ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-8) : Art of love #40

“ಪ್ರೀತಿ ಎನ್ನುವುದು ಯಾವುದೇ ಬಿಕ್ಕಟ್ಟು ಅಥವಾ ಸಂಘರ್ಷದ ಅನುಪಸ್ಥಿತಿ” ಎನ್ನುವ ಭ್ರಮೆಯೇ ಈ ತಪ್ಪು. ಮತ್ತು ಈ ಐಡಿಯಾದ ಸಮರ್ಥನೆಗಾಗಿ ಅವರು ಮಂಡಿಸುವ ವಾದವೆಂದರೆ, ಅವರ ಸುತ್ತ ಸಂಭವಿಸುವ ಎಲ್ಲ ಸಂಘರ್ಷಗಳು ವಿನಾಶಕಾರಿ ಮತ್ತು ಸಂಬಂಧಿತರಿಗೆ ಅವು ಯಾವ ಒಳ್ಳೆಯದನ್ನೂ ಮಾಡುವುದಿಲ್ಲ ಎನ್ನುವುದು. ಈ ಅನಿಸಿಕೆಯ ಕಾರಣವಾಗಿಯೇ ಅವರು ಪ್ರೀತಿ ಎನ್ನುವ ಹ್ಯಾಪಿ (?) ಸ್ಥಿತಿಯನ್ನ ಸಂಘರ್ಷಗಳ ಅನುಪಸ್ಥಿತಿ ಎಂದು ಹೇಳುತ್ತಾರೆ… । ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/07/30/love-54/

ಭಾವುಕ ಪ್ರೀತಿಯ ಇನ್ನೊಂದು ಅಂಶವೆಂದರೆ ಕಾಲಕ್ಕನುಗುಣವಾಗಿ ಪ್ರೀತಿಯನ್ನ ಅಮೂರ್ತಗೊಳಿಸುವುದು (abstractification). ದಂಪತಿಗಳು ತಮ್ಮ ಹಿಂದಿನ ಪ್ರೀತಿಯ ನೆನಪುಗಳ ಬಗ್ಗೆ ತುಂಬ ಆಳವಾದ ಭಾವುಕತೆಯನ್ನ ಹೊಂದಿರುತ್ತಾರೆ, ಆದರೆ ವಾಸ್ತವದಲ್ಲಿ ಆ ಕಾಲದಲ್ಲಿ ಕೂಡ ಅವರಿಗೆ ಯಾವ ಪ್ರೀತಿಯ ಅನುಭವ ಆಗಿರುವುದಿಲ್ಲ. ಮತ್ತು ಕೆಲವರು ಭವಿಷ್ಯದಲ್ಲಿಯ ತಮ್ಮ ಪ್ರೀತಿಯ ಬಗ್ಗೆ ಮಧುರ ಕಲ್ಪನೆಗಳನ್ನು ಹೊಂದಿರುತ್ತಾರೆ. ಮದುವೆ ಮಾಡಿಕೊಳ್ಳಲು ನಿರ್ಧರಿಸಿರುವ ಅಥವಾ ಹೊಸದಾಗಿ ಮದುವೆಯಾಗಿರುವ ಎಷ್ಟು ಜೋಡಿಗಳು, ಭವಿಷ್ಯದ ತಮ್ಮ ಪ್ರೇಮ ಜೀವನದ ಬಗ್ಗೆ ಸಿಹಿಗನಸುಗಳನ್ನು ಕಾಣುತ್ತಿರುವಾಗಲೇ, ತಮ್ಮ ಸಧ್ಯದ ಜೀವನದಲ್ಲಿ ಒಬ್ಬರಿಗೊಬ್ಬರು bore ಆಗಿರುವುದಿಲ್ಲ ? ಈ ಪ್ರವೃತ್ತಿ , ಆಧುನಿಕ ಮನುಷ್ಯನ ಸಾಮಾನ್ಯ ಗುಣಲಕ್ಷಣಗಳಿಗೆ ಅನುಗುಣವಾಗಿಯೇ ಇದೆ. ಅವನು ಭೂತ ಅಥವಾ ಭವಿಷತ್ಕಾಲದಲ್ಲಿ ಜೀವಿಸುತ್ತಾನೆಯೇ ಹೊರತು ಸಧ್ಯದ ವರ್ತಮಾನದಲ್ಲಿ ಅಲ್ಲ. ಅವನು ತನ್ನ ಬಾಲ್ಯ ಅಥವಾ ತಾಯಿಯ ಕುರಿತಾದ ನೆನಪುಗಳ ಬಗ್ಗೆ ಭಾವುಕನಾಗಿರುತ್ತಾನೆ ಅಥವಾ ತನ್ನ ಭವಿಷ್ಯಕ್ಕಾಗಿ ಹ್ಯಾಪಿ ಪ್ಲಾನ್ ಗಳನ್ನು ಮಾಡುತ್ತಿರುತ್ತಾನೆ. ಪ್ರೀತಿಯನ್ನ ಪರೋಕ್ಷವಾಗಿ ಇನ್ನೊಬ್ಬರ ಕಾಲ್ಪನಿಕ ಅನುಭವಗಳಲ್ಲಿ (ಸಿನಿಮಾ, ಪುಸ್ತಕಗಳ ಮೂಲಕ) ಅನುಭವಿಸುತ್ತಾನೆ, ಅಥವಾ ಪ್ರೀತಿಯನ್ನ ಭೂತಕಾಲಕ್ಕೆ ಅಥವಾ ಭವಿಷತ್ಕಾಲಕ್ಕೆ ಶಿಫ್ಟ್ ಮಾಡಿ ನೆನಪುಗಳಲ್ಲಿ, ಅಥವಾ ಕಲ್ಪನೆಗಳ ಮೂಲಕ ಅನುಭವಿಸುತ್ತಾನೆ. ಪ್ರೀತಿಯ ಇಂಥ ಅಮೂರ್ತಗೊಳಿಸಲ್ಪಟ್ಟ ( abstractified) ಮತ್ತು ಪರಕೀಯ ರೂಪ (alienated) ಆಫೀಮಿನಂತೆ ಕೆಲಸ ಮಾಡುತ್ತ ವ್ಯಕ್ತಿಯ ವಾಸ್ತವದ ನೋವನ್ನ, ಒಂಟಿತನವನ್ನ, ಪ್ರತ್ಯೇಕತೆಯನ್ನ ಮರೆಯುವಂತೆ ಮಾಡುತ್ತದೆ.

ಇನ್ನೂ ಒಂದು ರೀತಿಯ ನ್ಯೂರಾಟಿಕ್ ಪ್ರೀತಿಯ ರೂಪ, ತನ್ನನ್ನು ಆರೋಪ ತಂತ್ರಗಳಲ್ಲಿ (projective mechanism) ತೊಡಗಿಸಿಕೊಳ್ಳುತ್ತದೆ. ಇಲ್ಲಿ ವ್ಯಕ್ತಿ ತನ್ನ ಸ್ವಂತದ ಸಮಸ್ಯೆಗಳನ್ನು ಮರೆಮಾಚಲು, ಪ್ರೀತಿಸಲ್ಪಡುವವರ ಕೊರತೆಗಳ ಬಗ್ಗೆ, ದೌರ್ಬಲ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸುವವನಂತೆ ದೋಷಾರೋಪಣೆಯಲ್ಲಿ ತೊಡಗುತ್ತಾನೆ. ಈ ಬಗೆಯ ಸಂಬಂಧದಲ್ಲಿ ವ್ಯಕ್ತಿಗಳು ಗುಂಪಿನಂತೆ, ದೇಶಗಳಂತೆ, ಧರ್ಮಗಳಂತೆ ವರ್ತಿಸುತ್ತಾರೆ. ಅವರು ಇನ್ನೊಬ್ಬರ ಚಿಕ್ಕ ಕೊರತೆಯನ್ನೂ ತೀಕ್ಷ್ಣವಾಗಿ ಟೀಕಿಸುತ್ತಾರೆ ಮತ್ತು ತಮ್ಮ ಎಲ್ಲ ಸಮಸ್ಯೆಗಳನ್ನ ಸಂತೋಷದಿಂದ ನಿರ್ಲಕ್ಷಿಸುತ್ತಾರೆ. ಅವರು ಸದಾ ಇನ್ನೊಬ್ಬರನ್ನು ಟೀಕಿಸಲು, ಸುಧಾರಣೆಗೆ ಗುರಿಮಾಡಲು ಕಾತುರರಾಗಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಆಗುವಂತೆ, ದಂಪತಿಗಳಿಬ್ಬರೂ ಇಂಥ ದೋಷಾರೋಪಣೆಯಲ್ಲಿ ತೊಡಗಿದಾಗ, ಅಂಥ ಪ್ರೀತಿಯ ಸಂಬಂಧ, ಪರಸ್ಪರರ ನಿರೀಕ್ಷೆಯ (mutual projection) ಸಂಬಂಧವಾಗಿ ಮಾರ್ಪಾಡುಗೊಳ್ಳುತ್ತದೆ. ನಾನು ಜೋರು ಜಬರದಸ್ತಿಕೆಯ ಅಥವಾ ತೀರ್ಮಾನಗಳನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವ, ಅಥವಾ ಹೊಟ್ಟೆಕಿಚ್ಚಿನ ಮನುಷ್ಯನಾಗಿದ್ದರೆ, ನಾನು ನನ್ನ ಸಂಗಾತಿಯನ್ನ ಈ ಸಂಗತಿಗಳಿಗಾಗಿಯೇ ದೂಷಿಸುತ್ತೇನೆ, ಮತ್ತು ನನ್ನ ಮೃದು ಅಥವಾ ಕಠಿಣ ಸ್ವಭಾವಕ್ಕೆ ಅನುಗುಣವಾಗಿ ಅವಳನ್ನ ಗುಣಪಡಿಸಲು ಅಥವಾ ಶಿಕ್ಷಿಸಲು ಬಯಸುತ್ತೇನೆ. ನನ್ನ ಸಂಗಾತಿಯೂ ಇಂಥದೇ ಕ್ರಮಕ್ಕೆ ಮುಂದಾದಾಗ ನಾವಿಬ್ಬರೂ ನಮ್ಮ ಸ್ವಂತದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ ಮತ್ತು ನಮ್ಮ ಬೆಳವಣಿಗೆಗೆ ಸಹಾಯಕವಾಗಬಹುದಾದ ಯಾವುದೇ ಕ್ರಮವನ್ನ ತೆಗೆದುಕೊಳ್ಳಲು ವಿಫಲರಾಗುತ್ತೇವೆ.

ಇನ್ನೊಂದು ರೀತಿಯ ಪ್ರೊಜೆಕ್ಷನ್ ಎಂದರೆ ವ್ಯಕ್ತಿ, ತನ್ನ ಸ್ವಂತದ ಸಮಸ್ಯೆಗಳನ್ನ ಮಕ್ಕಳ ಮೇಲೆ ಆರೋಪಿಸುವ ಪ್ರಯತ್ನ ಮಾಡುವುದು. ಒಬ್ಬ ವ್ಯಕ್ತಿ, ಮಕ್ಕಳನ್ನು ಬಯಸುವುದರಲ್ಲಿಯೇ ಇಂಥದೊಂದು ಪ್ರೊಜೆಕ್ಷನ್ ನ ಸುಳಿವು ಇದೆ. ಇಂಥ ಸಂದರ್ಭಗಳಲ್ಲಿ ತಮ್ಮ ಅಸ್ತಿತ್ವದ ಸಮಸ್ಯೆಗಳನ್ನ ಮಕ್ಕಳ ಅಸ್ತಿತ್ವದ ಮೇಲೆ ಪ್ರೊಜೆಕ್ಟ್ ಮಾಡಬಯಸುವುದರಲ್ಲಿಯೇ ಅವರ ಮಕ್ಕಳನ್ನು ಹೊಂದುವ ನಿರ್ಧಾರದ ಹಿಂದಿನ ಉದ್ದೇಶ ಅಡಗಿರುತ್ತದೆ. ಯಾವಾಗ ಒಬ್ಬ ವ್ಯಕ್ತಿಗೆ ತಾನು ತನ್ನ ಬದುಕಿನ ಅರ್ಥವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲ ಎನ್ನುವುದು ಮನವರಿಕೆಯಾಗುತ್ತದೆಯೋ ಆಗ ಅವನು ತನ್ನ ಮಕ್ಕಳ ಬದುಕಿನ ಮೂಲಕ ತನ್ನ ಬದುಕಿನ ಅರ್ಥವನ್ನು ಗ್ರಹಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಅವನು ಹೀಗೆ ಮಾಡಿದಾಗ ತನ್ನ ಬದುಕಿನಲ್ಲಷ್ಟೇ ವಿಫಲನಾಗುವುದಿಲ್ಲ, ತನ್ನ ಮಕ್ಕಳ ಬದುಕಿನ ವೈಫಲ್ಯಕ್ಕೂ ಕಾರಣನಾಗುತ್ತಾನೆ. ಅವನು ತನ್ನ ಬದುಕಿನಲ್ಲಿ ಏಕೆ ವಿಫಲನಾಗುತ್ತಾನೆಂದರೆ, ಪ್ರತಿಯೊಬ್ಬನೂ ತನ್ನ ಅಸ್ತಿತ್ವದ ಸಮಸ್ಯೆಗಳಿಗೆ ಸ್ವತಃ ತಾನೇ ಪರಿಹಾರ ಕಂಡುಕೊಳ್ಳಬೇಕಾಗಿರುವುದು, ಮತ್ತು ಪರೋಕ್ಷ ರೀತಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲದಿರುವುದು. ಅವನು ಮಕ್ಕಳ ಬದುಕನ್ನ ಏಕೆ ವಿಫಲಗೊಳಿಸುತ್ತಾನೆಂದರೆ, ಅವನು ಸ್ವತಃ ತನ್ನ ಬದುಕಿನಲ್ಲಿ ಸೋತವನಾಗಿರುವುದು, ಹಾಗು ಅವನಲ್ಲಿ ಮಕ್ಕಳನ್ನು ಗೈಡ್ ಮಾಡುವ, ಬದುಕಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ, ಮಕ್ಕಳನ್ನು ಮುನ್ನಡೆಸುವ ಯಾವ ವಿಶೇಷ ಗುಣಲಕ್ಷಣಗಳೂ ಇಲ್ಲದಿರುವುದು. ಒಂದು ಅಸಂತುಷ್ಟ ದಾಂಪತ್ಯವನ್ನು ಕೊನೆಗೊಳಿಸುವ ನಿರ್ಧಾರದ ಪ್ರಶ್ನೆ ಎದುರಾದಾಗಲೂ ಮಕ್ಕಳ ಮೇಲೆ ಈ ಸಮಸ್ಯೆಯನ್ನ ಪ್ರೊಜೆಕ್ಟ್ ಮಾಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಪೋಷಕರ ಒಟ್ಟಾರೆ ವಾದವೆಂದರೆ, ತಮ್ಮ ಬೇರ್ಪಡುವಿಕೆ ಮಕ್ಕಳನ್ನು ಒಟ್ಟು-ಕುಟುಂಬದ ಸಂತೋಷದಿಂದ, ಲಾಭಗಳಿಂದ ವಂಚಿತರನ್ನಾಗಿಸುತ್ತದೆ ಎನ್ನುವುದು. ಆದರೆ ಇಂಥ ಸಂದರ್ಭಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದಾಗ ಗೊತ್ತಾಗುವುದೇನೆಂದರೆ, ಅಸಂತುಷ್ಟ ಒಟ್ಟು-ಕುಟುಂಬದಲ್ಲಿನ (unified family) ಒತ್ತಡ ಮತ್ತು ಜಿಗುಪ್ಸೆಯ ವಾತಾವರಣ ಮಕ್ಕಳ ಮೇಲೆ, ಬೇರ್ಪಟ್ಟ ಕುಟುಂಬಕ್ಕಿಂತಲೂ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಕೊನೆಪಕ್ಷ ಬೇರ್ಪಟ್ಟ ಕುಟುಂಬ ಮಕ್ಕಳಿಗೆ, ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಂಡಾಗ ಮನುಷ್ಯ ಅಸಹನೀಯ ಸನ್ನಿವೇಶಗಳಿಂದ ಹೊರಬರಬಹುದೆಂಬ ಭರವಸೆಯನ್ನಾದರೂ ಕೊಡುತ್ತದೆ.

ಪ್ರಚಲಿತದಲ್ಲಿರುವ ಇನ್ನೊಂದು ಸಾಮಾನ್ಯ ತಪ್ಪನ್ನ ಇಲ್ಲಿ ಪ್ರಸ್ತಾಪಿಸಲೇ ಬೇಕು. “ಪ್ರೀತಿ ಎನ್ನುವುದು ಯಾವುದೇ ಬಿಕ್ಕಟ್ಟು ಅಥವಾ ಸಂಘರ್ಷದ ಅನುಪಸ್ಥಿತಿ” ಎನ್ನುವ ಭ್ರಮೆಯೇ ಈ ತಪ್ಪು. ಮತ್ತು ಈ ಐಡಿಯಾದ ಸಮರ್ಥನೆಗಾಗಿ ಅವರು ಮಂಡಿಸುವ ವಾದವೆಂದರೆ, ಅವರ ಸುತ್ತ ಸಂಭವಿಸುವ ಎಲ್ಲ ಸಂಘರ್ಷಗಳು ವಿನಾಶಕಾರಿ ಮತ್ತು ಸಂಬಂಧಿತರಿಗೆ ಅವು ಯಾವ ಒಳ್ಳೆಯದನ್ನೂ ಮಾಡುವುದಿಲ್ಲ ಎನ್ನುವುದು. ಈ ಅನಿಸಿಕೆಯ ಕಾರಣವಾಗಿಯೇ ಅವರು ಪ್ರೀತಿ ಎನ್ನುವ ಹ್ಯಾಪಿ (?) ಸ್ಥಿತಿಯನ್ನ ಸಂಘರ್ಷಗಳ ಅನುಪಸ್ಥಿತಿ ಎಂದು ಹೇಳುತ್ತಾರೆ. ಮನುಷ್ಯರ ಬಹಳಷ್ಟು ಸಂಘರ್ಷಗಳಿಗೆ ಕಾರಣ, ಅವರು “ನಿಜವಾದ ಸಂಘರ್ಷಗಳನ್ನು” ಮುಚ್ಚಿ ಹಾಕಲು ಪ್ರಯತ್ನಪಡುವುದು. ಅವರು ತಮ್ಮ ಸಂಘರ್ಷಗಳೆಂದು ಗುರುತಿಸುವುದು ಕೇವಲ ಮೇಲು ಮೇಲಿನ (superficial), ಮೈನರ್ ಆದಂಥ ಸಂಗತಿಗಳನ್ನ. ಇಂಥ ಸಂಘರ್ಷಗಳು ಅವುಗಳ ಕ್ಷುಲ್ಲಕ ಎನ್ನಬಹುದಾದ ಗುಣಲಕ್ಷಣಗಳ ಕಾರಣವಾಗಿಯೇ ಯಾವ ಪರಿಹಾರವನ್ನೂ, ವಿವರಣೆಯನ್ನೂ ಬಯಸಲು ಅನರ್ಹವಾದಂಥವು. ಇಬ್ಬರ ನಡುವಿನ ನಿಜವಾದ ಸಂಘರ್ಷವನ್ನು ಮುಚ್ಚಿಹಾಕುವುದು ಸಾಧ್ಯವಿಲ್ಲ, ಬೇರೆಯವರ ಮೇಲೆ ಪ್ರೊಜೆಕ್ಟ್ ಮಾಡುವುದು ಸಾಧ್ಯವಿಲ್ಲ. ನಿಜ ಸಂಘರ್ಷದ ಸಂಗತಿಗಳು ಒಳಗಿನ ವಾಸ್ತವದ (inner reality) ಆಳ ನೆಲೆಗೆ ಸಂಬಂಧಿತವಾದವು ಮತ್ತು ಇವು ಯಾವ ಅರ್ಥದಲ್ಲೂ ವಿನಾಶಕಾರಿಯಲ್ಲ. ಇಂಥ ನಿಜ ಸಂಘರ್ಷಗಳು, ಇಬ್ಬರ ನಡುವೆ ಸ್ಪಷ್ಟತೆಯನ್ನ ಮೂಡಿಸುತ್ತವೆ ಮತ್ತು ಇಂಥ ಸಂಘರ್ಷಗಳ ಮಂಥನದಿಂದ ಇಬ್ಬರೂ ಹೆಚ್ಚು ತಿಳುವಳಿಕೆಯುಳ್ಳವರಾಗಿ, ಹೆಚ್ಚು ಸಾಮರ್ಥ್ಯಶಾಲಿಗಳಾಗಿ ಹೊರಹೊಮ್ಮುತ್ತಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply