ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-6) : Art of love #38

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ- ಮುಂದುವರಿದ ಭಾಗ । ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/07/23/love-52/

ಕೆಲ ಅಪರೂಪದ ಸಂದರ್ಭಗಳಲ್ಲಿ ಮಾತ್ರ ತಾಯಿ ಕೇಂದ್ರಿತ ವ್ಯಕ್ತಿ, ಯಾವ ಗಂಭೀರ ತೊಂದರೆಗಳಿಲ್ಲದೆ ಸಂಬಂಧಗಳನ್ನು ನಿಭಾಯಿಸಬಲ್ಲ. ಒಂದು ವೇಳೆ ತಾಯಿ ಅವನನ್ನು ಅತೀ ಕಾಳಜಿಯಿಂದ ( ಬಹುಶಃ ಆಕೆ ಜೋರು ಜಬರದಸ್ತಿನವಳಾಗಿದ್ದರೂ ಅವನಿಗೆ ಯಾವ ತೊಂದರೆ ಆಗದ ಹಾಗೆ ) ಪ್ರೀತಿಸುತ್ತಿದ್ದರೆ, ಅವನಿಗೆ ತನ್ನ ತಾಯಿಯ ಸ್ವಭಾವವನ್ನೇ ಹೋಲುವಂಥ ಸಂಗಾತಿ ಸಿಕ್ಕಾಗ, ಅವನ ವಿಶೇಷ ಪ್ರತಿಭೆ ಮತ್ತು ಕೌಶಲ್ಯಗಳು ಅವನಿಗೆ ಅವನ ಚಾರ್ಮ್ ಬಳಸಲು ಅವಕಾಶ ಮಾಡಿಕೊಟ್ಟಾಗ ಮತ್ತು ಅವನ ಚಾರ್ಮ್ ಸಂಗಾತಿಯ (ಮತ್ತು ಇತರರ) ಮೆಚ್ಚುಗೆಗೆ ಕಾರಣವಾದಾಗ (ಕೆಲವೊಮ್ಮೆ ಯಶಸ್ವಿ ರಾಜಕಾರಣಿಗಳ ವಿಷಯದಲ್ಲಿ ಆಗುವಂತೆ ), ಅವನು ಸಾಮಾಜಿಕ ಸಂದರ್ಭದಲ್ಲಿ ಯಶಸ್ವಿ (well adjusted) ಎನಿಸಿಕೊಂಡರೂ ಮೇಲಿನ ಹಂತದ ಪ್ರಬುದ್ಧತೆಯನ್ನ (higher level of maturity) ಸಾಧಿಸುವಲ್ಲಿ ವಿಫಲನಾಗಿರುತ್ತಾನೆ. ಆದರೆ ಹೆಚ್ಚು ಅನುಕೂಲಕರವಲ್ಲದ ಸಂದರ್ಭಗಳಲ್ಲಿ (ಇಂಥ ಸಂದರ್ಭಗಳೇ ಹೆಚ್ಚು) ಅವನ ಸಾಮಾಜಿಕ ಬದುಕು ಅಲ್ಲದಿದ್ದರೂ, ಅವನ ಲವ್ ಲೈಫ್ ತೀವ್ರ ನಿರಾಶಾದಾಯಕವಾಗಿರುತ್ತದೆ ; ಇಂಥ ವ್ಯಕ್ತಿಯನ್ನು ಅವನ ಪಾಡಿಗೆ ಅವನನ್ನು ಬಿಟ್ಟು ಬಿಟ್ಟಾಗ ಬಿಕ್ಕಟ್ಟುಗಳು , ಸಂಘರ್ಷಗಳು, ಮತ್ತೆ ಮತ್ತೆ ತೀವ್ರಗೊಳ್ಳುವ ಆತಂಕ (anxiety) ಹಾಗು ಖಿನ್ನತೆ (depression) ಹುಟ್ಟಿಕೊಳ್ಳುತ್ತವೆ.

ಇನ್ನೂ ತೀವ್ರವಾದ ರೋಗಗ್ರಸ್ತ ಸ್ಥಿತಿಯಲ್ಲಿ, ತಾಯಿಯೊಡನೆಯ ಅವನ ಅವಲಂಬನೆ ಹೆಚ್ಚು ಆಳವಾಗಿರುತ್ತದೆ ಮತ್ತು ಹೆಚ್ಚು ಅತಾರ್ಕಿಕವಾಗಿರುತ್ತದೆ. ಈ ಹಂತದ ವ್ಯಕ್ತಿಯ ಸ್ಥಿತಿಯನ್ನು ಸಾಂಕೇತಿಕವಾಗಿ ಹೇಳುವುದಾದರೆ ಅವನ ಬಯಕೆ, ತಾಯಿಯ ಕಾಯುವ ತೋಳುಗಳಿಗೆ ಮರಳುವುದಲ್ಲ, ಅವಳ ಹಾಲು ತುಂಬಿದ ಮೊಲೆಗಳಿಗೆ ಮರಳುವುದಲ್ಲ ಬದಲಾಗಿ, ಅವನ ಆಳದ ಬಯಕೆ ಎಲ್ಲವನ್ನೂ ಸ್ವೀಕರಿಸುವ, ಎಲ್ಲವನ್ನೂ ನಾಶ ಮಾಡುವ ಅವಳ ಗರ್ಭಕೋಶಕ್ಕೆ ಮರಳುವುದು. ಗರ್ಭದಿಂದ ಹೊರಬಂದು ಹೊರಜಗತ್ತಿನಲ್ಲಿ ಬದುಕುವುದು ಪ್ರಕೃತಿ ಸಹಜ ಗುಣಲಕ್ಷಣವಾದರೆ, ಹೊರಜಗತ್ತಿನಿಂದ ವಿಮುಖರಾಗಿ ಮತ್ತೆ ಗರ್ಭಕೋಶದೆಡೆ ಆಕರ್ಷಿತರಾಗುವುದು, ಗರ್ಭದೊಳಗೆ ಸೆಳೆಯಲ್ಪಡುವುದು ಮನೋರೋಗದ ಲಕ್ಷಣವಾಗಿದೆ. ಈ ಸ್ಥಿತಿ ಸಾಧ್ಯವಾಗುವುದು ತಾಯಿ, ತನ್ನ ಮಕ್ಕಳನ್ನು ನುಂಗಿ ಬಿಡುವ ರೀತಿಯಲ್ಲಿ, ನಾಶ ಮಾಡಿಬಿಡುವ ಉತ್ಕಟತೆಯಲ್ಲಿ ಪ್ರೀತಿಸಿದಾಗ ಮಾತ್ರ. ಕೆಲವೊಮ್ಮೆ ಪ್ರೀತಿಯ ಹೆಸರಲ್ಲಿ, ಕೆಲವೊಮ್ಮೆ ಕರ್ತವ್ಯದ ಹೆಸರಲ್ಲಿ ತಾಯಿ, ತನ್ನ ಶಿಶು ಮಗುವನ್ನ, ಹರೆಯದ ಮಗುವನ್ನ, ವಯಸ್ಕ ಮಗುವನ್ನ ತನ್ನೊಳಗೇ ಇಟ್ಟುಕೊಳ್ಳಲು ಬಯಸುತ್ತಾಳೆ; ತನ್ನ ಮೂಲಕ ಹೊರತಾಗಿ ಅವನಿಗೆ ಉಸಿರಾಡುವುದು ಸಾಧ್ಯವಾಗಬಾರದು, ಕೇವಲ ಮೇಲುಮೇಲಿನ ಲೈಂಗಿಕ ಮಟ್ಟವನ್ನ ಹೊರತುಪಡಿಸಿ (superficial sexual level) ಅವನಿಗೆ ಪ್ರೀತಿಸುವುದು ಸಾಧ್ಯವಾಗಬಾರದು ಎನ್ನುವ ಹತೋಟಿಗಾಗಿ ಹಾತೊರೆಯುತ್ತಾಳೆ. ಇದು ಬೇರೆಲ್ಲ ಹೆಣ್ಣುಗಳನ್ನ ಅವಮಾನಿಸುವ ರೀತಿ, ಅವನು ಮುಕ್ತನಾಗಿ, ಸ್ವತಂತ್ರನಾಗಿ ಬದುಕಬಾರದು,ಅಸಹಾಯಕನಂತೆ, ಅಪರಾಧಿಯಂತೆ ಬದುಕಬೇಕು ಎನ್ನುವ ರೀತಿ.

ತಾಯಿಯ ಈ ವಿನಾಶಕಾರಿಯಾದ, ಪೂರ್ತಿಯಾಗಿ ಆವರಿಸಿಕೊಳ್ಳುವ ಸ್ವಭಾವ, ತಾಯ್ತನದ ಋಣಾತ್ಮಕ ಅಂಶವಾಗಿದೆ. ತಾಯಿ ಬದುಕನ್ನ ಕಟ್ಟಿಕೊಡಬಲ್ಲಳು, ಮತ್ತು ಬದುಕನ್ನ ಕಸಿದುಕೊಳ್ಳಬಲ್ಲಳು ಕೂಡ. ರಕ್ಷಿಸುವವಳೂ ಅವಳೇ, ನಾಶ ಮಾಡುವವಳೂ ಅವಳೇ; ಆಕೆ ಪ್ರೀತಿಯ ಪವಾಡಗಳನ್ನು ಮಾಡಬಲ್ಲವಳು ಮತ್ತು ಯಾರೂ ನಿಮ್ಮನ್ನು ತಾಯಿಯಷ್ಟು ಘಾಸಿಗೊಳಿಸಲಾರರು. ಧಾರ್ಮಿಕ ಪ್ರತಿಮೆಗಳಲ್ಲಿ ( ಹಿಂದೂ ದೇವತೆ ಕಾಳಿಯ ವಿಷಯದಲ್ಲಿ ಆಗುವಂತೆ) ಹಾಗು ಕನಸುಗಳ ಸಾಂಕೇತಿಕತೆಯಲ್ಲಿ ತಾಯಿಯ ಕುರಿತಾದ ಈ ವೈರುಧ್ಯದ ಅಂಶಗಳು ಬಿಂಬಿತವಾಗಿವೆ.

ಮಗು ತಾಯಿಗಿಂತ ತಂದೆಯನ್ನು ಹೆಚ್ಚು ಹಚ್ಚಿಕೊಂಡಿದ್ದರೆ, ಬೇರೆ ರೀತಿಯ ರೋಗಗ್ರಸ್ತ ಮಾನಸಿಕ ಸ್ಥಿತಿಯನ್ನ ನಾವು ಗಮನಿಸಬಹುದು.

ಪ್ರೀತಿಯಲ್ಲಿ ಅನಾಸಕ್ತಳೂ, ಉದಾಸೀನ ಸ್ವಭಾವದವಳೂ ಆದ ತಾಯಿಯ ಉದಾಹರಣೆಯಲ್ಲಿ , ತಂದೆಯಾದವನು (ಆಂಶಿಕವಾಗಿ ತಾಯಿಯ ಈ ಸ್ವಭಾವದ ಕಾರಣವಾಗಿ ) ತನ್ನ ಎಲ್ಲ ವಾತ್ಸಲ್ಯ ಮತ್ತು ಆಸಕ್ತಿಯನ್ನ ಮಗುವಿನ ಮೇಲೆ ಕೇಂದ್ರೀಕರಿಸುತ್ತಾನೆ. ಆತ “ ಒಳ್ಳೆಯ ತಂದೆ “ ಆದರೆ ಅದೇ ಸಮಯದಲ್ಲಿ ಅಧಿಕಾರ ಚಲಾಯಿಸುವ (authoritarian) ಸ್ವಭಾವದವ. ಮಗುವಿನ ನಡತೆ ತನಗೆ ಇಷ್ಟವಾದಾಗಲೆಲ್ಲ ಅವನು, ಮಗುವನ್ನ ಹೊಗಳುತ್ತಾನೆ, ಮಗುವಿಗೆ ಉಡುಗೊರೆಗಳನ್ನ ಕೊಡುತ್ತಾನೆ, ವಾತ್ಸಲ್ಯದಿಂದ ಮಗುವನ್ನ ನಡೆಸಿಕೊಳ್ಳುತ್ತಾನೆ ; ಆದರೆ ಮಗುವಿನ ನಡತೆ ತನಗೆ ಇಷ್ಟವಾಗದಿರುವ ಸಂದರ್ಭದಲ್ಲಿ, ಅವನು ತನ್ನ ಪ್ರೀತಿಯನ್ನ ಹಿಂತೆಗೆದುಕೊಳ್ಳುತ್ತಾನೆ, ಅಥವಾ ಮಗುವನ್ನ ಶಿಕ್ಷಿಸುತ್ತಾನೆ. ಹೀಗಾದಾಗ ತಂದೆಯ ವಾತ್ಸಲ್ಯವೊಂದನ್ನ ಬಿಟ್ಟರೆ ಬೇರೆ ಏನೂ ಲಭ್ಯವಿರದ ಮಗು, ತಂದೆಯ ಗುಲಾಮನಂತೆ ವರ್ತಿಸಲು ಶುರು ಮಾಡುತ್ತದೆ. ಮಗುವಿನ ಬದುಕಿನ ಪ್ರಮುಖ ಉದ್ದೇಶವೇ ತನ್ನ ತಂದೆಯನ್ನ ಮೆಚ್ಚಿಸುವುದು , ಇದರಲ್ಲಿ ಸಫಲವಾದಾಗ ಮಗುವಿಗೆ ಖುಶಿಯಾಗುತ್ತದೆ, ಮಗು ಸುರಕ್ಷತೆಯ ಭಾವವನ್ನ, ತೃಪ್ತಿಯ ಭಾವವನ್ನ ಅನುಭವಿಸುತ್ತದೆ. ಆದರೆ ಮಗು, ತಾನು ತಪ್ಪುಗಳನ್ನ ಮಾಡಿದಾಗ, ವಿಫಲ ಆದಾಗ, ಅಥವಾ ತನ್ನ ತಂದೆಯನ್ನ ಮೆಚ್ಚಿಸುವುದರಲ್ಲಿ ಯಶಸ್ವಿಯಾಗದಾಗ, ಕುಗ್ಗಿ ಹೋಗುತ್ತದೆ, ಪ್ರೀತಿಯ ಕೊರತೆಯನ್ನು ಅನುಭವಿಸುತ್ತದೆ, ಬಹಿಷ್ಕೃತ ಭಾವವನ್ನು ಅನುಭವಿಸುತ್ತದೆ. ಇಂಥ ಮಗು ತನ್ನ ಮುಂದಿನ ಜೀವನದಲ್ಲಿ ತನ್ನ ತಂದೆಯಂಥ ವ್ಯಕ್ತಿಯನ್ನ ಹುಡುಕಿಕೊಂಡು ಅವನಿಗೆ ಅಂಟಿಕೊಂಡೇ ಇರುವ ಪ್ರಯತ್ನ ಮಾಡುತ್ತದೆ. ತನ್ನ ತಂದೆಯನ್ನು ಮೆಚ್ಚಿಸುವಲ್ಲಿ ಮಗು ಯಶಸ್ವಿಯಾಗುತ್ತದೆಯೋ ಇಲ್ಲವೋ ಎನ್ನುವುದರ ಮೇಲೆ ಅದರ ಮುಂದಿನ ಬದುಕು ಎಷ್ಟು ಏಳು ಬೀಳುಗಳಿಂದ ಕೂಡಿರುತ್ತದೆ ಎನ್ನುವುದು ನಿರ್ಧರಿತವಾಗಿರುತ್ತದೆ. ಇಂಥ ವ್ಯಕ್ತಿಗಳು ತಮ್ಮ ಸಾಮಾಜಿಕ ಉದ್ಯೋಗ ಕ್ಷೇತ್ರಗಳಲ್ಲಿ ಬಹುತೇಕ ಯಶಸ್ವಿಗಳಾಗಿರುತ್ತಾರೆ. ಅವರು ಆಯ್ಕೆ ಮಾಡಿಕೊಂಡಿರುವ ತಂದೆಯ ಇಮೇಜ್ ಗೆ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ತಿಳುವಳಿಕೆಯಿದ್ದಾಗ, ಇಂಥ ವ್ಯಕ್ತಿಗಳು ತಮ್ಮ ಆತ್ಮಸಾಕ್ಷಿಗೆ ಬದ್ಧರಾಗಿರುತ್ತಾರೆ, ವಿಶ್ವಾಸಾರ್ಹರಾಗಿರುತ್ತಾರೆ ಮತ್ತು ಕುತೂಹಲಿಗಳಾಗಿರುತ್ತಾರೆ, ಆದರೆ ಹೆಂಗಸರೊಂದಿಗಿನ ತಮ್ಮ ಸಂಬಂಧದಲ್ಲಿ ಮಾತ್ರ ಅನಾಸಕ್ತರಾಗಿರುತ್ತಾರೆ. ಹೆಣ್ಣು ಅವರ ಜೀವನದ ಕೇಂದ್ರವಲ್ಲ ; ಅವರು ಹೆಣ್ಣಿನ ಬಗ್ಗೆ ಕೊಂಚ ಅನಾದರ ಉಳ್ಳವರಾಗಿರುತ್ತಾರೆ, ತನ್ನ ಪುಟ್ಟ ಮಗಳಿಗಾಗಿ ತಂದೆಗೆ ಇರಬಹುದಾದ ಕಾಳಜಿಯ ಮುಖವಾಡದಲ್ಲಿ ಅವರು ಅವಳ ಮೇಲೆ ಹತೋಟಿ ಹೊಂದಲು ಬಯಸುತ್ತಾರೆ. ಮೊದಲು ತಮ್ಮ ಪುರುಷಲಕ್ಷಣಗಳಿಂದ (masculine quality) ಅವರು ಹೆಣ್ಣನ್ನು ಒಲಿಸಿಕೊಂಡಿರಬಹುದು ಆದರೆ ಯಾವಾಗ ಅವರು ಮದುವೆಯಾದ ಹೆಣ್ಣಿಗೆ, ತನ್ನ ಗಂಡನ ಬದುಕಿನಲ್ಲಿ ತನ್ನ ಸ್ಥಾನ ಗೌಣ ಎಂದು ಗೊತ್ತಾಗುತ್ತದೆಯೋ, ತಾನು ತನ್ನ ಗಂಡನ ಬದುಕಿನಲ್ಲಿ ಸದಾ ಮಹತ್ವದ ಸ್ಥಾನ ಪಡೆದಿರುವ ಅವನ ತಂದೆಯ ಸ್ಥಾನದ ಪ್ರಾಥಮಿಕ ಪ್ರೀತಿಗೆ ಸೆಕಂಡರಿಯಾಗಿ ಇರಬೇಕಾಗುತ್ತದೆ ಎನ್ನುವುದು ಗೊತ್ತಾಗುತ್ತದೆಯೋ ( ಅಕಸ್ಮಾತ್ ಹೆಂಡತಿಯೂ ತನ್ನ ತಂದೆಗೆ ಹೆಚ್ಚು ಅಂಟಿಕೊಂಡಿದ್ದರೆ, ಆಗ ಅವಳು ಗಂಡನೊಂದಿಗೆ ಖುಶಿಯಿಂದ, ವಿಲಕ್ಷಣ ಮಗುವಿನೊಂದಿಗೆ ತಾಯಿ ಬದುಕುವಂತೆ ಬದುಕುತ್ತಾಳೆ) ಆಗ ಅವರು, ಹೆಚ್ಚು ಹೆಚ್ಚು ನಿರಾಶರಾಗುತ್ತ ಹೋಗುತ್ತಾರೆ.


About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply