ದೈವ ಪ್ರೀತಿ – 8 (continued…) : Art of love #33

ದೈವ ಪ್ರೀತಿಯ ಶುರುವಾತಿನಲ್ಲಿ ಅಸಹಾಯಕನಂತೆ ತಾಯಿದೈವಕ್ಕೆ ಅಂಟಿಕೊಂಡ ಮನುಷ್ಯ ನಂತರ ಪಿತೃದೈವಕ್ಕೆ ವಿಧೇಯನಾದ. ಪ್ರಬುದ್ಧತೆಯ ಹಂತವನ್ನು ತಲುಪಿದಾಗ ದೇವರು ತನ್ನ ಹೊರತಾದ ಶಕ್ತಿಯಲ್ಲವೆಂಬುದನ್ನ ಅರಿತ ಮನುಷ್ಯ, ಪ್ರೀತಿ ಮತ್ತು ನ್ಯಾಯಪರತೆಯ ತತ್ವಗಳನ್ನು ತನ್ನೊಳಗೇ ಅಳವಡಿಸಿಕೊಂಡ ಮತ್ತು ದೇವರೊಳಗೆ ಒಂದಾದ, ಕೊನೆಗೆ ಅವನು ದೇವರನ್ನು ಕುರಿತು ಕೇವಲ ಕಾವ್ಯಾತ್ಮಕವಾಗಿ ಮತ್ತು ಸಂಕೇತಗಳಲ್ಲಿ ಮಾತನಾಡುವ ಸ್ಥಿತಿಗೆ ಬಂದು ಮುಟ್ಟಿದ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/07/02/love-46/

ದೈವ ಪ್ರೀತಿಯ ಸಮಸ್ಯೆಯ ಕುರಿತಾದ ಎರಡು ನಿಲುವುಗಳಲ್ಲಿನ ಈ ವ್ಯತ್ಯಾಸಗಳನ್ನ ಈಗಾಗಲೇ ಸೂಚ್ಯವಾಗಿ ವಿವರಿಸಲಾಗಿದೆ, ಮತ್ತು ಈಗ ಕೇವಲ ಈ ಚರ್ಚೆಯ ಸಾರಾಂಶವನ್ನು ಸಂಕ್ಷೇಪಿಸಿ ಹೇಳಬೇಕಾಗಿದೆ.

ಪ್ರಭಾವಿ ಪಾಶ್ಚಿಮಾತ್ಯ ಧರ್ಮ ವ್ಯವಸ್ಥೆಯಲ್ಲಿ, ದೈವ ಪ್ರೀತಿಯೆಂದರೆ, ದೇವರಲ್ಲಿ, ದೇವರ ಅಸ್ತಿತ್ವದಲ್ಲಿ, ದೇವರ ನ್ಯಾಯಪರತೆಯಲ್ಲಿ, ದೇವರ ಪ್ರೀತಿಯಲ್ಲಿ ನಂಬಿಕೆಯನ್ನ ಹೊಂದುವುದು. ದೈವಪ್ರೀತಿ ಎಂದರೆ ಒಂದು ಚಿಂತನೆಯನ್ನ ಅನುಭವಿಸುವುದು. ಪೌರ್ವಾತ್ಯ ಧರ್ಮ ವ್ಯವಸ್ಥೆ ಮತ್ತು ಅನುಭಾವದಲ್ಲಿ, ದೈವಪ್ರೀತಿಯೆನ್ನುವುದು ಒಂದಾಗುವಿಕೆಯ ತೀವ್ರ ಭಾವನಾತ್ಮಕ ಅನುಭವ, ಬದುಕಿನ ಪ್ರತಿಯೊಂದು ಕ್ರಿಯೆಯಲ್ಲಿ ಬೇರ್ಪಡಿಸಲಾಗದಂತೆ ಈ ಪ್ರೀತಿಯ ಅಭಿವ್ಯಕ್ತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದುವುದು. ದೈವ ಪ್ರೀತಿಗೆ ರ್ಯಾಡಿಕಲ್ ಆದ ಸೂತ್ರವೊಂದನ್ನ ಸಂಯೋಜಿಸಿದವನು ಮೇಯಿಸ್ಟರ್ ಏಕ್ ಹಾರ್ಟ್ : “ ನಾನು ದೇವರಾಗಿ ಬದಲಾದರೆ ಮತ್ತು ದೇವರು ನನ್ನನ್ನು ತನ್ನೊಳಗೆ ಒಂದಾಗಿಸಿಕೊಂಡರೆ, ನಂತರ ನಾನು ದೇವರನ್ನು ಬದುಕತೊಡಗಿದಾಗ, ನಮ್ಮಿಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ……. ಕೆಲವು ಜನ ಕಲ್ಪಿಸಿಕೊಳ್ಳುತ್ತಾರೆ ತಾವು ದೇವರನ್ನು ನೋಡುವುದನ್ನ, ಅವನ ಎದುರಿಗೆ ನಿಂತ ಹಾಗೆ. ಆದರೆ ಅದು ಹಾಗಲ್ಲ, ದೇವರು ಮತ್ತು ನಾನು ಒಂದು. ದೇವರ ಬಗ್ಗೆ ಅರಿವು ಹೊಂದುವುದರ ಮೂಲಕ ನಾನು ಅವನನ್ನು ನನ್ನೊಳಗೆ ಆವಾಹಿಸಿಕೊಳ್ಳುತ್ತೇನೆ. ದೇವರನ್ನು ಪ್ರೀತಿಸುವ ಮೂಲಕ ನಾನು ಅವನನ್ನು ಸೇರಿಕೊಳ್ಳುತ್ತೇನೆ.”

ಈಗ ನಾವು ತಾಯಿ-ತಂದೆಯರ ಪ್ರೀತಿ ಮತ್ತು ದೈವಪ್ರೀತಿಯ ನಡುವಿನ ಮುಖ್ಯವಾದ ಸಮಾನ ಅಂಶವನ್ನು ಗಮನಿಸೋಣ. ಮಗುವಿನ ಬೆಳವಣಿಗೆಯ ಶುರುವಾತು, ತಾಯಿಯೊಡನೆ ಬೆಸೆದುಕೊಂಡು, ಅವಳೇ “ತನ್ನ ಎಲ್ಲ ಅಸ್ತಿತ್ವದ ನೆಲೆ “ ಎನ್ನುವ ತಿಳುವಳಿಕೆಯೊಡನೆ. ಮಗು ತನ್ನನ್ನು ತಾನು ಅಸಹಾಯಕ ಎಂದು ತಿಳಿದುಕೊಂಡು ತಾಯಿಯ ಪೂರ್ಣ ಪ್ರೀತಿ ಮತ್ತು ಕಾಳಜಿಯನ್ನ ಬಯಸುತ್ತದೆ. ನಂತರ ಮಗು ತಂದೆಯತ್ತ ಹೊರಳುತ್ತದೆ ತನ್ನ ವಾತ್ಸಲ್ಯದ ಹೊಸ ಕೇಂದ್ರವೆನ್ನುವಂತೆ ; ತಂದೆ, ಚಿಂತನೆ ಮತ್ತು ಕ್ರಿಯೆಯ ಮಾರ್ಗದರ್ಶಕ ತತ್ವವಾಗಿರುವುದರಿಂದ. ಈ ಹಂತದಲ್ಲಿ, ತಂದೆಯ ಮೆಚ್ಚುಗೆಯನ್ನ ಗಳಿಸುವುದು ಮತ್ತು ಅವನ ಅಸಂತೋಷಕ್ಕೆ ತಾನು ಕಾರಣವಾಗದಿರುವುದು ಮಗುವಿಗೆ ಅವಶ್ಯಕವಾದ ಪ್ರೇರಣೆಗಳಾಗಿರುತ್ತವೆ. ಪೂರ್ಣ ಪ್ರಬುದ್ಧತೆಯ ಹಂತದಲ್ಲಿ ಮನುಷ್ಯ, ತನ್ನ ತಾಯಿ ತಂದೆಯಿಂದ ಸ್ವತಂತ್ರನಾಗಿ ಅವರ ರಕ್ಷಣಾವಲಯದಿಂದ, ಅಧಿಕಾರವಲಯದಿಂದ ಹೊರಬರುತ್ತಾನೆ ; ಮತ್ತು ಈಗ ಅವನು ತಾಯಿ ಮತ್ತು ತಂದೆಯರ ತತ್ವಗಳನ್ನು ತನ್ನೊಳಗೇ ಸ್ಥಾಪಿಸಿಕೊಂಡಿದ್ದಾನೆ. ಈಗ ಅವನು ತಾನೇ ತನ್ನ ತಾಯಿಯಾಗಿದ್ದಾನೆ, ತಂದೆಯಾಗಿದ್ದಾನೆ ; ಅವನೇ ಈಗ ತಾಯಿ ಮತ್ತು ತಂದೆ. ಮನುಷ್ಯ ಜನಾಂಗದ ಇತಿಹಾಸದಲ್ಲಿಯೂ ನಾವು ಇಂಥದೇ ಬೆಳವಣಿಗೆಯನ್ನ ಕಾಣಬಹುದು ಮತ್ತು ಊಹಿಸಬಹುದು : ದೈವ ಪ್ರೀತಿಯ ಶುರುವಾತಿನಲ್ಲಿ ಅಸಹಾಯಕನಂತೆ ತಾಯಿದೈವಕ್ಕೆ ಅಂಟಿಕೊಂಡ ಮನುಷ್ಯ ನಂತರ ಪಿತೃದೈವಕ್ಕೆ ವಿಧೇಯನಾದ. ಪ್ರಬುದ್ಧತೆಯ ಹಂತವನ್ನು ತಲುಪಿದಾಗ ದೇವರು ತನ್ನ ಹೊರತಾದ ಶಕ್ತಿಯಲ್ಲವೆಂಬುದನ್ನ ಅರಿತ ಮನುಷ್ಯ, ಪ್ರೀತಿ ಮತ್ತು ನ್ಯಾಯಪರತೆಯ ತತ್ವಗಳನ್ನು ತನ್ನೊಳಗೇ ಅಳವಡಿಸಿಕೊಂಡ ಮತ್ತು ದೇವರೊಳಗೆ ಒಂದಾದ, ಕೊನೆಗೆ ಅವನು ದೇವರನ್ನು ಕುರಿತು ಕೇವಲ ಕಾವ್ಯಾತ್ಮಕವಾಗಿ ಮತ್ತು ಸಂಕೇತಗಳಲ್ಲಿ ಮಾತನಾಡುವ ಸ್ಥಿತಿಗೆ ಬಂದು ಮುಟ್ಟಿದ.

ಈ ಎಲ್ಲ ವಿವರಗಳನ್ನು ಒಟ್ಟು ಮಾಡಿ ನೋಡಿದಾಗ ಸ್ಪಷ್ಟವಾಗುವುದೆನೆಂದರೆ, ದೈವಪ್ರೀತಿಯನ್ನ ಒಬ್ಬರ ತಂದೆ-ತಾಯಿಯ ಪ್ರೀತಿಯಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಮನುಷ್ಯ ತನ್ನ ತಾಯಿ, ವಂಶ ಮತ್ತು ದೇಶದೊಡನೆ ಹೊಂದಿರುವ incestuous ಸಂಬಂಧವನ್ನು ದಾಟಿ ಹೊರಬರದೇ ಹೋದರೆ, ಶಿಕ್ಷಿಸುವ ಮತ್ತು ಹೊಗಳುವ ತಂದೆಯೊಡನೆಯ ಅಥವಾ ಇನ್ನಾವುದೇ ಅಥಾರಿಟಿಯ ಜೊತೆಗಿನ ಶಿಶುಸಹಜ ಅವಲಂಬನೆಯನ್ನ ಮೀರದೇ ಹೋದರೆ, ಅವನು ಹೆಚ್ಚು ಪ್ರಬುದ್ಧವಾದ ದೈವಪ್ರೀತಿಯನ್ನ ಬೆಳೆಸಿಕೊಳ್ಳಲಾರ; ಆಗ ಅವನ ಧರ್ಮ, ಎಲ್ಲರನ್ನೂ ಎಲ್ಲವನ್ನೂ ಕಾಪಾಡುವ ತಾಯಿಯ ರೂಪದಲ್ಲಿ ಅಥವಾ ಶಿಕ್ಷಿಸುವ-ದಯಪಾಲಿಸುವ ತಂದೆಯಂತೆ ದೇವರನ್ನು ಕಾಣುವ ಆರಂಭಿಕ ಹಂತದ ಧರ್ಮ.

ಸಮಕಾಲೀನ ಧರ್ಮದಲ್ಲಿ, ನಾವು ಧರ್ಮದ ಎಲ್ಲ ಹಂತಗಳನ್ನೂ, ಪುರಾತನ ಆರಂಭಿಕ ಹಂತದಿಂದ ಇತ್ತೀಚಿನ ಬೆಳವಣಿಗೆಯವರೆಗಿನ ಎಲ್ಲ ಹಂತಗಳನ್ನೂ ಗುರುತಿಸಬಹುದು. “ದೇವರು” ಎನ್ನುವ ಪದ ಈಗಲೂ ಬುಡಕಟ್ಟಿನ ನಾಯಕ ಎನ್ನುವುದರಿಂದ ಮೊದಲು ಮಾಡಿ “ಪರಿಪೂರ್ಣ ಶೂನ್ಯ “ ಎನ್ನುವವರೆಗಿನ ಎಲ್ಲ ಅರ್ಥಗಳನ್ನೂ ಸೂಚಿಸುತ್ತದೆ. ಇದೇ ರೀತಿ, ಪ್ರತಿ ವ್ಯಕ್ತಿಯೂ ತನ್ನೊಳಗೆ, ತನ್ನ ಸುಪ್ತಪ್ರಜ್ಞೆಯಲ್ಲಿ ಫ್ರಾಯ್ಡ್ ಗುರುತಿಸಿರುವಂತೆ ಶಿಶುವಿನಿಂದ ಇಲ್ಲಿಯವರೆಗಿನ ಎಲ್ಲ ಹಂತಗಳನ್ನೂ ಉಳಿಸಿಕೊಂಡಿದ್ದಾನೆ. ಈಗ ನಮ್ಮ ಮುಂದೆ ಇರುವ ಪ್ರಶ್ನೆಯೆಂದರೆ ಅವನು ಈಗ ಯಾವ ಹಂತದವರೆಗೆ ಬೆಳವಣಿಗೆಯನ್ನ ಸಾಧಿಸಿದ್ದಾನೆ ಎನ್ನುವುದು. ಒಂದು ಸಂಗತಿಯಂತೂ ಖಚಿತ : ಅವನ ದೈವಪ್ರೀತಿಯ ಸ್ವರೂಪ, ಅವನ ಮನುಷ್ಯ ಪ್ರೀತಿಯ ಸ್ವರೂಪದೊಂದಿಗೆ ನೇರ ಸಂಬಂಧವನ್ನು ಹೊಂದಿದೆ ಮತ್ತು ಮುಂದುವರೆದು, ಅವನ ದೈವ ಪ್ರೀತಿಯ ಹಾಗು ಮನುಷ್ಯ ಪ್ರೀತಿಯ ರಿಯಲ್ ಕ್ವಾಲಿಟಿ ಬಹುತೇಕ ಅವನ ಸುಪ್ತಪ್ರಜ್ಞೆಯಲ್ಲಿದೆ ಮತ್ತು ಅದು, ಪ್ರೀತಿ ಎಂದರೇನು ಎನ್ನುವ ಅವನ ಹೆಚ್ಚಿನ ಪ್ರಬುದ್ಧ ವಿಚಾರವನ್ನು ತರ್ಕಬದ್ಧವಾಗಿಸಿದೆ. ವ್ಯಕ್ತಿಯೊಬ್ಬನ ಮನುಷ್ಯನ ಕುರಿತಾದ ಪ್ರೀತಿ, ಮುಂದುವರೆದು, ಅವನ ಕುಟುಂಬದೊಡನೆಯ ಸಂಬಂಧದಲ್ಲಿ ಒಂದಾಗಿದೆಯಷ್ಟೇ ಅಲ್ಲ, ಅಂತಿಮ ವಿಷ್ಲೆಷಣೆಯ ಪ್ರಕಾರ ಅವನು ಬದುಕುತ್ತಿರುವ ಸಮಾಜದಿಂದ ಪ್ರಭಾವಿತವಾಗಿದೆ. ಸಮಾಜದ ರಚನೆ, ಅಧಿಕಾರಶಾಹಿಗೆ ಸಲಾಮು ಹೊಡೆಯುವುದಾಗಿದ್ದರೆ (ಬಹಿರಂಗವಾದ ಸ್ಪಷ್ಟ ಅಧಿಕಾರಶಾಹಿಯಾಗಿರಬಹುದು ಅಥವಾ ಮಾರ್ಕೇಟ್ ಹಾಗು ಸಾರ್ವಜನಿಕ ಒತ್ತಡದ ಅನಾಮಿಕ ಅಧಿಕಾರಶಾಹಿಯಾಗಿರಬಹುದು), ಅವನ ದೇವರ ಕಲ್ಪನೆ ಬಾಲಿಶ ಮತ್ತು ಪ್ರಬುದ್ಧ ಪರಿಕಲ್ಪನೆಯಿಂದ ಬಹುದೂರವಾದದ್ದಾಗಿರುತ್ತದೆ, ಇಂಥ ಸ್ಥಿತಿಯ ಬೀಜವನ್ನ ನಾವು ಏಕದೈವತಾವಾದದ ಧರ್ಮದ ಇತಿಹಾಸದಲ್ಲಿ ಗುರುತಿಸಬಹುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply