ಕಷ್ಟಪಟ್ಟು ಸಾಧನೆ ಮಾಡಿ. ನೀವು ಬದುಕಿದರೇನು, ಸತ್ತರೇನು? ಚಿಂತೆ ಬಿಡಿ. ಫಲಾಪೇಕ್ಷೆ ಇಲ್ಲದೆ ಕೆಲಸಕ್ಕೆ ಮುಂದಾಗಿ. ನೀವು ಧೈರ್ಯಶಾಲಿಗಳೇ ಆಗಿದ್ದಲ್ಲಿ, ಆರು ತಿಂಗಳೊಳಗೆ ಸಿದ್ಧಯೋಗಿಗಳಾಗುವಿರಿ… | ಸ್ವಾಮಿ ವಿವೇಕಾನಂದ
ಯಾರು ನಿಜವಾಗಿಯೂ ಯೋಗಿಗಳಾಗಬೇಕೆಂದು ಬಯಸುವರೋ ಅವರು ಎಲ್ಲವನ್ನೂ ಸ್ವಲ್ಪ ಸ್ವಲ್ಪ ರುಚಿ ನೋಡುವ ಅಭ್ಯಾಸವನ್ನು ಒಂದೇ ಸಲ ಬಿಟ್ಟಬಿಡಬೇಕು. ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ. ಅದನ್ನೇ ಕನಸು ಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ; ಮೆದುಳು, ಮಾಂಸಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡಾ ಆ ಭಾವದಿಂದ ತುಂಬಿ ತುಳುಕಾಡಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ. ಮಹಾ ಆಧ್ಯಾತ್ಮಿಕ ವೀರರಾಗುವ ರೀತಿಯೇ ಇದು. ಉಳಿದವರು ಕೇವಲ ಮಾತನಾಡುವ ಯಂತ್ರಗಳು. ನಾವು ನಿಜವಾಗಿಯೂ ಮುಕ್ತರಾಗಬೇಕಾದರೆ, ಮತ್ತು ಇತರರನ್ನು ಬಂಧಮುಕ್ತರನ್ನಾಗಿ ಮಾಡಬೇಕಾದರೆ ನಾವು ಇನ್ನೂ ಆಳಕ್ಕೆ ಹೋಗಬೇಕು.
~
ಕಷ್ಟಪಟ್ಟು ಸಾಧನೆ ಮಾಡಿ. ನೀವು ಬದುಕಿದರೇನು, ಸತ್ತರೇನು? ಚಿಂತೆ ಬಿಡಿ. ಫಲಾಪೇಕ್ಷೆ ಇಲ್ಲದೆ ಕೆಲಸಕ್ಕೆ ಮುಂದಾಗಿ. ನೀವು ಧೈರ್ಯಶಾಲಿಗಳೇ ಆಗಿದ್ದಲ್ಲಿ, ಆರು ತಿಂಗಳೊಳಗೆ ಸಿದ್ಧಯೋಗಿಗಳಾಗುವಿರಿ. ಆದರೆ ಯಾರು ಇದನ್ನು ಸ್ವಲ್ಪವಾಗಿ, ಉಳಿದವುಗಳನ್ನೂ ಸ್ವಲ್ಪಸ್ವಲ್ಪವಾಗಿ ಸೇರಿಸಿ ಸ್ವೀಕರಿಸುತ್ತಾರೋ, ಅವರು ಎಂದಿಗೂ ಮುಂದುವರೆಯುವುದೇ ಇಲ್ಲ.
ಸುಮ್ಮನೆ ಉಪನ್ಯಾಸಗಳನ್ನು ಕೇಳಿ ಪ್ರಯೋಜನವಿಲ್ಲ. ಯಾರು ತುಂಬಾ ತಾಮಸಿಗಳೋ, ಸೋಮಾರಿಗಳೋ, ಚಂಚಲ ಚಿತ್ತರೋ ಅಂಥವರಿಗೆ ಈ ಧರ್ಮ, ತತ್ತ್ವ, ಅಧ್ಯಾತ್ಮ – ಇವೆಲ್ಲ ಕೇವಲ ಮನರಂಜನೆಯ ವಸ್ತುಗಳು. ಇವರೆಂದಿಗೂ ಛಲದಿಂದ ಒಂದು ಆದರ್ಶವನ್ನು ಹಿಡಿಯುವುದಿಲ್ಲ. ಇಂಥವರು ಒಂದು ಉಪನ್ಯಾಸವನ್ನು ಕೇಳಿ, ಬಹಳ ಚೆನ್ನಾಗಿದೆ ಅಂದುಕೊಳ್ಳುತ್ತಾರೆ. ಆದರೆ ಮನೆಗೆ ಹೋಗಿ ಅದನ್ನು ಮರೆತೇಹೋಗುತ್ತಾರೆ. ನಿಜವಾದ ಛಲಗಾರರು ಕೆಲಸ ಮಾಡುವುದರಲ್ಲಿ ಶ್ರದ್ಧೆ ಇಡುತ್ತಾರೆ. ಇಚ್ಛಾಶಕ್ತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಒಂದು ವಿಷಯದಲ್ಲಿ ಮನಸು ನೆಟ್ಟು, ಕಷ್ಟಪಟ್ಟು ಸಾಧನೆ ಮಾಡುವ ಇವರು ಖಚಿತವಾಗಿ ಯಶಸ್ಸನ್ನು ಸಾಧಿಸುತ್ತಾರೆ.
(ಆಧಾರ : ಕೃತಿಶ್ರೇಣಿ | ಸಂ 2)