ಅರೆಬರೆ ಪಂಡಿತರ ಸಮಸ್ಯೆ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ ಭರ್ತೃಹರಿಯ ನೀತಿ ಶತಕದಿಂದ…


ಅಜ್ಞಃ ಸುಖಮಾರಾಧ್ಯಃ ಸುಖತರಮಾರಧ್ಯತೇ ವಿಶೇಷಜ್ಞಃ |
ಜ್ಞಾನಲವದುರ್ವಿದಗ್ಧಂ ಬ್ರಹ್ಮಾsಪಿ ನರಂ ನ ರಂಜಯತಿ ||

ಅರ್ಥ : ದಡ್ಡರನ್ನು ತಿದ್ದುವುದು ಸುಲಭ. ಬುದ್ಧಿವಂತರು ಕೂಡ ತಮ್ಮ ತಪ್ಪುಗಳನ್ನು ಸುಲಭವಾಗಿ ತಿದ್ದಿಕೊಳ್ಳುತ್ತಾರೆ. ದಡ್ಡರೂ ಅಲ್ಲದ, ಬುದ್ಧಿವಂತರೂ ಅಲ್ಲದ ಅರೆಬರೆ ತಿಳಿವಳಿಕೆ ಉಳ್ಳವರನ್ನು ತಿದ್ದುವುದೇ ಬಹಳ ದೊಡ್ಡ ಸಮಸ್ಯೆ!

ತಾತ್ಪರ್ಯ : ಮಂದ ಬುದ್ಧಿಯವರು ಏನಾದರೂ ತಪ್ಪು ಮಾಡಿದಾಗ, ಅಥವಾ ಯಾವುದಾದರೂ ವಿಷಯದ ಬಗ್ಗೆ ತಿಳಿದಿರದೆ ಇದ್ದಾಗ, ಅವರಿಗೆ ಸರಿಯಾದುದನ್ನು ಹೇಳಿದರೆ ಅದನ್ನು ಅರಿಯುವ ಪ್ರಯತ್ನ ಮಾಡುತ್ತಾರೆ. ಅಂಥವರಿಗೆ ತಿಳಿಹೇಳುವುದು ಸುಲಭ.
ಹಾಗೆಯೇ ಪ್ರಜ್ಞಾವಂತರು, ಬುದ್ಧಿವಂತರು ತಮ್ಮ ತಪ್ಪುಗಳನ್ನು, ತಮಗೆ ತಿಳಿದಿಲ್ಲದ ವಿಷಯಗಳನ್ನು ತಾವಾಗಿಯೇ ಕಲಿತುಕೊಳ್ಳುವಷ್ಟು ಶಕ್ತರಿರುತ್ತಾರೆ. ಹೀಗಾಗಿ ಅವರ ಸಮಸ್ಯೆಯೂ ಇಲ್ಲ.
ಆದರೆ ಅರೆಬರೆ ಪಂಡಿತರು ಇತ್ತ ತಿಳಿದವರ ಮಾತನ್ನೂ ಕೇಳುವುದಿಲ್ಲ. ಅತ್ತ ತಾವಾಗಿಯೇ ತಿಳಿಯುವಷ್ಟು ಶಕ್ತರೂ ಆಗಿರುವುದಿಲ್ಲ. ಸಮಸ್ಯೆ ಉಂಟಾಗುವುದು ಅಂಥವರಿಂದಲೇ.

ಕಲಿಕೆ : ಭರ್ತೃಹರಿಯ ಈ ಮಾತು ಸಾರ್ವಕಾಲಿಕ. ನಮ್ಮ ಕಾಲಮಾನಕ್ಕೂ ಸೂಕ್ತವಾಗಿದೆ. ನಾವು ಬಹುತೇಕರು ಅಂತಹಾ ಅರೆಪಂಡಿತರೇ ಆಗಿದ್ದೇವೆ. ನಮಗೆ ಸರಿಯಾದುದನ್ನು ತಿಳಿಯುವುದರಲ್ಲಿ ಆಸಕ್ತಿ ಇಲ್ಲ. ನಾವು ಎಲ್ಲವನ್ನೂ ಬಲ್ಲವರೆಂದು ಭಾವಿಸಿಕೊಂಡಿರುತ್ತೇವೆ. ನಮ್ಮ ತಪ್ಪು ಕಲ್ಪನೆಯು ವೈಯಕ್ತಿಕವಾಗಿ ನಮ್ಮನ್ನು ಮಾತ್ರವಲ್ಲ, ನಮ್ಮ ಸುತ್ತಲಿನ ಸಮಾಜವನ್ನೂ ಹಾಳು ಮಾಡುತ್ತದೆ.
ಆದ್ದರಿಂದ, ನಮ್ಮ ಯೋಗ್ಯತೆ ಏನಿದೆ, ನಮ್ಮ ಬುದ್ಧಿವಂತಿಕೆ ಮಟ್ಟ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು. ಸರಿಯಾದುದನ್ನು ಬಲ್ಲವರಿಂದ ತಿಳಿದು ತಿದ್ದಿಕೊಳ್ಳಲು ಪ್ರಯತ್ನಿಸಬೇಕು

Leave a Reply