ದೈವ ಪ್ರೀತಿ – 6 (continued……) : Art of love #31

ವೈದಿಕ ತತ್ವಜ್ಞಾನದ ಕಾಳಜಿ, ಬಹುತ್ವ (ವಿದ್ಯಮಾನಗಳ ಬಹುತ್ವ ) ಮತ್ತು ಏಕತ್ವ (ಬ್ರಹ್ಮ) ಗಳ ನಡುವಿನ ಸಂಬಂಧದ ಕುರಿತಾಗಿತ್ತು. ಆದರೆ ಭಾರತ ಮತ್ತು ಚೈನಾದಲ್ಲಿ ದ್ವಂದ್ವಾತ್ಮಕ ತಾರ್ಕಿಕತೆ, ದ್ವೈತ ದೃಷ್ಟಿಕೋನದ್ದು ಎಂದು ಗೊಂದಲ ಮಾಡಿಕೊಳ್ಳಬಾರದು. ಸಾಮರಸ್ಯ (ಏಕತ್ವ) ಸಾಧ್ಯವಾಗುವುದು, ಅದನ್ನು ಸಂಯೋಜಿಸಿದ ಅದರೊಳಗಿನ ಬಿಕ್ಕಟಿನ ಸ್ಥಿತಿಯಿಂದಾಗಿಯೇ (conflicting positions)… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/06/25/love-44/

ಲಾವೋತ್ಸೇ ಹೇಳುವಂತೆ, “ ನಿಲುಕಬಹುದಾದ ತಾವೋ (ದಾರಿ) ಉಳಿಯಬಹುದಾದ, ಬದಲಾಗದ ತಾವೋ ಅಲ್ಲ. ಇಡಬಹುದಾದ ಹೆಸರು, ಕೊನೆತನಕ ಉಳಿಯಬಹುದಾದ ಹೆಸರಲ್ಲ, ಬದಲಾಗದ ಹೆಸರು ಅಲ್ಲ. (28) ಅಥವಾ ಬೇರೆ ಮಾತುಗಳಲ್ಲಿ ಹೇಳಬಹುದಾದರೆ, “ ನಾವದನ್ನ ನೋಡುತ್ತೇವೆ ಆದರೆ ಕಾಣುವುದಿಲ್ಲ ಹಾಗು ಅದಕ್ಕೆ ‘ನಿರ್ವಿಕಾರ’ ಎಂದು ಹೆಸರಿಡುತ್ತೇವೆ. ನಾವು ಅದನ್ನ ಆಲಿಸುತ್ತೇವೆ ಆದರೆ ಕೇಳಿಸಿಕೊಳ್ಳುವುದಿಲ್ಲ ಆಗ ಅದು ನಮಗೆ ‘ ಅಶ್ರಾವ್ಯ’ ವಾಗುತ್ತದೆ. ನಾವು ಅದನ್ನ ಗ್ರಹಿಸಲು ಪ್ರಯತ್ನಿಸುತ್ತೇವೆ , ಆದರೆ ಅದು ನಮ್ಮ ಹಿಡಿತಕ್ಕೆ ಸಿಗುವುದಿಲ್ಲ, ಆಗ ನಾವದನ್ನು ‘ಸೂಕ್ಷ್ಮ’ ಎಂದು ಹೇಳುತ್ತೇವೆ. ಈ ಮೂರು ಗುಣಲಕ್ಷಣಗಳು ಕಾರಣವಾಗಿ ಅದು ವಿವರಣೆಗೆ ಒಳಗಾಗಬಹುದಾದ ಸಂಗತಿಯಲ್ಲ; ಆದ್ದರಿಂದಲೇ ಈ ಮೂರನ್ನೂ ನಾವು ಒಂದಾಗಿಸುತ್ತವೆ ಮತ್ತು ‘ಏಕಮೇವ ‘ ವನ್ನು ಪಡೆಯುತ್ತೇವೆ. (29) ಈ ವಿಚಾರವನ್ನೇ ಇನ್ನೂ ಒಂದು ರೀತಿಯಲ್ಲಿ ಹೇಳಬಹುದಾದರೆ : “ ಯಾರಿಗೆ (ತಾವೋ) ಗೊತ್ತೋಅವರು ಆ ಬಗ್ಗೆ ಮಾತನಾಡುವುದಿಲ್ಲ (ಬಯಸುವುದಿಲ್ಲ) ; ಯಾರು (ಆದರೂ ಸಿದ್ಧರಾಗಿರುವರೋ) ಅದರ (ತಾವೋ) ಬಗ್ಗೆ ಮಾತನಾಡುತ್ತಾರೋ ಅವರಿಗೆ (ತಾವೋ) ಅದು ಏನೆಂದು ಗೊತ್ತಿಲ್ಲ. “ (30)

ವೈದಿಕ ತತ್ವಜ್ಞಾನದ ಕಾಳಜಿ, ಬಹುತ್ವ (ವಿದ್ಯಮಾನಗಳ ಬಹುತ್ವ ) ಮತ್ತು ಏಕತ್ವ (ಬ್ರಹ್ಮ) ಗಳ ನಡುವಿನ ಸಂಬಂಧದ ಕುರಿತಾಗಿತ್ತು. ಆದರೆ ಭಾರತ ಮತ್ತು ಚೈನಾದಲ್ಲಿ ದ್ವಂದ್ವಾತ್ಮಕ ತಾರ್ಕಿಕತೆ, ದ್ವೈತ ದೃಷ್ಟಿಕೋನದ್ದು ಎಂದು ಗೊಂದಲ ಮಾಡಿಕೊಳ್ಳಬಾರದು. ಸಾಮರಸ್ಯ (ಏಕತ್ವ) ಸಾಧ್ಯವಾಗುವುದು, ಅದನ್ನು ಸಂಯೋಜಿಸಿದ ಅದರೊಳಗಿನ ಬಿಕ್ಕಟಿನ ಸ್ಥಿತಿಯಿಂದಾಗಿಯೇ (conflicting positions). “ ಮೊದಲಿನಿಂದಲೂ ವೈದಿಕ ತಾತ್ವಿಕತೆ ಕೇಂದ್ರೀಕೃತವಾದದ್ದು, ಏಕಕಾಲದಲ್ಲಿ ಸಂಭವಿಸುವ ವೈರುಧ್ಯಗಳ ದ್ವಂದ್ವದ ಸುತ್ತ – ಆದರೂ – ಅದು ಗುರುತಿಸುತ್ತದೆ ಇಂದ್ರಿಯ ಗ್ರಾಹ್ಯ ಜಗತ್ತಿನಲ್ಲಿ ಪ್ರಕಟವಾಗುವ ಶಕ್ತಿಗಳನ್ನ ಮತ್ತು ಸ್ವರೂಪಗಳನ್ನ ….. (31) ಬ್ರಹ್ಮಾಂಡದ ಹಾಗು ಮನುಷ್ಯನೊಳಗಿನ ಪರಮ ಶಕ್ತಿಯು ಬುದ್ಧಿ ವಲಯ ಹಾಗು ಭಾವ ವಲಯ ಎರಡನ್ನೂ ಮೀರಿ ಹೋಗುವಂಥದು. ಹಾಗಾಗಿ ಅದು, “ ಇದೂ ಅಲ್ಲ, ಹಾಗೆಯೂ ಅಲ್ಲ “ (neither this nor thus).

ಆದರೆ ಝಿಮ್ಮರ್ ನ ಅಭಿಪ್ರಾಯದ ಪ್ರಕಾರ, ಈ ಕಟ್ಟು ನಿಟ್ಟಾದ ಅದ್ವೈತದ ಸಾಕ್ಷಾತ್ಕಾರದಲ್ಲಿ ‘ ವಾಸ್ತವ ಮತ್ತು ಅವಾಸ್ತವ’ ಗಳ ನಡುವೆ ಯಾವ ವೈರತ್ವವೂ ಇಲ್ಲ. (32) ಒಂದು ಸಂಗತಿಯ ಗ್ರಹಿಸಲಾಗಿರುವ ಜೋಡಿ ವೈರುದ್ಯಗಳು, ಸಂಗತಿಯ ಸ್ವರೂಪಕ್ಕೆ ಸಂಬಂಧಿಸಿದ್ದಾಗಿರದೆ, ಗ್ರಹಿಸುತ್ತಿರುವ ಮನಸ್ಸಿನ ಸ್ವರೂಪವನ್ನು ಪ್ರಕಟಿಸುತ್ತವೆ ಎಂದು, ಬಹುತ್ವದ ಹಿಂದಿನ ಏಕತ್ವದ ತಮ್ಮ ಹುಡುಕಾಟದಲ್ಲಿ ವೈದಿಕ ಚಿಂತಕರು ನಿರ್ಣಯಕ್ಕೆ ಬಂದು ತಲುಪಿದರು. ನಿಜವಾದ ವಾಸ್ತವವನ್ನು ಸಾಧಿಸಬೇಕಾದರೆ, ಗ್ರಹಿಸುತ್ತಿರುವ ಚಿಂತನೆಯು ತನ್ನನ್ನು ತಾನು ಮೀರಬೇಕು. ವೈರುಧ್ಯ ಸ್ವತಃ ತಾನೇ ವಾಸ್ತವದ ಅಂಶವಲ್ಲ, ಅದು ಮನುಷ್ಯನ ಮನಸ್ಸಿನ ಒಂದು ಬಗೆ. ಈ ತತ್ವ ಋಗ್ವೇದದಲ್ಲಿ ಹೀಗೆ ಹೇಳಲ್ಪಟ್ಟಿದೆ, “ ನಾನೇ ಜೀವಂತ ವಸ್ತು, ನಾನೇ ಜೀವ ಚೈತನ್ಯ ಎರಡೂ, ಏಕ ಕಾಲದಲ್ಲಿ.” ವಿಚಾರವನ್ನ ಕೇವಲ ಅದರ ವೈರುಧ್ಯದಲ್ಲಿ ಮಾತ್ರ ಗ್ರಹಿಸಬಹುದು ಎನ್ನುವ ಚಿಂತನೆಯ ಆತ್ಯಂತಿಕ ಪರಿಣಾಮ ವೇದಾಂತದಲ್ಲಿ ತನ್ನ ತೀವ್ರ ಸ್ವರೂಪವನ್ನು ಕಂಡುಕೊಂಡಿತು. ಅದರ ಪ್ರಕಾರ, “ ಚಿಂತನೆ ತನ್ನ ಎಲ್ಲ ಸೂಕ್ಷ್ಮ ವೈಶಿಷ್ಠ್ಯಗಳೊಂದಿಗೆಯೂ, ಕೇವಲ ಅಜ್ಞಾನದ ಸೂಕ್ಷ್ಮ ದಿಗಂತರೇಖೆ, ವಾಸ್ತವದಲ್ಲಿ ಎಲ್ಲದರಲ್ಲೂ ಅತ್ಯಂತ ಸೂಕ್ಷ್ಮವಾಗಿರುವ ಭ್ರಮೆಯೆಂಬ ಮಾಯೆಯ ಸಾಧನ. “ (33)

ದ್ವಂದ್ವಾತ್ಮಕ ತಾರ್ಕಿಕತೆಯು ದೇವರ ಪರಿಕಲ್ಪನೆಯ ಮೇಲೂ ತನ್ನ ಮಹತ್ವದ ಪರಿಣಾಮ ಬೀರಿದೆ. ಪರಮ ಸತ್ಯವನ್ನು ದೇವರು ಪ್ರತಿನಿಧಿಸುತ್ತಾನೆಂದಾದರೆ, ಮತ್ತು,ಮನುಷ್ಯನ ಬುದ್ಧಿ-ಮನಸ್ಸು (mind) ವೈರುಧ್ಯಗಳಲ್ಲಿ ವಾಸ್ತವವನ್ನು ಗ್ರಹಿಸುತ್ತದೆಯೆಂದಾದರೆ, ದೇವರ ಬಗ್ಗೆ ಯಾವ ಧನಾತ್ಮಕ ಹೇಳಿಕೆಯನ್ನೂ ಕೂಡಲೂ ಸಾಧ್ಯವಾಗುವುದಿಲ್ಲ. ದೇವರು ಸರ್ವವ್ಯಾಪಿ, ಸರ್ವಶಕ್ತ ಎನ್ನುವುದನ್ನ ವೇದಾಂತದಲ್ಲಿ ಪರಮ ಅಜ್ಞಾನ ಎಂದು ತಿಳಿಯಲಾಗುತ್ತದೆ. (34) ಇಲ್ಲಿ ನಾವು ಈ ವಿಚಾರ ಮತ್ತು, ತಾವೋದ ಹೆಸರುರಹಿತ ಸ್ಥಿತಿ, ದೇವರು ಮೋಸೆಸ್ ನಿಗೆ ಹೇಳಿದ ತನ್ನ ಹೆಸರಲ್ಲದ ಹೆಸರಿನ (nameless name) ವಿಷಯ, ಮೇಯಿಸ್ಟರ್ ಎಕ್ ಹಾರ್ಟನ ಪರಿಪೂರ್ಣ ಶೂನ್ಯದ ವಿಚಾರ, ಗಳ ನಡುವೆ ಇರುವ ಸಂಬಂಧವನ್ನು ಗಮನಿಸಬಹುದು. ಮನುಷ್ಯ ಕೇವಲ ನೇತ್ಯಾತ್ಮಕವಾಗಿ ದೇವರನ್ನು ಗ್ರಹಿಸಬಲ್ಲನೇ ಹೊರತು, ಆತ್ಯಂತಿಕ ವಾಸ್ತವದ ಸ್ಥಿತಿಯನ್ನಲ್ಲ. ಯಾವುದೆಲ್ಲ ದೇವರಲ್ಲ ಎಂಬುವುದರ ಪೂರ್ಣ ಅರಿವು ಇರುವಾಗಲೂ ಮನುಷ್ಯ, ದೇವರು ಎಂದರೇನು ಎನ್ನುವುದನ್ನ ತಿಳಿದುಕೊಳ್ಳಲಾರ. ….. ಹೀಗೆ ನಂಥಿಂಗ್ ನಿಂದ ತೃಪ್ತಿಗೊಂಡಿರುವ ಮನಸ್ಸು ಎಲ್ಲಕ್ಕಿಂತಲೂ ಒಳ್ಳೆಯದರ ಕುರಿತಾಗಿ ಚಡಪಡಿಸುತ್ತದೆ. (35) ಮೇಯಿಸ್ಟರ್ ಎಕ್ ಹಾರ್ಟ ಗೆ “ ದಿವ್ಯವೆಂದರೆ, ನೇತ್ಯಾತ್ಮಕದ ನೇತ್ಯಾತ್ಮಕತೆ, ನಿರಾಕರಣೆಯ ನಿರಾಕರಣೆ……. ಪ್ರತಿ ಪ್ರಾಣಿಯೂ ನೇತ್ಯಾತ್ಮಕತೆಯನ್ನು ಹೊಂದಿದೆ : ಒಂದು, ತಾನು ಇನ್ನೊಂದು ಎನ್ನುವುದನ್ನ ನಿರಾಕರಿಸುತ್ತದೆ. “ (36) ಇದರ ಮುಂದಿನ ಪರಿಣಾಮವಾಗಿಯಷ್ಟೇ ಮೇಯಿಸ್ಟರ್ ಎಕ್ ಹಾರ್ಟ ಗೆ ದೇವರು “ ಪರಿಪೂರ್ಣ ಶೂನ್ಯ “ ಆಗಿದ್ದು, ಕಬಾಲಾಹ್ ಗೆ ಪರಮ ವಾಸ್ತವ, “ En Sof” ಕೊನೆಯಿಲ್ಲದ್ದು ಆದ ಹಾಗೆ.

ನಾನು ಆರಿಸ್ಟಾಟಲ್ ನ ತಾರ್ಕಿಕತೆ ಮತ್ತು ದ್ವಂದ್ವಾತ್ಮಕ ತಾರ್ಕಿಕತೆಗಳ ನಡುವಿನ ವ್ಯತ್ಯಾಸವನ್ನು ಚರ್ಚಿಸಿದ್ದು, ದೈವಪ್ರೀತಿಯ ಪರಿಕಲ್ಪನೆಯಲ್ಲಿನ ಮಹತ್ವದ ವ್ಯತ್ಯಾಸವೊಂದಕ್ಕೆ ಸೂಕ್ತವಾದ ನೆಲೆಗಟ್ಟೊಂದನ್ನು ಸಿದ್ಧಪಡಿಸಲು. ದ್ವಂದ್ವಾತ್ಮಕ ತಾರ್ಕಿಕತೆಯನ್ನು ಬೋಧಿಸುವವರ ಪ್ರಕಾರ, ಮನುಷ್ಯ ವಾಸ್ತವವನ್ನು ಗ್ರಹಿಸುವುದು ವೈರುಧ್ಯಗಳಲ್ಲಿ ಮಾತ್ರ, ಮತ್ತು ಆಲೋಚನೆ ಅಥವಾ ಚಿಂತನೆಯ ಮೂಲಕ ಪರಮ ವಾಸ್ತವವನ್ನ-ಏಕತ್ವವನ್ನ, ಆ ಏಕಮೇವ ವನ್ನ ಗ್ರಹಿಸುವುದು ಯಾವತ್ತೂ ಸಾಧ್ಯವಿಲ್ಲ. ಈ ತಿಳುವಳಿಕೆಯ ಪರಿಣಾಮವೆಂದರೆ, ಉತ್ತರಗಳನ್ನು ಹುಡುಕಲು ಚಿಂತನೆಯನ್ನೇ ಆತ್ಯಂತಿಕ ದಾರಿ ಎಂದು ಯಾರೂ ತಿಳಿದುಕೊಳ್ಳಬಾರದು. ಚಿಂತನೆ ನಮಗೆ ಯಾವ ತಿಳುವಳಿಕೆಯನ್ನು ಸಾಧ್ಯ ಮಾಡುತ್ತದೆಯೆಂದರೆ, ಅದರಿಂದ ನಮಗೆ ಯಾವ ಆತ್ಯಂತಿಕ ಉತ್ತರಗಳೂ ಸಿಗುವುದಿಲ್ಲ ಎನ್ನುವುದನ್ನ. ಚಿಂತನೆಯ ಜಗತ್ತು ಈ ದ್ವಂದಲ್ಲಿಯೇ ಯಾವತ್ತೂ ಬಂಧಿ. ಹಾಗಾಗಿ ಜಗತ್ತನ್ನು ಗ್ರಹಿಸಲು ಇರುವ ಏಕೈಕ ದಾರಿ ಕ್ರಿಯೆ, ಒಂದಾಗುವಿಕೆಯ ಅನುಭವ ವೇ ಹೊರತು ಚಿಂತನೆಯಲ್ಲ. ಹೀಗೆ ದ್ವಂದ್ವಾತ್ಮಕ ತಾರ್ಕಿಕತೆ ನಮ್ಮನ್ನು ಯಾವ ತೀರ್ಮಾನಕ್ಕೆ ಕರೆದೊಯ್ಯುತ್ತದೆ ಎಂದರೆ, ದೈವಪ್ರೀತಿ ಎಂದರೆ ಚಿಂತನೆಯ ಮೂಲಕ ಗ್ರಹಿಸಿದ ದೇವರ ಬಗೆಗಿನ ತಿಳುವಳಿಕೆಯಲ್ಲ, ದೈವಪ್ರೀತಿಯ ಕುರಿತಾದ ನಮ್ಮ ಚಿಂತನೆಯೂ ಅಲ್ಲ, ದೈವಪ್ರೀತಿಯೆಂದರೆ ದೇವರೊಡನೆ ಒಂದಾಗುವಿಕೆಯನ್ನ ಅನುಭವಿಸುವ ಕ್ರಿಯೆ.


About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply