ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-3) : Art of love #35

ಹಾಗೆ ನೋಡಿದರೆ, ಪರಸ್ಪರರಲ್ಲಿ ಸಹನೆ-ಸಹಾನುಭೂತಿ, ಟೀಂ ಸ್ಪಿರಿಟ್ ಮುಂತಾದವೆಲ್ಲ ಇತ್ತೀಚಿನ ಬೆಳವಣಿಗೆಗಳು. ಮೊದಲ ವಿಶ್ವ ಯುದ್ಧದ ನಂತರದ ವರ್ಷಗಳಲ್ಲಿನ ಪ್ರೀತಿಯ ಪರಿಕಲ್ಪನೆಯಲ್ಲಿ, ಪರಸ್ಪರರನ್ನು ಲೈಂಗಿಕವಾಗಿ ತೃಪ್ತಿಗೊಳಿಸುವುದನ್ನ ಯಶಸ್ವಿ ಪ್ರೇಮ ಸಂಬಂಧಗಳ ಮತ್ತು ವಿಶೇಷವಾಗಿ ಸುಖೀ ದಾಂಪತ್ಯದ ತಳಹದಿ ಎಂದು ಭಾವಿಸಲಾಗಿತ್ತು. ಪರಸ್ಪರರಲ್ಲಿ “ಸರಿಯಾದ ಲೈಂಗಿಕ ಹೊಂದಾಣಿಕೆ” ಇಲ್ಲದಿರುವುದು ಸಂಬಂಧಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಅಸಮಾಧಾನ ಮತ್ತು ಅತೃಪ್ತಿಗೆ ಕಾರಣ ಎಂದು ತಿಳಿಯಲಾಗಿತ್ತು… ~ ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2022/07/10/love-49/

ಪ್ರೀತಿ ಮತ್ತು ಮದುವೆಯ ಕುರಿತಾದ ಇಂಥ ಪರಿಕಲ್ಪನೆಗಳಲ್ಲಿ, ಸಹಿಸಲಸಾಧ್ಯವಾಗಿರುವ ಒಂಟಿತನದಿಂದ ಪಾರಾಗಿ ನೆಲೆಯಾಗಲು, ಆಶ್ರಯವೊಂದನ್ನು ಹುಡುಕುವತ್ತ ಹೆಚ್ಚು ಒತ್ತು ನೀಡಲಾಗಿದೆ. ಕೊನೆಗೂ “ಪ್ರೀತಿ” ಅಂಥದೊಂದು ಆಶ್ರಯ ಎನ್ನುವುದನ್ನ ಕಂಡುಕೊಳ್ಳಲಾಗಿದೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಿರುದ್ಧವಾಗಿ ಎನ್ನುವಂತೆ ಇಬ್ಬರು ಸೇರಿಕೊಂಡು ಒಂದು ಮೈತ್ರಿಯನ್ನು ರಚಿಸಿಕೊಳ್ಳುವ ಆ ಅಹಂ ನ್ನು ಪ್ರೀತಿ, ಆತ್ಮೀಯತೆ ಎಂದು ತಪ್ಪು ತಿಳಿಯಲಾಗಿದೆ.

ಹಾಗೆ ನೋಡಿದರೆ, ಪರಸ್ಪರರಲ್ಲಿ ಸಹನೆ-ಸಹಾನುಭೂತಿ, ಟೀಂ ಸ್ಪಿರಿಟ್ ಮುಂತಾದವೆಲ್ಲ ಇತ್ತೀಚಿನ ಬೆಳವಣಿಗೆಗಳು. ಮೊದಲ ವಿಶ್ವ ಯುದ್ಧದ ನಂತರದ ವರ್ಷಗಳಲ್ಲಿನ ಪ್ರೀತಿಯ ಪರಿಕಲ್ಪನೆಯಲ್ಲಿ, ಪರಸ್ಪರರನ್ನು ಲೈಂಗಿಕವಾಗಿ ತೃಪ್ತಿಗೊಳಿಸುವುದನ್ನ ಯಶಸ್ವಿ ಪ್ರೇಮ ಸಂಬಂಧಗಳ ಮತ್ತು ವಿಶೇಷವಾಗಿ ಸುಖೀ ದಾಂಪತ್ಯದ ತಳಹದಿ ಎಂದು ಭಾವಿಸಲಾಗಿತ್ತು. ಪರಸ್ಪರರಲ್ಲಿ “ಸರಿಯಾದ ಲೈಂಗಿಕ ಹೊಂದಾಣಿಕೆ” ಇಲ್ಲದಿರುವುದು ಸಂಬಂಧಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಅಸಮಾಧಾನ ಮತ್ತು ಅತೃಪ್ತಿಗೆ ಕಾರಣ ಎಂದು ತಿಳಿಯಲಾಗಿತ್ತು ; ಈ ಕೊರತೆಗೆ ಕಾರಣವನ್ನು “ಸೂಕ್ತ” ಲೈಂಗಿಕ ವರ್ತನೆಯ ಕುರಿತಾದ ಅಜ್ಞಾನದಲ್ಲಿ ಹುಡುಕಲಾಗುತ್ತಿತ್ತು ಮತ್ತು ಈ ಕಾರಣವಾಗಿಯೇ ಒಬ್ಬರು ಅಥವಾ ಇಬ್ಬರೂ ಪಾರ್ಟ್ನರ್ ಗಳಿಗೆ ಲೈಂಗಿಕ ಸುಖ ಅನುಭವಿಸುವ ತಂತ್ರಗಳು ಗೊತ್ತಿಲ್ಲದಿರುವುದು ಈ ಸಮಸ್ಯೆ ಕಾರಣ ಎಂದುಕೊಳ್ಳಲಾಗಿತ್ತು. ಈ ಸಮಸ್ಯೆಯನ್ನು “ಪರಿಹರಿಸಲು” , ಮತ್ತು ಪರಸ್ಪರರನ್ನ ಪ್ರೇಮಿಸಲಾಗದ ಅದೃಷ್ಟಹೀನ ಜೋಡಿಗಳಿಗೆ ಸಹಾಯಮಾಡಲು, ಸರಿಯಾದ ಲೈಂಗಿಕ ವರ್ತನೆಗಾಗಿ ಸಲಹೆ-ಸೂಚನೆಗಳನ್ನು ಕೊಡುವ ಪುಸ್ತಕಗಳು ಬರೆಯಲ್ಪಟ್ಟವು, ಮತ್ತು ಈ ಮೂಲಕ ಸೂಚ್ಯವಾಗಿ ಅಥವಾ ಸ್ಪಷ್ಟವಾಗಿ ಯಶಸ್ವಿ ಪ್ರೇಮ ಮತ್ತು ಸಂತೋಷದ ಭರವಸೆಗಳನ್ನು ನೀಡಲಾಯಿತು. ಈ ಎಲ್ಲದರ ಹಿಂದೆ ಇದ್ದದ್ದು ಪ್ರೀತಿ, ಲೈಂಗಿಕ ಸುಖಕ್ಕೆ ಸಂಬಂಧಿಸಿದ್ದು ಎನ್ನುವ ನಂಬಿಕೆ , ಮತ್ತು ಇಬ್ಬರು ವ್ಯಕ್ತಿಗಳು ಪರಸ್ಪರರನ್ನ ಲೈಂಗಿಕವಾಗಿ ತೃಪ್ತಿಗೊಳಿಸುವುದನ್ನ ಕಲಿತುಕೊಂಡುಬಿಟ್ಟರೆ ಅವರ ನಡುವೆ ಪ್ರೀತಿ ಸ್ಥಾಪಿತವಾಗುತ್ತದೆ ಎನ್ನುವ ತಿಳುವಳಿಕೆ. ಸರಿಯಾದ ಸಲಕರಣೆಗಳನ್ನ, ತಂತ್ರಗಳನ್ನ ಬಳಸಿದರೆ ಕೇವಲ ಔದ್ಯೋಗಿಕ ಉತ್ಪಾದನೆಯ ಸಮಸ್ಯೆಗಳಷ್ಟೇ ಅಲ್ಲ, ಮನುಷ್ಯ ಸಂಬಂಧದ ಸಮಸ್ಯೆಗಳನ್ನೂ ಪರಿಹರಿಸಬಹುದು ಎನ್ನುವವರೆಗೂ ಆ ಕಾಲದ ಸಾಮಾನ್ಯ ಭ್ರಮೆ ಮುಂದುವರೆಯಿತು.

ಪ್ರೀತಿ, ಅತ್ಯಗತ್ಯ ಲೈಂಗಿಕ ತೃಪ್ತಿಯ ಫಲಿತಾಂಶ ಅಲ್ಲ. ಆದರೆ ಲೈಂಗಿಕ ಖುಶಿ ಮತ್ತು ಲೈಂಗಿಕ ತಂತ್ರಗಳ ಕುರಿತಾದ ಅರಿವು, ಪ್ರೀತಿಯ ಕಾರಣವಾಗಿ ಹೊರಹೊಮ್ಮಿದ ಪರಿಣಾಮಗಳು. ಪ್ರೀತಿ ಇಲ್ಲದೇ ಆರೋಗ್ಯಪೂರ್ಣ ಲೈಂಗಿಕತೆ ಸಾಧ್ಯವಿಲ್ಲ ಎನ್ನುವ ಮಾತಿಗೆ ಸಾಕ್ಷಿಯಾಗಿ, ಸುತ್ತ ಮುತ್ತಲೂ ಪ್ರತಿದಿನ ನಾವು ಗಮನಿಸುವ ಉದಾಹರಣೆಗಳು ಸಾಕಾಗುವುದಿಲ್ಲ ಎನ್ನುವುದಾದರೆ, ಇನ್ನಷ್ಟು ಪೂರಕ ಸಾಕ್ಷಿಗಳನ್ನ ವೈಜ್ಞಾನಿಕ ಮನೋವಿಶ್ಲೇಷಣೆಯಲ್ಲಿ ಸಂಗ್ರಹಿಸಲಾಗುವ ವಿವರಗಳಲ್ಲಿ ಪಡೆಯಬಹುದು. ಹೆಚ್ಚು ಹೆಚ್ಚು ಲೈಂಗಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿದಾಗ ನಮಗೆ ಗೊತ್ತಾಗುವುದೇನೆಂದರೆ, ಹೆಣ್ಣಿನಲ್ಲಿಯ ಲೈಂಗಿಕ ಅನಾಸಕ್ತಿಗೆ ಮತ್ತು ಗಂಡಿನಲ್ಲಿಯ ಹೆಚ್ಚು ಕಡಿಮೆ ತೀವ್ರವಾದ ಮಾನಸಿಕ ಷಂಡತನಕ್ಕೆ ಕಾರಣ, ಲೈಂಗಿಕ ತಂತ್ರಗಳ ಅರಿವಿನ ಕೊರತೆಯಲ್ಲ, ಬದಲಾಗಿ ವ್ಯಕ್ತಿಗಳ ನಡುವಿನ ಪ್ರೀತಿಯ, ಆತ್ಮೀಯತೆಯ ಅನುಪಸ್ಥಿತಿ ಹಾಗು ಅವರೊಳಗಿನ ಹಿಂಜರಿಕೆಗಳು ಎನ್ನುವುದು. ಈ ಸಮಸ್ಯೆಗಳ ಹಿಂದಿರುವುದು, ವಿರುದ್ಧ ಲಿಂಗದವರ ಕುರಿತಾದ ಭಯ ಅಥವಾ ದ್ವೇಷ ; ಇದು ವ್ಯಕ್ತಿಗೆ ತನ್ನನ್ನು ತಾನು ಸಂಬಂಧಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದರಲ್ಲಿ, ಸಹಜವಾಗಿ ವರ್ತಿಸುವುದರಲ್ಲಿ, ಲೈಂಗಿಕ ಸಂಗಾತಿಯನ್ನು ತುರ್ತಾಗಿ ಮತ್ತು ನೇರ ದೈಹಿಕ ಸಾಮಿಪ್ಯದಲ್ಲಿ ನಂಬುವುದರಲ್ಲಿ ಅಡತಡೆ ಉಂಟು ಮಾಡುತ್ತದೆ. ಲೈಂಗಿಕ ಹಿಂಜರಿಕೆಯ ವ್ಯಕ್ತಿ ಭಯ ಅಥವಾ ದ್ವೇಷದಿಂದ ಹೊರಬರಬಲ್ಲನಾದರೆ, ತನ್ನ ಸಂಗಾತಿಯನ್ನ ಪ್ರೀತಿಸುವ ಸಾಮರ್ಥ್ಯವನ್ನು ಗಳಿಸಬಲ್ಲನಾದರೆ, ಅವನ ಅಥವಾ ಅವಳ ಲೈಂಗಿಕ ಸಮಸ್ಯೆಗಳು ಪರಿಹಾರವಾದಂತೆ. ಇದು ಸಾಧ್ಯವಾಗದಿದ್ದರೆ ಲೈಂಗಿಕ ತಂತ್ರಗಳ ಅರಿವು ಎಷ್ಟಿದ್ದರೂ ಪ್ರಯೋಜನವಾಗುವುದಿಲ್ಲ.

ಮನೋವಿಶ್ಲೇಷಣಾತ್ಮಕ ಚಿಕಿತ್ಸೆ (Psychoanalytic therapy) ಒದಿಗಿಸಿರುವ ವಿವರಗಳು, ಸರಿಯಾದ ಲೈಂಗಿಕ ತಂತ್ರಗಳ ಕುರಿತಾದ ಅರಿವು, ಪ್ರೀತಿಗೆ ಮತ್ತು ಲೈಂಗಿಕ ತೃಪ್ತಿಗೆ ಕಾರಣ ಎನ್ನುವ ತರ್ಕದ ಮಿಥ್ಯೆಯನ್ನು ಎತ್ತಿಹಿಡಿಯುತ್ತವೆಯಾದರೂ, ಪರಸ್ಪರರ ಲೈಂಗಿಕ ತೃಪ್ತಿ ಮತ್ತು ಪ್ರೀತಿ, ಸಮಾನಾರ್ಥಕ ಸಂಗತಿಗಳು ಎನ್ನುವ ಅನಿಸಿಕೆ ಪ್ರೇರಿತವಾದದ್ದು ಫ್ರಾಯ್ಡ್ ನ ಸಿದ್ಧಾಂತಗಳ ಕಾರಣವಾಗಿ. ಮೂಲಭೂತವಾಗಿ ಫ್ರಾಯ್ಡನದು, ಪ್ರೀತಿ ಒಂದು ಲೈಂಗಿಕ ವಿದ್ಯಮಾನ ಎನ್ನುವ ತಿಳುವಳಿಕೆ. ಮನುಷ್ಯ ತನ್ನ ಸ್ವಂತ ಅನುಭವದಿಂದ ಲೈಂಗಿಕ (ಜನನಾಂಗಗಳ ಮೂಲಕದ) ಪ್ರೀತಿ ತನಗೆ ಎಲ್ಲಕ್ಕಿಂತ ಹೆಚ್ಚಿನ ಸಂತೋಷವನ್ನ, ತೃಪ್ತಿಯನ್ನ ಕೊಡುತ್ತದೆ ಎನ್ನುವುದನ್ನ ಕಂಡುಕೊಂಡಮೇಲೆ, ಅದು ಅವನ ಎಲ್ಲ ಖುಶಿಗೂ ಮೂಲ ಮಾದರಿಯಾಯಿತು, ಮತ್ತು ಲೈಂಗಿಕ ಸಂಬಂಧಗಳ ಮೂಲಕ ಈ ಖುಶಿಯ ಹುಡುಕಾಟಕ್ಕೆ ಅವನನ್ನು ಪ್ರೇರೇಪಿಸುತ್ತ, ಜನನೇಂದ್ರಿಯ ಮೂಲಕದ ಕಾಮವನ್ನ (genital eroticism) ಅವನ ಬದುಕಿನ ಕೇಂದ್ರವನ್ನಾಗಿಸಿತು. ಫ್ರಾಯ್ಡ್ ನ ಪ್ರಕಾರ ಸೋದರ ಪ್ರೀತಿಯ ಅನುಭವ ಕೂಡ ಲೈಂಗಿಕ ಬಯಕೆಯ ಪರಿಣಾಮವೇ, ಆದರೆ ಇಲ್ಲಿ ವ್ಯಕ್ತಿಯ ಲೈಂಗಿಕ ಮೂಲಪ್ರವೃತ್ತಿ (sexual instinct) “ಸಾಧ್ಯವಾಗದ ಗುರಿ” (inhibited aim) ಯ ಪ್ರಚೋದನೆಯಾಗಿ ಬದಲಾವಣೆಗೊಂಡಿದೆ. ಲೈಂಗಿಕ ಮಿಲನದ ಗುರಿ ಸಾಧ್ಯವಾಗದ ಪ್ರೀತಿ ಕೂಡ ಮೂಲಭೂತವಾಗಿ ಇಂದ್ರೀಯ ಸುಖದ ಬಯಕೆಯ ಪ್ರೀತಿಯೇ, ಮತ್ತು ಮನುಷ್ಯನ ಸುಪ್ತ ಪ್ರಜ್ಞೆಯಲ್ಲಿ ಅದು ಇನ್ನೂ ಹಾಗೆಯೇ ಉಳಿದುಕೊಂಡಿದೆ. ಪ್ರೀತಿಯಲ್ಲಿ ಸಾಧ್ಯವಾಗುವ, ಕೂಡುವ, ಒಂದಾಗುವಿಕೆಯ (oceanic feeling) ಭಾವ, ಯಾವುದು ಎಲ್ಲ ಅಧ್ಯಾತ್ಮಿಕ ಅನುಭವಗಳ ತಿರುಳೋ, ಮತ್ತು ಇನ್ನೊಬ್ಬರ ಜೊತೆಗಿನ ಅಥವಾ ಸುತ್ತಮುತ್ತಲಿನ ಜನರೊಂದಿಗಿನ ದಟ್ಟ ಐಕ್ಯತೆಯ ಮೂಲವೋ ಅದನ್ನ ಫ್ರಾಯ್ಡ್, ಮಾನಸಿಕ ಸಮಸ್ಯೆ ಎಂದು, ಶೈಶವ ಸ್ಥಿತಿಗೆ ಹಿಂದಿರುಗುವ ಅಪರಿಮಿತ ನಾರ್ಸಿಸಿಸಂ (limitless narcissism ) ಎಂದೂ ವಿಶ್ಲೇಷಿಸುತ್ತಾನೆ.

ಪ್ರೀತಿ, ತನ್ನೊಳಗೇ ಒಂದು ಅತಾರ್ಕಿಕ ವಿದ್ಯಮಾನ ಎನ್ನುವ ಫ್ರಾಯ್ಡ್, ಹೀಗೆ ಹೇಳುವ ಮೂಲಕ, ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಅವನಿಗೆ ಅತಾರ್ಕಿಕ ಪ್ರೀತಿ ಮತ್ತು ಪ್ರಬುದ್ಧ ವ್ಯಕ್ತಿತ್ವವೊಂದರ ಅಭಿವ್ಯಕ್ತಿಯಂಥ ಪ್ರೀತಿಯ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಅನುಭವಗಳ ಅಪ್ರಜ್ಞಾಪೂರ್ವಕ ವರ್ಗಾವಣೆ ಕಾರಣವಾದ ಪ್ರೀತಿಯ (transference love) ಕುರಿತಾದ ತನ್ನ ಬರಹವೊಂದರಲ್ಲಿ ಫ್ರಾಯ್ಡ್, transference love ಮತ್ತು normal love ಗೂ ಯಾವ ವ್ಯತ್ಯಾಸ ಇಲ್ಲವೆಂದು ಹೇಳುತ್ತಾನೆ. ಅವನಿಗೆ ಪ್ರೀತಿಯಲ್ಲಿ ಬೀಳುವುದೆಂದರೆ ಅಸಹಜತೆಯ ತುದಿಗೆ ಬಂದು ನಿಲ್ಲುವುದು, ವಾಸ್ತವಕ್ಕೆ ಕುರುಡಾಗಿರುವುದು, ಒತ್ತಾಯಕ್ಕೆ ಮಣಿಯುವುದು, ಮತ್ತು ಬಾಲ್ಯದಲ್ಲಿ ಪ್ರೀತಿಸಿದ ವಸ್ತುಗಳ ಮೇಲಿನ ಪ್ರೀತಿಯನ್ನು ಈಗ ಇನ್ನೊಬ್ಬರ ಮೇಲೆ ವರ್ಗಾಯಿಸುವುದು. ಪ್ರೀತಿಯೆನ್ನುವುದು ಒಂದು ತರ್ಕಬದ್ಧ ವಿದ್ಯಮಾನ, ಮನುಷ್ಯನ ಪ್ರಬುದ್ಧತೆ ಸಾಧಿಸಿರುವ ಅತ್ಯುನ್ನತ ಸಾಧನೆಯೆನ್ನುವುದು, ಫ್ರಾಯ್ಡ್ ನಿಗೆ ಸಂಶೋಧನೆಯ ವಿಷಯವೇ ಆಗಿರಲಿಲ್ಲ. ಏಕೆಂದರೆ ಅವನ ಪ್ರಕಾರ ಅಂಥದೊಂದು ಸಂಗತಿ ನಿಜ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ.


About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply