ಯಾರಿಗೆ ಯಾವುದು ಕಷ್ಟವಲ್ಲ? : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಚಾಣಕ್ಯ ನೀತಿಯಿಂದ…

ಕೋsಪಿ ಭಾರಃ ಸಮರ್ಥಾನಾಮ್ ಕಿಂ ದೂರಂ ವ್ಯವಸಾಯಿನಾಮ್ |
ಕೋ ವಿದೇಶಃ ಸವಿದ್ಯಾನಾಮ್ ಕಃ ಪರಃ ಪ್ರಿಯವಾದಿನಮ್ || ಚಾಣಕ್ಯ ನೀತಿ 3.13 ||

ಅರ್ಥ: ಸಾಮರ್ಥ್ಯ ಉಳ್ಳವರಿಗೆ ಯಾವುದು ತಾನೇ ಭಾರ? ವ್ಯಾಪಾರಿ/ಕೆಲಸಗಾರರಿಗೆ ಯಾವುದು ತಾನೇ ದೂರ?
ವಿದ್ಯೆ ಕಲಿತವರಿಗೆ ಯಾವ ದೇಶ ತಮ್ಮದಲ್ಲ? ಮಧುರವಾಗಿ ಮಾತಾಡುವವರಿಗೆ ಯಾರು ತಾನೇ ಬೇರೆಯವರು!

ತಾತ್ಪರ್ಯ: ಈ ಸುಭಾಷಿತದ ಅರ್ಥ ಸ್ಪಷ್ಟವಾಗಿದೆ. ನಾವು ಯಾವುದಾದರೂ ವಸ್ತುವನ್ನು / ಕೆಲಸವನ್ನು / ಜವಾಬ್ದಾರಿಯನ್ನು ಹೊರಲಾಗದೆ ‘ಭಾರ’ ಅನ್ನುತ್ತೇವಾದರೆ, ಅದು ನಮ್ಮ ಸಾಮರ್ಥ್ಯದ ಕೊರತೆಯಷ್ಟೇ. ಯಾರಾದರೂ ಯಾವುದಾದರೂ ಒಂದು ಪ್ರದೇಶವನ್ನು ದೂರ ಅನ್ನುತ್ತಾ ಕಾಲೆಳೆದುಕೊಂಡು ಕೂತರೆ ಅವರು ಸೋಮಾರಿಗಳಷ್ಟೇ. ಅವರು ನಿರುದ್ಯೋಗಿಯಾಗೇ ಇರುತ್ತಾರೆ. ಆದರೆ ಮೈಗಳ್ಳತನವಿಲ್ಲದ ವ್ಯಾಪಾರಿ/ಕೆಲಸಗಾರರಿಗೆ ಯಾವ ದೂರವೂ ದೂರವೇ ಅಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಬಲ್ಲರು. ಅದೇ ರೀತಿ ವಿದ್ಯೆ ಒಂದಿದ್ದರೆ ಸಾಕು ‘ವಿದ್ವಾನ್ ಸರ್ವತ್ರ ಪೂಜ್ಯತೇ’ ಅನ್ನುವಂತೆ ಯಾವ ದೇಶಕ್ಕೆ ಹೋದರೂ ಬದುಕಬಲ್ಲರು. ವಿದ್ಯೆ ಉಳ್ಳವರಿಗೆ ಯಾವ ದೇಶವೂ ಪರಕೀಯವಲ್ಲ. ಅವರು ಎಲ್ಲಿ ಬೇಕಾದರೂ  ಹೇಗೆ ಬೇಕಾದರೂ ಜೀವನೋಪಾಯ ಕಂಡುಕೊಳ್ಳಬಲ್ಲರು. ಕೊನೆಯದಾಗಿ ಸವಿಮಾತಾಡುವವರು… ‘ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಟನ್ತಿ ಜನ್ತವಃ’ ಅನ್ನುವ ಮಾತಿನಂತೆ ಒಳ್ಳೆಯ ಮಾತಿಗೆ ಮನಸೋಲದವರೇ ಇಲ್ಲ. ಅಂಥಾ ಮಾತಾಡುವ ಯಾರಿಗೇ ಆದರೂ ಹೊರಗಿನವರು ಅನ್ನಬಹುದಾದ ಜನರೇ ಇರುವುದಿಲ್ಲ, ತಮ್ಮ ಸವಿಮಾತಿನಿಂದ ಅವರು ಅಷ್ಟು ಜನರ ಪ್ರೀತಿ ಗಳಿಸಿರುತ್ತಾರೆ.

ಆದ್ದರಿಂದ ನಮ್ಮ ವೈಫಲ್ಯಕ್ಕೆ ಮತ್ತೇನೋ ಒಂದನ್ನು ದೂರದೆ ನಮ್ಮ ದೋಷಗಳನ್ನು ಗುರುತಿಸಿಕೊಂಡು ತಿದ್ದಿಕೊಳ್ಳುವುದು ಜಾಣತನ – ಇದು ಈ ಸುಭಾಷಿತದ ತಾತ್ಪರ್ಯ.  

Leave a Reply