ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು ಅತ್ಯವಶ್ಯಕ. ಮೊದಲು ಬೇಕಾಗಿರುವುದು ಅನ್ನ !
ಭೌತಿಕ ವಿಷಯವನ್ನು ಆಧರಿಸಿದ ನಾಗರಿಕತೆಗೆ ವಿರೋಧವಾಗಿ ನಾವು ಬಹಳ ಮಾತನಾಡುತ್ತೇವೆ. ಕೈಗೆ ಸಿಗದ ದ್ರಾಕ್ಷಿ ಹಣ್ಣು ಹುಳಿಯೇ ಸರಿ ಎನ್ನುವಂತೆ!
ಈ ಹುಚ್ಚು ಮಾತನ್ನು ನಾವೊಮ್ಮೆ ಒಪ್ಪಿಕೊಂಡರೂ ಕೂಡ; ಭರತ ಖಂಡದಲ್ಲೆಲ್ಲ ಒಂದು ಲಕ್ಷ ಆಧ್ಯಾತ್ಮಿಕ ನಿಷ್ಠೆಯುಳ್ಳ ಸ್ತ್ರೀ – ಪುರುಷರು ಇರುತ್ತಾರೆ ಎಂದುಕೊಳ್ಳೋಣ. ಈ ಅಲ್ಪ ಮಂದಿಯ ಆಧ್ಯಾತ್ಮಿಕ ಉ್ನತಿಗೋಸ್ಕರ ಮೂವತ್ತು ಕೋಟಿ ಜನರು ಅನಾಗರಿಕರಾಗಬೇಕೇನು? ಯಾವನೇ ಆಗಲಿ, ಅವನು ಉಪವಾಸದಿಂದ ಏಕೆ ನರಳಬೇಕು?
ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು ಅತ್ಯವಶ್ಯಕ. ಮೊದಲು ಬೇಕಾಗಿರುವುದು ಅನ್ನ! ಇಹಲೋಕದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರಲೋಕದಲ್ಲಿ ಸಾಯುಜ್ಯ ಏಕೆ ಬೇಕು? ಭರತ ಖಂಡ ಉದ್ಧಾರವಾಗಬೇಕು ಎಂದರೆ ಬಡವರಿಗೆ ಹೊಟ್ಟೆ ತುಂಬ ಅನ್ನ ಕೊಡಬೇಕು. ವಿದ್ಯಾಭ್ಯಾಸ ಜನಸಮೂಹದಲ್ಲಿ ಹರಡಬೇಕು. ಸಮಾಜದಲ್ಲಿ ಅತ್ಯಾಚಾರವಿರಕೂಡದು.
ಅಮೆರಿಕಾದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ತಾನು ಮನುಷ್ಯನೆಂಬುದು ಗೊತ್ತು. ಭಾರತದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಯೂ ತಾನು ಸಮಾಜದ ಗುಲಾಮನೆಂದು ತಿಳಿದುಕೊಂಡಿರುವನು.
ಬೆಳವಣಿಗೆಗೆ ಮುಖ್ಯವಾಗಿ ಬೇಕಾಗುವುದು ಸ್ವಾತಂತ್ರ್ಯ. ಅದು ಇಲ್ಲವಾದರೆ ಅವನತಿಯೇ ಫಲ. ಯಾರು ಇನ್ನೊಬ್ಬರಿಗೆ ಸ್ವಾತಂತ್ರ್ಯವನ್ನು ಕೊಡಲು ಯಾರು ಸಿದ್ಧರಾಗಿಲ್ಲವೋ ಅವರು ಸ್ವಾತಂತ್ರ್ಯವನ್ನು ಸ್ವೀಕರಿಸಲು ಸಿದ್ಧರಾಗಿರುವುದಿಲ್ಲ. ಗುಲಾಮರು ಸ್ವಾತಂತ್ರ್ಯವನ್ನು ಬಯಸಿದರೂ ಅದು ಇತರರನ್ನು ಗುಲಾಮಗಿರಿಗೆ ಎಳೆಯುವುದಕ್ಕಷ್ಟೆ.
(ಕೃತಿಶ್ರೇಣಿ | ಸಂ 4)