ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-7) : Art of love #39

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ – ಮುಂದುವರಿದ ಭಾಗ । ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/07/24/love-53/

ಪರಸ್ಪರ ಪ್ರೀತಿಸದ ತಂದೆ-ತಾಯಿ, ತಮ್ಮ ನಡುವಿನ ಪ್ರೀತಿಯ ಅನುಪಸ್ಥಿತಿಯನ್ನ, ಅತೃಪ್ತಿಯನ್ನ, ಜಗಳದ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲದಂಥಹ ಪರಿಸ್ಥಿತಿಯಲ್ಲಿ ಹುಟ್ಟಿಕೊಳ್ಳುವ ವಿಭಿನ್ನ ಪೋಷಕ ಸಂಬಂಧಿ ಸ್ಥಿತಿಯ ಹಿನ್ನೆಲೆಯ ವ್ಯಕ್ತಿಯ ಪ್ರೀತಿ, ಅತ್ಯಂತ ಸಂಕೀರ್ಣವಾದ ಮಾನಸಿಕ ಗೊಂದಲದಿಂದ ಕೂಡಿರುತ್ತದೆ. ಪ್ರೀತಿಯ ಅನುಪಸ್ಥಿತಿಯ ಕಾರಣವಾಗಿ ಉಂಟಾಗಿರುವ “ದೂರ” ಅವರ ಮಕ್ಕಳೊಡನೆಯ ಅವರ ಸಂಬಂಧದಲ್ಲಿ ಅಸಹಜತೆಯನ್ನ ನಿರ್ಮಾಣಮಾಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಪುಟ್ಟ ಹುಡುಗಿಗೆ “ ಎಲ್ಲ ಸರಿಯಾಗಿದೆ “ಎನ್ನುವ ಪರಿಸ್ಥಿತಿಯ ಅನುಭವವಾಗುತ್ತಿರುವಾಗಲೂ, ಅವಳ ತಂದೆ-ತಾಯಿಯೊಡನೆ ಹತ್ತಿರದ ಸಂಪರ್ಕ, ಆತ್ಮೀಯತೆ ಸಾಧ್ಯವಾಗಿರುವುದಿಲ್ಲ, ಹಾಗಾಗಿ ಆ ಹುಡುಗಿ ಭಯಗ್ರಸ್ತಳಾಗುತ್ತಾಳೆ, ದಿಕ್ಕು ತೋಚದವಳಂತಾಗಿರುತ್ತಾಳೆ. ಅವಳಿಗೆ ತನ್ನ ತಂದೆ ತಾಯಿಯರ ಭಾವನೆಗಳ ಬಗ್ಗೆ, ಅವರ ಆಲೋಚನೆಗಳ ಬಗ್ಗೆ ಖಾತ್ರಿ ಇರುವುದಿಲ್ಲ ; ಅವಳ ಸುತ್ತಲಿನ ವಾತಾವರಣದಲ್ಲಿ ಯಾವಾಗಲೂ ಒಂದು ನಿಗೂಢತೆ, ಒಂದು ಅಜ್ಞಾತ (Unknown) ಭಾವ ತುಂಬಿಕೊಂಡಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಅವಳು ತನ್ನ ಸುತ್ತ ತಾನೇ ಕಟ್ಟಿಕೊಂಡಿರುವ ಜಗತ್ತಿನೊಳಗೆ, ಹಗಲುಗನಸುಗಳಲ್ಲಿ ಬಂಧಿಯಾಗಿಬಿಡುತ್ತಾಳೆ, ತನ್ನ ಸುತ್ತಲಿನವರಿಂದ ದೂರವಾಗಿಬಿಡುತ್ತಾಳೆ, ಮತ್ತು ಅವಳ ಇದೇ ವರ್ತನೆ, ಮನೋಭಾವ ಅವಳ ಮುಂದಿನ ಲವ್ ಲೈಫಿನಲ್ಲೂ ಮುಂದುವರೆಯುತ್ತದೆ.

ಮುಂದೆ ಅವಳ ಇಂಥ ಹಿಂಜರಿಕೆಯ (withdrawal) ವರ್ತನೆ ಅವಳಲ್ಲಿ, ತೀವ್ರ ಆತಂಕದ ಬೆಳವಣಿಗೆಗೆ, ಈ ಜಗತ್ತಿನ ಬೇರುಗಳಿಗೆ ತಾನು ಗಟ್ಟಿಯಾಗಿ ಅಂಟಿಕೊಂಡಿಲ್ಲ ಎನ್ನುವ ಭಾವಕ್ಕೆ ಕಾರಣವಾಗುತ್ತದೆ.ಮತ್ತು ಅವಳ ಇಂಥ ಮನೋಭಾವ ಅವಳಲ್ಲಿ ಸ್ವ ಪೀಡನೆಯ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ, ಹಾಗು ಅವಳು ಸ್ವ ಪೀಡನೆಯೊಂದೇ ತನ್ನ ತೀವ್ರ ಎಕ್ಸೈಟಮೆಂಟ್ ನ ಅನುಭವಕ್ಕೆ ದಾರಿ ಎಂದು ನಂಬತೊಡಗುತ್ತಾಳೆ. ಬಹುತೇಕ ಇಂಥ ಹೆಂಗಸರು ತಮ್ಮ ಗಂಡ ತಮ್ಮೊಂದಿಗೆ ಸಹಜ ತಿಳುವಳಿಕೆಯ ಮನುಷ್ಯನಂತೆ ವರ್ತಿಸುವುದಕ್ಕಿಂತ ಜೋರಾಗಿ ಜಗಳಾಡುವುದನ್ನ, ಕೂಗಾಡುವುದನ್ನ ಬಯಸುತ್ತಾರೆ, ತಮ್ಮ ಗಂಡನ ಇಂಥ ವರ್ತನೆ ಕೊನೆಪಕ್ಷ ತಮ್ಮ ಮೇಲಿನ ಒತ್ತಡದ ಭಾರವನ್ನ, ಆತಂಕದ ಹೊರೆಯನ್ನ ಕಡಿಮೆ ಮಾಡುತ್ತದೆ ಎಂದು ನಂಬುತ್ತಾರೆ; ಕೆಲವೊಮ್ಮೆ ಇಂಥ ಹೆಂಗಸರು ತಮ್ಮ ನಿಷ್ಕ್ರೀಯತೆ ಮತ್ತು ತಾಟಸ್ಥ್ಯ ದ ಕಾರಣವಾಗಿ ತಾವು ಅನುಭವಿಸುತ್ತಿರುವ ನಿಗೂಢ ಹಿಂಸೆಗೆ ಕೊನೆ ಹೇಳಲು ಅಪ್ರಜ್ಞಾಪೂರ್ವಕವಾಗಿ ತಮ್ಮ ಗಂಡನನ್ನು ಹೀಗೆ ಕ್ರೂರವಾಗಿ ವರ್ತಿಸುವ ಹಾಗೆ ಪ್ರಚೋದಿಸುತ್ತಾರೆ.

ಮೇಲಿಂದ ಮೇಲೆ ಕಂಡು ಬರುವ ಅತಾರ್ಕಿಕ ಪ್ರೀತಿಯ ಇನ್ನಿತರ ಸ್ವರೂಪಗಳನ್ನ, ಮತ್ತು ಅವುಗಳ ಮೂಲವಾದ ಬಾಲ್ಯದ ಬೆಳವಣಿಗೆಯ ಅಂಶಗಳನ್ನ ವಿವರವಾಗಿ ವಿಶ್ಲೇಷಣೆ ಮಾಡದೇ ಕೆಳಗೆ ಚರ್ಚಿಸಲಾಗಿದೆ.

ಅಷ್ಟೇನೂ ಅಪರೂಪವಲ್ಲದ, ಆಗಾಗ್ಗೆ ಅನುಭವಿಸಲಾಗುವ ಹುಸಿ ಪ್ರೀತಿಯ ಒಂದು ಸ್ವರೂಪ ( ಹೆಚ್ಚಾಗಿ ಇದನ್ನ ಸಿನೇಮಾಗಳಲ್ಲಿ, ಕಾದಂಬರಿಗಳಲ್ಲಿ ಗಮನಿಸಬಹುದು) “ಗ್ರೇಟ್ ಲವ್” ಒಂದು ಬಗೆಯ ಆರಾಧನಾ ಪ್ರೀತಿ (idolatrous love). ಒಬ್ಬ ವ್ಯಕ್ತಿ, ತನ್ನ ಕ್ರಿಯಾಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸುವಂಥ ತನ್ನ ಸ್ವಂತ ಅಸ್ತಿತ್ವವನ್ನ ಮತ್ತು ತನ್ನತನವನ್ನ ಸ್ಥಾಪಿಸಿಕೊಳ್ಳುವ ಹಂತವನ್ನು ತಲುಪದೇ ಹೋದಾಗ, ತಾನು ಪ್ರೀತಿಸುವವರನ್ನ ಮೂರ್ತೀಕರಿಸಿ (idolize) ನೋಡಲು ಆರಂಭಿಸುತ್ತಾನೆ. ತನ್ನ ಸಾಮರ್ಥ್ಯಗಳ ಬಗ್ಗೆಯೇ ಪರಕೀಯನಾಗಿರುವ ಈ ವ್ಯಕ್ತಿ, ಅವುಗಳನ್ನ ತಾನು ಪ್ರೀತಿಸುವವರ ಮೇಲೆ ಪ್ರೊಜೆಕ್ಟ್ ಮಾಡಿ ಅವರನ್ನು ಎಲ್ಲ ಒಳಿತು, ಪ್ರೀತಿ, ಬೆಳಕು, ಆನಂದಗಳ (summum bonum) ಕೇಂದ್ರ ಎನ್ನುವಂತೆ ಆರಾಧಿಸಲು ಶುರು ಮಾಡುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನು ತನ್ನನ್ನು, ತನ್ನ ಸ್ವಂತ ಶಕ್ತಿಗಳಿಂದ ವಂಚಿತನಾಗಿಸಿಕೊಳ್ಳುತ್ತಾನೆ ಮತ್ತು, ತನ್ನನ್ನು ತಾನು ಕಂಡುಕೊಳ್ಳುವುದರ ಬದಲಾಗಿ ತಾನು ಪ್ರೀತಿಸುವವರಲ್ಲಿ ಕಳೆದುಹೋಗುತ್ತಾನೆ. ಯಾವ ವ್ಯಕ್ತಿಯೂ ಬಹುಕಾಲದವರೆಗೆ ಅವಳ (ಅಥವಾ ಅವನ) ವಿಗ್ರಹಾರಾಧಾಕರ ನಿರೀಕ್ಷೆಗಳನ್ನ ಪೂರೈಸುವುದು ಸಾಧ್ಯವಿಲ್ಲವಾದ್ದರಿಂದ ಸಹಜವಾಗಿಯೇ ವಿಗ್ರಹಾರಾಧಕರಲ್ಲಿ ನಿರಾಶೆ ಮೂಡುತ್ತದೆ , ಮತ್ತು ಈ ನಿರಾಶೆಯ ಪರಿಹಾರಕ್ಕೆ ಎನ್ನುವಂತೆ ಅವರು ತಮ್ಮ ಆರಾಧನೆಗಾಗಿ ಇನ್ನೊಂದು ವಿಗ್ರಹದ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಈ ಪ್ರಕ್ರಿಯೆ ಎಂದೂ ಮುಗಿಯದ ವೃತ್ತದ ದಾರಿಯಲ್ಲಿ ಮುಂದುವರೆಯುತ್ತಲೇ ಇರುತ್ತದೆ. ಇಂಥ ವಿಗ್ರಹಾರಾಧಕ ರೀತಿಯ ಪ್ರೀತಿಯ ಪ್ರಧಾನ ಗುಣಲಕ್ಷಣವೆಂದರೆ, ಆರಂಭದಲ್ಲಿ ಕಾಣಿಸಿಕೊಳ್ಳುವ ಪ್ರೀತಿಯ ಅನಿರೀಕ್ಷಿತತೆ ಮತ್ತು ತೀವ್ರತೆಯ ಅನುಭವ. ಬಹುತೇಕ ಈ ವಿಗ್ರಹಾರಾಧಕ ಪ್ರೀತಿಯನ್ನ, ನಿಜವಾದ ಪ್ರೀತಿ, ಅಮರ ಪ್ರೇಮ ಎಂದೆಲ್ಲ ವಿವರಿಸಲಾಗುತ್ತದೆ; ಆದರೆ ಪ್ರೀತಿಯ ಆಳ ಮತ್ತು ತೀವ್ರತೆಯನ್ನು ವರ್ಣಿಸಬೇಕಾಗಿದ್ದ ಈ ಬಗೆಯ ಪ್ರೀತಿ ಕೊನೆಗೆ ವಿಗ್ರಹಾರಾಧಕರ ಹಸಿವು ಮತ್ತು ನಿರಾಶೆಗಳನ್ನು ವರ್ಣಿಸುತ್ತ ಪರ್ಯವಸಾನಗೊಳ್ಳುತ್ತದೆ. ಇಬ್ಬರು ವ್ಯಕ್ತಿಗಳು ಪರಸ್ಪರರನ್ನ ಮೂರ್ತಿ ಪೂಜೆಯಂಥ ಪ್ರೀತಿಯಲ್ಲಿ ಕಂಡುಕೊಳ್ಳುವುದು ಅಪರೂಪವೆನಲ್ಲ, ಇಂಥ ಸ್ಥಿತಿ, ಕೆಲವೊಂದು ವಿಪರೀತದ ಸಂದರ್ಭಗಳಲ್ಲಿ ಇಬ್ಬರಲ್ಲೂ ಒಂದೇ ತೆರನಾದ ಮಾನಸಿಕ ಅಸ್ವಸ್ಥತೆಯ (folie a deux) ಕಾರಣವಾಗಿರುತ್ತದೆ.

ಇನ್ನೊಂದು ಬಗೆಯ ಹುಸಿ ಪ್ರೀತಿಯನ್ನ ನಾವು “ಭಾವುಕ ಪ್ರೀತಿ” (sentimental love) ಎಂದು ಕರೆಯಬಹುದು. ಇಂಥ ಪ್ರೀತಿಯ ತಿರುಳೆಂದರೆ, ಈ ಪ್ರೀತಿಯನ್ನು ಕೇವಲ ಕಲ್ಪನೆಯಲ್ಲಿ (phantasy) ಅನುಭವಿಸಬಹುದೇ ವಿನಃ, ನಿಜದ ವ್ಯಕ್ತಿಯೊಬ್ಬನೊಡನೆ ವಾಸ್ತವದ ಸಂಬಂಧದಲ್ಲಿ ಅನುಭವಿಸುವುದು ಸಾಧ್ಯವಿಲ್ಲ. ಇಂಥ ಪ್ರೀತಿಯನ್ನ ಹೆಚ್ಚಾಗಿ ಪರೋಕ್ಷ ಪ್ರೇಮ ತೃಪ್ತಿಯನ್ನ ಅನುಭವಿಸುವ ಸಿನಿಮಾ ವೀಕ್ಷಕನಲ್ಲಿ, ಪ್ರೇಮ ಕಥೆಗಳನ್ನ, ಕವಿತೆಗಳನ್ನ ಓದುವ ಓದುಗನಲ್ಲಿ ಗಮನಿಸಬಹುದು. ಇವರು, ಪ್ರೀತಿ, ಮಿಲನ, ಆತ್ಮೀಯತೆಯತೆಯ ಕುರಿತಾದ ತಮ್ಮ ಎಲ್ಲ ಅತೃಪ್ತ ಬಯಕೆಗಳನ್ನ ಇಂಥ ಸಂಗತಿಗಳ ಮೂಲಕ ತೀರಿಸಿಕೊಳ್ಳುವರು. ನಿಜ ಜೀವನದಲ್ಲಿ ತಮ್ಮ ಗಂಡ ಅಥವಾ ಹೆಂಡತಿಯನ್ನ ನೇರವಾಗಿ ಪ್ರೀತಿಸಲಾಗದೇ ತಮ್ಮ ನಡುವೆ ಪ್ರತ್ಯೇಕತೆಯ ಗೋಡೆ ಕಟ್ಟಿಕೊಂಡಿರುವವರು, ಇಂಥ ಸಿನಿಮಾಗಳಲ್ಲಿನ ಪ್ರೀತಿಯ ದೃಶ್ಯಗಳನ್ನು ನೋಡುತ್ತಾ, ಪ್ರೇಮ ಕಥೆಯ ಪಾತ್ರಗಳ ಜೊತೆ ಒಂದಾಗುತ್ತ ಕಣ್ಣೀರು ಸುರಿಸುವುದನ್ನ ನಾವು ಗಮನಿಸಬಹುದು. ಕೆಲವು ಜೋಡಿಗಳಿಗೆ ಸಿನಿಮಾದ ತೆರೆಯ ಮೇಲೆ ಅಥವಾ ಪುಸ್ತಕದ ಪುಟಗಳಲ್ಲಿನ ಪ್ರೀತಿಯನ್ನು ಅನುಭವಿಸುವುದು, ಅವರು ಅನುಭವಿಸಲು ಸಾಧ್ಯವಾಗಬಹುದಾದ ಒಂದೇ ಒಂದು ರೀತಿಯ ಪ್ರೀತಿ, ಈ ಪ್ರೀತಿ ಪರಸ್ಪರರ ಕುರಿತಾದ ಅವರ ಪ್ರೀತಿಯಲ್ಲ , ಆದರೆ ಅವರಿಬ್ಬರೂ ಒಟ್ಟಾಗಿ, ಇನ್ನೊಬ್ಬರ ಪ್ರೀತಿಯ ಪ್ರೇಕ್ಷಕರಾಗಿ ಅನುಭವಿಸುವ ಪ್ರೀತಿ ಮಾತ್ರ. ಎಲ್ಲಿಯವರೆಗೆ ಅವರಿಗೆ ಪ್ರೀತಿ ಹಗಲುಗನಸೋ ಅಲ್ಲಿಯವರೆಗೆ ಅವರು ಇಂಥ ಪ್ರೀತಿಯನ್ನ ಅನುಭವಿಸಬಲ್ಲರು ; ಯಾವಾಗ ಅವರು, ಇಬ್ಬರು ನಿಜದ ಮನುಷ್ಯರ ನಡುವಿನ ಪ್ರೀತಿಯ ವಾಸ್ತವಕ್ಕೆ ಹಿಂದಿರುಗುವರೋ ಆಗ freeze ಆಗಿಬಿಡುತ್ತಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply