‘ಪಶುಬುದ್ಧಿ’ಗಳು ಮಂತ್ರಿಸ್ಥಾನದಲ್ಲಿ ನುಸುಳಿದರೆ… । ಇಂದಿನ ಸುಭಾಷಿತ

ದೇಶ ಕಾಲ ಪರಿಸ್ಥಿತಿಗಳು ಮಾರ್ಪಟ್ಟರೂ ಸತ್ಯವು ಮಾರ್ಪಡುವುದಿಲ್ಲ. ವಿಧಾನಸಭೆಗಾಗಲಿ, ಸಂಸತ್ತಿಗಾಗಲಿ ಸದಸ್ಯನಾಗಲು ವಿದ್ಯಾಮಟ್ಟ ಏನಿರಬೇಕೆಂಬುದನ್ನೇ ನಮ್ಮ ರಾಜ್ಯಾಂಗವು ಗೊತ್ತುಪಡಿಸಿಲ್ಲ. ಮಂತ್ರಿಯಾಗಲು ಕನಿಷ್ಠಾರ್ಹತೆ ಏನೆಂಬುದೇ ಇಲ್ಲ. ಮತದಾನಗಳಲ್ಲಿಯೂ ಹೇರಳವಾದ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಿರುವಾಗ ಜ್ಞಾನದ ಗಂಧವೂ ಇಲ್ಲದ ‘ಪಶುಬುದ್ಧಿ’ಗಳು ಮಂತ್ರಿಸ್ಥಾನದಲ್ಲಿ ನುಸುಳಿದರೆ ಅಚ್ಚರಿಯೇನು?  ~ ಎನ್.ರಂಗನಾಥ ಶರ್ಮರ ವ್ಯಾಖ್ಯಾನ । ಕೃಪೆ : ಸೂಕ್ತಿ ವ್ಯಾಪ್ತಿ

ಅನಭಿಜ್ಞಾಯ ಶಾಸ್ತ್ರಾರ್ಥಾನ್‌ ಪುರುಷಾಃ ಪಶುಬುದ್ಧಯಃ । 
ಪ್ರಾಗಲ್ಭ್ಯಾದ್‌ ವಕ್ತುಮಿಚ್ಛಂತಿ ಮಂತ್ರೇಷ್ವಭ್ಯಂತರೀಕೃತಾಃ ॥ ರಾಮಾಯಣ, ಯುದ್ಧಕಾಂಡ, ೬೩-೧೪॥
ಅರ್ಥ: ಮಂತ್ರಿಗಳಲ್ಲಿ ಪಶುಬುದ್ಧಿಯ ಜನರೂ ಸೇರಿಕೊಂಡಿರುತ್ತಾರೆ. ಅವರು ಯಾವ ಶಾಸ್ತ್ರಾರ್ಥವನ್ನೂ ತಿಳಿಯದೆ ದುಡುಕಿನ ವಾಗ್ಜಾಲದಿಂದ ಮಾತಾಡಲು, ಸಲಹೆ ಕೊಡಲು ಬಯಸುತ್ತಾರೆ.

ತಾತ್ಪರ್ಯ: ಈ ಮಾತನ್ನು ಹೇಳಿದವನು ಕುಂಭಕರ್ಣ. ಯುದ್ಧದಲ್ಲಿ ರಾಮನ ಕೈ ಮೇಲಾಗುತ್ತಾ ಬಂದಿತು. ರಾವಣನಿಗೆ ದಿಕ್ಕು ತೋರಲಿಲ್ಲ. ಮಲಗಿದ್ದ ಕುಂಭಕರ್ಣನನ್ನು ಎಬ್ಬಿಸಿ ರಾಜಸಭೆಗೆ ಬರಮಾಡಿಕೊಂಡು, ನಡೆದ ಸಂಗತಿಯನ್ನು ಅವನಿಗೆ ತಿಳಿಸಿ, ಆತನ ಸಹಾಯವನ್ನು ಕೋರುತ್ತಾನೆ. ಆಗ ಕುಂಭಕರ್ಣನು ರಾವಣನಿಗೆ ಬುದ್ಧಿವಾದವನ್ನು ಹೇಳುತ್ತ ಹೀಗೆ ನುಡಿದಿದ್ದಾನೆ:

"ಅಣ್ಣ, ನೀನು ಸೀತೆಯನ್ನು ಅಪಹರಿಸಿದ್ದು ಮೊದಲನೆಯ ತಪ್ಪು. ಯಾರ ಸಲಹೆಯನ್ನು ಕೇಳಿ ಹಾಗೆ ಮಾಡಿದೆ? ಯುದ್ಧವನ್ನು ಆರಂಭಿಸಿದ್ದು ಎರಡನೆಯ ತಪ್ಪು. ವಿಭೀಷಣನಿಗಿಂತ ನಿನಗೆ ಆಪ್ತನೂ ಬುದ್ಧಿಶಾಲಿಯೂ ಯಾರಿದ್ದಾರೆ? ಅವನ ಮಾತನ್ನು ತಳ್ಳಿ ಪಶುಬುದ್ಧಿಗಳಾದ ಮಂತ್ರಿಗಳ ಸಲಹೆಯಂತೆ ನಡೆದಿದ್ದೀಯೆ. ಸೀತೆಯನ್ನು ಅಪಹರಿಸುವಾಗ ಇದು ಯುಕ್ತವೇ, ಅಯುಕ್ತವೇ ಎಂಬುದನ್ನು ಚಿಂತಿಸಲೇ ಇಲ್ಲ. ಅದರ ಪರಿಣಾಮವೇನಾದೀತೆಂಬುದನ್ನೂ ನೀನು ಆಲೋಚಿಸಲಿಲ್ಲ. ಬರಿಯ ವೀರ್ಯದರ್ಪದಿಂದ ಇದೆಲ್ಲವನ್ನೂ ನಡೆಸಿಬಿಟ್ಟಿದ್ದೀಯೆ. ನೀನಾಗಿ ಈ ಸಂಕಟವನ್ನು ತಂದುಕೊಂಡಿದ್ದೀಯೆ. ಈಗಲೂ ಕಾಲ ಮಿಂಚಿಲ್ಲ. ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು!"

ದೇಶ ಕಾಲ ಪರಿಸ್ಥಿತಿಗಳು ಮಾರ್ಪಟ್ಟರೂ ಸತ್ಯವು ಮಾರ್ಪಡುವುದಿಲ್ಲ. ವಿಧಾನಸಭೆಗಾಗಲಿ, ಸಂಸತ್ತಿಗಾಗಲಿ ಸದಸ್ಯನಾಗಲು ವಿದ್ಯಾಮಟ್ಟ ಏನಿರಬೇಕೆಂಬುದನ್ನೇ ನಮ್ಮ ರಾಜ್ಯಾಂಗವು ಗೊತ್ತುಪಡಿಸಿಲ್ಲ. ಮಂತ್ರಿಯಾಗಲು ಕನಿಷ್ಠಾರ್ಹತೆ ಏನೆಂಬುದೇ ಇಲ್ಲ. ಮತದಾನಗಳಲ್ಲಿಯೂ ಹೇರಳವಾದ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಿರುವಾಗ ಜ್ಞಾನದ ಗಂಧವೂ ಇಲ್ಲದ 'ಪಶುಬುದ್ಧಿ'ಗಳು ಮಂತ್ರಿಸ್ಥಾನದಲ್ಲಿ ನುಸುಳಿದರೆ ಅಚ್ಚರಿಯೇನು?

Leave a Reply