಿಂತಕರು, ಮತ್ತು ಕೆಲ ಜನ ಸಾಮಾನ್ಯರು ಮೀರಿ ಹೊರಬಂದಿರುವರಾದರೂ ಈ ಕಲ್ಪನೆ ಇನ್ನೂ ತನ್ನ ಪ್ರಬಲ ಪ್ರಭಾವವನ್ನು ಕಳೆದುಕೊಂಡಿಲ್ಲ.

ಪರಿಸ್ಥಿತಿ ಹೀಗಿರುವಾಗಲೂ, ದೇವರ ಪರಿಕಲ್ಪನೆಯ ಕುರಿತಾದ ಫ್ರಾಯ್ಡ್ ನ ವಿಮರ್ಶೆ ಬಹುತೇಕ ಒಪ್ಪಿಕೊಳ್ಳಬಹುದಾದಂಥದು. ಆದರೆ ಫ್ರಾಯ್ಡ್ ನ ಈ ವಿಮರ್ಶೆಯ ಸಮಸ್ಯೆಯೆಂದರೆ ಅವನು ಏಕದೈವತಾವಾದದ ಇನ್ನೊಂದು ಅಂಶ, ಅದರ ನಿಜವಾದ ತಿರುಳು, ಯಾವುದರ ತರ್ಕ ದೇವರ ಪರಿಕಲ್ಪನೆಯನ್ನೇ ನೇತ್ಯಾತ್ಮಕಗೊಳಿಸುತ್ತದೆಯೋ , ಆ ಅಂಶವನ್ನೇ ಅವನು ನಿರ್ಲಕ್ಷಿಸಿರುವುದು. ನಿಜವಾದ ಧಾರ್ಮಿಕ ಮನುಷ್ಯ, ಅವನು ಏಕದೈವತಾವಾದದ ಕಲ್ಪನೆಯ ತಿರುಳನ್ನ ಪಾಲಿಸುತ್ತಿರುವುದೇ ನಿಜವಾದರೆ, ಅವನು ಯಾವ ಬೇಡಿಕೆಗಾಗಿಯೂ ಪ್ರಾರ್ಥನೆ ಮಾಡುವುದಿಲ್ಲ, ದೇವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ ; ಅವನು ತನ್ನ ತಂದೆ ತಾಯಿಯನ್ನು ಪ್ರೀತಿಸುವಂತೆ ದೇವರನ್ನು ಪ್ರೀತಿಸುವುದಿಲ್ಲ; ಅವನು ತನ್ನ ಮಿತಿಗಳನ್ನ ಗುರುತಿಸಿಕೊಳ್ಳುವ ವಿನಮ್ರತೆಯನ್ನ ಗಳಿಸಿಕೊಂಡಿದ್ದಾನೆ, ದೇವರ ಬಗ್ಗೆ ತನಗೇನೂ ಗೊತ್ತಿಲ್ಲ ಎನ್ನುವಷ್ಟರಮಟ್ಟಿಗೆ ವಿನಯವಂತನಾಗಿದ್ದಾನೆ. ಅವನಿಗೆ ದೇವರು ಒಂದು ಸಂಕೇತವಾಗಿದ್ದಾನೆ. ಈ ಸಂಕೇತದಲ್ಲಿ ಅವನು, ಮನುಷ್ಯ ತನ್ನ ಮೊದ ಮೊದಲ ಬೆಳವಣಿಗೆಯ ಹಂತದಲ್ಲಿ ಯಾವೆಲ್ಲವನ್ನು ಸಮಗ್ರವಾಗಿ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದನೋ, ಈ ಪ್ರೀತಿ, ಸತ್ಯ ಮತ್ತು ನ್ಯಾಯಗಳ, ಆಧ್ಯಾತ್ಮಿಕ ಜಗತ್ತನ್ನು ಕಾಣುತ್ತಾನೆ. ಅವನಿಗೆ “ದೇವರು” ಪ್ರತಿನಿಧಿಸುವ ತತ್ವಗಳಲ್ಲಿ ನಂಬಿಕೆಯಿದೆ; ಅವನು ಸತ್ಯವನ್ನು ಕುರಿತು ಚಿಂತಿಸುತ್ತಾನೆ, ಪ್ರೀತಿ ಮತ್ತು ನ್ಯಾಯಪರತೆಯನ್ನು ಬದುಕುತ್ತಾನೆ, ಮತ್ತು ತನ್ನ ಮನುಷ್ಯ ಸಾಮರ್ಥ್ಯದ ಪೂರ್ಣ ಅರಳುವಿಕೆಗೆ ಅವಕಾಶ ಮಾಡಿಕೊಡುತ್ತದೆಯೆನ್ನುವಷ್ಟರಮಟ್ಟಿಗೆ ತನ್ನ ಇಡೀ ಬದುಕನ್ನು ಸಾರ್ಥಕ ಎಂದುಕೊಳ್ಳುತ್ತಾನೆ, ಅದೊಂದೇ ತನಗೆ ಸಂಬಂಧಿಸಿದ ಸತ್ಯ ಎನ್ನುವಂತೆ, ಅದೊಂದೇ ತನ್ನ ‘ಪರಮ ಕಾಳಜಿಯ’ ಸಂಗತಿಯೆನ್ನುವಂತೆ ; ಮತ್ತು, ಕೊನೆಗೆ ಅವನು ದೇವರ ಹೆಸರು ಹೇಳುವುದಿರಲಿ, ದೇವರ ಬಗ್ಗೆ ಮಾತೇ ಆಡುವುದಿಲ್ಲ. ಅವನಿಗೆ ‘ ದೇವರನ್ನು ಪ್ರೀತಿಸುವುದೆಂದರೆ’ ( ಈ ಪದಗಳನ್ನು ಅವನು ಬಳಸುವುದಾದರೆ) ಒಬ್ಬರೊಳಗೆ ‘ ದೇವರು’ ಯಾವುದನ್ನ ಪ್ರತಿನಿಧಿಸುತ್ತಾನೋ ಆ ಪ್ರೀತಿಯನ್ನ ಸಾಕ್ಷಾತ್ಕಾರಗೊಳಿಸಿಕೊಳ್ಳುವುದು, ತನ್ನೊಳಗಿನ ಪ್ರೀತಿಯ ಪೂರ್ಣ ಸಾಮರ್ಥ್ಯವನ್ನು ಸಾಧಿಸಿಕೊಳ್ಳುವುದಕ್ಕಾಗಿ ಪ್ರಯತ್ನ ಮಾಡುವುದು.

ಈ ದೃಷ್ಟಿಕೋನದಿಂದ ನೋಡಿದಾಗ, ಏಕದೈವತಾವಾದದ ತಾರ್ಕಿಕ ಪರಿಣಾಮ ಎಲ್ಲ ಧರ್ಮಶಾಸ್ತ್ರಗಳನ್ನ (theology), ಹಾಗೆಂದರೆ “ ದೇವರ ಕುರಿತಾದ ಎಲ್ಲ ತಿಳುವಳಿಕೆಯನ್ನ “ ನಿರಾಕರಿಸುವುದೇ ಆಗಿದೆ. ಆದರೆ , ಇಂಥ ಧರ್ಮಶಾಸ್ತ್ರ ನಿರಾಕರಣೆಯ (non-theological) ಪ್ರಗತಿಶೀಲ ವಿಚಾರಕ್ಕೂ “ದೈವ ರಹಿತ” (non-theistic) ವ್ಯವಸ್ಥೆಗೂ ವ್ಯತ್ಯಾಸವಿದೆ, ಉದಾಹರಣೆಗೆ ಇಂಥ ವ್ಯತ್ಯಾಸವನ್ನ ನಾವು ಆರಂಭ ಕಾಲದ ಬುದ್ಧಿಸಂ ಅಥವಾ ತಾವೋಯಿಸಂ ನಲ್ಲಿ ಗುರುತಿಸಬಹುದು.

ಎಲ್ಲ ಆಸ್ತಿಕ (theistic) ವ್ಯವಸ್ಥೆಯಲ್ಲಿ, ಅನುಭಾವ ಪಂಥಗಳಲ್ಲಿ, ಧರ್ಮಶಾಸ್ತ್ರ ನಿರಾಕರಣೆಯ (non-theological) ವ್ಯವಸ್ಥೆಯಲ್ಲಿ ಕೂಡ ಅಧ್ಯಾತ್ಮ ಜಗತ್ತಿನ ಸತ್ಯದ ಬಗ್ಗೆ ಕೆಲವು ಒಪ್ಪಿತ ವಿಚಾರಗಳಿವೆ ; ಮನುಷ್ಯನನ್ನು ಮೀರಿದ ಸತ್ಯವೊಂದಿದೆ ಎನ್ನುವುದು, ಮತ್ತು ಅದು ಮನುಷ್ಯನ ಆಧ್ಯಾತ್ಮಿಕ ಶಕ್ತಿಗಳಿಗೆ ಹಾಗು ಮುಕ್ತಿಗಾಗಿ ಮತ್ತು ಒಳ ಹುಟ್ಟುವಿಕೆಗಾಗಿ (inner birth) ಅವನು ನಡೆಸುವ ಪ್ರಯತ್ನಕ್ಕೆ ಅರ್ಥ ಮತ್ತು ಸಿಂಧುತ್ವ ದೊರಕಿಸಿಕೊಡುತ್ತದೆ ಎನ್ನುವುದು. ದೈವ ರಹಿತ (non-theistic) ವ್ಯವಸ್ಥೆಯಲ್ಲಿ ಮನುಷ್ಯನ ಹೊರಗೆ, ಅಥವಾ ಅವನನ್ನು ಮೀರಿ ಯಾವ ಆಧ್ಯಾತ್ಮಿಕ ಜಗತ್ತೂ ಇಲ್ಲ. ಪ್ರೀತಿ, ವಿವೇಕ ಮತ್ತು ನ್ಯಾಯಪರತೆ ವಾಸ್ತವದಲ್ಲಿ ಇರುವುದು ಮನುಷ್ಯ ಈ ಶಕ್ತಿಗಳನ್ನು ತನ್ನೊಳಗೆ ತನ್ನ ಬೆಳವಣಿಗೆಯ ಉದ್ದಕ್ಕೂ ಅಭಿವೃದ್ಧಿಪಡಿಸಿಕೊಂಡು ಬಂದಿರುವುದರಿಂದ. ಈ ದೃಷ್ಟಿಕೋನದಲ್ಲಿ ಬದುಕಿಗೆ ಯಾವ ಅರ್ಥವೂ ಇಲ್ಲ, ಮನುಷ್ಯ ಅದಕ್ಕೆ ಕೊಟ್ಟಿರುವ ಅರ್ಥವನ್ನು ಮಾತ್ರ ಬಿಟ್ಟು ; ಇನ್ನೊಬ್ಬರಿಗೆ ಸಹಾಯ ಮಾಡುವ ಸ್ಥಿತಿಯನ್ನು ಬಿಟ್ಟರೆ ಅವನು ಪೂರ್ತಿ ಏಕಾಂಗಿ.

ದೈವ ಪ್ರೀತಿಯ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ನಾನು ಸ್ಪಷ್ಟಪಡಿಸಬಯಸುವುದೇನೆಂದರೆ , ಸ್ವತಃ ನಾನು ದೇವರನ್ನು ನಂಬುವ , ಆಸ್ತಿಕ ಪರಿಕಲ್ಪನೆಯ ರೀತಿಯಲ್ಲಿ ವಿಚಾರ ಮಾಡುವುದಿಲ್ಲ, ಮತ್ತು ನನಗೆ ದೇವರ ಪರಿಕಲ್ಪನೆ ಕೇವಲ ಐತಿಹಾಸಿಕವಾಗಿ ಪ್ರಭಾವಿತವಾಗಿರುವುದು (conditioned) ಮಾತ್ರ, ಮತ್ತು ಇತಿಹಾಸದಲ್ಲಿ ಮನುಷ್ಯ ತಾನು ಅನುಭವಿಸಿದ ತನ್ನ ಅತಿಮಾನುಷ ಶಕ್ತಿಯ (higher power) ಬಗ್ಗೆ, ಸತ್ಯ ಮತ್ತು ಒಂದಾಗುವಿಕೆಗಾಗಿಯ ತನ್ನ ಹೋರಾಟದ ಬಗ್ಗೆ ಆಯಾ ಐತಿಹಾಸಿಕ ಕಾಲಾವಧಿಯಲ್ಲಿ ದಾಖಲಿಸಿರುವುದು ಇದಕ್ಕೆ ಮುಖ್ಯ ಕಾರಣ. ಆದರೆ ನನ್ನ ಇನ್ನೂ ಒಂದು ನಂಬಿಕೆಯೆಂದರೆ ಕಟ್ಟುನಿಟ್ಟಿನ ಏಕದೈವತಾವಾದ ಮತ್ತು ದೈವ ರಹಿತ ವ್ಯವಸ್ಥೆಯ ಆಧ್ಯಾತ್ಮಿಕ ಸತ್ಯದ ಕುರಿತಾದ ಪರಮ ಕಾಳಜಿಯ ಪರಿಣಾಮಗಳು, ಎರಡು ವಿಭಿನ್ನ ದೃಷ್ಟಿಕೋನಗಳಾಗಿದ್ದರೂ ಪರಸ್ಪರ ಹೊಡೆದಾಡುವ ಯಾವ ಅವಶ್ಯಕತೆಯೂ ಇಲ್ಲ.

***************************

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply