ನಾಲ್ಕು ಯೋಗಗಳು ಮತ್ತು ಪತಂಜಲಿಯ ಅಷ್ಟಾಂಗ ಯೋಗ

ಇಂದು (ಜೂನ್ 21) ವಿಶ್ವ ಯೋಗ ದಿನ. ಈ ಸಂದರ್ಭದಲ್ಲಿ ನಾಲ್ಕು ಯೋಗಗಳು ಮತ್ತು ಪತಂಜಲಿಯ ಅಷ್ಟಾಂಗ ಯೋಗ ಸೂತ್ರದ ಸರಳ ವಿವರಣೆ ಇಲ್ಲಿ ನೀಡಲಾಗಿದೆ.

ಕಪಿಲನ ಸಾಂಖ್ಯ ಮತ್ತು ಪತಂಜಲಿಯ ಯೋಗಪದ್ಧತಿಗಳು ಭಾರತವು ಜಗತ್ತಿಗೆ ನೀಡಿದ ಉತ್ಕೃಷ್ಟ ಕೊಡುಗೆಗಳಾಗಿವೆ. ಸಾಂಖ್ಯ ದರ್ಶನವಾದರೆ, ಯೋಗ ಅನುಷ್ಠಾನ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿ ಎನ್ನುವುದು ವಿಶ್ವದ ಮೂಲವಸ್ತುಗಳ ಸಂಗ್ರಹ ಎನ್ನುವುದು ಈ ಎರಡೂ ಶಾಸ್ತ್ರಗಳ ಕಾಣ್ಕೆಯಾಗಿದೆ. ಪುರುಷರು(ಮನುಷ್ಯರು ಅಥವಾ ಜೀವಾತ್ಮರು) ಪ್ರೇರಕ ಶಕ್ತಿಗಳಂತೆ ವರ್ತಿಸುತ್ತಾರೆ. ಜೀವಿಗಳ ಉಪಸ್ಥಿತಿಯಲ್ಲಿ ಈ ಪ್ರಕೃತಿ ವಿಶ್ವವಾಗಿ ಸೃಷ್ಟಿಗೊಳ್ಳುತ್ತದೆ.

ವಾಸ್ತವವಾಗಿ, ಈ ಇಡೀ ಸೃಷ್ಟಿಕ್ರಿಯೆಯೇ ಜೀವಿಗಳ ಆತ್ಮಿಕ ಉನ್ನತಿಗಾಗಿ ಹಾಗೂ ಅಂತಿಮವಾಗಿ ಜೀವಿಗಳ ಮುಕ್ತಿಗಾಗಿ ಉಂಟಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳ ನಾನಾ ವಿಧಧ ಜೋಡಣೆಗಳಿಂದಲೇ ಈ ವಿಶ್ವದ ಅಥವಾ ಪ್ರಕೃತಿಯ ರಚನೆಯಾಗಿದೆ. ಜೀವಾತ್ಮನು ವಾಸ್ತವದಲ್ಲಿ ಈ ಪ್ರಕೃತಿಗಿಂತ ‘ಭಿನ್ನವಾದ ಅಸ್ತಿತ್ವ’ವಾಗಿದ್ದರೂ ಕೂಡ ಪ್ರಕೃತಿಗೂ ಹಾಗೂ ಅದರ ಉತ್ಪನ್ನಗಳಾದ ಶರೀರ ಮತ್ತು ಸತ್ವ ರಜ ತಮಗಳೆಂಬ ಮೂರು ಗುಣಗಳ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಅವುಗಳ ಬಂಧನದಲ್ಲಿರುತ್ತಾನೆ. ಅದರ ಫಲವೇ ಮತ್ತೆ ಮತ್ತೆ ಜನ್ಮ ಉಂಟಾಗುವುದು. ‘ವಿವೇಕಖ್ಯಾತಿ’ಯ ಸಂಪಾದನೆ ಅಂದರೆ ವಿವೇಚನೆ ಮತ್ತು ಮತ್ತು ಜ್ಞಾನಗಳ ಮೂಲಕ ವೈರಾಗ್ಯ ಸಂಪಾದನೆ, ಹಾಗೂ ಯೋಗದ ಎಂಟು ಹಂತಗಳ ಮೂಲಕ ಅಂತಿಮವಾಗಿ ಆತನಿಗೆ ಬಿಡುಗಡೆ ಉಂಟಾಗುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಗಳ ಪ್ರತಿಪಾದನೆಯಾಗಿದೆ.

ನಾಲ್ಕು ಯೋಗಗಳು
ಯೋಗ ಎಂಬುದು ಅನುಷ್ಠಾನಕ್ಕೆ ಸಂಬಂಧಿಸಿದ್ದು. ಈ ಯೋಗದಲ್ಲಿ ನಾಲ್ಕು ವಿಧ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ರಾಜಯೋಗ. ಇವೆಲ್ಲವೂ ಮನಸ್ಸನ್ನು-ಚಿತ್ತವನ್ನು ಹಂತ ಹಂತವಾಗಿ ಶುದ್ಧಗೊಳಿಸುವ ಉಪಾಯಗಳು. ಈ ಯೋಗಗಳ ಅನುಷ್ಠಾದಿಂದ ಮನಸ್ಸು ಎಷ್ಟು ಪರಿಶುದ್ಧವಾಗುವುದೆಂದರೆ ತನ್ನೊಳಗಿನ ಆತ್ಮ ಅಥವಾ ಭಗವಂತನು ಜೀವಿಗೆ ತಾನಾಗಿಯೇ ಮೈದೋರುತ್ತಾನೆ.

ಕರ್ಮಯೋಗ
ಪೂಜೆ, ಉಪಾಸನೆ ಇತ್ಯಾದಿ ಧಾರ್ಮಿಕ ಆಚರಣೆಗಳು, ಧರ್ಮಶಾಸ್ತ್ರದ ವಿಧಿ-ನಿಷೇಧಗಳು, ನಿಯಮಗಳು, ಹಾಗೂ ನಿತ್ಯ, ನೈಮಿತ್ತಿಕ, ಪ್ರಾಯಶ್ಚಿತ್ತ ಮತ್ತು ಕಾಮ್ಯವೆಂಬ ನಾಲ್ಕು ಪ್ರಕಾರದ ವೈದಿಕ ಅನುಷ್ಠಾನಗಳು, ಯಜ್ಞಗಳು ಇವೆಲ್ಲ ಕರ್ಮಯೋಗದ ಭಾಗಗಳಾಗಿವೆ. ವೈದಿಕ ಅನುಷ್ಠಾನಗಳು ಮಾತ್ರವಲ್ಲದೇ ಉದ್ಯೋಗ, ವ್ಯಾಪಾರ ಮುಂತಾದ ಎಲ್ಲ ಕ್ರಿಯೆಗಳೂ ಕರ್ಮವೇ ಆಗಿವೆ. ವಾಸ್ತವವಾಗಿ ಜೀವಿಗಳ ಮಾನಸಿಕ ಆಲೋಚನೆ ಮತ್ತು ಉಸಿರಾಟವೂ ಕೂಡ ಕರ್ಮವೇ ಆಗಿದೆ. ಕರ್ಮ ಮಾಡದೇ ಜೀವಿಯು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಆ ಕರ್ಮದಿಂದ ಕರ್ಮಫಲ, ಕರ್ಮಫಲದಿಂದ ವಾಸನೆ.. ವಾಸನೆಯಿಂದ ಪ್ರವೃತ್ತಿ, ಪ್ರವೃತ್ತಿಯಿಂದ ಮತ್ತೆ ಕರ್ಮ, ಕರ್ಮದಿಂದ ಮತ್ತೆ ಕರ್ಮಫಲ ಆ ಕರ್ಮಫಲ ಅನುಭವಿಸಲಿಕ್ಕೆ ಮತ್ತೆ ಪುನರ್ಜನ್ಮ, ಜನ್ಮಿಸಿದ ಮೇಲೆ ಮತ್ತೆ ಕರ್ಮ ಹೀಗೆ ಈ ಚಕ್ರ ನಡೆಯುತ್ತಿದೆ.

ಇದರಿಂದ ಬಿಡುಗಡೆ ಹೊಂದಲಿಕ್ಕೆ ಮಾನವನು ತನ್ನ ಕರ್ತವ್ಯವಾದ ಕರ್ಮಗಳನ್ನು “ಕರ್ತೃತ್ವಭಾವ’’ ಅಂದರೆ “ನಾನು ಆ ಕರ್ಮವನ್ನು ಮಾಡಿದೆ’’ ಎಂಬ ಭಾವ ಮತ್ತು ಅದರಿಂದುಂಟಾಗುವ “ಫಲವು ನನ್ನದೇ’’ ಎಂಬ ‘’ಫಲಾಪೇಕ್ಷೆಯ ಭಾವ’’ ಈ ಎರಡು ವಿಷಕಾರಕ ಭಾವಗಳನ್ನು ಬಿಟ್ಟು ಭಗವಂತನಿಗೆ ಅವುಗಳನ್ನು ಸಮರ್ಪಿಸಿಬಿಡುವುದರಿಂದ ಆ ಕರ್ಮಫಲ ಮತ್ತು ಅದರಿಂದುಂಟಾಗುವ ವಾಸನೆಯಿಂದ ಮುಕ್ತನಾಗುತ್ತಾನೆ.

“ನೀನು ಈ ಕರ್ಮವನ್ನು ಮಾಡುತ್ತಿರುವಿ ಎಂಬ ಭಾವವನ್ನು ಬಿಟ್ಟು ಬಿಡು.. ಮತ್ತು ಅದರಿಂದುಂಟಾಗುವ ಫಲವು ನಿನ್ನದು ಎಂದುಕೊಳ್ಳಬೇಡ. ಅವೆರಡೂ ನನ್ನವೇ ಆಗಿವೆ. ನಿನ್ನದೇನೂ ಇಲ್ಲ. ಆದರೂ ನೀನು ನಿನ್ನ ಕರ್ತವ್ಯವಾದ ಕರ್ಮವನ್ನು (ಯುದ್ಧವನ್ನು) ಮಾಡಬೇಕು ಮತ್ತು ಅದನ್ನು ಚೆನ್ನಾಗಿ ಶ್ರದ್ಧೆಯಿಂದ ಮಾಡಬೇಕು, ಅದರ ಕರ್ತೃತ್ವ ಮತ್ತು ಫಲವನ್ನು ನನ್ನಮೇಲೆ ಹಾಕಿಬಿಡು” ಎಂಬ ಕೃಷ್ಣನ ಮಾತು ಅರ್ಜುನನಿಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಹೇಳಿದ್ದಾಗಿದೆ ಮತ್ತು ಅದು ಕೇವಲ ಯುಧ್ಧದ ಕುರಿತಾದ ಮಾತಲ್ಲ, ಉಸಿರಾಟ, ಆಲೋಚನೆ ಮೊದಲುಗೊಂಡು ಎಲ್ಲ ರೀತಿಯ ಕರ್ಮಗಳಿಗೆ ಅನ್ವಯಿಸುತ್ತದೆ.

ಭಕ್ತಿಯೋಗ
ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ಆತನ ಕೃಪೆಯಿಂದಲೇ ಆತನನ್ನು ಸೇರಬೇಕೆಂಬುದು ಭಕ್ತಿಯೋಗದ ಮಾರ್ಗ. ನಾರದನ ಭಕ್ತಿಸೂತ್ರಗಳಲ್ಲಿ ಒಂಭತ್ತು ವಿಧವಾದ ಭಕ್ತಿಗಳನ್ನು ವಿವರಿಸಿದ್ದು ರಾಮಾಯಣದಲ್ಲಿ ಅವುಗಳನ್ನೇ ರಾಮನು ಶಬರಿಗೆ ಬೋಧಿಸಿದ್ದಾನೆ. ಇಲ್ಲಿ ಭಕ್ತಿಯೆಂದರೆ ದೇವರೆಡೆಗಿನ ಮೂಢ ವಿಶ್ವಾಸವಲ್ಲ. ಅಂಧಾಭಿಮಾನವಲ್ಲ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ| ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ||

ಮೋಕ್ಷಸಾಧನೆಗಿರುವ ಮಾರ್ಗಗಳಲ್ಲಿ ಭಕ್ತಿಯೇ ಉತ್ತಮವಾದದ್ದು. ಆದರೆ ಸ್ವಸ್ವೂಪದ ಅನುಸಂಧಾನವೇ ಭಕ್ತಿಯಾಗಿದೆ ಎಂದು ಶಂಕರಾಚಾರ್ಯರು ಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ. ಈ ಸ್ವಸ್ವರೂಪದ ಅನುಸಂಧಾನಕ್ಕೆ ಹಾಗೂ ಭಗವಂತನ ಮೇಲೆ ಭಕ್ತಿಯನ್ನು ಹೊಂದಲಿಕ್ಕೆ ಭಗಂವಂತನ ಅನಂತತೆ, ಅಗಾಧತೆ, ಸೃಷ್ಟಿಯ ನಶ್ವರತೆ, ಜೀವದ ಚೈತನ್ಯ ಸ್ವಭಾವ ಮುಂತಾದವುಗಳ ಸ್ಪಷ್ಟ ಜ್ಞಾನ ಇರಲೇಬೇಕಾಗುತ್ತದೆ. ಹೀಗಾಗಿ ಭಕ್ತಿಯು ಜ್ಞಾನದ ಅಡಿಪಾಯದ ಮೇಲೆಯೇ ನಿಂತಿರುತ್ತದೆ. ಜ್ಞಾನವಿಲ್ಲದ ಮೂಢ ಅಭಿಮಾನವು ಅಥವಾ ಅವಲಂಬನೆಯು ಭಕ್ತಿಯೆನಿಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ.

ಜ್ಞಾನಯೋಗ
ಆತ್ಮಸ್ವರೂಪದ, ಬ್ರಹ್ಮತತ್ವದ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ನಿರಂತರವೂ ಮನಸ್ಸನ್ನು ಅಂತರ್ಮುಖಿಯಾಗಿಸಿಕೊಂಡು ತನ್ನನ್ನು ತಾನು ಆತ್ಮನೆಂಬ ವಾಸ್ತವವನ್ನು ಧ್ಯಾನಿಸುತ್ತಿದ್ದರೆ ಅಂತಿಮವಾಗಿ ಅದು ಅನುಭವಕ್ಕೆ ಬರುತ್ತದೆ ಎಂಬುದು ಜ್ಞಾನಯೋಗದ ಅನುಷ್ಠಾನ ವಿಧಾನ.

ರಾಜಯೋಗ
ಪತಂಜಲಿಯ ಅಷ್ಟಾಂಗಯೋಗ ಪದ್ಧತಿಯನ್ನು ರಾಜಯೋಗವು ಅವಲಂಬಿಸಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ ಎಂಬ ಎಂಟು ಸಾಧನೆಯ ಮೆಟ್ಟಿಲುಗಳನ್ನು ಕ್ರಮವಾಗಿ ಹತ್ತಿಕೊಂಡು ಹೋದಾಗ ಆತ್ಮಾನುಭವದ ಫಲ ಉಂಟಾಗಿ ತನ್ಮೂಲಕ ಬಿಡುಗಡೆ ಸಿದ್ಧಿಸುತ್ತದೆ. ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ಪ್ರಕಾರದ ಕರ್ಮಗಳೂ ಮತ್ತು ಅವುಗಳ ಫಲದಿಂದುಂಟಾಗುವ ಪುನರ್ಜನ್ಮದ ಕೊಂಡಿ ತಪ್ಪುತ್ತದೆ.

ಅಷ್ಟಾಂಗಯೋಗವು ಪತಂಜಲಿಯಿಂದ ಪ್ರವೃತ್ತವಾದ ಯೋಗಪದ್ಧತಿ. ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಣೆಯಿದೆ. ಯೋಗಸೂತ್ರ ಇದಕ್ಕೆ ಸಾಧನರೂಪವಾಗಿ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ ಎಂಬ ಎಂಟು ಅಂಗಗಳನ್ನು ಎರಡನೆಯ ಅಧ್ಯಾಯವಾದ ಸಾಧನಪಾದದಲ್ಲಿ ಹೇಳಿದೆ.

ಅಂಗವೆಂದರೆ ಅಶುದ್ಧವಾದ ಚಿತ್ತಕಲ್ಮಷಗಳು ಹೋಗಿ ವಿವೇಕ ಖ್ಯಾತಿ ಉಂಟಾಗುವುದಕ್ಕೆ ನೆರವಾಗುವ ಸಾಧನವೆಂದೂ ಅದರಿಂದ ಚಿತ್ತದಲ್ಲಿ ಸಾತ್ತ್ವಿಕ ಪರಿಣಾಮರೂಪವಾದ, ನಿರ್ಮಲರೂಪವಾದ ಪ್ರಕಾಶ (ಜ್ಞಾನದೀಪ್ತಿ) ಒದಗುವುದೆಂದೂ ಯೋಗಸೂತ್ರ ಭಾಷ್ಯಕಾರರಾದ ವ್ಯಾಸರು ವಿವರಿಸಿದ್ದಾರೆ.

ಯೋಗದ ಅಷ್ಟಾಂಗಗಳ ಕಿರುವಿವರಣೆ ಹೀಗಿದೆ :
1. ಯಮ : ಇವು ಐದು ; ಯಮ ನಿಯಮಸ್ತುಮಾಲಾಃ – ಇದು ಸೂತ್ರ. ಅರ್ಥಾತ್ – ಕೆಟ್ಟ ಪ್ರವೃತ್ತಿಗಳನ್ನುತಡೆಯುವುದು. ಅಹಿಂಸೆ, ಸತ್ಯ, ಆಸ್ತೇಯ (ಕದಿಯದಿರುವುದು) , ಬ್ರಹ್ಮಚರ್ಯ, ಅಪರಿಗ್ರಹ (ಬೇರೆಯವರಿಂದ ಅನಾವಶ್ಯಕ ವಸ್ತುಗಳನ್ನು ಪಡೆಯದಿರುವುದು – ಈ ಐದನ್ನು ಪಾಲಿಸುವುದು.

2. ನಿಯಮ : ಆತ್ಮ ಶಿಕ್ಷಣ, ಶೌಚ (ಶುಚಿ), ಸಂತೋಷ , ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿದಾನ.
ಶೌಚ – ಕಾಯಾ, ವಾಚಾ,ಮನಸಾ, ಶುದ್ಧತೆ ; ಸಂತೋಷ – ಇರುವುದರಲ್ಲೇ ತೃಪ್ತಿ; ತಪಸ್ಸು – ಸುಖದುಃಖಗಳನ್ನು ಸಮನಾಗಿಸಹಿಸುವುದು; ಸ್ವಾಧ್ಯಾಯ – ಶಾಸ್ತ್ರದ ಅಧ್ಯಯನ ; ಈಶ್ವರ ಪ್ರಣಿದಾನ ಈಶ್ವರನಲ್ಲಿ ಸರ್ವಸಮರ್ಪಣೆ.

3. ಆಸನ : ಸ್ಥಿರ ಸುಖಾಸನಮ್- – ಇದು ಸೂತ್ರ. ಸುಖಕರವಾದ ಆಸನದಲ್ಲಿ ಬಹಳಕಾಲ ಸ್ಥಿರವಾಗಿ ಇರುವುದು.

4. ಪ್ರಾಣಾಯಾಮ : ಶ್ವಾಸ ಪ್ರಶ್ವಾಸ ಕ್ರಿಯೆಗಳನ್ನು ನಿಲ್ಲಿಸುವುದು. ಇದು ಏಕಾಗ್ರತೆಗೆ ಸಹಕಾರಿ.

5. ಪ್ರತ್ಯಾಹಾರ : ಹೊರಮುಖವಾದ ಇಂದ್ರಿಯಗಳನ್ನು ತಡೆಯುವುದು – ಇಂದ್ರಿಯಗಳನ್ನು ಅಂತರ್ಮುಖಿಯಾಗಿಸುವುದು.

6. ಧಾರಣ : ಅಂತರಂಗದ ಯಾವುದಾದರೂ ಒಂದುವಸ್ತುವಿನ ಮೇಲೆ ಚಿತ್ತವನ್ನು ಕೇಂದ್ರೀಕರಿಸುವುದು. (ನಾಭಿ , ಹೃದಯ-ಇತ್ಯಾದಿ)

7. ಧ್ಯಾನ : ತತ್ರ ಪತ್ಯಯೈಕ ತಾನತಾ ಧ್ಯಾನಂ – ಇದು ಸೂತ್ರ. -ಧ್ಯಾನಿಸಬೇಕಾದ ವಸ್ತುವನ್ನು ಏಕಾಗ್ರ ಚಿತ್ತದಿಂದ ದ್ಯಾನಿಸುವುದು.

8. ಸಮಾಧಿ : ಚಿತ್ತದ ಏಕಾಗ್ರತೆಯ ಕೊನೆಯ ಹಂತ . (ಚಿತ್ತ) ಮನಸ್ಸು ಧ್ಯಾನಿಸುವ ವಸ್ತುವಿನಲ್ಲಿ ಲೀನವಾಗಿಬಿಡುತ್ತದೆ. ಹೊರ ಜಗತ್ತಿನ ಅರಿವು ಮಾಯವಾಗುತ್ತದೆ.

ಇದು ಮುಂದುವರಿದರೆ ಸಂಪ್ರಜ್ಞಾನ ಸಮಾಧಿ : ಧ್ಯಾನಿಸುವ ವಸ್ತುವಿನ (ಧ್ಯೇಯ) ಅವಲಂಬನೆ ಇರುತ್ತದೆ .

ಇದರ ಅಂತಿಮ ಹಂತ ಅಸಂಪ್ರಜ್ಞಾನ ಸಮಾಧಿ : ಚಿತ್ತದ ಸಂಬಂಧವೂ ಕಡಿದು ಹೋಗುವುದು. – ನಿರ್ಬೀಜ , ನಿರಾಲಂಬ ಸಮಾಧಿ . ಏನೂ ಇರದ ಸ್ಥಿತಿ. (ಇದ್ದೇನೆ ಎನ್ನುವ ಭಾವ ಎಚ್ಚರಾದಾಗ ಮಾತ್ರ) ಅಣಿಮಾದಿ ಅಷ್ಟ ಸಿದ್ಧಿಗಳು ಬಂದರೂ ಉಪಯೋಗಿಸದೆ ಮುಂದುವರೆದರೆ, ಕೈವಲ್ಯ ಸಿದ್ಧಿ .

Leave a Reply