ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ… (ಭಾಗ-5) | Art of Love #37

ಪ್ರೀತಿ ಎಂದರೆ ಪರಸ್ಪರರ ಲೈಂಗಿಕ ಸಂತೃಪ್ತಿ, ಪ್ರೀತಿ ಎಂದರೆ ಒಂದು ಟೀಂ ವರ್ಕ್, ಪ್ರೀತಿ ಎಂದರೆ ಒಂಟಿತನದಿಂದ ಪಾರಾಗಿ ಶರಣಾಗತಿ ಪಡೆಯುವ ಸ್ವರ್ಗದಂಥ ಜಾಗ, ಇವೆಲ್ಲ ಆಧುನಿಕ ಪಾಶ್ಚಾತ್ಯ ಸಮಾಜದಲ್ಲಿನ ಪ್ರೀತಿಯ ವಿಘಟನೆಯ ಸಾಮಾನ್ಯ ರೂಪಗಳು, ಸಮಾಜವೇ ಕಟ್ಟಿಕೊಂಡಂಥ ಪ್ರೀತಿಯ ವೈಪರೀತ್ಯಗಳಿಗೆ ನಿದರ್ಶನಗಳು. ಪ್ರೀತಿಯ ವೈಪರಿತ್ಯಗಳಿಗೆ (pathology of love) ಹಲವಾರು ವೈಯಕ್ತಿಕ ರೂಪಗಳಿವೆ, ಇವು ವ್ಯಕ್ತಿಯ ಪ್ರಜ್ಞಾಪೂರ್ವಕ ನರಳಾಟಕ್ಕೆ ಕಾರಣ ಮತ್ತು ಮನೋವೈದ್ಯರಷ್ಟೇ ಅಲ್ಲ ಬಹಳಷ್ಟು ಸಾಮಾನ್ಯ ಜನರು ಕೂಡ ಇವರನ್ನು ಒಂದೇ ರೀತಿಯಲ್ಲಿ ಮಾನಸಿಕ ರೋಗಿಗಳೆಂದು ಗುರುತಿಸುತ್ತಾರೆ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/07/17/love-51/

ಫ್ರಾಯ್ಡ್ ನ ಪ್ರೀತಿಯ ಪರಿಕಲ್ಪನೆ, ಹತ್ತೊಂಭತ್ತನೇ ಶತಮಾನದ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ, ಪಿತೃಪ್ರಧಾನ ಸಮಾಜದ ಪುರುಷನ ಅನುಭವಗಳ ವಿವರಣೆಯಾದರೆ, ಸಲ್ಲಿವಾನ್ ನದು ಇಪ್ಪತ್ತನೇ ಶತಮಾನದಲ್ಲಿ, ಪರಕೀಯ ಪ್ರಜ್ಞೆ (alienated) ಅನುಭವಿಸುತ್ತಿರುವ ಮಾರ್ಕೆಟಿಂಗ್ ವ್ಯಕ್ತಿತ್ವವೊಂದರ ಅನುಭವಗಳ ವಿವರಣೆ. ಇದು ತಮ್ಮ ನಡುವಿನ ಸಾಮಾನ್ಯ ಆಸಕ್ತಿಗಳನ್ನು ಒಂದುಗೂಡಿಸಿಕೊಂಡು, ಅನಾಥ ಪ್ರಜ್ಞೆಯಿಂದ ತುಂಬಿಕೊಂಡಿರುವ ಪ್ರತಿಕೂಲ ಜಗತ್ತಿನ ಎದುರು ತಮ್ಮ ಸ್ವಾರ್ಥಕ್ಕಾಗಿ ಒಂದಾಗಿರುವ ಇಬ್ಬರ ಕುರಿತಾದ ವಿವರಣೆ. ವಾಸ್ತವದಲ್ಲಿ ಅವನ ಆತ್ಮೀಯತೆಯ (intimacy) ಕುರಿತಾದ ವ್ಯಾಖ್ಯಾನ, ಒಂದಿಷ್ಟು ಕಾಮನ್ ಗುರಿಗಳನ್ನು ಸಾಧಿಸಿಕೊಳ್ಳಲು ಪ್ರತಿ ಸದಸ್ಯರು, ಇನ್ನೊಬ್ಬರು ಬಹಿರಂಗವಾಗಿ ವ್ಯಕ್ತಪಡಿಸಿರುವ ಅವಶ್ಯಕತೆಗಳ ಪೂರೈಕೆಗಾಗಿ ತಮ್ಮ ಸ್ವಭಾವ ಮತ್ತು ವರ್ತನೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಪರಸ್ಪರ ಸಹಕರಿಸುತ್ತಿರುವ ತಂಡದ ಮನೋಭಾವಕ್ಕೂ (team spirit) ತತ್ವಶಃ ಅನ್ವಯವಾಗುತ್ತದೆ. ( ಪ್ರೀತಿಯೆಂದರೆ ಇಬ್ಬರು ವ್ಯಕ್ತಿಗಳು ತಮ್ಮ ನಡುವಿನ ಅವ್ಯಕ್ತ ಭಾವನೆಗಳಿಗಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಎನ್ನುವ ವಿಷಯ ಪ್ರಚಲಿತದಲ್ಲಿರುವಾಗ ಇಲ್ಲಿ ಸಲ್ಲಿವಾನ್, ತಂಡದ ಸದಸ್ಯರು ಬಹಿರಂಗವಾಗಿ ವ್ಯಕ್ತಪಡಿಸಿದ ಭಾವನೆಗಳ ಬಗ್ಗೆ ಮಾತನಾಡುತ್ತಿರುವುದು ಬಹಳ ಮಹತ್ವಪೂರ್ಣ. )

ಪ್ರೀತಿ ಎಂದರೆ ಪರಸ್ಪರರ ಲೈಂಗಿಕ ಸಂತೃಪ್ತಿ, ಪ್ರೀತಿ ಎಂದರೆ ಒಂದು ಟೀಂ ವರ್ಕ್, ಪ್ರೀತಿ ಎಂದರೆ ಒಂಟಿತನದಿಂದ ಪಾರಾಗಿ ಶರಣಾಗತಿ ಪಡೆಯುವ ಸ್ವರ್ಗದಂಥ ಜಾಗ, ಇವೆಲ್ಲ ಆಧುನಿಕ ಪಾಶ್ಚಾತ್ಯ ಸಮಾಜದಲ್ಲಿನ ಪ್ರೀತಿಯ ವಿಘಟನೆಯ ಸಾಮಾನ್ಯ ರೂಪಗಳು, ಸಮಾಜವೇ ಕಟ್ಟಿಕೊಂಡಂಥ ಪ್ರೀತಿಯ ವೈಪರೀತ್ಯಗಳಿಗೆ ನಿದರ್ಶನಗಳು. ಪ್ರೀತಿಯ ವೈಪರಿತ್ಯಗಳಿಗೆ (pathology of love) ಹಲವಾರು ವೈಯಕ್ತಿಕ ರೂಪಗಳಿವೆ, ಇವು ವ್ಯಕ್ತಿಯ ಪ್ರಜ್ಞಾಪೂರ್ವಕ ನರಳಾಟಕ್ಕೆ ಕಾರಣ ಮತ್ತು ಮನೋವೈದ್ಯರಷ್ಟೇ ಅಲ್ಲ ಬಹಳಷ್ಟು ಸಾಮಾನ್ಯ ಜನರು ಕೂಡ ಇವರನ್ನು ಒಂದೇ ರೀತಿಯಲ್ಲಿ ಮಾನಸಿಕ ರೋಗಿಗಳೆಂದು ಗುರುತಿಸುತ್ತಾರೆ. ಪ್ರೀತಿಯ ವೈಪರಿತ್ಯದ ಇಂತಹ ಕೆಲವು ನಿದರ್ಶನಗಳನ್ನ ಈ ಕೆಳಗೆ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.

ನ್ಯೂರಾಟಿಕ್ ಪ್ರೀತಿಯ ಸ್ಥಿತಿಗೆ ಒಂದು ಬಹು ಮುಖ್ಯ ಕಾರಣ, ಪ್ರೇಮಿಗಳಲ್ಲಿ ಒಬ್ಬರು ಅಥವಾ ಇಬ್ಬರೂ ಇನ್ನೂ ತಮ್ಮ ತಂದೆ ಅಥವಾ ತಾಯಿಗೆ ಅಂಟಿಕೊಂಡಿರುವುದು ಮತ್ತು, ಅವರಿಗೆ ಒಮ್ಮೆ ತಮ್ಮ ತಂದೆ ಅಥವಾ ತಾಯಿಯ ಬಗ್ಗೆ ಇದ್ದಿರಬಹುದಾದ ಭಾವನೆಗಳನ್ನ, ನಿರೀಕ್ಷೆಗಳನ್ನ, ಭಯಗಳನ್ನ ವಯಸ್ಕರ ಬದುಕಿನ ತಮ್ಮ ಪ್ರೇಮಿಗೆ ವರ್ಗಾಯಿಸುವುದು; ಇಂಥ ವ್ಯಕ್ತಿಗಳು ತಮ್ಮ ಬಾಲ್ಯದಿಂದಾಚೆ ಭಾವನಾತ್ಮಕವಾಗಿ ಬೆಳೆದಿರುವುದೇ ಇಲ್ಲ, ಮತ್ತು ಇಂಥದೇ ಒಂದು ಸಂಬಂಧದ ಬೇಡಿಕೆಗಳನ್ನ ಅವರು ತಮ್ಮ ವಯಸ್ಕ ಬದುಕಿನಲ್ಲಿ ಸಂಗಾತಿಯಿಂದ ನಿರೀಕ್ಷಿಸುತ್ತಾರೆ. ಇಂಥ ಸಂಬಂಧಗಳಲ್ಲಿ ವ್ಯಕ್ತಿ ಇನ್ನೂ ತನ್ನ ಬಾಲ್ಯದ ಎರಡು ಅಥವಾ ಐದು ಅಥವಾ ಹನ್ನೆರಡನೇ ವಯಸ್ಸಿನ ಭಾವನಾತ್ಮಕತೆಯನ್ನೇ ಹೋಲುತ್ತಾನೆ ಆದರೆ ಶಾರೀರಿಕವಾಗಿ ಹಾಗು ಬೌದ್ಧಿಕವಾಗಿ ಅವನು ತನ್ನ ಈಗಿನ ವಯಸ್ಸಿನವರಾಗಿರುತ್ತಾನೆ. ಇನ್ನೂ ಹೆಚ್ಚಿನ ತೀವ್ರ ವೈಪರಿತ್ಯದ ಸಂದರ್ಭಗಳಲ್ಲಿ, ಅವರ ಇಂಥ ಭಾವನಾತ್ಮಕ ಅಪ್ರಬದ್ಧತೆ ಅವರು ಸಮಾಜದ ಮೇಲೆ ಬೀರಬಹುದಾದ ಪ್ರಭಾವದಲ್ಲಿ ಅಡಚಣೆಯನ್ನುಂಟು ಮಾಡಿದರೆ, ಅಷ್ಟೇನೂ ತೀವ್ರವಲ್ಲದ ಸಂದರ್ಭಗಳಲ್ಲಿ ಬಿಕ್ಕಟ್ಟು, ಅವರಿಬ್ಬರ ವೈಯಕ್ತಿಕ ಆತ್ಮೀಯ ಸಂಬಂಧಕ್ಕೆ ಮಾತ್ರ ಸೀಮಿತಗೊಂಡಿರುತ್ತದೆ.

ನ್ಯೂರಾಟಿಕ್ ಪ್ರೀತಿಯ ಸಂಬಂಧದಲ್ಲಿ, ತಂದೆ ಅಥವಾ ತಾಯಿ ಕೇಂದ್ರಿತ ವ್ಯಕ್ತಿತ್ವಗಳ ಕುರಿತಾದ ನಮ್ಮ ಹಿಂದಿನ ಚರ್ಚೆಗೆ ಇವತ್ತು ಬಹಳಷ್ಟು ಉದಾಹರಣೆಗಳು, ತಮ್ಮ ಭಾವನಾತ್ಮಕ ಬೆಳವಣಿಗೆಯಲ್ಲಿ ಇನ್ನೂ ತಮ್ಮ ತಾಯಿಯ ಜೊತೆಗಿನ ಶಿಶು ಸಹಜ ಸಂಬಂಧಕ್ಕೆ ಅಂಟಿಕೊಂಡಿರುವ ಗಂಡಸಿನವೇ ಆಗಿವೆ. ಇವರ ಸ್ವಭಾವ ಇನ್ನೂ ತಾಯಿಯ ಆರೈಕೆಯಲ್ಲಿರುವ ಮಗುವಿನ ಹಾಗೆಯೇ ಇದೆ, ಅವರು ಇನ್ನೂ ತಮ್ಮ ತಾಯಿಯ ಆಶ್ರಯ, ಪ್ರೀತಿ, ಕಾಳಜಿ, ಆತ್ಮೀಯತೆಯನ್ನು ಬಯಸುತ್ತಾರೆ. ಅವರಿಗೆ ಈಗಲೂ ತಾಯಿಯ ಬೇಷರತ್ ಪ್ರೀತಿ ಬೇಕು, ಈ ಪ್ರೀತಿ ಬೇರೆ ಯಾವ ಕಾರಣಕ್ಕೂ ಅಲ್ಲ, ಅವರಿಗೆ ಬೇಕು ಅನ್ನುವ ಕಾರಣಕ್ಕಾಗಿ ಅಷ್ಟೇ, ಅವರು ಆಕೆಯ ಮಗು ಎನ್ನುವ ಕಾರಣಕ್ಕೆ, ಅವರು ಅಸಹಾಯಕರು ಎನ್ನುವ ಕಾರಣಕ್ಕಾಗಿ ಮಾತ್ರ. ಇಂಥ ಗಂಡಸರು ಹೆಣ್ಣಿನಲ್ಲಿ ತಮ್ಮ ಕುರಿತಾದ ಪ್ರೀತಿಯನ್ನ ಉದ್ದೀಪಿಸುವಾಗ ಮತ್ತು ತಮ್ಮ ಉದ್ದೇಶದಲ್ಲಿ ಸಫಲರಾದ ನಂತರ ಕೂಡ, ಬಹುತೇಕ ಚಾರ್ಮಿಂಗ್ ಮತ್ತು ವಾತ್ಸಲ್ಯಮಯಿಗಳು. ಆದರೆ ಹೆಣ್ಣಿನ ಜೊತೆಗಿನ ಅವರ ಸಂಬಂಧ ( ಬಾಕಿ ಎಲ್ಲರೊಂದಿಗೆ ಕೂಡ) ಮೇಲು ಮೇಲಿನದು (superficial) ಮತ್ತು ಬೇಜವಾಬ್ದಾರಿಯಿಂದ ಕೂಡಿರುವಂಥದು. ಅವರ ಗುರಿ ಪ್ರೀತಿಸುವುದು ಅಲ್ಲ, ಪ್ರೀತಿಸಲ್ಪಡುವುದು. ಈ ಬಗೆಯ ಗಂಡಸರಲ್ಲಿ ಸಾಕಷ್ಟು ಅಹಂ ತುಂಬಿಕೊಂಡಿರುತ್ತದೆ ಮತ್ತು ತಮ್ಮ ಕುರಿತಾದ ವೈಭವೀಕೃತ ಕಲ್ಪನೆಗಳು ಕೂಡ. ತಮ್ಮ ಇಷ್ಟದ ಹೆಣ್ಣು ಸಿಕ್ಕಾಗ ಇಂಥವರು ಸುರಕ್ಷತೆಯನ್ನ ಅನುಭವಿಸುತ್ತಾರೆ, ತಮ್ಮನ್ನ ಜಗತ್ತಿನ ಅತ್ಯಂತ ಸುಖಿ ಮನುಷ್ಯ ಎಂದುಕೊಳ್ಳುತ್ತಾರೆ, ಇವರು ಬಹು ಸಹಜವಾಗಿ ತಮ್ಮ ಚಾರ್ಮ್ ಮತ್ತು ವಾತ್ಸಲ್ಯವನ್ನು ಪ್ರದರ್ಶನ ಮಾಡುವುದರಿಂದ ಬಹುತೇಕ ಮೋಸಗಾರರೂ ಆಗಿರುತ್ತಾರೆ. ಆದರೆ ಯಾವಾಗ ಹೆಣ್ಣು, ಸ್ವಲ್ಪ ಸಮಯದ ನಂತರ ತಮ್ಮ ಭ್ರಮಾತ್ಮಕ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸುವುದಿಲ್ಲವೋ ಆಗ, ಅಸಹನೆಗಳು, ಘರ್ಷಣೆಗಳು ಹುಟ್ಟಿಕೊಳ್ಳಲು ಶುರುವಾಗುತ್ತವೆ. ಹೆಣ್ಣು ಅವರನ್ನು ಸದಾಕಾಲ ಮೆಚ್ಚದಿರುವಾಗ, ಅವಳು ತನ್ನ ಸ್ವಂತ ಬದುಕಿನ ಆಕಾಂಕ್ಷೆಗಳನ್ನು ಹೇಳಿಕೊಂಡಾಗ, ಅವಳು ಪ್ರೀತಿಯನ್ನ, ಸುರಕ್ಷತೆಯನ್ನ ಬಯಸಿದಾಗ, ಕೆಲವೊಂದು ವಿಪರೀತದ ಸನ್ನಿವೇಶಗಳಲ್ಲಿ ಅವಳು, ಅವನ ಇನ್ನೊಂದು ಹೆಣ್ಣಿನೊಡನೆಯ ಪ್ರೇಮಸಂಬಂಧಕ್ಕೆ ಒಪ್ಪಿಗೆ ಸೂಚಿಸದಿದ್ದಾಗ, ಗಂಡಸು ತೀವ್ರವಾಗಿ ಘಾಸಿಗೊಳಗಾಗುತ್ತಾನೆ, ನಿರಾಶೆಯನ್ನು ಅನುಭವಿಸುತ್ತಾನೆ, ಮತ್ತು ಸಹಜವಾಗಿ ತನ್ನ ಭಾವನೆಗಳನ್ನ ಸಮರ್ಥಿಕೊಳ್ಳಲು, ಹೆಣ್ಣು ತನ್ನನ್ನು ಪ್ರೀತಿಸುತ್ತಿಲ್ಲವೆಂದೂ, ಆಕೆ ಸ್ವಾರ್ಥಿಯೆಂದೂ, ದಬ್ಬಾಳಿಕೆಯ ಸ್ವಭಾವದವಳೆಂದೂ ಆರೋಪ ಮಾಡುತ್ತಾನೆ. ಪ್ರೀತಿಸುವ ತಾಯಿಯ ತನ್ನ ಮುದ್ದು ಮಗುವನ್ನ ಕುರಿತಾದ ಪ್ರೀತಿಗಿಂತ ಸ್ವಲ್ಪ ಕಡಿಮೆ ಆಸಕ್ತಿಯನ್ನು ಹೆಂಡತಿ ತೋರಿಸಿದರೂ, ಅದನ್ನು ಅವಳ ಪ್ರೀತಿಯಲ್ಲಿನ ಕೊರತೆ ಎಂದು ವ್ಯಾಖ್ಯಾನ ಮಾಡಲಾಗುತ್ತದೆ. ಇಂಥ ಗಂಡಸರು ತಮ್ಮ ವಾತ್ಸಲ್ಯಮಯ ವರ್ತನೆಯನ್ನ ಮತ್ತು ಇತರರನ್ನ ಮೆಚ್ಚಿಸಬಲ್ಲ ತಮ್ಮ ಸಾಮರ್ಥ್ಯವನ್ನ , ಬಯಕೆಯನ್ನ, ನಿಜವಾದ ಪ್ರೀತಿ ಎಂದು ಗೊಂದಲ ಮಾಡಿಕೊಂಡು, ತಮಗೆ ಸಂಬಂಧದಲ್ಲಿ ಅನ್ಯಾಯ ಮಾಡಲಾಗಿದೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅವರು ತಮ್ಮನ್ನು ಮಹಾ ಪ್ರೇಮಿಗಳೆಂದು ಬಿಂಬಿಸಿಕೊಳ್ಳುತ್ತ, ಕಲ್ಪಿಸಿಕೊಳ್ಳುತ್ತ, ತಮ್ಮ ಸಂಗಾತಿಯ ವರ್ತನೆಯನ್ನ ಕೃತಘ್ನತೆ ಎಂದು ತೀವ್ರವಾಗಿ ಆಕ್ಷೇಪಿಸುತ್ತಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply