ಕಾಮುಕ ಮನುಷ್ಯನನ್ನು ಪಶುವೆಂದು ಕರೆಯುವುದು ಭಯಂಕರ ಪ್ರಮಾದ!

ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ ಮಾಡಬಲ್ಲ ವಿಕೃತಿ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮನುಷ್ಯ ಸಮುದಾಯಕ್ಕೆ ಸೀಮಿತವಾಗಿರುವ ಈ ವಿಕೃತಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.


ಸಾಮಾನ್ಯವಾಗಿ ಅತ್ಯಾಚಾರ ಇಲ್ಲವೇ ಅಸಮ್ಮತ ಸಂಭೋಗದ ಪ್ರಕರಣಗಳ ಬಗ್ಗೆ ಮಾತನಾಡುವಾಗ ನಾವು ‘ಪಶುವಿನಂತೆ’ ವರ್ತಿಸಿದರು, ‘ಮೃಗೀಯ ಭಾವನೆ’ ತೋರಿದರು ಎಂಬ ಹೇಳಿಕೆಗಳನ್ನು ಕೊಡುತ್ತೇವೆ. ಆದರೆ ಸ್ವಾಮಿ ರಾಮತೀರ್ಥರು ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. ಅವರ ಪ್ರಕಾರ, ಲೈಂಗಿಕತೆಯ ವಿಷಯದಲ್ಲಿ ಪ್ರಾಣಿಗಳು ಮನುಷ್ಯರಿಗಿಂತ ಎಷ್ಟೋ ಮೇಲು. ಆದ್ದರಿಂದಲೇ “ಮನುಷ್ಯರೂ ಪಶುಗಳಂತೆಯೇ ವರ್ತಿಸಿದರೆ ನಾಗರಿಕ ಸಮಾಜದ ಎಲ್ಲ ಕಾಮಾಸಕ್ತಿಯೂ ಕಾಮೋದ್ರೇಕವೂ ಸಂಭೋಗಾಕಾಂಕ್ಷೆಯೂ ಕೊನೆಗಾಣಬಹುದು” ಎನ್ನುತ್ತಾರೆ.
ತಮ್ಮ “ವೇದಾಂತ ಮತ್ತು ಸಮಾಜಸ್ವಾಮ್ಯವಾದ” ಎಂಬ ತಮ್ಮ ಉಪನ್ಯಾಸದಲ್ಲಿ ಅವರು ಹೀಗೆ ಹೇಳುತ್ತಾರೆ:
“ಆಶ್ಚರ್ಯವೋ ಆಶ್ಚರ್ಯ! ಮನುಷ್ಯನಿಗಿಂತಲೂ ಪಶುಗಳು ನಿಶ್ಚಿತವಾಗಿಯೂ ಕಡಿಮೆ ಕಾಮುಕವಾಗಿದ್ದರೂ ಸಹ ಕಾಮುಕನಾದ ಮನುಷ್ಯನನ್ನು ವಿಚಾರಶೀಲ ಮನುಷ್ಯನನ್ನು ವಿಚಾರಶೀಲ ಮನುಷ್ಯನು ಪಶುವೆಂದು ಕರೆಯುವುದು ಎಂಥ ಭಯಂಕರವಾದ ಪ್ರಮಾದ, ಅವಿವೇಕ! ಯಾವ ಅವಿವೇಕವೆನಿಸುವ ಕಾಮೋದ್ರೇಕದ ಸುಳಿವೂ ಅವುಗಳಲ್ಲಿಲ್ಲ. ಕರು – ಮರಿಗಳನ್ನು ಪಡೆಯಬೇಕಿರುವಾಗ ಮಾತ್ರ (ಬೆದೆ ಬಂದಾಗ ಮಾತ್ರ) ಅವು ಜೋಡಿಯಾಗುತ್ತವೆ.
ನಾನು ಪ್ರೇಮದ ವಿಷಯವನ್ನು ಹೇಳುತ್ತಿಲ್ಲ. ಕಾಮದ ಬಗ್ಗೆ ಹೇಳುತ್ತಿದ್ದೇನೆ. ಕಾಮುಕನಲ್ಲದ ಮನುಷ್ಯನು ಸ್ತಿಮಿತ ಬುದ್ಧಿಯವನೂ ಶಾಂತಚಿತ್ತನೂ ಹಿತಮಿತ ಸ್ವಭಾವದವನೂ ಆಗಿರುತ್ತಾನೆ. ಸಾಮಾನ್ಯ ಮನುಷ್ಯನು ಕಾಮುಕನಾದ ವಿಷಯಲಂಪಟನಿಗಿಂತಲೂ ಹೆಚ್ಚಾಗಿ ಪಶುಪ್ರಾಣಿಗಳ ಸ್ವಾಭಾವಿಕ ಜೀವನವನ್ನು ನಡೆಸುತ್ತಾನೆ. ಆದರೆ ಕಾಮುಕನು ಇದಕ್ಕೆ ತದ್ವಿರುದ್ಧ. ಆದ್ದರಿಂದ ಅವನನ್ನು ಪಶುವೆಂದು ಕರೆಯಬಾರದು.
ಸ್ವಾಮಿ ರಾಮತೀರ್ಥರು ಕಾಮುಕನನ್ನು ಪಶುವೆಂದು ಕರೆಯುವುದನ್ನು ಸರ್ವಥಾ ಒಪ್ಪುವುದಿಲ್ಲ. ಅದನ್ನು ಪುನರುಚ್ಚರಿಸುತ್ತಾ ಅವರು ವ್ಯಂಗ್ಯದಿಂದ ಹೇಳುತ್ತಾರೆ; “ಕಾಮುಕ ಸ್ವೇಚ್ಛಾಚಾರಿಯನ್ನು ಪಶುವೆಂದು ಕರೆಯಬಾರದು. ಏಕೆಂದರೆ ಪಾಪ! ಅವನು ನಾಗರಿಕ ಮನುಷ್ಯ!! ಇದು ನಾಗರಿಕತೆಗೆ ವಿಶಿಷ್ಟವೂ ವಿಲಕ್ಷಣವೂ ಆದ ಸ್ವಭಾವ; ಇದು ಸಮಾಜದ ಅನಾಗರಿಕ ಸ್ಥಿತಿಯಲ್ಲಿಲ್ಲ. ಹೀಗೆ ಕಾಡುಜನರಲ್ಲಿ ಇಲ್ಲ. ಅವರು ವಿವೇಕಿಗಳೂ ಸ್ವಾಭಾವಿಕ ಜೀವನ ನಡೆಸುವವರೂ ಆಗಿರುತ್ತಾರೆ. ಅವರು ಎಲ್ಲವನ್ನೂ ಋತುಧರ್ಮಕ್ಕೆ ಅನುಸಾರವಾಗಿ ಮಾಡುತ್ತಾರೆ. ಇದು ವೇದಾಂತ. ಇದು ಸಮಾಜವಾದ. ಇವುಗಳ ಪ್ರಕಾರ ಜೀವನ ನಡೆಸಿದರೆ ಹೆಚ್ಚು ಸ್ತಿಮಿತವೂ ನಿರುದ್ವಿಗ್ನವೂ ಆದ ಶಾಂತ ಸ್ವಭಾವದ ಸ್ಥಿತಿಯನ್ನು ಸಂಪಾದಿಸಬಹುದು.”
ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ ಮಾಡಬಲ್ಲ ವಿಕೃತಿ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮನುಷ್ಯ ಸಮುದಾಯಕ್ಕೆ ಸೀಮಿತವಾಗಿರುವ ಈ ವಿಕೃತಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.

Leave a Reply