ಉದ್ಧರೇದಾತ್ಮನಾತ್ಮಾನಂ ನಾತ್ಮಾನಮ್ ಅವಸಾದಯೇತ್|| ಆತ್ಮೈವ ಹಿ ಆತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || ಭಗವದ್ಗೀತೆ 6.5||
ಅರ್ಥ: ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ನಮಗೆ ನಾವೇ ಪತನ ಹೊಂದಲು ಅವಕಾಶ ಕೊಟ್ಟುಕೊಳ್ಳಬಾರದು. ನಮಗೆ ನಾವೇ ಬಂಧು ನಮಗೆ ನಾವೇ ವೈರಿ ಕೂಡಾ.
ತಾತ್ಪರ್ಯ: ನಮ್ಮ ಬೆಳವಣಿಗೆ ನಮ್ಮದೇ ಜವಾಬ್ದಾರಿ. ನಮ್ಮನ್ನು ನಾವು ಸರಿಯಾಗಿ ಇಟ್ಟುಕೊಳ್ಳದೆ ಹೋದರೆ ನಮ್ಮಿಂದ ಬೇರೇನನ್ನೂ ಮಾಡಲು ಆಗುವುದಿಲ್ಲ. ನಮ್ಮಲ್ಲಿ ಟೊಳ್ಳುತನ ಇದ್ದರೆ ನಮ್ಮ ಒಳ – ಹೊರಗಣ ಪ್ರಗತಿ ಸಾಧ್ಯ ಆಗುವುದಿಲ್ಲ ಮಾತ್ರವಲ್ಲ, ನಾವು ಸಮಾಜಕ್ಕಾಗಲಿ ರಾಷ್ಟ್ರಕ್ಕಾಗಲಿ ಯಾವ ಕೊಡುಗೆಯನ್ನೂ ಕೊಡಲು ಸಾಧ್ಯ ಆಗುವುದಿಲ್ಲ. ಆದ್ದರಿಂದ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ ಎಲ್ಲಕ್ಕಿಂತ ಮೊದಲು ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳಬೇಕು.
ನಮ್ಮಲ್ಲಿ ಎಷ್ಟೇ ಓದು, ತಿಳುವಳಿಕೆ, ಮಾತುಗಾರಿಕೆ ಇತ್ಯಾದಿಗಳು ಇದ್ದರೂ ಕೂಡ ನಮ್ಮ ಒಳಗೆ ಗಟ್ಟಿತನ ಇಲ್ಲದೇ ಹೋದರೆ ಅದು ವ್ಯರ್ಥವೇ. ಆದ್ದರಿಂದ ಮೊದಲು ನಾವು ನಮ್ಮ ವ್ಯಕ್ತಿತ್ವವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ಟೊಳ್ಳುತನ, ನಮ್ಮ ಕೊರತೆಗಳು ನಮ್ಮನ್ನೇ ತಿಂದುಹಾಕಿಬಿಡುತ್ತವೆ. ನಮ್ಮನ್ನು ಯಾರೋ ಹೊರಗಿನವರು ಹಾಳು ಮಾಡಬೇಕಿಲ್ಲ. ನಾವು ಸೋತರೆ, ಅದರ ಮೊದಲ ಕಾರಣ ನಾವೇ ಆಗಿರುತ್ತೇವೆ, ನಮ್ಮ ಉದ್ಧಾರಕ್ಕೆ ಹೇಗೆ ನಾವೇ ಕಾರಣವೋ ಹಾಗೇ ನಮ್ಮ ಪತನಕ್ಕೂ ನಾವೇ ಕಾರಣ. ಹೇಗೆ ನಮಗೆ ನಾವೇ ಮೊದಲ ಗೆಳೆಯರೋ ಹಾಗೇ ನಮಗೆ ನಾವೇ ಮೊದಲ ವೈರಿ ಕೂಡಾ – ಇದು ಈ ಮಾತಿನ ವಿಸ್ತೃತಾರ್ಥ.