ದೈವ ಪ್ರೀತಿ – 7 (continued……) : Art of love #32

ದ್ವಂದ್ವಾತ್ಮಕ ತಾರ್ಕಿಕತೆಯ ದೃಷ್ಟಿಕೋನದಲ್ಲಿ ಒತ್ತು ಇರುವುದು ಕ್ರಿಯೆಯ ಮೇಲೆ, ಚಿಂತನೆಯ ಮೇಲಲ್ಲ. ಈ ಮನೋಭಾವ ಇನ್ನೂ ಹಲವಾರು ಪರಿಣಾಮಗಳಿಗೆ ದಾರಿ ಮಾಡಿಕೊಟ್ಟಿತು. ಮೊದಲನೇಯದಾಗಿ, ನಾವು ಭಾರತೀಯ ಮತ್ತು ಚೈನೀಸ್ ಧರ್ಮಗಳ ಬೆಳವಣಿಗೆಯಲ್ಲಿ ಕಾಣುವ ಸಹನೆ. ‘ಸರಿಯಾದ ಚಿಂತನೆ’ ಪರಮ ಸತ್ಯ ಅಲ್ಲವೆಂದ ಮೇಲೆ, ಮುಕ್ತಿಯ, ನಿರ್ವಾಣದ ಮಾರ್ಗ ಅಲ್ಲವೆಂದ ಮೇಲೆ, ಬೇರೆ ರೀತಿಯಲ್ಲಿ ಚಿಂತಿಸುವ ಇನ್ನೊಬ್ಬರ ಜೊತೆಗಿನ ಜಗಳಕ್ಕೆ ಯಾವ ಕಾರಣವೂ ಉಳಿಯಲಿಲ್ಲ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/06/26/love-45/

ದೇವರ ಬಗೆಗಿನ ಈ ತಿಳುವಳಿಕೆಯು, ಸರಿಯಾದ ದಾರಿಯಲ್ಲಿ ಬದುಕಬೇಕು ಎನ್ನುವ ಸಂಗತಿಗೆ ಹೆಚ್ಚು ಒತ್ತು ಕೊಡುತ್ತದೆ. ಬದುಕಿನುದ್ದಕ್ಕೂ ಪ್ರತಿ ಚಿಕ್ಕ, ಪ್ರತಿ ಮಹತ್ವದ ಕ್ರಿಯೆಯೂ, ದೇವರ ಕುರಿತಾದ ಅರಿವನ್ನು ಹೊಂದಲು ಸಮರ್ಪಿತವಾಗಿದೆ, ಆದರೆ ಈ ಅರಿವು ಸರಿಯಾದ ಚಿಂತನೆಯಲ್ಲಿರದೇ ಸರಿಯಾದ ಕ್ರಿಯೆಯಲ್ಲಿ ಅಡಕವಾಗಿದೆ. ಪೌರ್ವಾತ್ಯ ಮತ ಧರ್ಮಗಳಲ್ಲಿ ಇದನ್ನ ಸ್ಪಷ್ಟವಾಗಿ ಗಮನಿಸಬಹುದು. ವೈದಿಕ ಧರ್ಮದಲ್ಲಿ ಮತ್ತು ತಾವೋ ಹಾಗು ಬೌದ್ಧ ಧರ್ಮದಲ್ಲಿ ಕೂಡ, ಧರ್ಮದ ಪರಮ ಗುರಿ ಸರಿಯಾದ ನಂಬಿಕೆಯಲ್ಲ, ಸರಿಯಾದ ಕ್ರಿಯೆ. ಇಂಥದೇ ಮಹತ್ವ ನಮಗೆ ಯಹೂದಿ ಧರ್ಮದಲ್ಲಿಯೂ ಕಾಣಸಿಗುತ್ತದೆ. ಯಹೂದಿ ಪರಂಪರೆಯಯಲ್ಲಿ ನಂಬಿಕೆಯ ಬಗ್ಗೆ ಯಾವ ಭಿನ್ನಾಭಿಪ್ರಾಯಗಳಿರಲಿಲ್ಲ ( ಒಂದು ಮಹತ್ವದ ಅಪವಾದ, ಎರಡು ವೈರುಧ್ಯದ ಸಾಮಾಜಿಕ ವರ್ಗಗಳಾದ Pharisees ಮತ್ತು Sadducees ಗಳ ನಡುವಿನ ವ್ಯತ್ಯಾಸ ). ಯಹೂದಿ ಧರ್ಮದ ಪ್ರಮುಖ ಒತ್ತಾಸೆ ( ವಿಶೇಷವಾಗಿ ಕ್ರಿಸ್ತ ಶಕೆಯ ಆರಂಭದಿಂದ) ಸರಿಯಾದ ರೀತಿಯಲ್ಲಿ ಬದುಕುವುದರ ಮೇಲೆ ಇತ್ತು. ಇದನ್ನ ಯಹೂದಿಗಳು ಹಲಚ ಎನ್ನುತ್ತಾರೆ. ( ತಾವೋ ಎನ್ನುವುದರ ಅರ್ಥ ಕೂಡ ಇದಕ್ಕೆ ಸಮಾನವಾದುದು).

ಆಧುನಿಕ ಇತಿಹಾಸದಲ್ಲಿ ಇದೇ ತತ್ವ ಸ್ಪಿನೋಜ, ಮಾರ್ಕ್ಸ್, ಫ್ರಾಯ್ಡ್ ರ ವಿಚಾರಗಳಲ್ಲೂ ವ್ಯಕ್ತವಾಗಿದೆ. ಸ್ಪಿನೋಜ್ ನ ತತ್ವ ಚಿಂತನೆಯಲ್ಲಿ, ಸರಿಯಾದ ನಂಬಿಕೆಯ ಮೇಲಿದ್ದ ಒತ್ತು, ಸರಿಯಾದ ಜೀವನ ಕ್ರಮಕ್ಕೆ ವರ್ಗಾವಣೆ ಆಯ್ತು. “ ತತ್ವಜ್ಞಾನಿಗಳು ಬೇರೆ ಬೇರೆ ರೀತಿಯಲ್ಲಿ ಜಗತ್ತನ್ನ ವ್ಯಾಖ್ಯಾನ ಮಾಡಿದ್ದಾರೆ, ಈಗ ನಮ್ಮ ಮುಂದಿರುವ ಕೆಲಸವೆಂದರೆ ಜಗತ್ತನ್ನ ಬದಲಾಯಿಸುವುದು. “ ಎಂದು ಮಾರ್ಕ್ಸ್ ಹೇಳುವಾಗ, ಅವನು ಇದೇ ತತ್ವವನ್ನು ಕುರಿತಾಗಿ ಹೇಳುತ್ತಿದ್ದಾನೆ. ಫ್ರಾಯ್ಡ್ ನ ದ್ವಂದ್ವಾತ್ಮಕ ತಾರ್ಕಿಕತೆ ಅವನನ್ನು , ಮನುಷ್ಯ ತನ್ನನ್ನು ತಾನು ಆಳವಾಗಿ ಅನುಭವಿಸುವ ಮನೋವಿಶ್ಲೇಷಣಾತ್ಮಕ ಚಿಕಿತ್ಸಾ ಕ್ರಮದ ದಾರಿಯತ್ತ ಕರೆದೊಯ್ಯುತ್ತದೆ.

ದ್ವಂದ್ವಾತ್ಮಕ ತಾರ್ಕಿಕತೆಯ ದೃಷ್ಟಿಕೋನದಲ್ಲಿ ಒತ್ತು ಇರುವುದು ಕ್ರಿಯೆಯ ಮೇಲೆ, ಚಿಂತನೆಯ ಮೇಲಲ್ಲ. ಈ ಮನೋಭಾವ ಇನ್ನೂ ಹಲವಾರು ಪರಿಣಾಮಗಳಿಗೆ ದಾರಿ ಮಾಡಿಕೊಟ್ಟಿತು. ಮೊದಲನೇಯದಾಗಿ, ನಾವು ಭಾರತೀಯ ಮತ್ತು ಚೈನೀಸ್ ಧರ್ಮಗಳ ಬೆಳವಣಿಗೆಯಲ್ಲಿ ಕಾಣುವ ಸಹನೆ. ‘ಸರಿಯಾದ ಚಿಂತನೆ’ ಪರಮ ಸತ್ಯ ಅಲ್ಲವೆಂದ ಮೇಲೆ, ಮುಕ್ತಿಯ, ನಿರ್ವಾಣದ ಮಾರ್ಗ ಅಲ್ಲವೆಂದ ಮೇಲೆ, ಬೇರೆ ರೀತಿಯಲ್ಲಿ ಚಿಂತಿಸುವ ಇನ್ನೊಬ್ಬರ ಜೊತೆಗಿನ ಜಗಳಕ್ಕೆ ಯಾವ ಕಾರಣವೂ ಉಳಿಯಲಿಲ್ಲ. ಇಂಥದೊಂದು ಸಹನೆಯನ್ನ ಕತ್ತಲೆಯಲ್ಲಿರುವ ಆನೆಯನ್ನ ಗುರುತಿಸಲು ಸೇರಿದ ಹಲವು ಮನುಷ್ಯರ ಕಥೆಯಲ್ಲಿ ಸುಂದರವಾಗಿ ನಿರೂಪಿಸಲಾಗಿದೆ. ಕತ್ತಲೆಯಲ್ಲಿದ ಆನೆಯ ಸೊಂಡಿಲನ್ನು ಮುಟ್ಟಿದ ಮನುಷ್ಯ, ಅದು ನೀರಿನ ಪೈಪ್ ನಂತಹ ಪ್ರಾಣಿ ಎಂದುಕೊಂಡರೆ ; ಕಿವಿಯನ್ನ ಮುಟ್ಟಿ ನೋಡಿದ ಮನುಷ್ಯ, ಅದನ್ನು ಬೀಸಣಿಕೆಯಂಥ ಪ್ರಾಣಿ ಎಂದುಕೊಂಡ ; ಕಾಲುಗಳನ್ನು ಮುಟ್ಟಿನೋಡಿದ ಮೂರನೇಯ ಮನುಷ್ಯ, ಅದು ಕಂಬದಂಥ ಪ್ರಾಣಿ ಎಂದು ಸಾರಿದ. ಹೀಗೆ ಎಲ್ಲರೂ ತಮ್ಮ ತಮ್ಮ ಅನುಭವದ ಸತ್ಯವನ್ನೇ ಹೇಳುತ್ತಿದ್ದರೂ ಎಲ್ಲವೂ ಆಂಶಿಕ ಸತ್ಯಗಳು.

ಎರಡನೇಯದಾಗಿ ದ್ವಂದ್ವಾತ್ಮಕ ತಾರ್ಕಿಕತೆಯ ನಿಲುವು, ಒಂದು ಬದಿಯಲ್ಲಿ ಸಿದ್ಧಾಂತವನ್ನೂ, ಇನ್ನೊಂದು ಬದಿಯಲ್ಲಿ ವಿಜ್ಞಾನವನ್ನು ಬೆಳೆಸುವುದರ ಬದಲಾಗಿ ಮನುಷ್ಯನನ್ನು ಪರಿವರ್ತಿಸುತ್ತ ಹೆಚ್ಚಿನ ಒತ್ತು ನೀಡಿತು. ಭಾರತೀಯ ಮತ್ತು ಚೀನಾದ ಅನುಭಾವ ಮಾರ್ಗದ ನಿಲುವಿನ ಪ್ರಕಾರ, ಮನುಷ್ಯನ ಧಾರ್ಮಿಕ ಕ್ರಿಯೆಯೆಂದರೆ ಸರಿಯಾದ ಚಿಂತನೆಯಲ್ಲಿ ತೊಡಗಿಸಿಕೊಳ್ಳುವುದಲ್ಲ, ಬದಲಾಗಿ ಸರಿಯಾದ ಕ್ರಿಯೆಯಲ್ಲಿ ಮತ್ತು ( ಅಥವಾ) ಧ್ಯಾನದ ಹಾದಿಯಲ್ಲಿ ಮುಂದುವರೆದು ಪರಮ ಏಕದೊಂದಿಗೆ ಒಂದಾಗುವುದು.

ಪಾಶ್ಚಾತ್ಯ ಚಿಂತನೆಯ ಮುಖ್ಯ ಧಾರೆಯದ್ದು ಮೇಲಿನ ತಿಳುವಳಿಕೆಗೆ ವಿರುದ್ಧವಾದ ಚಿಂತನೆ. ಇಲ್ಲಿ ಸರಿಯಾದ ಕ್ರಿಯೆ ಸಹ ಮುಖ್ಯವಾದರೂ, ಸರಿಯಾದ ಚಿಂತನೆಯಲ್ಲಿಯೇ ಪರಮ ಸತ್ಯವನ್ನು ಕಂಡುಕೊಳ್ಳಬೇಕು ಎನ್ನುವ ನಂಬಿಕೆ ಪ್ರಬಲವಾಗಿರುವ ಕಾರಣವಾಗಿ, ಸರಿಯಾದ ಚಿಂತನೆಯ ಮೇಲೆ ಹೆಚ್ಚಿನ ಒತ್ತನ್ನ ನೀಡಲಾಯಿತು. ಇದು ಮತ ಧರ್ಮಗಳ ಬೆಳವಣಿಗೆಯಲ್ಲಿ ಕಟ್ಟರ್ ಸಿದ್ಧಾಂತಗಳ (dogma) ಸಂಯೋಜನೆಗೆ, ಮತ್ತು ಈ ಸಂಯೋಜನೆಯ ಕುರಿತಾದ ಕೊನೆಯಿಲ್ಲದ ವಾದ ವಿವಾದಗಳಿಗೆ, ಮತ್ತು ನಾಸ್ತಿಕರ, ಧರ್ಮದ್ರೋಹಿಗಳ ಕುರಿತಾಗಿ ಅಸಹನೆಗೆ ಕಾರಣವಾಯಿತು. ಇದು ಮುಂದುವರೆದು, ‘ ದೇವರನ್ನು ನಂಬುವುದು’ ಧಾರ್ಮಿಕತೆಯ ಮುಖ್ಯ ಉದ್ದೇಶ ಎನ್ನುವ ವಿಚಾರ ಪ್ರಬಲವಾಯಿತು. ಹಾಗೆಂದ ಮಾತ್ರಕ್ಕೆ ಸರಿಯಾದ ರೀತಿಯಲ್ಲಿ ಬದುಕುವ ಪರಿಕಲ್ಪನೆ ಇಲ್ಲಿ ಇರಲಿಲ್ಲ ಎಂದಲ್ಲ ಆದರೆ, ದೇವರನ್ನು ನಂಬುವ ಮನುಷ್ಯ, ಅವನು ದೇವರನ್ನು ಬದುಕದಿದ್ದರೂ ತಾನು ದೇವರನ್ನು ನಂಬದ ಆದರೆ ಬದುಕುವ ಮನುಷ್ಯನಿಗಿಂತ ಶ್ರೇಷ್ಠನೆಂದು ತಿಳಿಯುವ ಸ್ಥಿತಿ ಸೃಷ್ಟಿಯಾಯಿತು.

ಚಿಂತನೆಯ ಮೇಲಿನ ಈ ಹೆಚ್ಚಿನ ಒತ್ತು, ಐತಿಹಾಸಿಕವಾಗಿ ಬಹು ಮುಖ್ಯವಾದ ಪರಿಣಾಮಕ್ಕೆ ಕಾರಣವಾಯಿತು. ಚಿಂತನೆಯ ಮೂಲಕ ಸತ್ಯವನ್ನು ಕಂಡುಕೊಳ್ಳಬಹುದು ಎನ್ನುವ ತಿಳುವಳಿಕೆ ಕಟ್ಟರ ಸಿದ್ಧಾಂತಗಳ ಸಂಯೋಜನೆಗೆ ಮಾತ್ರ ಕಾರಣವಾಗಲಿಲ್ಲ, ವಿಜ್ಞಾನದ ಬೆಳವಣಿಗೆಗೂ ಕಾರಣವಾಯಿತು. ವೈಜ್ಞಾನಿಕ ಚಿಂತನೆಯಲ್ಲಿ, ಸರಿಯಾದ ಚಿಂತನೆಗೆ ಮಾತ್ರ ಮಹತ್ವ, ಬೌದ್ಧಿಕ ಪ್ರಾಮಾಣಿಕತೆಯ ಅಂಶದ ದೃಷ್ಟಿಯಿಂದಲೂ, ಹಾಗು ವೈಜ್ಞಾನಿಕ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಅಂದರೆ ತಾಂತ್ರಿಕತೆಯ ದೃಷ್ಟಿಯಿಂದಲೂ.

ಸಂಕ್ಷಿಪ್ತವಾಗಿ ದ್ವಂದ್ವಾತ್ಮಕ ತಾರ್ಕಿಕತೆ, ಸಹನೆ ಮತ್ತು ಸ್ವ ಪರಿವರ್ತನೆಯೆಡೆಗಿನ ಪ್ರಯತ್ನಗಳಿಗೆ ಕಾರಣವಾದರೆ, ಆರಿಸ್ಟಾಟಲ್ ನ ದೃಷ್ಟಿಕೋನ ಕಟ್ಟರ ಸಿದ್ಧಾಂತಗಳ ಹುಟ್ಟಿಗೆ, ವಿಜ್ಞಾನದ ಬೆಳವಣಿಗೆಗೆ, ಕ್ಯಾಥೋಲಿಕ್ ಚರ್ಚುಗಳ ಸ್ಥಾಪನೆಗೆ ಮತ್ತು ಪರಮಾಣು ಶಕ್ತಿಯ ಅವಿಷ್ಕಾರಕ್ಕೆ ಕಾರಣವಾಯಿತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply