ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಯಮಿಗಳಾಗಿರಬೇಕು ಎಂದು ಭಾಗವತ ಹೇಳುತ್ತದೆ.
ಯಾವಂತೋ ವಿಷಯಾಃ ಪ್ರೇಷ್ಠಾಸ್ತ್ರಿಲೋಕ್ಯಾಮಜಿತೇಂದ್ರಿಯಂ |
ಸ ಶಕ್ನುವಂತಿತೇ ಸರ್ವೇ ಪ್ರತಿ ಪೂರಯಿತುಂ ನೃಪ || ಭಾಗವತ ಪುರಾಣ ||
ಅರ್ಥ: ಸುಖ ಸಾಧನಗಳಾದ ವಿಷಯಗಳು ಸಮಸ್ತ ಸೃಷ್ಟಿಯಲ್ಲಿ ಎಷ್ಟಿವೆಯೋ ಅವೆಲ್ಲ ಒಟ್ಟಾದರೂ ಇಂದ್ರಿಯಗಳ ಸೆಳೆತಕ್ಕೆ ಒಳಗಾದ ವ್ಯಕ್ತಿಯನ್ನು ತೃಪ್ತಿ ಪಡಿಸಲಾರವು.
ತಾತ್ಪರ್ಯ: ಮನುಷ್ಯನಿಗೆ ಪಂಚೇಂದ್ರಿಯಗಳು ಇವೆ. ಕಣ್ಣು, ಕಿವಿ, ನಾಲಿಗೆ, ಮೂಗು ಹಾಗೂ ಚರ್ಮ -ಇವು ಪಂಚೇಂದ್ರಿಯಗಳು. ಈ ಇಂದ್ರಿಯಗಳ ಸೆಳೆತ ಅಸಾಧಾರಣವಾದದ್ದು. ಇಂದ್ರಿಯಗಳ ಸೆಳೆತವು ತುಂಬಾ ಶಕ್ತಿಯುತವಾದದ್ದು. ಅದು “ವಿದ್ವಾಂಸಮಪಿ ಕರ್ಷತಿ” (ಜ್ಞಾನಿಗಳನ್ನೂ ಸೆಳೆಯುತ್ತವೆ) ಎಂದು ಗೀತಾಚಾರ್ಯನು ಎಚ್ಚರಿಸಿದ್ದಾನೆ.
ಇಂದ್ರಿಯಗಳ ಸೆಳೆತವು ಬಹುತೇಕ ಮನುಷ್ಯನನ್ನು ತಪ್ಪು ದಾರಿಗೆ ಎಳೆಯುತ್ತದೆ. ಕಡಿವಾಣವಿಲ್ಲದ ಕುದುರೆ ಸಾರಥಿಯ ನಿಯಂತ್ರಣವನ್ನು ಮೀರಿ ಅತಿಯಾದ ವೇಗದಿಂದ ಧಾವಿಸಿ ಮುಗ್ಗರಿಸಿ ಬೀಳುತ್ತದೆ. ಸಾರಥಿಯನ್ನು ಕೆಳಗೆ ಕೆಡವುತ್ತದೆ. ಅಂತೆ ಈ ಇಂದ್ರಿಯಗಳು ಅವುಗಳ ಆಕರ್ಷಣೆ ಅತಿಯಾದಾಗ ಮನುಷ್ಯನನ್ನು ಮುಳುಗಿಸುತ್ತದೆ.
“ಕುರಂಗ, ಮಾತಂಗ, ಪತಂಗ, ಭೃಂಗಃ, ಮೀನಾಹತಾ, ಪಂಚಭಿರೇವ ಪಂಚೈಃ” : ಚಿಗರೆ, ಆನೆ, ಮಿಡತೆ, ಭ್ರಮರ, ಮೀನ ಇವುಗಳು ಒಂದೊಂದೇ ಇಂದ್ರಿಯಗಳ ಆಕರ್ಷಣೆ ಇದ್ದರೂ ಅದರಿಂದಲೇ ಸಾಯುತ್ತವೆ. ಹೇಗೆಂದರೆ ಚಿಗರೆ ಅಥವಾ ಜಿಂಕೆಗೆ ಶಬ್ದವೇ ಆಕರ್ಷಣೆ. ಆನೆಗೆ ಸ್ಪರ್ಶವೇ ಆಕರ್ಷಣೆ. ಮಿಡತೆಗೆ ದೀಪವೇ ಆಕರ್ಷಣೆ. ಭೃಂಗಕ್ಕೆ ಪರಿಮಳವೇ ಆಕರ್ಷಣೆ. ಮೀನಕ್ಕೆ ರುಚಿಯೇ ಆಕರ್ಷಣೆ. ಅಂದರೆ ಜಿಂಕೆಗೆ ಕಿವಿಯೇ ಪ್ರಧಾನ್ಯ. ಆನೆಗೆ ತ್ವಚೆಯೇ ಪ್ರಾಧಾನ್ಯ, ಮಿಡತೆಗೆ ರೂಪವೇ ಪ್ರಾಧಾನ್ಯ, ಭೃಂಗಕ್ಕೆ ವಾಸನೆಯೇ ಪ್ರಾಧಾನ್ಯ ಮತ್ತು ಮೀನಕ್ಕೆ ನಾಲಿಗೆಯೇ ಪ್ರಾಧಾನ್ಯ.
ಈ ಪ್ರಕಾರ ಆಯಾ ಜಂತುಗಳಲ್ಲಿ ಪ್ರಧಾನವಾಗಿರುವ ಇಂದ್ರಿಯಗಳೇ ಅವುಗಳ ಏಕೈಕ ಆಕರ್ಷಣೆ. ಅವುಗಳನ್ನು ಬಿಟ್ಟು ಆ ಜಂತುಗಳಿಗೆ ಬೇರೆ ಇಂದ್ರಿಯಗಳ ಆಕರ್ಷಣೆ ಇಲ್ಲ. ಹಾಗಿದ್ದೂ, ಆ ಒಂದು ಆಕರ್ಷಣೆಯಿಂದಲೇ ಅವು ಜೀವ ಕಳೆದುಕೊಳ್ಳುತ್ತವೆ.
ಇನ್ನು ಮನುಷ್ಯನಿಗೆ ಪಂಚೇಂದ್ರಿಯಗಳಿಗೂ ಒಂದೊಂದು ಆಕರ್ಷಣೆ ಇದೆ! ಅವನ ಪಾಡೇನು!?
ಆದ್ದರಿಂದ, ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಯಮಿಗಳಾಗಿರಬೇಕು ಎಂದು ಭಾಗವತ ಹೇಳುತ್ತದೆ.