ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ 2) : Art of Love #34

ಪ್ರೀತಿಯ ಪರಿಸ್ಥಿತಿಯೂ ಆಧುನಿಕ ಮನುಷ್ಯನ ಸಾಮಾಜಿಕ ಸ್ವಭಾವಕ್ಕೆ ತಕ್ಕಂತೆಯೇ ಇದೆ. ಯಂತ್ರಮಾನವರ ನಡುವೆ ಪ್ರೀತಿ ಸಾಧ್ಯವಿಲ್ಲ; ಅವರು ತಮ್ಮ “ವ್ಯಕ್ತಿತ್ವದ ಪ್ಯಾಕೇಜ್” ಗಳನ್ನ ವಿನಿಮಯ ಮಾಡಿಕೊಳ್ಳಬಹುದು ಮತ್ತು ಒಂದು ಒಳ್ಳೆಯ ಲಾಭದ ವ್ಯಾಪಾರವನ್ನು ನಿರೀಕ್ಷಿಸಬಹುದು. ಪ್ರೀತಿಯ ಒಂದು ಅತ್ಯಂತ ಮುಖ್ಯ ಅಭಿವ್ಯಕ್ತಿ ಎಂದರೆ, “ತಂಡ” (Team) ದ ಪರಿಕಲ್ಪನೆ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/07/09/love-48/

ಈ ಎಲ್ಲದರ ಪರಿಣಾಮ ಏನು? ಫಲಿತಾಂಶವೇನು? ಆಧುನಿಕ ಮನುಷ್ಯ ತನ್ನನ್ನು, ಸ್ವತಃ ತನ್ನಿಂದ, ತನ್ನ ಸುತ್ತಮುತ್ತಲಿನ ಜನರಿಂದ, ಪ್ರಕೃತಿಯಿಂದ ದೂರವಾಗಿಸಿಕೊಂಡು ಪರಕೀಯತೆಯನ್ನು ಅನುಭವಿಸುತ್ತಿದ್ದಾನೆ. ಅವನು ಮಾರಾಟದ ಸರಕಾಗಿ ಪರಿವರ್ತಿತನಾಗಿದ್ದಾನೆ, ಮತ್ತು ತನ್ನ ಎಲ್ಲ ಜೀವಶಕ್ತಿಗಳನ್ನ ಬಂಡವಾಳವಾಗಿಸಿಕೊಂಡು ಸಧ್ಯದ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ಅತ್ಯಧಿಕ ಲಾಭ ಪಡೆದುಕೊಳ್ಳಲು ಉತ್ಸುಕನಾಗಿದ್ದಾನೆ. ಮಾನವ ಸಂಬಂಧಗಳು ಪರಕೀಯ ಪ್ರಜ್ಞೆಯ ಸ್ವಯಂಚಾಲಿತ ಯಂತ್ರ ಮಾನವರ ನಡುವಿನ ಸಂಬಂಧಗಳಾಗಿವೆ, ಪ್ರತಿಯೊಬ್ಬರೂ ತಮ್ಮ ಸುರಕ್ಷತೆಯನ್ನ, ತಮ್ಮ ಗುಂಪಿನ ಸುರಕ್ಷತೆಯ ಜೊತೆ ಗುರುತಿಸಿಕೊಂಡಿದ್ದಾರೆ, ವಿಚಾರಗಳಲ್ಲಿ, ಭಾವನೆಗಳಲ್ಲಿ, ಕ್ರಿಯೆಯಲ್ಲಿ, ಗುಂಪಿನೊಂದಿಗೆ ಸಹಮತದಲ್ಲಿರುವುದರಲ್ಲಿ ಕಂಡುಕೊಂಡಿದ್ದಾರೆ. ಪ್ರತಿಯೊಬ್ಬರೂ ಬಾಕಿ ಎಲ್ಲರೊಂದಿಗೆ ಸಾಧ್ಯವಾದಷ್ಟು ಹತ್ತಿರವಾಗಲು ಬಯಸುತ್ತಿದ್ದಾರಾದರೂ, ಪ್ರತಿಯೊಬ್ಬರೂ ತೀವ್ರ ಒಂಟಿತನವನ್ನ ಅನುಭವಿಸುತ್ತಿದ್ದಾರೆ. ಮನುಷ್ಯನಿಗೆ ಅವನ ಪ್ರತ್ಯೇಕತೆಯನ್ನ ಮೀರುವುದು ಸಾಧ್ಯವಾಗದೇ ಇದ್ದಾಗ ಅವನನ್ನು ಕಾಡುವ ಆಳವಾದ ಅಸುರಕ್ಷತೆ, ಆತಂಕ, ಮತ್ತು ತಪ್ಪಿತಸ್ಥ ಭಾವ ಆಧುನಿಕ ಮನುಷ್ಯನನ್ನು ಆವರಿಸಿಕೊಂಡಿವೆ.

ನಮ್ಮ ನಾಗರೀಕತೆಯು ಮನುಷ್ಯನ ಈ ಸಮಸ್ಯೆಗಳು ಅವನಿಗೆ ಅರಿವಿಗೆ ಬಾರದಂತಿರಲು ಅವನಿಗೆ ಹಲವಾರು ಉಪಶಮನಕಾರಿ ಪರಿಹಾರಗಳನ್ನು ಒದಗಿಸುತ್ತದೆ : ಮೊದಲನೇಯದಾಗಿ ಅಧಿಕಾರಶಾಹಿಯಿಂದ ಹೇರಲ್ಪಟ್ಟ, ಕಟ್ಟುನಿಟ್ಟಾಗಿರುವ ಯಾಂತ್ರಿಕ ದಿನಚರಿ, ಇದು ಮನುಷ್ಯನಿಗೆ ಅವನ ಅತ್ಯಂತ ಮೂಲಭೂತ ಬಯಕೆಗಳನ್ನ, ತನ್ನ ಮಿತಿಗಳನ್ನ ಮೀರಬಯಸುವ ಮತ್ತು ಒಂದಾಗುವಿಕೆಯ ಅವನ ಅದಮ್ಯ ತುಡಿತವನ್ನ ಅವನು ಪ್ರಜ್ಞಾಪೂರ್ವಕಾಗಿ ಮರೆಯುವಂತೆ ಮಾಡುತ್ತದೆ. ಒಮ್ಮೊಮ್ಮೆ ಕೇವಲ ಯಾಂತ್ರಿಕ ದಿನಚರಿಯಷ್ಟೇ ಮನುಷ್ಯನ ನೈಜ ತುಡಿತಗಳನ್ನ ಅವನು ಮರೆಯುವಂತೆ ಮಾಡಲು ಸಾಕಾಗುವುದಿಲ್ಲ, ಆಗ ಮನುಷ್ಯ ತನ್ನ ಪ್ರಜ್ಞೆಯಿಂದ ಹೊರತಾಗಿರುವ ತನ್ನ ದುಗುಡಗಳನ್ನ ಮೀರಲು ಯಾಂತ್ರಿಕ ಮನರಂಜನೆಯ ಮೊರೆ ಹೋಗುತ್ತಾನೆ, ಮನರಂಜನೆ ಉದ್ಯಮ ಒದಗಿಸುವ ದೃಶ್ಯಗಳನ್ನ, ಧ್ವನಿಯನ್ನ ನಿಷ್ಕ್ರಿಯವಾಗಿ ಅನುಭವಿಸುತ್ತಾನೆ; ಮುಂದುವರೆದು ಹೆಚ್ಚು ಹೆಚ್ಚು ವಸ್ತುಗಳನ್ನ ಕೊಳ್ಳುತ್ತ, ಅವುಗಳನ್ನ ಮೇಲಿಂದ ಮೇಲೆ ಬೇರೆ ಹೊಸ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳುತ್ತ
ತನ್ನ ಅರಿವಿನಲ್ಲಿರದ ತನ್ನ ದುಗುಡಗಳನ್ನ ಮರೆಯುವ ಪ್ರಯತ್ನ ಮಾಡುತ್ತಾನೆ.

ವಾಸ್ತವದಲ್ಲಿ ಆಧುನಿಕ ಮನುಷ್ಯ ಹಕ್ಸ್ಲೀ ತನ್ನ Brave New Word ಪುಸ್ತಕದಲ್ಲಿ ಕಟ್ಟಿಕೊಡುವ ಮನುಷ್ಯನನ್ನು ಹೋಲುತ್ತಾನೆ : ಹೊಟ್ಟೆ ತುಂಬಿರುವ, ಮೈತುಂಬ ಬಟ್ಟೆ ಧರಿಸಿರುವ, ಲೈಂಗಿಕ ತೃಪ್ತಿಯನ್ನು ಹೊಂದಿರುವ, ಆದರೆ ಸ್ವಂತತೆ ಇಲ್ಲದ, ತನ್ನ ಜೊತೆಯಿರುವ ಮನುಷ್ಯರೊಂದಿಗೆ ಯಾವ ಸಂಪರ್ಕವೂ ಇರದ, ಅಥವಾ ಮೇಲು ಮೇಲಿನ ಸಂಪರ್ಕ ಇರುವ, ಹಾಗು “ ವ್ಯಕ್ತಿ, ಸ್ವಂತ ಭಾವನೆಗಳನ್ನು ಹೊಂದಿದಾಗ ಸಮುದಾಯ ಉರುಳಿ ಬೀಳುತ್ತದೆ” ; ಅಥವಾ “ ಇಂದು ಪಡಬಹುದಾದ ಸಂತೋಷವನ್ನ ನಾಳೆಗೆ ಮುಂದೂಡಬೇಡ”, ಅಥವಾ ಎಲ್ಲಕ್ಕೂ ಶಿಖರಪ್ರಾಯವಾಗಿ, “ ಈಗೀಗ ಎಲ್ಲರೂ ಖುಶಿಯಾಗಿದ್ದಾರೆ” ಮುಂತಾದ (ಹಕ್ಸಿಲೀಯೇ ಸಂಯೋಜಿಸಿದ) ಘೋಷಣೆಗಳಿಂದ ಪ್ರಭಾವಿತರಾಗಿ ಬದುಕುವಂಥವರು. ಇವತ್ತು ಮನುಷ್ಯನಿಗೆ ಖುಶಿಯಾಗಿರುವುದೆಂದರೆ ಮಜಾ ಮಾಡುವುದು. ಮಜಾ ಮಾಡುವುದೆಂದರೆ; ಕಂಸ್ಯೂಮ್ ಮಾಡುವುದು,ಅನುಭವಿಸುವುದು, ಸಿದ್ಧ ವಸ್ತುಗಳನ್ನ, ದೃಶ್ಯಗಳನ್ನ, ಆಹಾರ, ಡ್ರಿಂಕ್ಸ್, ಸಿಗರೇಟ್, ಜನ, ಲೆಕ್ಚರ್ಸ್, ಪುಸ್ತಕಗಳು, ಮೂವಿಗಳು – ಈ ಎಲ್ಲವೂ ಮನುಷ್ಯನ ಬಳಕೆಗಾಗಿ, ಅವನ ದೈಹಿಕ ಮತ್ತು ಮಾನಸಿಕ ತೃಪ್ತಿಗಾಗಿ. ಈ ಜಗತ್ತು ನಮ್ಮ ಹಸಿವನ್ನ, ನಮ್ಮ ದಾಹವನ್ನು ತಣಿಸುವ ಒಂದು ಮಹಾ ನದಿ, ಮಹಾ ಆ್ಯಪಲ್, ಮಹಾ ಜರಡಿ, ಮಹಾ ಮೊಲೆ ; ನಾವು ಈ ಸ್ರೋತಗಳನ್ನೆಲ್ಲ ಹೀರುವವರು, ಚಿರ ನಿರೀಕ್ಷೆಯ, ಚಿರ ಭರವಸೆಯ, ಮತ್ತು ಹಾಗೆಯೇ ಸದಾ ಹತಾಶೆಯ ವ್ಯಕ್ತಿಗಳು. ನಮ್ಮ ಸ್ವಭಾವ ಪಡೆಯಲು, ವಿನಿಮಯ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸದಾ ಸಿದ್ಧವಾಗಿರುವಂಥದು; ಭಾವನಾತ್ಮಕವಾಗಲಿ, ಭೌತಿಕವಾಗಲಿ ನಮಗೆ ಎಲ್ಲವೂ ವಿನಿಮಯ ಮಾಡಿಕೊಳ್ಳಬಹುದಾದ, ಬಳಸಬಹುದಾದ, ಕಂಸ್ಯೂಮ್ ಮಾಡಬಹುದಾದ ವಸ್ತುಗಳು.

ಪ್ರೀತಿಯ ಪರಿಸ್ಥಿತಿಯೂ ಆಧುನಿಕ ಮನುಷ್ಯನ ಸಾಮಾಜಿಕ ಸ್ವಭಾವಕ್ಕೆ ತಕ್ಕಂತೆಯೇ ಇದೆ. ಯಂತ್ರಮಾನವರ ನಡುವೆ ಪ್ರೀತಿ ಸಾಧ್ಯವಿಲ್ಲ; ಅವರು ತಮ್ಮ “ವ್ಯಕ್ತಿತ್ವದ ಪ್ಯಾಕೇಜ್” ಗಳನ್ನ ವಿನಿಮಯ ಮಾಡಿಕೊಳ್ಳಬಹುದು ಮತ್ತು ಒಂದು ಒಳ್ಳೆಯ ಲಾಭದ ವ್ಯಾಪಾರವನ್ನು ನಿರೀಕ್ಷಿಸಬಹುದು. ಪ್ರೀತಿಯ ಒಂದು ಅತ್ಯಂತ ಮುಖ್ಯ ಅಭಿವ್ಯಕ್ತಿ ( especially of marriage with this alienated structure ) ಎಂದರೆ, “ತಂಡ” (Team) ದ ಪರಿಕಲ್ಪನೆ. ಸುಖೀ ದಾಂಪತ್ಯದ ಬಗೆಗಿನ ಬಹುತೇಕ ಎಲ್ಲ ಲೇಖನಗಳಲ್ಲಿ ಸುಲಲಿತವಾಗಿ ಕಾರ್ಯ ನಿರ್ವಹಿಸುವ ತಂಡದ ಅವಶ್ಯಕತೆಯನ್ನ ಒತ್ತಿ ಹೇಳಲಾಗುತ್ತದೆ. ಈ ಪರಿಕಲ್ಪನೆ ಒಂದು ಸಫಲ ಉದ್ಯಮಕ್ಕೆ ಬೇಕಾಗುವ smooth functioning employee ಪರಿಕಲ್ಪನೆಗಿಂತ ಬೇರೆಯೇನಲ್ಲ; ಇಲ್ಲಿ ವ್ಯಕ್ತಿ ಸಾಕಷ್ಟು ಸ್ವತಂತ್ರನಾಗಿರಬೇಕು, ಸಹಕಾರಿ ಮನೋಭಾವನೆಯವನಾಗಿರಬೇಕು, ಸಹನಶೀಲನಾಗಿರಬೇಕು, ಮತ್ತು ಅದೇ ವೇಳೆಯಲ್ಲಿ ಮಹತ್ವಾಕಾಂಕ್ಷೆಯುಳ್ಳವನೂ, ಆಕ್ರಮಣಶೀಲನೂ ಆಗಿರಬೇಕು. ಹಾಗಾಗಿಯೇ ಮ್ಯಾರೇಜ್ ಕೌನ್ಸಿಲರ್ ನಮಗೆ ಹೇಳುವುದು ; ಗಂಡ ತನ್ನ ಹೆಂಡತಿಯನ್ನ “ಅರ್ಥಮಾಡಿಕೊಳ್ಳಬೇಕು” ಮತ್ತು ಅವಳಿಗೆ ಸಹಾಯ ಮಾಡಬೇಕು. ಅವನು ಅವಳ ಹೊಸ ಡ್ರೆಸ್ ಕುರಿತು ಮತ್ತು ಅವಳು ತಯಾರಿಸಿದ ಅಡುಗೆಯ ಪ್ರೋತ್ಸಾಹದಾಯಕ ಮಾತುಗಳನ್ನಾಡಬೇಕು. ಇದಕ್ಕೆ ಪ್ರತಿಯಾಗಿ ಅವಳು, ಗಂಡ ಆಫೀಸಿನಿಂದ ದಣಿದು ಮನೆಗೆ ಬಂದಾಗ ಅವನ ಪರಿಸ್ಥಿತಿಯನ್ನ ಅರ್ಥಮಾಡಿಕೊಂಡು ಅವನು ಆಫೀಸಿನಲ್ಲಿ ಅನುಭವಿಸಿದ ತೊಂದರೆಗಳಿಗೆ ಸಹಾನುಭೂತಿಯಿಂದ ಪ್ರತಿಕ್ರಯಿಸಬೇಕು, ಅವನು ಅಕಸ್ಮಾತ್ ಅವಳ ಬರ್ಥ್ ಡೇ ಮರೆತರೆ ಆಕೆ ಸಿಟ್ಟುಮಾಡಿಕೊಳ್ಳಬಾರದು. ಈ ಎಲ್ಲ ಥರದ ಸಲಹೆಗಳು ಒತ್ತಿ ಹೇಳುವುದು ಬದುಕಿನುದ್ದಕ್ಕೂ ಅನ್ಯರಾಗೇ ಉಳಿಯುವ ಇಬ್ಬರು ವ್ಯಕ್ತಿಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಅಗತ್ಯವಾಗಿರುವ smooth functioning team ನ ಅವಶ್ಯಕತೆಯ ಬಗ್ಗೆ. ಈ ಇಬ್ಬರು ವ್ಯಕ್ತಿಗಳ ನಡುವೆ ಯಾವುದೇ “ಆತ್ಮ ಸಂಬಂಧ” (central relationship) ಏರ್ಪಡುವುದಿಲ್ಲವಾದರೂ ಅವರಿಬ್ಬರೂ ಪರಸ್ಪರರನ್ನು ಸೌಜನ್ಯತೆಯಿಂದ ಕಾಣುತ್ತ ಒಬ್ಬರು ಇನ್ನೊಬ್ಬರ ಖುಶಿಗಾಗಿ ಪ್ರಯತ್ನ ಮಾಡುತ್ತಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply