ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ… (ಭಾಗ-4) : Art of love #36

“ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ” ಅಧ್ಯಾಯದ ಮುಂದುವರಿದ ಭಾಗ ಇಲ್ಲಿದೆ… |ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೀತಿ ಹುಟ್ಟುವುದು, ಜಾಗೃತ ಸಂವೇದನೆಯ ಅರಿವಿಗೆ ಬರುವ ಲೈಂಗಿಕ ಆಕರ್ಷಣೆಯ ಕಾರಣವಾಗಿ, ಅಥವಾ ಲೈಂಗಿಕ ತೃಪ್ತಿಯ ಕಾರಣವಾಗಿ ಎನ್ನುವ ಪರಿಕಲ್ಪನೆಯ ಮೇಲೆ ಫ್ರಾಯ್ಡನ್ ವಿಚಾರಗಳ ಪ್ರಭಾವ ತೀವ್ರವಾಗಿದೆ ಎಂದು ಭಾವಿಸುವುದು ತಪ್ಪಾದೀತು. ಆದರೆ ಪ್ರೀತಿ ಮತ್ತು ಲೈಂಗಿಕತೆಯ ಸಮೀಕರಣ ಶುರುವಾಗಿದ್ದು ಇನ್ನೊಂದು ರೀತಿಯಲ್ಲಿ. ಫ್ರಾಯ್ಡನ ವಿಚಾರಗಳು ಆಂಶಿಕವಾಗಿ ಪ್ರಭಾವಿತವಾಗಿದ್ದು ಹತ್ತೊಂಭತ್ತನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಜನರ ಮನೋಭಾವದ ಕಾರಣವಾಗಿ; ಮತ್ತು ಅವು ಭಾಗಶಃ ಜನಪ್ರಿಯವಾಗಿದ್ದು ಮೊದಲ ಮಹಾಯುದ್ಧದ ನಂತರದ ವರ್ಷಗಳಲ್ಲಿ ಜನರಲ್ಲಿ ಹುಟ್ಟಿಕೊಂಡಿದ್ದ ಆಕಾಂಕ್ಷೆಗಳು ಕಾರಣವಾಗಿ. ಆ ಕಾಲದ ಜನರ ಮನೋಭಾವ ಮತ್ತು ಫ್ರಾಯ್ಡನ ಪರಿಕಲ್ಪನೆ ಎರಡನ್ನೂ ಪ್ರಭಾವಿಸಿದ ಅಂಶಗಳಲ್ಲಿ ಮೊದಲನೇಯದು, ವಿಕ್ಟೋರಿಯನ್ ಕಾಲದ ಕಟ್ಟುನಿಟ್ಟಾದ ನೀತಿ ನಿಯಮಗಳ ವಿರುದ್ಧದ ತೀಕ್ಷ್ಣ ಪ್ರತಿಕ್ರಿಯೆ. ಮತ್ತು ಫ್ರಾಯ್ಡನ ಥಿಯರಿಯನ್ನ ಪ್ರಭಾವಿಸಿದ ಎರಡನೇಯ ಅಂಶ, ಬಂಡವಾಳಶಾಹಿ ವ್ಯವಸ್ಥೆಯ ಕಾರಣವಾಗಿ ಬದಲಾದ ಆ ಕಾಲದ ಮನುಷ್ಯನ ಪರಿಕಲ್ಪನೆ. ಬಂಡವಾಳಶಾಹಿ ವ್ಯವಸ್ಥೆ, ಮನುಷ್ಯನ ಸಹಜ ಬೇಡಿಕೆಗಳನ್ನು ಪೂರೈಸುವುದಕ್ಕೆ ಸಹಾಯಮಾಡಿತು ಎನ್ನುವುದನ್ನ ಪ್ರೂವ್ ಮಾಡಲು, ಮನುಷ್ಯ ಸ್ವಭಾವತಃ ಸ್ಪರ್ಧಾತ್ಮಕ ಮನೋಭಾವದವ ಮತ್ತು ಹಗೆತನವನ್ನ ಸಾಧಿಸುವವ ಎನ್ನುವುದನ್ನ ಸಿದ್ಧ ಮಾಡುವುದು ಅವಶ್ಯಕವಾಗಿತ್ತು. ಇದನ್ನ ಅರ್ಥಶಾಸ್ತ್ರಜ್ಞರು ಲಾಭಕ್ಕಾಗಿಯ ಮನುಷ್ಯನ ತೀರದ ದಾಹವನ್ನು ವಿವರಿಸುವ ಮೂಲಕ “ಪ್ರೂವ್” ಮಾಡಿದರೆ, ಜೀವ ಶಾಸ್ತ್ರಜ್ಞರು survival of fittest ಥಿಯರಿಯ ಮೂಲಕ ಸಿದ್ಧಮಾಡುವ ಪ್ರಯತ್ನ ಮಾಡಿದರು. ಹೆಂಗಸರ ಮೇಲೆ ಲೈಂಗಿಕ ವಿಜಯ ಸಾಧಿಸಬಯಸುವ ಗಂಡಿನ ಅಪರಿಮಿತ ಬಯಕೆ ಮತ್ತು ಗಂಡು ಈ ಬಯಕೆಯನ್ನ ಸಮಾಜದ ಒತ್ತಡದ ಕಾರಣವಾಗಿ ಹತ್ತಿಕ್ಕಿಕೊಂಡಿದ್ದಾನೆ ಎನ್ನುವ ತನ್ನ ನಂಬಿಕೆಯ ಕಾರಣವಾಗಿ ಫ್ರಾಯ್ಡ್ ಕೂಡ ಇದೇ ನಿರ್ಣಯಕ್ಕೆ ಬಂದ. ಇದರ ಪ್ರಕಾರ, ಮನುಷ್ಯರು ಸ್ವಭಾವತಃ ಪರಸ್ಪರರ ಕುರಿತಾಗಿ ಅಸೂಯಾಪರರು ಮತ್ತು ಪರಸ್ಪರರಲ್ಲಿನ ಈ ಅಸೂಯೆ ಹಾಗು ಸ್ಪರ್ಧೆ, ಇದನ್ನು ಹುಟ್ಟಿಸಿದ್ದು ಎನ್ನಲಾದ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳು ಬದಲಾದಾಗಲೂ ಅಥವಾ ಕಾಣೆಯಾದಾಗಲೂ ಮುಂದುವರೆಯುತ್ತವೆ. (6)

ಕೊನೆಗೂ, ಹತ್ತೊಂಭತ್ತನೇ ಶತಮಾನದ ಭೌತಿಕವಾದದಿಂದ (materialism) ಫ್ರಾಯ್ಡ್ ನ ಆಲೋಚನೆಗಳು ಹೆಚ್ಚಾಗಿ ಪ್ರೇರಿತವಾಗಿದ್ದವು. ಎಲ್ಲ ಮಾನಸಿಕ ವಿದ್ಯಮಾನಗಳ ತಳಹದಿಯನ್ನ ಶಾರೀರಿಕ ವಿದ್ಯಮಾನಗಳಲ್ಲಿ ಗುರುತಿಸಬಹುದು ಎಂದು ನಂಬಲಾಗಿತ್ತು; ಆದ್ದರಿಂದ ಪ್ರೀತಿ, ದ್ವೇಷ, ಮಹತ್ವಾಕಾಂಕ್ಷೆ, ಅಸೂಯೆ ಮುಂತಾದವನ್ನೆಲ್ಲ ಫ್ರಾಯ್ಡ್ , ಮನುಷ್ಯನ ಲೈಂಗಿಕ ಪ್ರವೃತ್ತಿಯ ಅನೇಕ ಪರಿಣಾಮಗಳನ್ನಾಗಿ ವಿವರಿಸುವ ಪ್ರಯತ್ನ ಮಾಡಿದ. ಆದರೆ ನಿಜವಾದ ವಾಸ್ತವ ಇರುವುದು ಮನುಷ್ಯನ ಅಸ್ತಿತ್ವದ ಸಮಗ್ರತೆಯಲ್ಲಿ, ಮೊದಲು ಎಲ್ಲರಿಗೂ ಸಮಾನವಾದ ಮಾನವೀಯ ಪರಿಸ್ಥಿತಿಗಳಲ್ಲಿ, ಮತ್ತು ಎರಡನೇಯದಾಗಿ ಸಮಾಜದ ನಿರ್ದಿಷ್ಟ ರಚನೆಯಿಂದ ಪ್ರೇರಿತವಾದ ಬದುಕಿನ ಆಚರಣೆಯಲ್ಲಿ ಎನ್ನುವುದನ್ನ ಫ್ರಾಯ್ಡ್ ಗಮನಿಸಲಿಲ್ಲ. ( ಈ ಬಗೆಯ ಭೌತಿಕವಾದದಿಂದ ಆಚೆಗೆ, ಮೊದಲ ನಿರ್ಧಾರಕ ಹೆಜ್ಜೆಯನ್ನ ಮಾರ್ಕ್ಸ್ ತನ್ನ “ ಐತಿಹಾಸಿಕ ಭೌತಿಕವಾದ” Historical materialism ದಲ್ಲಿ ಇಟ್ಟ, ಇದರಲ್ಲಿ ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಕೇವಲ ಅವನ ದೇಹ ಸಾಕಾಗುವುದಿಲ್ಲ, ಅವನ ಅವಶ್ಯಕತೆಗಳಾದ ಊಟ, ಅಥವಾ ಅಧಿಕಾರ (possession) ಮುಂತಾದ ಪ್ರವೃತ್ತಿಗಳು ಸಾಕಾಗುವುದಿಲ್ಲ, ಆದರೆ ಮನುಷ್ಯನ ಬದುಕಿನ ಇಡೀ ಪ್ರಕ್ರಿಯೆ, ಅವನ “ಬದುಕಿನ ಆಚರಣೆ” ಯನ್ನು ಗಮನಿಸಬೇಕು ಎಂದು ಮಾರ್ಕ್ಸ್ ವಿವರಿಸುವ ಪ್ರಯತ್ನ ಮಾಡಿದ್ದ.) ಫ್ರಾಯ್ಡನ ಪ್ರಕಾರ, ಮನುಷ್ಯನ ಎಲ್ಲ ಸಹಜ ಬಯಕೆಗಳ ಸಂಪೂರ್ಣ ಮತ್ತು ನಿರಂತರ ತೃಪ್ತಿ ಕಾರಣವಾಗಿ ಮಾತ್ರ ಮನುಷ್ಯನ ಬದುಕಿನಲ್ಲಿ ಮಾನಸಿಕ ಆರೋಗ್ಯ ಹಾಗು ಸಂತೋಷ ನೆಲೆಯಾಗುತ್ತವೆ. ಆದರೆ ವೈದ್ಯಕೀಯ ವಿವರಗಳು ಸ್ಪಷ್ಟಪಡಿಸುವಂತೆ, ಅನಿಯಂತ್ರಿತ ಲೈಂಗಿಕ ತೃಪ್ತಿಗಾಗಿ ತಮ್ಮ ಬದುಕನ್ನ ಮೀಸಲಾಗಿಡುವ ಗಂಡು ಮತ್ತು ಹೆಣ್ಣಿಗೆ ಬದುಕಿನಲ್ಲಿ ಖುಶಿ ಸಿಕ್ಕಿರುವುದಿಲ್ಲ, ಮತ್ತು ಅವರು ಬಹುತೇಕ ತೀವ್ರ ಮಾನಸಿಕ ಸಂಘರ್ಷಕ್ಕೆ ಅಥವಾ ಅದರ ಗುಣಲಕ್ಷಣಗಳಿಗೆ (symptoms ) ಒಳಗಾಗಿರುತ್ತಾರೆ. ಮನುಷ್ಯನ ಸಹಜ ಬಯಕೆಗಳ ಸಂಪೂರ್ಣ ತೃಪ್ತಿ ಅವನಿಗೆ ಖುಶಿಯನ್ನಷ್ಟೇ ಅಲ್ಲ ಅವನ ಹುಚ್ಚುತನದಿಂದ ಮುಕ್ತಿಯನ್ನೂ ಖಾತ್ರಿ ಮಾಡುವುದಿಲ್ಲ. ಆದರೂ ಫ್ರಾಯ್ಡನ ಥಿಯರಿ ಮೊದಲನೇಯ ಮಹಾಯುದ್ಧ ದ ನಂತರದ ಅವಧಿಯಲ್ಲಿ ಅಷ್ಟು ಜನಪ್ರಿಯವಾಗಲು ಕಾರಣ, ಬಂಡವಾಳಶಾಹಿ ವ್ಯವಸ್ಥೆಯ ಮನೋಧರ್ಮದಲ್ಲಿ ಆದ ಬದಲಾವಣೆಗಳು. ಈ ಬದಲಾವಣೆಗಳು ಯಾವವು ಎಂದರೆ ಮನುಷ್ಯ ಕೂಡಿಡುವುದಕ್ಕಿಂತ ಖರ್ಚು ಮಾಡುವುದರಲ್ಲಿ ತೋರಿಸತೊಡಗಿದ ಆಸಕ್ತಿ, ಆರ್ಥಿಕ ಯಶಸ್ಸಿಗಾಗಿ ಸ್ವಂತ ಹಿತಾಸಕ್ತಿಗಳನ್ನು ಹತ್ತಿಕ್ಕುವುದಕ್ಕಿಂತ ಉಪಭೋಗವನ್ನು (consumption) ಸದಾ ವಿಸ್ತಾರಗೊಳ್ಳುತ್ತಿರುವ ಮಾರುಕಟ್ಟೆಯ ಮೂಲವನ್ನಾಗಿಸಿಕೊಳ್ಳುವುದು, ಮತ್ತು ಇದು ಆತಂಕಿತ ಯಾಂತ್ರಿಕ ಮನುಷ್ಯನಿಗೆ ತೃಪ್ತಿ ತಂದುಕೊಡುತ್ತದೆ ಎಂದುಕೊಳ್ಳುವುದು. ಲೈಂಗಿಕ ವಲಯದಲ್ಲಷ್ಟೇ ಅಲ್ಲದೆ ವಸ್ತುಗಳ ಉಪಭೋಗದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಯಾವ ಬಯಕೆಯನ್ನೂ ತೃಪ್ತಿಪೂರಕವಾಗಿ ಪೂರೈಸಿಕೊಳ್ಳುವುದನ್ನ ಮುಂದೂಡದಿರುವುದು ಬಹುಮುಖ್ಯ ಪ್ರವೃತ್ತಿಯಾಗಿ ಬೆಳೆದುಬಂದಿತು.

ಹತ್ತೊಭಂತ್ತನೇ ಶತಮಾನದ ಆರಂಭದಲ್ಲಿ ಇಡಿಯಾಗಿ ಅಸ್ತಿತ್ವದಲ್ಲಿದ್ದ ಅಂದಿನ ಬಂಡವಾಳಶಾಹಿ ಮನೋಧರ್ಮಕ್ಕೆ ಪೂರಕವಾದ ಫ್ರಾಯ್ಡನ ಥಿಯರಿಯನ್ನ, ಅತ್ಯಂತ ಪ್ರತಿಭಾಶಾಲಿ, ಸಮಕಾಲೀನ ಮನೋವಿಶ್ಲೇಷಣಾಕಾರನಾದ ದಿ. H.S.Sullivan ನ ಸೈದ್ಧಾಂತಿಕ ಪರಿಕಲ್ಪನೆಗಳ ಜೊತೆ ಹೋಲಿಸಿ ನೋಡುವುದು ಆಸಕ್ತಿದಾಯಕ ವಿಷಯ. ಸಲ್ಲೀವಾನ್ ನ ಮನೋವೈಜ್ಞಾನಿಕ ಅಧ್ಯಯನದಲ್ಲಿ ನಾವು ಫ್ರಾಯ್ಡ್ ನ ಥಿಯರಿಗೆ ವ್ಯತಿರಿಕ್ತವಾದ ತೀರ್ಮಾನವನ್ನು ಗಮನಿಸಬಹುದು. ಸಲ್ಲಿವಾನ್ ನ ಪ್ರಕಾರ ಪ್ರೀತಿ ಮತ್ತು ಲೈಂಗಿಕತೆಯ ನಡುವೆ ಖಡಾ ಖಂಡಿತ ವ್ಯತ್ಯಾಸಗಳಿವೆ.

ಹಾಗಾದರೆ ಸಲ್ಲಿವಾನ್ ನ ಪರಿಕಲ್ಪನೆಯಲ್ಲಿ ಪ್ರೀತಿ ಮತ್ತು ಇಂಟಿಮಸಿ ಗಳ ಅರ್ಥ ಏನು? ಅವನ ಪ್ರಕಾರ “ ಇಂಟಿಮಸಿ (ಸಲಿಗೆ, ಆತ್ಮೀಯತೆ), ಇಬ್ಬರು ವ್ಯಕ್ತಿಗಳ ನಡುವೆ ವ್ಯಕ್ತಿಗತವಾಗಿ ಮೌಲಿಕವಾಗಿರುವ ಎಲ್ಲ ಅಂಶಗಳ ಧೃಡೀಕರಣಕ್ಕೆ ಅವಕಾಶ ಸಾಧ್ಯವಾಗುವಂಥ ಒಂದು ಸನ್ನಿವೇಶ. ವ್ಯಕ್ತಿಗತವಾಗಿ ಮೌಲಿಕವಾಗಿರುವ ಅಂಶಗಳ ಧೃಡೀಕರಣಕ್ಕೆ ಒಂದು ವಿಶಿಷ್ಟ ಸಂಬಂಧದ ಅವಶ್ಯಕತೆ ಇದೆ, ಅದನ್ನ ನಾನು “ಸಹಯೋಗ” (collaboration) ಎನ್ನುತ್ತೇನೆ. ನನ್ನ ಪ್ರಕಾರ ಸಹಯೋಗ ಎಂದರೆ, ತನ್ನ ಸಂಗಾತಿಯು ಬಹಿರಂಗವಾಗಿ ವ್ಯಕ್ತಪಡಿಸಿದ ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ನಾನು ನನ್ನ ಸ್ವಭಾವಗಳಲ್ಲಿ ನಿಖರವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು. ಈ ಹೊಂದಾಣಿಕೆ ಪರಸ್ಪರರ ತೃಪ್ತಿಗಾಗಿ ಮತ್ತು ಇಬ್ಬರೂ ಸಮಾನವಾದ ಉದ್ದೇಶದ ಸಾಧನೆಗಾಗಿ ಜೊತೆಯಾಗಿರುವ ಕಾರಣಕ್ಕೆ, ಹಾಗು ಹೊರ ಜಗತ್ತಿನ ಎದುರು ಒಂದೇ ರೀತಿಯ ರಕ್ಷಣಾ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದರ ಸಲುವಾಗಿ. “ (7) ನಾವು ಸಲ್ಲಿವಾನ್ ನ ಹೇಳಿಕೆಯಲ್ಲಿನ ಭಾರ ಭಾಷೆಯನ್ನು ಸರಳ ಮಾಡಿಕೊಂಡು ಗ್ರಹಿಸಿದಾಗ, ಪ್ರೀತಿಯ ತಿರುಳು (essence) ಇರುವುದು ಸಹಯೋಗದ ಸ್ಥಿತಿಯಲ್ಲಿ, ಮತ್ತು ಈ ಸಹಯೋಗದಲ್ಲಿ ಅವರಿಬ್ಬರ ಭಾವನೆ ಹೇಗಿರುತ್ತದೆಯೆಂದರೆ, “ ಆಟದ ನಿಯಮಗಳಿಗೆ ಅನುಗುಣವಾಗಿ ನಾವು ಆಟ ಆಡುತ್ತೇವೆ, ನಮ್ಮ ನಮ್ಮ ಗೌರವಗಳನ್ನು ಕಾಯ್ದುಕೊಳ್ಳಲು ಮತ್ತು ಹಿರಿಮೆ ಹಾಗು ಯೋಗ್ಯತೆಯ ಭಾವನೆಗಳನ್ನು ಉಳಿಸಿಕೊಳ್ಳಲು. “

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply