ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ : Art of Love #34

ಬಂಡವಾಳದ ಕೇಂದ್ರೀಕರಣ ಮತ್ತು ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ ವಿಶೇಷ ಗುಣಲಕ್ಷಣದಿಂದಾಗಿ ಹೊರಹೊಮ್ಮಿರುವ ಇನ್ನೊಂದು ನಿರ್ಣಾಯಕ ಅಂಶ, ಉದ್ಯಮಗಳು ಕಾರ್ಯ ನಿರ್ವಹಿಸುವ ವಿಶಿಷ್ಟ ರೀತಿಯಲ್ಲಿ ಅಡಗಿದೆ. ಅತೀ ಹೆಚ್ಚಾಗಿ ಸೆಂಟ್ರಲೈಸ್ ಆಗಿರುವ ಉದ್ಯಮಗಳಲ್ಲಿ, ರ್ಯಾಡಿಕಲ್ ಆದ ಶ್ರಮ ವಿಭಜನೆಯ (radical division of labour) ಕಾರಣವಾಗಿ ವ್ಯಕ್ತಿ ತನ್ನ ತನ್ನ ವೈಯಕ್ತೀಕತೆಯನ್ನ ಕಳೆದುಕೊಂಡು ಬೃಹತ್ ಯಂತ್ರದ ಪುಟ್ಟ ಭಾಗವೊಂದರಂತೆ ಕೆಲಸ ಮಾಡುತ್ತಿರುತ್ತಾನೆ. ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ “ಮಾನವ ಸಮಸ್ಯೆ” ಯನ್ನ ಹೀಗೆ ಸಮೀಕರಿಸಬಹುದು… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/07/03/love-47/

ಪ್ರೀತಿ ಎನ್ನುವುದನ್ನ ಪ್ರಬುದ್ಧ, ಸೃಜನಶೀಲ ವ್ಯಕ್ತಿತ್ವವೊಂದರ ಸಾಮರ್ಥ್ಯ ಎನ್ನಬಹುದಾದರೆ, ಒಂದು ಸಂಸ್ಕೃತಿಯಲ್ಲಿ ಜೀವಿಸುತ್ತಿರುವ ಒಬ್ಬ ವ್ಯಕ್ತಿಯ ಪ್ರೀತಿಸುವ ಸಾಮರ್ಥ್ಯ, ಸಂಸ್ಕೃತಿಯು ಆ ವ್ಯಕ್ತಿಯ ಮೇಲೆ ಮಾಡಿರುವ ಪ್ರಭಾವದ ಮೇಲೆ ಅವಲಂಬಿತವಾಗಿದೆ ಎನ್ನುವುದು ಸ್ವಯಂವೇದ್ಯ. ಸಮಕಾಲೀನ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿನ ಪ್ರೀತಿಯ ಬಗ್ಗೆ ಹೇಳುವುದಾದರೆ, ಪಾಶ್ಚಿಮಾತ್ಯ ನಾಗರೀಕತೆಯ ಸಾಮಾಜಿಕ ರಚನೆ ಮತ್ತು ಅದರಿಂದ ಹೊರಹೊಮ್ಮಿರುವ ಮನೋಧರ್ಮ ಪ್ರೀತಿಯ ವಿಕಾಸಕ್ಕೆ ಪೂರಕವಾಗಿದೆಯಾ ಎನ್ನುವುದನ್ನ ಗಮನಿಸಬೇಕು. ಒಂದು ಪ್ರಶ್ನೆಯನ್ನ ಎತ್ತುವುದೆಂದರೆ ಅದಕ್ಕೆ ನೇತ್ಯಾತ್ಮಕವಾಗಿ ಉತ್ತರಗಳನ್ನ ಕಂಡುಕೊಳ್ಳುತ್ತ ಹೋಗುವುದು. ಪಾಶ್ಚಿಮಾತ್ಯ ಬದುಕಿನ ಯಾವ ವಸ್ತುನಿಷ್ಠ ವೀಕ್ಷಕನೂ, ತಾಯಿ ಪ್ರೀತಿ, ಸಹೋದರ ಪ್ರೀತಿ, ಕಾಮ ಕೇಂದ್ರಿತ ಪ್ರೀತಿಗಳು ಪಾಶ್ಚಿಮಾತ್ಯ ಸಮಾಜದಲ್ಲಿ ಅಪರೂಪದ ವಿದ್ಯಮಾನಗಳಾಗಿವೆ, ಮತ್ತು ಇವುಗಳ ಜಾಗವನ್ನು ಬೇರೆ ಇನ್ನಿತರ ಹುಸಿ ಪ್ರೀತಿಯ ಸ್ವರೂಪಗಳು ಆಕ್ರಮಿಸಿಕೊಂಡಿವೆ ಎನ್ನುವುದನ್ನ ನಿರಾಕರಿಸಲಾರ, ಹಾಗು ಈ ಹುಸಿ ಪ್ರೀತಿಯ ರೂಪಗಳು, ಪ್ರೀತಿಯ ವಿಘಟನೆಗೆ ಸಾಕ್ಷಿ ಎನ್ನುವಂತಿವೆ.

ಬಂಡವಾಳಶಾಹಿ ಸಮಾಜದ ತಳಹದಿ, ಒಂದು ಬದಿಯಲ್ಲಿ ರಾಜಕೀಯ ಸ್ವಾತಂತ್ರ್ಯದ ತತ್ವದ ಮೇಲೆ ನೆಲೆಯಾಗಿದ್ದರೆ ಇನ್ನೊಂದು ಬದಿಯಲ್ಲಿರುವುದು, ಎಲ್ಲ ಆರ್ಥಿಕ, (ಆದ್ದರಿಂದ) ಸಾಮಾಜಿಕ ಸಂಬಂಧಗಳನ್ನು ನಿಯಂತ್ರಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆ. ಸರಕು ಮಾರುಕಟ್ಟೆ, ಸರಕು ಮಾರಾಟದ ನಿಯಮಗಳನ್ನ ನಿರ್ಧರಿಸುತ್ತದೆ, ಶ್ರಮ ಮಾರುಕಟ್ಟೆ ಶ್ರಮಿಕರ ಕೊಡು ಕೊಳ್ಳುವಿಕೆಯನ್ನ ನಿಯಂತ್ರಿಸುತ್ತದೆ. ಉಪಯುಕ್ತ ವಸ್ತುಗಳು ಮತ್ತು ಉಪಯುಕ್ತ ಮಾನವ ಶಕ್ತಿ- ಕೌಶಲ್ಯ ಎರಡೂ, ಮಾರಾಟಕ್ಕಿಟ್ಟಿರುವ ವಸ್ತುಗಳಾಗಿ ಪರಿವರ್ತಿತವಾಗಿ ಮಾರುಕಟ್ಟೆಯ ನಿಯಮಗಳಿಗೆ ಒಳಪಡುತ್ತ, ಯಾವ ಬಲಪ್ರಯೋಗ, ವಂಚನೆಗಳ ಸಹಾಯವಿಲ್ಲದೆ ವಿನಿಮಯಗೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವಾಗ, ಚಪ್ಪಲಿಗಳು, ಶೂ ಗಳು ಅವುಗಳ ಉಪಯುಕ್ತತೆ ಮತ್ತು ಅಗತ್ಯಗಳಿಗೆ ತಕ್ಕಂತೆ ಆರ್ಥಿಕ ಮೌಲ್ಯವನ್ನು (ವಿನಿಮಯ ಮೌಲ್ಯ) ಹೊಂದುವುದು ಸಾಧ್ಯವಿಲ್ಲ ; ಹಾಗೆಯೇ ನಿರ್ದಿಷ್ಟ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವಾಗ, ಮಾನವ ಶಕ್ತಿ-ಕೌಶಲ್ಯಗಳಿಗೂ ವಿನಿಮಯ ಮೌಲ್ಯ ಇರುವುದಿಲ್ಲ. ಬಂಡವಾಳ ಹೂಡುವವ, ಶ್ರಮವನ್ನ ಖರೀದಿ ಮಾಡಿ ತನ್ನ ಬಂಡವಾಳದ ಲಾಭದಾಯಕ ಹೂಡಿಕೆಗೆ ಉಪಯುಕ್ತವಾಗುವಂತೆ ಕೆಲಸ ಮಾಡಲು ಶ್ರಮಿಕನಿಗೆ ಆದೇಶ ಮಾಡಬಲ್ಲ. ಹಸಿವಿನಿಂದ ಬಳಲುವ ಸ್ಥಿತಿ ಅವನಿಗಿರದಿದ್ದರೆ, ಶ್ರಮದ ಮಾಲಿಕ ತನ್ನ ಶ್ರಮವನ್ನ ಬಂಡವಾಳ ಹೂಡುವವರಿಗೆ ನಿರ್ದಿಷ್ಟ ಮಾರುಕಟ್ಟೆಯ ನಿಯಮಗಳಿಗೆ ಅನುಸಾರವಾಗಿ ಮಾರಲೇಬೇಕು. ಈ ಆರ್ಥಿಕ ಸಂರಚನೆ, ಸಮಾಜವು ಹೊಂದಿರುವ ಮೌಲ್ಯಗಳ ಶ್ರೇಣೀಕರಣದಲ್ಲೂ ಪ್ರತಿಫಲಿತವಾಗಿದೆ. ಬಂಡವಾಳ ಶ್ರಮವನ್ನು ಹತೋಟಿಯಲ್ಲಿಟ್ಟುಕೊಂಡಿದೆ ; ಮತ್ತು ಸಂಗ್ರಹಿಸಿಡಬಹುದಾದ ನಿರ್ಜೀವ ವಸ್ತುಗಳು, ಜೀವಂತ ಮಾನವ ಶ್ರಮಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ.

ಇದು ಶುರುವಾತಿನಿಂದಲೂ ಬಂಡವಾಳಶಾಹಿ ವ್ಯವಸ್ಥೆಯ ಮೂಲಭೂತ ರಚನೆಯಾಗಿದೆ.
ಇದು ಇನ್ನೂ, ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ ಗುಣಲಕ್ಷಣವಾಗಿರುವಾಗಲೂ, ಕೆಲವು ಹೊಸದಾಗಿ ಸೇರ್ಪಡೆಯಾಗಿರುವ, ಬದಲಾಗಿರುವ ಅಂಶಗಳಿಂದಾಗಿ ಸಮಕಾಲೀನ ಬಂಡವಾಳಶಾಹಿ ವ್ಯವಸ್ಥೆ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ತನ್ನದಾಗಿಸಿಕೊಂಡಿದೆ, ಮತ್ತು ಈ ಗುಣಲಕ್ಷಣಗಳು ಆಧುನಿಕ ಮನುಷ್ಯನ ಸ್ವಭಾವಗಳ ರಚನೆಯ ಮೇಲೆ ಆಳವಾದ ಪ್ರಭಾವವನ್ನು ಹೊಂದಿವೆ. ಬಂಡವಾಳಶಾಹಿ ವ್ಯವಸ್ಥೆಯ ತೀವ್ರಗತಿಯ ಬೆಳವಣಿಗೆಯ ಕಾರಣವಾಗಿ ನಾವು, ಬಂಡವಾಳದ ಅತೀ ಹೆಚ್ಚಿನ ಕೇಂದ್ರಿಕರಣವನ್ನು ಗಮನಿಸುತ್ತಿದ್ದೇವೆ. ದೊಡ್ಡ ದೊಡ್ಡ ಉದ್ಯಮಗಳು ಬೆಳೆಯುತ್ತಲೇ ಹೋಗುತ್ತಿದ್ದರೆ, ಸಣ್ಣ ಉದ್ಯಮಗಳು ಕಿರಿದಾಗುತ್ತ ನಶಿಸಿ ಹೋಗುತ್ತಿವೆ. ಈ ಬೃಹತ್ ಉದ್ದಿಮೆಗಳಲ್ಲಿ ಬಂಡವಾಳ ಹೂಡಿದವರು ಹೆಚ್ಚು ಹೆಚ್ಚು ಈ ಬಂಡವಾಳವನ್ನು ಮ್ಯಾನೇಜ್ ಮಾಡುವ ಕೆಲಸದಿಂದ ಪ್ರತ್ಯೇಕವಾಗುತ್ತಿದ್ದಾರೆ. ಕಂಪನಿಯ ಶೇರುಗಳನ್ನ ಹೊಂದಿರುವ ನೂರು, ಸಾವಿರಗಟ್ಟಲೇ ಜನ ಕಂಪನಿಯ “ಮಾಲಿಕ” ರಾಗಿದ್ದಾರೆ; ಮತ್ತು ಹೆಚ್ಚು ಸಂಬಳ ಪಡೆಯುವ ವ್ಯವಸ್ಥಾಪಕ ಅಧಿಕಾರಶಾಹಿ (managerial bureaucracy) ಕಂಪನಿಯನ್ನ ಮ್ಯಾನೇಜ್ ಮಾಡುತ್ತಿದೆ. ಈ ಅಧಿಕಾರಶಾಹಿಗೆ ಕಂಪನಿಯ ಲಾಭವನ್ನು ಹೆಚ್ಚು ಮಾಡುವುದರಲ್ಲಿ ಇರುವ ಆಸಕ್ತಿಗಿಂತ ಹೆಚ್ಚು ಆಸ್ಥೆ, ಕಂಪನಿಯನ್ನ ವಿಸ್ತರಿಸುವುದರಲ್ಲಿ ಮತ್ತು ತಮ್ಮ ಅಧಿಕಾರವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವುದರಲ್ಲಿದೆ. ಹೆಚ್ಚಾಗುತ್ತಿರುವ ಬಂಡವಾಳದ ಕೇಂದ್ರೀಕರಣ ಮತ್ತು ಪ್ರಭಾವಿ ವ್ಯವಸ್ಥಾಪಕ ಅಧಿಕಾರಶಾಹಿಯ ಹುಟ್ಟಿಗೆ ಸಮಾನಾಂತರವಾಗಿ ಕಾರ್ಮಿಕ ಚಳುವಳಿಯ ಬೆಳವಣಿಗೆಯನ್ನೂ ಗಮನಿಸಬಹುದು. ಯೂನಿಯನ್ ಗಳ ಮೂಲಕ ಶ್ರಮಿಕರು ಸಂಘಟಿತರಾಗುತ್ತಿದ್ದರೂ, ಒಬ್ಬ ಕಾರ್ಮಿಕನಿಗೆ ವೈಯಕ್ತಿಕವಾಗಿ ಶ್ರಮಿಕ ಮಾರುಕಟ್ಟೆಯಲ್ಲಿ ತನಗಾಗಿ ದನಿ ಎತ್ತುವ ಅವಕಾಶ ಮತ್ತು ಅವಶ್ಯಕತೆಯಿಲ್ಲ ; ಅವನು ದೊಡ್ಡ ದೊಡ್ಡ ಯೂನಿಯನ್ ಗಳ ಭಾಗವಾಗಿದ್ದಾನೆ ಮತ್ತು ಈ ಯೂನಿಯನ್ ಗಳನ್ನ ಮುನ್ನಡೆಸುತ್ತಿರುವ ಪ್ರಭಾವಿ ಅಧಿಕಾರಶಾಹಿ ಬೃಹತ್ ಕಂಪನಿಗಳಿಗೆ ಎದುರಾಗಿ ಅವನನ್ನು ಪ್ರತಿನಿಧಿಸುತ್ತಿದೆ. ಬಂಡವಾಳದ ಮಾರುಕಟ್ಟೆಯಲ್ಲಾಗಲಿ, ಶ್ರಮದ ಮಾರುಕಟ್ಟೆಯಲ್ಲಾಗಲಿ, ಒಳ್ಳೆಯದೋ, ಕೆಟ್ಟದ್ದೋi ನೇತ್ರತ್ವ (initiative) ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾಗಿದೆ, ವ್ಯಕ್ತಿಮಾತ್ರನಿಂದ ಅಧಿಕಾರಶಾಹಿಗೆ. ಹೆಚ್ಚು ಹೆಚ್ಚು ಜನ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಬೃಹತ್ ಆರ್ಥಿಕ ಸಾಮ್ರಾಜ್ಯಗಳ ಮ್ಯಾನೇಜರ್ ಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ.

ಬಂಡವಾಳದ ಕೇಂದ್ರೀಕರಣ ಮತ್ತು ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ ವಿಶೇಷ ಗುಣಲಕ್ಷಣದಿಂದಾಗಿ ಹೊರಹೊಮ್ಮಿರುವ ಇನ್ನೊಂದು ನಿರ್ಣಾಯಕ ಅಂಶ, ಉದ್ಯಮಗಳು ಕಾರ್ಯ ನಿರ್ವಹಿಸುವ ವಿಶಿಷ್ಟ ರೀತಿಯಲ್ಲಿ ಅಡಗಿದೆ. ಅತೀ ಹೆಚ್ಚಾಗಿ ಸೆಂಟ್ರಲೈಸ್ ಆಗಿರುವ ಉದ್ಯಮಗಳಲ್ಲಿ, ರ್ಯಾಡಿಕಲ್ ಆದ ಶ್ರಮ ವಿಭಜನೆಯ (radical division of labour) ಕಾರಣವಾಗಿ ವ್ಯಕ್ತಿ ತನ್ನ ತನ್ನ ವೈಯಕ್ತೀಕತೆಯನ್ನ ಕಳೆದುಕೊಂಡು ಬೃಹತ್ ಯಂತ್ರದ ಪುಟ್ಟ ಭಾಗವೊಂದರಂತೆ ಕೆಲಸ ಮಾಡುತ್ತಿರುತ್ತಾನೆ. ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ “ಮಾನವ ಸಮಸ್ಯೆ” ಯನ್ನ ಹೀಗೆ ಸಮೀಕರಿಸಬಹುದು.

ಆಧುನಿಕ ಬಂಡವಾಳಶಾಹಿ ವ್ಯವಸ್ಥೆಗೆ, ತನಗೆ ಸರಳವಾಗಿ, ನಯವಾಗಿ ಸಹಕಾರ ಕೊಡುವ ಬಹುಸಂಖ್ಯೆಯ ಮನುಷ್ಯರು ಬೇಕು; ಹೆಚ್ಚು ಹೆಚ್ಚು ಕೊಂಡುಕೊಳ್ಳುವ ಮತ್ತು ; ಯಾರ ರುಚಿ, ಬಯಕೆಗಳನ್ನ ಸುಲಭವಾಗಿ ಪ್ರಭಾವಿಸಬಹುದೋ, ಮೊದಲೇ ಗ್ರಹಿಸಬಹುದೋ ಅಂಥ ಜನರು ಬೇಕು. ಇಂಥ ವ್ಯವಸ್ಥೆಗೆ ತಾವು ಮುಕ್ತರು, ಸ್ವತಂತ್ರರು ಎಂದು ತಿಳಿದುಕೊಂಡಿರುವ, ಯಾವ ತತ್ವ ಸಿದ್ಧಾಂತಗಳಿಗೂ, ಯಾವ ಅಧಿಕಾರ ಕೇಂದ್ರಕ್ಕೂ ಒಳಪಡದ, ಆದರೂ ಹೇಳಿದ ಆದೇಶಗಳನ್ನು ಪಾಲಿಸುವ, ಅವರಿಂದ ನಿರೀಕ್ಷಿಸಲಾಗಿರುವ ಎಲ್ಲವನ್ನೂ ಮಾಡುವ, ಯಾವ ತಿಕ್ಕಾಟಕ್ಕೂ ಆಸ್ಪದವಿಲ್ಲದಂತೆ ಸಾಮಾಜಿಕ ಯಂತ್ರ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಹುದಾದ, ಯಾವ ಬಲಪ್ರಯೋಗವೂ ಇಲ್ಲದೇ ಹೇಳಿದಂತೆ ನಡೆಯಬಹುದಾದ, ನಾಯಕರಿಲ್ಲದೇ ಮುನ್ನಡೆಯಬಹುದಾದ, ಅವರ ಧ್ಯೇಯಗಳನ್ನು ನಿಯಂತ್ರಿಸುವ ಮೂಲಕ ಅವರ ಚಿಂತನಾಕ್ರಮವನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದಂಥ ಜನರ ಅವಶ್ಯಕತೆ ಇರುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply